Dreadful Terrorist staying in Pakistan: ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜ಼ರ್ ಪಾಕಿಸ್ತಾನದಲ್ಲಿ ವಾಸ !

ತಾಲಿಬಾನ್ ವಶದಲ್ಲಿರುವುದಾಗಿ ಹೇಳಿದ್ದ ಪಾಕಿಸ್ತಾನದ ಹೇಳಿಕೆಗಳು ಸುಳ್ಳು !

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತದ ಅತಿ ದೊಡ್ಡ ಶತ್ರುಗಳಲ್ಲಿ ಒಬ್ಬನಾಗಿರುವ ಭಯೋತ್ಪಾದಕ ಮಸೂದ್ ಅಜ಼ರ್ ಪಾಕಿಸ್ತಾನದಲ್ಲಿರುವುದು ಬೆಳಕಿಗೆ ಬಂದಿದೆ. ಆತ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ರಕ್ಷಣೆಯಲ್ಲಿದ್ದಾನೆ ಆತನನ್ನು ಬಿಡುಗಡೆ ಮಾಡಲು ಕಳೆದ 2 ವರ್ಷಗಳಿಂದ ಪಾಕಿಸ್ತಾನ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳುತ್ತಿತ್ತು. ಇದೀಗ ಸುಳ್ಳೆಂದು ಸಾಬೀತಾಗಿದೆ. ಈ ಕಾರಣದಿಂದಾಗಿ, ಮತ್ತೊಮ್ಮೆ ಭಾರತವು ಪಾಕಿಸ್ತಾನವನ್ನು ‘ಎಫ್.ಎ.ಟಿ.ಎಫ್.’ನ ಗ್ರೇ ಲಿಸ್ಟ್ ಗೆ ಸೇರಿಸಲು ಒತ್ತಾಯಿಸಬಹುದು. ‘ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್’ (ಎಫ್‌.ಎ.ಟಿ.ಎಫ್.) ಜಾಗತಿಕ ಸಂಸ್ಥೆಯಾಗಿದ್ದು, ಭಯೋತ್ಪಾದನೆಗೆ ಹಣಕಾಸು ಒದಗಿಸಲು ಅವಕಾಶ ನೀಡುವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ.

ಮಸೂದ್ ಅಜ಼ರ್ ಪಾಕಿಸ್ತಾನದಲ್ಲಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ !

ಜಿಹಾದಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಂದ ಮಸೂದ್ ಅಜ಼ರ್ ಹೆಸರು ಇದ್ದಕ್ಕಿದ್ದಂತೆ ಹೊರಹೊಮ್ಮಿದೆ. ಪ್ರತಿದಿನ ಬೆಳಗ್ಗೆ 9 ರಿಂದ 10 ರವರೆಗೆ ಹಾಗೂ ಮಧ್ಯಾಹ್ನ 3 ರಿಂದ 4 ರವರೆಗೆ ತನ್ನ ಬೆಂಬಲಿಗರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದಾಗಿ ಹೇಳಿ ಜೈಶ್-ಎ-ಮೊಹಮ್ಮದ್ ಸಾಮಾಜಿಕ ಜಾಲತಾಣದಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಎಂಬ ಸೇವೆಯನ್ನು ಆರಂಭಿಸಿದೆ. ಈ ಉದ್ದೇಶಕ್ಕಾಗಿ ಎರಡು ಪಾಕಿಸ್ತಾನಿ ಮೊಬೈಲ್ ಸಂಖ್ಯೆಗಳನ್ನೂ ಸಹ ನೀಡಲಾಗಿದೆ. ಜನರು ಟೆಲಿಗ್ರಾಮ್, ವಾಟ್ಸ್ಅಪ್‌ ಮತ್ತು ‘ಎಸ್.ಎಂ.ಎಸ್.’ಅನ್ನು ಬಳಸಿಕೊಂಡು ಪ್ರಶ್ನೆಗಳನ್ನು ಕಳುಹಿಸಬಹುದು. ಪಾಕಿಸ್ತಾನದ ದುರ್ಬಲ ಸರ್ಕಾರದ ದೃಷ್ಟಿಯಿಂದ ಮಸೂದ್ ಅಜ಼ರ್ ಮತ್ತೆ ತಲೆ ಎತ್ತಿದ್ದಾನೆ ಎಂದು ನಂಬಲಾಗಿದೆ.

ಮಸೂದ್ ಅಜ಼ರ್ ಯಾರು?

ಮೌಲಾನಾ ಮಸೂದ್ ಅಜ಼ರ್ ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕ. ಅವನು 2019 ರಲ್ಲಿ ಪುಲ್ವಾಮಾ ದಾಳಿ, 2016 ರಲ್ಲಿ ಪಠಾಣ್‌ಕೋಟ್ ದಾಳಿ ಮತ್ತು 2001 ರಲ್ಲಿ ಭಾರತೀಯ ಸಂಸತ್ತಿನ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದನು. ಮೇ 1, 2019 ರಂದು ಅವನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲಾಯಿತು. 1999ರಲ್ಲಿ ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಮಸೂದ್ ಅಜ಼ರ್ ಬಿಡುಗಡೆಗೊಂಡಿದ್ದ.