ಶ್ರೇಷ್ಠವಾದ ಹಿಂದೂ ಸಂಸ್ಕೃತಿಯ ಒಂದು ರತ್ನಜಡಿತ ಕೊಂಡಿಯೆಂದರೆ ‘ಗುರು-ಶಿಷ್ಯ ಪರಂಪರೆ !
‘ವಸಿಷ್ಠಋಷಿ-ಶ್ರೀರಾಮ, ‘ಸಾಂದೀಪನಿ ಋಷಿ-ಶ್ರೀಕೃಷ್ಣ, ‘ಆರ್ಯ ಚಾಣಕ್ಯ-ಚಂದ್ರಗುಪ್ತ ಇವರೆಲ್ಲ ಆದರ್ಶ ಗುರು-ಶಿಷ್ಯಗಳ ಉದಾಹರಣೆಯಾಗಿದ್ದಾರೆ. ಗುರು ಮತ್ತು ಶಿಷ್ಯ ಇವರಿಬ್ಬರು ದೀಪದಂತೆ ಇರುತ್ತಾರೆ. ಎಣ್ಣೆಬತ್ತಿ ಇಲ್ಲದ ದೀಪವನ್ನು ಒಂದು ವೇಳೆ ೧೦೦ ಬಾರಿ ಪ್ರಕಾಶಮಾನವಾಗಿರುವ ದೀಪದ ಹತ್ತಿರ ಕೊಂಡೊಯ್ದರೂ, ಅದು ಬೆಳಕು ಕೊಡುವುದಿಲ್ಲ. ಶಿಷ್ಯನೆಂಬ ದೀಪದಲ್ಲಿನ ಎಣ್ಣೆಬತ್ತಿಯೆಂದರೆ ಅವನ ನಿಷ್ಠೆ, ಶ್ರದ್ಧೆ ಮತ್ತು ಭಕ್ತಿ !
ಗುರುಗಳ ಉಪದೇಶದ ಅನುಕರಣೆ ಮಾಡಬೇಕು !
ಪರದೇಶದಲ್ಲಿ ಪ್ರಯಾಣಿಕನಿಗೆ ಸರಿಯಾದ ಮಾರ್ಗವು ಗೊತ್ತಿರದಿದ್ದರೆ, ಆ ಪ್ರಯಾಣಿಕನು ಅಲ್ಲಿನ ಜನರ ಸೂಚನೆಯಂತೆ ಮಾರ್ಗಕ್ರಮಣವನ್ನು ಮಾಡುತ್ತಾನೆ. ಅದೇ ರೀತಿ ಯಾರಿಗೆ ಭಗವಂತನ ಸ್ಥಳವು ಗೊತ್ತಿದೆಯೋ, ಅಂತಹ ಗುರುಗಳ ಉಪದೇಶದ ಅನುಕರಣೆಯನ್ನು ಮಾಡಬೇಕು.
ಗುರುಗಳಿಲ್ಲದೇ ದೇವರ ದರ್ಶನ ಅಸಾಧ್ಯ
ಅ. ಗಾಳಿಯು ಕಣ್ಣಿಗೆ ಕಾಣಿಸುವುದಿಲ್ಲ; ಆದರೆ ಯಾವಾಗ ಬೀಸಣಿಕೆ ಬೀಸುತ್ತೇವೆಯೋ ಆಗ ತ್ವಚೆಗೆ ಅದರ ಸ್ಪರ್ಶವಾಗುತ್ತದೆ.
ಆ. ಸೂಕ್ಷ್ಮವಾಗಿರುವ ಅಣುವನ್ನು ನಾವು ಕಣ್ಣಿನಿಂದ ನೋಡಲಾಗುವುದಿಲ್ಲ; ಆದರೆ ಸೂಕ್ಷ್ಮದರ್ಶಕಯಂತ್ರದ ಮೂಲಕ ಅದನ್ನು ನೋಡಬಹುದು.
ಇ. ತೀವ್ರ ಅಜ್ಞಾನದಿಂದ ಮನುಷ್ಯನು ಕುರುಡನಾಗುತ್ತಾನೆ; ಆದರೆ ಗುರುಗಳು ಅಜ್ಞಾನವನ್ನು ದೂರ ಮಾಡಿ ಈಶ್ವರನ ದರ್ಶನವನ್ನು ಮಾಡಿಸುತ್ತಾರೆ.
– ಪೂ. ಬಾಳಾಜಿ ಆಠವಲೆ
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |