ಹಿಂದೂಗಳ ಮತ್ತು ಭಾರತದ ದೃಷ್ಟಿಯಿಂದ ಶ್ರೀರಾಮನ ಅಸಾಧಾರಣ ಮಹತ್ವ !

‘ಶ್ರೀರಾಮ’ ಎಂದು ಉಚ್ಚರಿಸಿದರೆ, ಪ್ರತಿಯೊಬ್ಬ ಹಿಂದೂವಿಗೆ ಶ್ರೀರಾಮನಿಗೆ ಸಂಬಂಧಿತ ನೆನಪುಗಳು ಜಾಗೃತವಾಗುತ್ತವೆ. ಶ್ರೀರಾಮ ಎಂದರೆ, ಅವನೊಂದಿಗೆ ಸೀತಾ, ಲಕ್ಷ್ಮಣ, ಹನುಮಂತ, ರಾಮಾಯಣ, ಅಯೋಧ್ಯೆ, ರಾಜಾ ದಶರಥ, ಕೌಸಲ್ಯೆ, ಕೈಕೇಯಿ, ಸುಮಿತ್ರಾ, ಭರತ, ಶತ್ರುಘ್ನ, ಹೀಗೆ ಎಲ್ಲರೂ ನಮ್ಮ ಮನಸ್ಸಿನಲ್ಲಿ ಬರುತ್ತಾರೆ. ಯಾವುದರಲ್ಲಿ ಅವಿನಾಶಿ ಚೈತನ್ಯವಿದೆಯೋ, ಅದೇ ಚಿರಂತನವಾಗಿರುತ್ತದೆ. ‘ಲಕ್ಷಾಂತರ ವರ್ಷಗಳ ನಂತರವೂ, ಸಾವಿರಾರು ಪೀಳಿಗೆಗಳು ಆಗಿ ಹೋಗಿದ್ದರೂ ರಾಮನು ಜನರ ಮನಸ್ಸಿನಲ್ಲಿ ಆದರಣೀಯನಾಗಿದ್ದಾನೆ, ಅಂದರೆ ಅವನು ಅವಿನಾಶಿ ಭಗವಂತನಾಗಿದ್ದಾನೆ’ ಎಂಬುದು ಗಮನಕ್ಕೆ ಬರುತ್ತದೆ. ಶ್ರೀರಾಮನ ಮಹತ್ವ ಪ್ರತಿಯೊಬ್ಬ ಹಿಂದೂವಿಗೆ ಅನನ್ಯಸಾಧಾರಣವಾಗಿದೆ. ಅವನಿಗೆ ಸಂಬಂಧಿತ ಕೆಲವು ಗಮನಾರ್ಹ ಅಂಶಗಳನ್ನು ಇಲ್ಲಿ ಕೊಡಲಾಗಿದೆ.

ಶ್ರೀ. ವಿನಾಯಕ ಶಾನಭಾಗ

೧. ಶ್ರೀರಾಮನ ಇತಿಹಾಸವನ್ನು ಹೇಳುವ ಸ್ಥಾನಗಳು ಅನೇಕ ಯುಗಗಳಿಂದ ಅಸ್ತಿತ್ವದಲ್ಲಿವೆ

ಶ್ರೀರಾಮನ ಕಾಲಕ್ಕೆ ಸಂಬಂಧಿತ ಜನ್ಮಸ್ಥಾನ ಅಯೋಧ್ಯಾ, ಶರಯೂ ನದಿ, ಲಂಕಾ, ಅಶೋಕವನ, ರಾಮೇಶ್ವರಮ್, ಶ್ರೀರಾಮಸೇತುವೆ ಇವೆಲ್ಲ ಇಂದಿಗೂ ಅಸ್ತಿತ್ವದಲ್ಲಿವೆ. ಭಾರತದ ಅನೇಕ ಸ್ಥಾನಗಳು, ಉದಾ. ಪರ್ವತ, ನದಿ, ಅರಣ್ಯ ಇವು ಶ್ರೀರಾಮನ ಚರಣಸ್ಪರ್ಶದಿಂದ ಪಾವನವಾಗಿವೆ. ಅಷ್ಟೇಅಲ್ಲ, ಇವೆಲ್ಲ ಸ್ಥಾನಗಳು ಅನೇಕ ಯುಗಗಳಿಂದ ಶ್ರೀರಾಮನ ಇತಿಹಾಸವನ್ನು ಹೇಳುತ್ತಿವೆ. ಅವುಗಳಲ್ಲಿ ಉಲ್ಲೇಖಿಸಲೇ ಬೇಕಾದಂತಹ ಕೆಲವು ಸ್ಥಾನಗಳೆಂದರೆ, ಚಿತ್ರಕೂಟ ಪರ್ವತ, ಪಂಚವಟಿ, ದಂಡಕಾರಣ್ಯ, ಕಿಷ್ಕಿಂಧಾ, ಋಷ್ಯಮುಖ ಪರ್ವತ, ಪ್ರಯಾಗ, ಗಂಗಾ ನದಿ, ಹಂಪಿ, ಶರಾವತಿ ನದಿ, ರಾಮೇಶ್ವರಮ್, ಬ್ರಹ್ಮಗಿರಿ ಪರ್ವತ (ತ್ರ್ಯಂಬಕೇಶ್ವರ, ನಾಶಿಕ), ಗಂಧಮಾದನ ಪರ್ವತ (ಟಿಬೇಟ್‌), ಸಂಜೀವನಿ ಪರ್ವತ (ರೂಮಾಸ್ಸಲಾ ಪರ್ವತ, ಶ್ರೀಲಂಕಾ, ಆಧಾರ – ಜಾಲತಾಣ ‘ಆಜ ತಕ್‌’), ಧನುಷ್ಕೋಡಿ, ಅಶೋಕವನ (ಶ್ರೀಲಂಕಾ), ತಿರುಪುಲ್ಲಾಣೀ (ತಮಿಳುನಾಡು), ಜನಕಪುರ (ನೇಪಾಳ), ಲೇಪಾಕ್ಷಿ (ಆಂಧ್ರಪ್ರದೇಶ), ರಾಮಕೋಟ್, ಅಮರಕಂಟಕ, ರಾಮಟೆಕ್, ಭದ್ರಾಚಲಮ್‌ (ತೆಲಂಗಾಣಾ) ಇಂತಹ ನೂರಾರು ಸ್ಥಳಗಳಿವೆ.

೨. ಭಾರತದಲ್ಲಿ ೩೬೨೬ ಊರುಗಳಿಗೆ ರಾಮನ ಹೆಸರಿದೆ

‘ರಾಮ’ ಈ ಹೆಸರಿನಿಂದ ಆರಂಭವಾಗುವ ಊರುಗಳ ಸಂಖ್ಯೆ ಭಾರತದಲ್ಲಿ ಸಾವಿರಾರು ಇವೆ ಮತ್ತು ಪ್ರತಿಯೊಂದು ಊರು ಶ್ರೀರಾಮನ ನೆನಪನ್ನು ತನ್ನ ಹೃದಯಲ್ಲಿಟ್ಟುಕೊಂಡು ನೆಲೆಸಿದೆ. ರಾಮಪುರ, ರಾಮೇಶ್ವರಮ್, ರಾಮನಾಥಪುರಮ್, ರಾಮನಗರ, ರಾಮಬನ್, ರಾಮಚಂದ್ರಪುರ, ರಾಮಗುಂಡಮ್, ರಾಮಗಢ್, ರಾಮಾವರಮ್‌ ಇಂತಹ ಭಾರತದಲ್ಲಿ ೩ ಸಾವಿರದ ೬೨೬ ಊರುಗಳ ಹೆಸರುಗಳಲ್ಲಿ ರಾಮನ ಹೆಸರು ಇರುವುದಾಗಿ ‘ಇಂಡಿಯನ್‌ ಎಕ್ಸಪ್ರೆಸ್’ ಈ ವಾರ್ತಾಪತ್ರಿಕೆಯು ಪ್ರಕಾಶಿಸಿದೆ. (ಆಧಾರ – ದ ಇಂಡಿಯನ್‌ ಎಕ್ಸಪ್ರೆಸ್’ ಜಾಲತಾಣ)

೩. ರಾಮಸೇತುವೆ – ಶ್ರೀರಾಮನ ಇತಿಹಾಸವನ್ನು ಗೌರವದಿಂದ ಹೇಳುವ ಸ್ಮಾರಕ !

ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳನ್ನು ಚಕಿತಗೊಳಿಸುವ ‘ಶ್ರೀರಾಮಸೇತುವೆ’ ಇದು ಮಾನವನಿರ್ಮಿತ ಕಲ್ಲು-ಮರಳಿನ ಸೇತುವೆಯಾಗಿದೆ. ಶ್ರೀರಾಮನ ಇತಿಹಾಸವನ್ನು ಹೇಳುವ ಒಂದು ಸ್ಮಾರಕ ಇಂದಿಗೂ ಪೃಥ್ವಿಯಲ್ಲಿದೆ. ಸಂಶೋಧಕರು ಸೇತುವೆಯ ಮೇಲಿರುವ ಮರಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಘಟಕಗಳಿವೆ ಎಂದು ಸಂಶೋಧಿಸಿದ್ದಾರೆ ಮತ್ತು ‘ಸೇತುವೆಯ ಕೆಳಗಿರುವ ಒಂದು ಕಲ್ಲು ಸೇತುವೆಯಿಂದ ಬೇರ್ಪಟ್ಟಾಗ ಆ ಕಲ್ಲು ನೀರಿನಲ್ಲಿ ತೇಲುತ್ತದೆ’, ಎಂದು ಅವರ ಗಮನಕ್ಕೆ ಬಂದಿದೆ.

೪. ಭಾರತದಲ್ಲಿ ಶ್ರೀರಾಮನ ನೂರಾರು ದೇವಸ್ಥಾನಗಳು ೧ ಸಾವಿರ ವರ್ಷಗಳಷ್ಟು ಪ್ರಾಚೀನ !

ಶ್ರೀರಾಮನ ಹೆಸರಿನಲ್ಲಿ ಭಾರತದಲ್ಲಿ ಸಾವಿರಾರು ದೇವಸ್ಥಾನಗಳಿವೆ. ಅವುಗಳಲ್ಲಿ ನೂರಾರು ದೇವಸ್ಥಾನಗಳು ೧ ಸಾವಿರ ವರ್ಷಗಳಿಗಿಂತಲೂ ಪುರಾತನವಾಗಿವೆ. ಶ್ರೀರಾಮನ ಚರಣಸ್ಪರ್ಶವಾದ ಸ್ಥಳಗಳಲ್ಲಿಯೇ ಕೆಲವು ದೇವಸ್ಥಾನಗಳನ್ನು ಕಟ್ಟಲಾಗಿದೆ. ಈ ದೇವಸ್ಥಾನಗಳ ಒಂದೊಂದು ಕಲ್ಲು ಮತ್ತು ಶಿಲ್ಪ ಇಂದಿಗೂ ಶ್ರೀರಾಮನ ಕಥೆಯನ್ನು ನಮಗೆ ಹೇಳುತ್ತಿವೆ ಮತ್ತು ಅಲ್ಲಿ ಪ್ರಾಣಪ್ರತಿಷ್ಠೆಯಾದ ಮೂರ್ತಿಗಳು ಭಕ್ತರಲ್ಲಿ ಶ್ರೀರಾಮನ ಬಗ್ಗೆ ಭಾವವನ್ನು ಜಾಗೃತಗೊಳಿಸುತ್ತಿವೆÉ.

೫. ಶ್ರೀರಾಮನ ಜೀವನಚರಿತ್ರೆ ಹೇಳುವ ವಾಲ್ಮೀಕಿ ರಾಮಾಯಣ ಮತ್ತು ಅದರಿಂದ ಪ್ರೇರಣೆ ಪಡೆದು ರಾಮಭಕ್ತರು ಬರೆದ ೩೦೦ ಕ್ಕೂ ಹೆಚ್ಚು ರಾಮಾಯಣಗಳು

ಶ್ರೀರಾಮ ಮತ್ತು ರಾಮಾಯಣ ಇವು ಹಿಂದೂಗಳ ಶ್ವಾಸದಲ್ಲಿ ನೆಲೆಸಿವೆ, ರಕ್ತದಲ್ಲಿ ಬೆರೆತಿವೆ. ಭಾರತದಲ್ಲಿ ಜನ್ಮಪಡೆದ ಶ್ರೀರಾಮನ ಜೀವನಕಥೆಯನ್ನು ಹೇಳುವ ‘ರಾಮಾಯಣ’ವನ್ನು ವಾಲ್ಮೀಕಿಋಷಿಗಳು ಬರೆದರು. ಇಲ್ಲಿಯವರೆಗೆ ಭಾರತದಲ್ಲಿ ಮೂಲ ವಾಲ್ಮೀಕಿ ರಾಮಾಯಣದಿಂದ ಪ್ರೇರಣೆ ಪಡೆದು ಇತರ ಶ್ರೀರಾಮ ಭಕ್ತರು ತಮ್ಮ ಭಾವಕ್ಕನುಸಾರ ಬೇರೆ ಬೇರೆ ರಾಮಾಯಣಗಳನ್ನು ಬರೆದಿದ್ದಾರೆ. ತುಲಸಿ ರಾಮಾಯಣ, ಕಂಬ ರಾಮಾಯಣ, ಶ್ರೀರಂಗನಾಥ ರಾಮಾಯಣ, ಕೃತ್ತಿವಾಸಿ ರಾಮಾಯಣ, ಅದ್ಭುತ ರಾಮಾಯಣ, ಕುಮುದೆಂದು ರಾಮಾಯಣ, ಕಣ್ಣಾಸ್‌ ರಾಮಾಯಣ ಮುಂತಾದ ೩೦೦ ಕ್ಕಿಂತ ಹೆಚ್ಚು ರಾಮಾಯಣಗಳನ್ನು ಭಾರತದಲ್ಲಿ ಬರೆಯಲಾಗಿದೆ

೬. ಇಲ್ಲಿಯವರೆಗೆ ಶ್ರೀರಾಮನ ವನಗಮನದ ಮಾರ್ಗವನ್ನು ತೋರಿಸುವ ೨೪೮ ಸ್ಥಾನಗಳು ಸಿಕ್ಕಿವೆ

ಕೆಲವು ಶ್ರೀರಾಮಭಕ್ತರು ‘ಶ್ರೀರಾಮನು ೧೪ ವರ್ಷಗಳ ವನವಾಸದಲ್ಲಿ ಯಾವ ದಿಕ್ಕಿಗೆ ಮತ್ತು ಯಾವ ಯಾವ ಊರುಗಳ ಮೂಲಕ ಪ್ರವಾಸ ಮಾಡಿದನು ?’, ಇದನ್ನು ಹುಡುಕಲು ಪ್ರಯತ್ನಿಸಿದರು. ಈ ಯೋಜನೆಗೆ ಅವರು ‘ಶ್ರೀರಾಮ ವನಗಮನ ಪಥ’ ಎಂದು ಹೆಸರು ಕೊಟ್ಟರು. ಈ ಯೋಜನೆಯ ಅಂತರ್ಗತ ಇಲ್ಲಿಯವರೆಗೆ ೨೪೮ ಸ್ಥಾನಗಳ ಪಟ್ಟಿಯನ್ನು ತಯಾರಿಸಲಾಗಿದೆ.

೬. ಏಷ್ಯಾ ಖಂಡದ ಅನೇಕ ದೇಶಗಳು ಸ್ಥಳೀಯ ಭಾಷೆಯಲ್ಲಿ ರಾಮಾಯಣವನ್ನು ಬರೆದು ಆ ಮೂಲಕ ಶ್ರೀರಾಮನ ಆದರ್ಶವನ್ನು ಹೇಳುವುದು

ವಿಶೇಷವೆಂದರೆ ಮ್ಯಾನ್ಮಾರ್, ಇಂಡೋನೇಷ್ಯಾ, ಕಂಬೋಡಿಯಾ, ಲಾಓಸ್, ಫಿಲಿಪಿನ್ಸ್‌, ಶ್ರೀಲಂಕಾ, ನೇಪಾಳ, ಥೈಲ್ಯಾಂಡ್, ಸಿಂಗಾಪುರ, ಮಲೇಷ್ಯಾ, ಜಪಾನ್, ಮಂಗೋಲಿಯಾ, ವಿಯೆಟ್ನಾಮ್, ಚೀನಾ ಮೊದಲಾದ ದೇಶಗಳಲ್ಲಿ ಮೂಲ ರಾಮಾಯಣದಿಂದ ಪ್ರೇರಣೆ ಪಡೆದು ತಮ್ಮ ಸ್ಥಳೀಯ ಭಾಷೆಯಲ್ಲಿ ಬೇರೆ ಬೇರೆ ರಾಮಾಯಣಗಳನ್ನು ರಚಿಸಿದ್ದಾರೆ. ಥೈಲ್ಯಾಂಡ್‌ನಲ್ಲಿ ಇಲ್ಲಿಯವರೆಗಿನ ಎಲ್ಲ ರಾಜರು ತಮ್ಮ ಹೆಸರಿನ ಹಿಂದೆ ರಾಮಾ ೧, ರಾಮಾ ೨, ಹೀಗೆ ಜೋಡಿಸುತ್ತಾ ಬಂದಿದ್ದಾರೆ. ಬ್ಯಾಂಕಾಕ್‌ನ ಮೊದಲು ಥೈಲ್ಯಾಂಡ್‌ನ ‘ಅಯುಧಯಾ’ (ಅಯೋಧ್ಯೆಯ ಅಪಭ್ರಂಶ) ನಗರ ಥೈಲ್ಯಾಂಡ್‌ನ ರಾಜಧಾನಿಯಾಗಿತ್ತು. ಥೈಲ್ಯಾಂಡ್‌ನಲ್ಲಿ ಇಂದಿಗೂ ‘ಥಾಯ್‌ ರಾಮಾಯಣ’ ಪ್ರಸಿದ್ಧವಿದೆ, ಅದರಲ್ಲಿ ಶ್ರೀರಾಮನನ್ನು ಆದರ್ಶ ರಾಜನೆಂದು ನಂಬಲಾಗಿದೆ.

ಶ್ರೀರಾಮನ ಬಗ್ಗೆ ಸಂಶೋಧನೆ ಮಾಡಿ ಬರೆಯಬೇಕೆಂದರೆ ಇಂತಹ ಅಗಣಿತ ವಿಷಯಗಳು ಗಮನಕ್ಕೆ ಬರುವವು, ಶ್ರೀರಾಮನ ಮಹಿಮೆ ಅಷ್ಟು ಅಗಾಧವಾಗಿದೆ. ಸ್ವಲ್ಪದರಲ್ಲಿ ಹೇಳಬೇಕೆಂದರೆ, ‘ಶ್ರೀರಾಮ’ನು ಹಿಂದೂಗಳ ಹೃದಯದಲ್ಲಿ ನೆಲೆಸಿದ್ದಾನೆ. ಸನಾತನ ಧರ್ಮದ ಸಾಕಾರ ರೂಪವಾಗಿದ್ದಾನೆ. ಇಂತಹ ಶ್ರೀರಾಮನಿಗೆ ತ್ರಿವಾರ ವಂದಿಸೋಣ ಮತ್ತು ಅವರ ನಿತ್ಯಸ್ಮರಣೆಯಿಂದ ಜೀವನ ವನ್ನು ಆನಂದಮಯಗೊಳಿಸೋಣ !

– ಶ್ರೀ. ವಿನಾಯಕ ಶಾನಭಾಗ (ವಯಸ್ಸು ೪೦ ವರ್ಷಗಳು, ಆಧ್ಯಾತ್ಮಿಕ ಮಟ್ಟ ಶೇ. ೬೭), ಕುಂಭಕೋಣಮ್, ತಮಿಳುನಾಡು (೧೨.೦೧.೨೦೨೪)