೧. ಪುಣೆಯಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗ ಮದ್ಯ ಸೇವಿಸಿ ಮಿತಿಮೀರಿದ ವೇಗದಿಂದ ವಾಹನ ನಡೆಸುವಾಗ ಅಪಘಾತವಾಗಿ ಇಬ್ಬರ ಸಾವು
‘ಇತ್ತೀಚೆಗಷ್ಟೆ ಪುಣೆಯಲ್ಲಿ ಒಂದು ವಿಚಿತ್ರ ಅಪಘಾತವಾಯಿತು. ಒಬ್ಬ ಅಪ್ರಾಪ್ತ ವಯಸ್ಸಿನ ಹುಡುಗ ಅವರ ೨ ಕೋಟಿ ರೂಪಾಯಿ ಬೆಲೆಬಾಳುವ ‘ಪೋರ್ಶೆ’ ಎಂಬ ಚತುಷ್ಚಕ್ರ ವಾಹನದಲ್ಲಿ ನಡುರಾತ್ರಿ ಅಭಿಯಂತ ಯುವಕ-ಯುವತಿಯರನ್ನು ವಾಹನದಡಿಯಲ್ಲಿ ಜಜ್ಜಿ ಹಾಕಿದನು. ಆ ಯುವಕನಿಗೆ ನಡುರಾತ್ರಿ ‘ಮದ್ಯ’ರಾತ್ರಿ ಆಗಿತ್ತು, ಎಂಬುದು ಪೊಲೀಸರ ಅಭಿಪ್ರಾಯ. ಈ ಹುಡುಗ ಕೆಲವು ಅಪ್ರಾಪ್ತರೊಂದಿಗೆ ರಾತ್ರಿ ಒಂದು ಪಬ್‌ನಲ್ಲಿ ಮದ್ಯ ಸೇವಿಸುತ್ತಾ ಕುಳಿತಿದ್ದನು. ಈ ತಥಾಕಥಿತ ಹುಡುಗ ಕುಲೀನ ಮನೆತನದ ಅತ್ಯಂತ ಶ್ರೀಮಂತ ವ್ಯಕ್ತಿಯ ಮಗನಾಗಿದ್ದನು. ಆ ಹುಡುಗನಲ್ಲಿ ವಾಹನ ನಡೆಸುವ ಅನುಮತಿಪತ್ರ (ಲೈಸನ್ಸ) ಇರಲಿಲ್ಲ. ಅವನಲ್ಲಿ ‘ಶೋಫರ್ ಡ್ರಿವನ್’ ವಾಹನ ಇತ್ತು, ಅಂದರೆ ‘ಚಿಕ್ಕ ವಯಸ್ಸಿನ ಮಾಲೀಕ’ರಿಗಾಗಿ ವಿಶೇಷ ಚಾಲಕನೂ ಇದ್ದನು. ಆ ರಾತ್ರಿ ಈ ಅಪ್ರಾಪ್ತ ವಯಸ್ಸಿನ ಹುಡುಗ ಚಾಲಕನನ್ನು ಪಕ್ಕದಲ್ಲಿ ಕೂರಿಸಿ ತಾನು ಮದ್ಯದ ಅಮಲಿನಲ್ಲಿ ಅತಿವೇಗದಿಂದ ವಾಹನ ನಡೆಸುತ್ತಿದ್ದನು. ಈ ಸ್ಥಿತಿಯಲ್ಲಿ ಅವನು ರಸ್ತೆಯ ಮೇಲೆ ಯುವಕ-ಯುವತಿಯರಿಬ್ಬರು ಹೋಗುತ್ತಿದ್ದ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅವರನ್ನು ಉರುಳಿಸಿದನು; ಇದೆಲ್ಲವೂ ‘ಸಿ.ಸಿ.ಟಿ.ವಿ’ಯಲ್ಲಿ ರಿಕಾರ್ಡ್ ಆಗಿದೆ. ರಸ್ತೆಯಲ್ಲಿ ಜನರು ಅವನನ್ನು ಹಿಡಿದು ಯದ್ವಾತದ್ವಾ ಹೊಡೆದು ಪೊಲೀಸರಿಗೆ ಒಪ್ಪಿಸಿದರು. ದ್ವಿಚಕ್ರ ಸವಾರರಿಬ್ಬರೂ ಸ್ಥಳದಲ್ಲಿಯೇ ಮೃತಪಟ್ಟರು.
೨. ಅಪಘಾತ ಮಾಡಿದ ಅಪ್ರಾಪ್ತ ಹುಡುಗನ ಜೊತೆಗೆ ಅನೇಕ ಜನರ ವೃತ್ತಿಜೀವನ ಸಂಕಟದಲ್ಲಿ !
ಅನಂತರ ಆರಂಭವಾದ ನಾಟಕದ ಬಗ್ಗೆ ಏನೂ ಕೇಳುವುದೇ ಬೇಡ. ಅಪ್ರಾಪ್ತ ಹುಡುಗನ ತಂದೆಯು ಹಣದ ಬಲದಿಂದ ಏನೆಲ್ಲ ಮಾಡಿದರೋ, ಅದು ಹಿಂದಿ ಚಲನಚಿತ್ರದಲ್ಲಿನ ಖಳನಾಯಕನಿಂದ ಮಾತ್ರ ಮಾಡಲು ಸಾಧ್ಯ. ಜನಸಾಮಾನ್ಯರು ಅದನ್ನು ತಮ್ಮ ಕಿವಿಯಿಂದ ಕೇಳಿದರು, ಕಣ್ಣುಗಳಿಂದ ನೋಡಿದರು. ಪೊಲೀಸರನ್ನು ಖರೀದಿಸಲಾಯಿತು, ಒಬ್ಬ ಶಾಸಕನು ಪೊಲೀಸ್ ಠಾಣೆಗೆ ಪ್ರವೇಶ ಮಾಡಿದನು, ಅಲ್ಲಿ ಆ ‘ಚಿಕ್ಕ ಮಾಲೀಕ’ನಿಗೆ ತಿನ್ನಲು ಪಿಝ್ಝಾ-ಬರ್ಗರ್ ಕೂಡ ತರಿಸಲಾಯಿತು. ‘ಸಿ.ಸಿ.ಟಿ.ವಿ.’ ಛಾಯಾಚಿತ್ರದಲ್ಲಿ ಇದೆಲ್ಲವನ್ನೂ ಸೆರೆಹಿಡಿಯಲಾಗಿದೆ. ಆದ್ದರಿಂದ ಪೊಲೀಸರೂ ಇದರಲ್ಲಿ ಸಿಲುಕಿದರು. ಹುಡುಗನನ್ನು ಕಾಪಾಡಲು ನಾಟಕ ಆರಂಭವಾಯಿತು ಹಾಗೂ ಒಬ್ಬೊಬ್ಬರೇ ಜಾಲದಲ್ಲಿ ಸಿಲುಕುತ್ತಾ ಹೋದರು. ಪ್ರಕರಣ ಎಷ್ಟು ದೊಡ್ಡದಾಯಿತೆಂದರೆ, ಮುಖ್ಯಮಂತ್ರಿ ಸಹಿತ ರಾಜ್ಯ ಸರಕಾರವೂ ಇದರಲ್ಲಿ ಹಸ್ತಕ್ಷೇಪ ಮಾಡಬೇಕಾಯಿತು. ಪ್ರಕರಣ ನ್ಯಾಯಾಲಯಕ್ಕೆ ಹೋಯಿತು. ನಿತ್ಯದ ನ್ಯಾಯಾಧೀಶರು ಆ ದಿನ ರಜೆಯಲ್ಲಿದ್ದರು. ಆದ್ದರಿಂದ ಅವರ ಬದಲು ಬೇರೆ ಹಂಗಾಮಿ ನ್ಯಾಯಾಧೀಶರು ನ್ಯಾಯಾಲಯಕ್ಕೆ ಬಂದರು ಹಾಗೂ ಅವರು ಹುಡುಗನಿಗೆ ಜಾಮೀನು ನೀಡಿ ಬಿಟ್ಟು ಬಿಟ್ಟರು. ಈ ಪ್ರಕರಣ ಇಲ್ಲಿಗೆ ನಿಲ್ಲಲಿಲ್ಲ. ಅವನಿಗೆ ಒಂದು ‘ಪ್ರಬಂಧ’ ಬರೆಯುವ ‘ಶಿಕ್ಷೆ’ ನೀಡಲಾಯಿತು ಹಾಗೂ ೧೦ ದಿನ ಸಾರಿಗೆ ನಿಯಂತ್ರಣದ ಸ್ಥಳದಲ್ಲಿ ಪೊಲೀಸರಿಗೆ ಸಹಾಯ ಮಾಡಲು ಹೇಳಲಾಯಿತು. ಆದ್ದರಿಂದ ಈ ಪ್ರಕರಣ ಇನ್ನೂ ಉಲ್ಬಣವಾಯಿತು. ಅನಂತರ ಸಾಮಾಜಿಕ ಸಂಸ್ಥೆಗಳು, ನಾಗರಿಕರು, ವಾರ್ತಾವಾಹಿನಿಗಳ ಪತ್ರಕರ್ತರು ಈ ಪ್ರಕರಣವನ್ನು ಬೆನ್ನಟ್ಟಿದರು. ಮೇಲಿನ ನ್ಯಾಯಾಲಯ ಇದನ್ನು ಅವಲೋಕಿಸಿ ಪುನಃ ಆ ಹುಡುಗನನ್ನು ಬಂಧಿಸಬೇಕಾಯಿತು. ರಕ್ತದ ಮಾದರಿಯನ್ನು ಬದಲಾಯಿಸಲು ಅವನ ತಾಯಿ ತನ್ನ ರಕ್ತದ ಮಾದರಿಯನ್ನು ಸಸೂನ ಆಸ್ಪತ್ರೆಗೆ ನೀಡಿದಳು ಹಾಗೂ ಅವಳು ಕೂಡ ಸಿಲುಕಿದಳು. ಸಹಾಯ ಮಾಡಿದ್ದ ಸಸೂನ ಆಸ್ಪತ್ರೆಯ ಆಧುನಿಕ ವೈದ್ಯರೆಲ್ಲರೂ ಸಿಲುಕಿದರು. ಈ ಪ್ರಕರಣದಲ್ಲಿ ಒಬ್ಬ ಕ್ರೂರಿ ಗೂಂಡಾನ ಸಂಬಂಧವಿರುವುದು ಬಹಿರಂಗವಾಯಿತು. ಬಾರ್ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಯಿತು, ಅನೇಕ ದಾಳಿಗಳಾದವು ಹಾಗೂ ಅಪ್ರಾಪ್ತ ಹುಡುಗನ ಜೊತೆಗೆ ಅನೇಕ ಜನರ ವೃತ್ತಿಜೀವನ ಹಾಳಾಯಿತು.
೩. ‘ಕಲ್ಪೇಬಲ್ ಹೊಮಿಸಾಯಿಡ್ ನಾಟ್ ಅಮೌಂಟ್ ಟು ಮರ್ಡರ್’ ಕಲಂನಡಿಯಲ್ಲಿ ಅಪರಾಧ ದಾಖಲು
‘ಕಲ್ಪೇಬಲ್ ಹೊಮಿಸೈಡ್ ನಾಟ್ ಅಮೌಂಟ್ ಟು ಮರ್ಡರ್’ (ಹತ್ಯೆಯ ಪ್ರಯತ್ನ) ಈ ಕಲಂನಡಿಯಲ್ಲಿ ಅಪರಾಧವನ್ನು ದಾಖಲಿಸಲಾಯಿತು. ಇದರಲ್ಲಿ ಒಂದು ವಿಷಯ ಹೇಗಿರುತ್ತದೆಯೆಂದರೆ, ಅಪಘಾತಗಳಲ್ಲಿ ಯಾರೂ ಯಾರನ್ನೂ ಉದ್ದೇಶಪೂರ್ವಕವಾಗಿ ಕೊಲ್ಲುವುದಿಲ್ಲ. ಯಾವಾಗ ಒಬ್ಬ ವ್ಯಕ್ತಿ ಉದ್ದೇಶಪೂರ್ವಕವಾಗಿ ಯಾರನ್ನಾದರೂ ಕೊಲ್ಲುತ್ತಾನೋ, ಆಗ ಅದನ್ನು ‘ಹತ್ಯೆ’ (ಮರ್ಡರ್) ಎನ್ನುತ್ತಾರೆ; ಆದರೆ ಉದ್ದೇಶಪೂರ್ವಕ ಯಾರನ್ನಾದರೂ ಕೊಲ್ಲುವುದಿಲ್ಲ; ಆದರೆ ದುರ್ದೈವದಿಂದ ಒಬ್ಬರಿಂದ ಇನ್ನೊಬ್ಬರ ಹತ್ಯೆಯಾದರೆ ಅದನ್ನು ‘ಕಲ್ಪೇಬಲ್ ಹೋಮಿಸಾಯಿಡ್ ನಾಟ್ ಅಮೌಂಟ್ ಟು ಮರ್ಡರ್’ ಈ ಕಲಂನಡಿಯಲ್ಲಿ ಅಪರಾಧವನ್ನು ದಾಖಲಿಸಲಾಗುತ್ತದೆ. ಇದರಲ್ಲಿ ಶಿಕ್ಷೆ ಇರುತ್ತದೆ; ಆದರೆ ಶಿಕ್ಷೆಯ ಅವಧಿ ಕಡಿಮೆ ಇರುತ್ತದೆ. ಇಲ್ಲಿ ಅಪರಾಧಿ ಅಪ್ರಾಪ್ತನಾಗಿದ್ದ ಕಾರಣ ‘ಬಾಲನ್ಯಾಯ ಕಾನೂನು’ ಕೂಡ ಅನ್ವಯವಾಗುತ್ತದೆ. ಇಲ್ಲಿ ಇದೆಲ್ಲವನ್ನೂ ಹೇಳುವ ಉದ್ದೇಶವೆಂದರೆ, ಘಟಿಸಿರುವುದೆಲ್ಲವೂ ದುರ್ಭಾಗ್ಯವಾಗಿದೆ ನಿಜ; ಆದರೆ ಯಾವ ರೀತಿಯಲ್ಲಿ ಧನಿಕರ ಉದ್ಧಟತನದ ಪ್ರಯತ್ನವಾಯಿತೋ, ಅದು ಅತ್ಯಂತ ಕ್ಲೇಶದಾಯಕವಾಗಿದೆ.
೪. ಹೊಸ ‘ಮೋಟಾರ್ ವಾಹನ ಕಾನೂನು’
ಅ. ಒಂದು ವೇಳೆ ೧೮ ವರ್ಷಕ್ಕಿಂತ ಚಿಕ್ಕ ಹುಡುಗ (ಹುಡುಗ ಅಥವಾ ಹುಡುಗಿ) ಅನುಮತಿ (ಲೈಸನ್ಸ) ಇಲ್ಲದೆ ವಾಹನ ನಡೆಸಿದರೆ, ಅವನ ಪಾಲಕರಿಗೆ ೨೫ ಸಾವಿರ ರೂಪಾಯಿ ದಂಡ ಮತ್ತು ೩ ವರ್ಷ ಸೆರೆಮನೆವಾಸದ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಆ. ಆ ವಾಹನದ ದಾಖಲೆ ರದ್ದಾಗಬಹುದು.
ಇ. ಹುಡುಗನನ್ನು ಬಾಲಾಪರಾಧಿ ಸುಧಾರಣಕೇಂದ್ರದಲ್ಲಿ ಇರಿಸಲಾಗುವುದು. ಇದರಲ್ಲಿ ಕೆಲವು ರಿಯಾಯತಿ ನೀಡಲಾಗಿದೆ.
ಈ. ಹುಡುಗ ವಾಹನ ನಡೆಸಿ ಅಪಘಾತ ಮಾಡಿರುವುದರ ಬಗ್ಗೆ ಪಾಲಕರಿಗೆ ಸ್ವಲ್ಪವೂ ಕಲ್ಪನೆ ಇಲ್ಲದಿದ್ದರೆ ಅವರು ಅದನ್ನು ನ್ಯಾಯಾಲಯದಲ್ಲಿ ಸಿದ್ಧಪಡಿಸಬೇಕಾಗುತ್ತದೆ.
ಉ. ಹುಡುಗ ಅನುಮತಿಪತ್ರವಿಲ್ಲದೆ (ಲೈಸನ್ಸ) ವಾಹನ ನಡೆಸಲೇ ಬಾರದು, ಎಂದು ಪಾಲಕರು ದಕ್ಷತೆ ವಹಿಸಿದ್ದರು, ಎಂಬುದು ಸಿದ್ಧವಾದರೆ ಅವರಿಗೆ ಸಮಾಧಾನ ಸಿಗಬಹುದು.
ಊ. ಒಂದು ವೇಳೆ ಅವನಲ್ಲಿ ‘ಕಲಿಕೆಯ ಅನುಮತಿ’ (ಲರ್ನಿಂಗ್ ಲೈಸನ್ಸ್) ಇದ್ದರೆ, ಈ ಕಲಮ್ ಅನ್ವಯವಾಗುವುದಿಲ್ಲ, ಶಿಕ್ಷೆಯಲ್ಲಿ ಸಾಕಷ್ಟು ರಿಯಾಯಿತಿ ಸಿಗುತ್ತದೆ.
೫. ಪಾಲಕರೇ, ಸೆರೆಮನೆಗೆ ಹೋಗಲಿಕ್ಕಿಲ್ಲದಿದ್ದರೆ ನಿಮ್ಮ ೧೮ ವರ್ಷಕ್ಕಿಂತ ಕೆಳಗಿನ ಮಕ್ಕಳ ಕೈಗೆ ವಾಹನ ನೀಡುವುದನ್ನು ನಿಲ್ಲಿಸಿರಿ !
ಸದ್ಯ ಶಾಲೆ-ಮಹಾವಿದ್ಯಾಲಯಗಳಲ್ಲಿ ಕಲಿಯುವ ೧೮ ವರ್ಷಕ್ಕಿಂತ ಕೆಳಗಿನ ಮಕ್ಕಳು ಸರಾಗವಾಗಿ ತಾಯಿ-ತಂದೆಯರ ವಾಹನವನ್ನು ನಡೆಸುತ್ತಿರುವುದು ಕಾಣಿಸುತ್ತದೆ. ಅದನ್ನು ಕೂಡ ನಿಲ್ಲಿಸಬೇಕು. ಅವರ ಈ ವಯಸ್ಸಿನಲ್ಲಿ ಆವೇಶವಿರುತ್ತದೆ. ಆದ್ದರಿಂದ ಅತಿವೇಗದಿಂದ ವಾಹನ ನಡೆಸುವ ಘಟನೆ ಹೆಚ್ಚಾಗುತ್ತದೆ. ಇದರಲ್ಲಿ ಅವರಿಗೂ ಹಾನಿಯಾಗಬಹುದು. ‘ಏನೂ ಆಗುವುದಿಲ್ಲ’, ಎನ್ನುವ ನೆಪ ಇಲ್ಲಿ ನಡೆಯುವುದಿಲ್ಲ. ಪ್ರತಿಯೊಬ್ಬ ಹುಡುಗನು ೧೮ ವರ್ಷ ಪೂರ್ಣವಾದ ತಕ್ಷಣ ವಾಹನ ನಡೆಸುವ ಅನುಮತಿಪತ್ರ ಮಾಡಿಸಬೇಕು. ಅನಂತರ ಏನಾದರೂ ಅನಾಹುತ ನಡೆದರೆ, ಅವೆಲ್ಲವೂ ಸೌಮ್ಯವಾಗಬಹುದು. ಈಗ ಮೋಟಾರ್ ವಾಹನ ಕಾನೂನಿನಲ್ಲಿ ಹಾಕಿರುವ ಹೊಸ ಕಲಮ್‌ಗಳಲ್ಲಿ ಸಂತ್ರಸ್ತರ ಪರಿಹಾರದ ಬಗ್ಗೆ ನ್ಯಾಯಾಲಯವು ಪ್ರಾಮುಖ್ಯವಾಗಿ ವಿಚಾರ ಮಾಡುತ್ತದೆ. ಯಾರಾದರೂ ಮೃತಪಟ್ಟರೆ ಅಥವಾ ದೊಡ್ಡ ಪ್ರಮಾಣದ ಹಾನಿಯಾದರೆ, ಅವರಿಗೆ ನ್ಯಾಯಾಲಯ ಆರ್ಥಿಕ ಸಹಾಯವನ್ನು ಕೊಡಿಸುತ್ತದೆ; ಏಕೆಂದರೆ ಇಂತಹ ಪ್ರಕರಣದಲ್ಲಿ ಇಬ್ಬರಿಗೂ ಹಾನಿಯಾಗಿರುತ್ತದೆ; ಆದರೆ ಅಮಾಯಕರ ಸಾವು ಹಾಗೂ ಅವರಿಗೆ ಕೊಡುವ ಪರಿಹಾರ ಇದು ಮಹತ್ವದ್ದಾಗಿರುತ್ತದೆ. ಪಾಲಕರಿಗೆ ಸೆರೆಮನೆಗೆ ಹೋಗಲಿಕ್ಕಿಲ್ಲದಿದ್ದದರೆ ಅವರು ತಮ್ಮ ೧೮ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ವಾಹನ ನಡೆಸಲು ಕೊಡಬಾರದು. ಪ್ರತಿಯೊಂದು ಶಾಲೆ-ಮಹಾವಿದ್ಯಾಲಯಗಳಲ್ಲಿ ಇದರ ಬಗ್ಗೆ ಪ್ರಬೋಧನೆ ಮಾಡಬೇಕು.’
– ವಕೀಲ ಶೈಲೇಶ ಕುಲಕರ್ಣಿ, ಕುರ್ಟಿ, ಫೋಂಡಾ, ಗೋವಾ.