Statement from Amartya Sen: ‘ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಕಲ್ಪನೆ ಸೂಕ್ತವಲ್ಲ! (ಅಂತೆ)’

ನೊಬೆಲ್ ಪ್ರಶಸ್ತಿ ಪಡೆದ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನರವರ ಹೇಳಿಕೆ !

ನವದೆಹಲಿ – ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಕಲ್ಪನೆಯು ನನಗೆ ಯೋಗ್ಯವೆಂದು ಅನಿಸುವುದಿಲ್ಲ. ಭಾರತವು ಹಿಂದೂ ರಾಷ್ಟ್ರವಲ್ಲ ಎಂಬುದು ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ ಹೇಳಿದರು.

ಅವರು ‘ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲರನ್ನೂ ಒಳಗೊಳ್ಳುವ ಸಂವಿಧಾನವಿರುವಾಗ, ನಮ್ಮ ರಾಜಕಾರಣಿಗಳು ರಾಜಕೀಯ ಉದಾರತಾವಾದವನ್ನು ದರ್ಶಿಸಬೇಕು’ ಎಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಅವರು ಪ್ರಸಾರ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದರು.

ಅಮರ್ತ್ಯ ಸೇನರವರು ಮಾತನ್ನು ಮುಂದುವರಿಸಿ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಾಕಷ್ಟು ಹಣ ಖರ್ಚು ಮಾಡಲಾಯಿತು. ಈ ಮೂಲಕ ಭಾರತ ಹಿಂದೂ ರಾಷ್ಟ್ರವಾಗಿದೆ ಎಂದು ತೋರಿಸುವ ಪ್ರಯತ್ನವಾಯಿತು. ಮ. ಗಾಂಧಿ, ರವೀಂದ್ರನಾಥ ಟಾಗೋರ ಮತ್ತು ನೇತಾಜಿ ಸುಭಾಷಚಂದ್ರ ಬೋಸರ ಸಮಯದಲ್ಲಿಯೂ ಇಂತಹ ಪ್ರಯತ್ನಗಳು ಎಂದಿಗೂ ನಡೆದಿರಲಿಲ್ಲ. ಇದು ಭಾರತದ ನಿಜವಾದ ಗುರುತನ್ನು ಮುಚ್ಚಿಡುವ ಪ್ರಯತ್ನವಾಗಿತ್ತು, ಇದರಲ್ಲಿ ಬದಲಾವಣೆಯಾಗಬೇಕು. ನಾವು ಪ್ರತಿಯೊಂದು ಚುನಾವಣೆಯ ನಂತರ, ಏನಾದರೂ ಬದಲಾಗಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತೇವೆ. ಕಳೆದ ಕೆಲವು ಚುನಾವಣೆಗಳ ನಂತರ ದೇಶದಲ್ಲಿ ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ. ಕೆಲವು ನಾಯಕರನ್ನು ಕಾನೂನು ಪ್ರಕ್ರಿಯೆಯ ಹೊರತು ಜೈಲಿಗೆ ಹಾಕಲಾಗುತ್ತಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದೆ. ಇದೆಲ್ಲವೂ ನಿಲ್ಲಬೇಕು, ಎಂದು ಹೇಳಿದರು.

ಸಂಪಾದಕೀಯ ನಿಲುವು

* ಭಾರತವನ್ನು ಇಸ್ಲಾಮಿ ರಾಷ್ಟ್ರವನ್ನಾಗಿಸಲು ಜಿಹಾದಿ ಭಯೋತ್ಪಾದಕ ಸಂಘಟನೆಗಳು ಮತ್ತು ಮತಾಂಧ ಮುಸಲ್ಮಾನರು ಪ್ರಯತ್ನಿಸುತ್ತಿದ್ದಾರೆ, ಈ ಬಗ್ಗೆ ಅಮರ್ತ್ಯ ಸೇನರವರಂತಹ ಬುದ್ಧಿಜೀವಿಗಳು ಎಂದಿಗೂ ತುಟಿ ಬಿಚ್ಚುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

* ಹಿಂದೂ ರಾಷ್ಟ್ರ ನಿರ್ಮಾಣದ ಕಲ್ಪನೆಯು ಇಂತಹ ಜನರಿಗೆ ಎಂದಿಗೂ ಇಷ್ಟವಾಗುವುದಿಲ್ಲ; ಏಕೆಂದರೆ ಅವರು ಕೇವಲ ಜನ್ಮ ಹಿಂದೂಗಳಾಗಿದ್ದು, ಅವರಿಗೆ ಹಿಂದೂ ಧರ್ಮ ಏನು ಎಂಬುದೇ ತಿಳಿದಿಲ್ಲ.