ಆನ್‌ಲೈನ್‌ ನೌಕರಿ ನೀಡುವ ಕಾರಣ ಹೇಳಿ ನಡೆಯುವ ಆರ್ಥಿಕ ವಂಚನೆಯಿಂದ ಎಚ್ಚರದಿಂದಿರಿ !

ಸಾಧಕರು, ವಾಚಕರು ಮತ್ತು ಹಿತಚಿಂತಕರಿಗಾಗಿ ಮಹತ್ವದ ಮಾಹಿತಿ

ಈಗ ಆನ್‌ಲೈನ್‌ ಆರ್ಥಿಕ ವಂಚನೆ ಮಾಡುವುದು ದಿನದಿನೇ ಹೆಚ್ಚುತ್ತಿದೆ. ಇದರಲ್ಲಿ ಮನೆಯಲ್ಲಿದ್ದು ನೌಕರಿ ನೀಡುವ ಆಮಿಷ ಒಡ್ಡಿ ಆರ್ಥಿಕ ವಂಚನೆಯ ಪ್ರಮಾಣ ಈಗ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ. ದೂರವಾಣಿ ಕರೆಯ ಮೂಲಕ ಸಂಪರ್ಕಿಸಿ ಹಾಗೂ ‘ವಾಟ್ಸಪ್’ ತಂತ್ರಾಂಶದ ಮೂಲಕ ಸಂದೇಶ ನೀಡಿ ಈ ರೀತಿಯಲ್ಲಿ ಮನೆಯಲ್ಲಿದ್ದುಕೊಂಡು ‘ಡೇಟಾ ಎಂಟ್ರಿ’ ಮಾಡುವ ನೌಕರಿ ಬಗ್ಗೆ ಹೇಳುತ್ತಾರೆ. ನಂತರ ವ್ಯಕ್ತಿಗೆ ಮನೆಯಲ್ಲಿದ್ದುಕೊಂಡು ಮಾಡಬಹುದಾದಂತಹ ಕೆಲಸ ನೀಡುತ್ತಾರೆ. ಈ ಕೆಲಸ ನೀಡುವ ಮೊದಲು ಆ ಕಂಪನಿಯ ಮೂಲಕ ‘ಆನ್‌ಲೈನ್’ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಕೆಲಸದ ಕುರಿತಾದ ಷರತ್ತುಗಳು ವಿಧಿಸಿರುತ್ತಾರೆ. ಅನಂತರ ಕೆಲಸ ಹೇಳಿರುವ ಕಾಲಾವಧಿಯಲ್ಲಿ ಪೂರ್ಣವಾದ ನಂತರ ಒಪ್ಪಂದದ ಪ್ರಕಾರ ನಿಮ್ಮಿಂದ ಯೋಗ್ಯ ರೀತಿಯಲ್ಲಿ ಕೆಲಸ ಆಗಿಲ್ಲ ಎಂದು ಸುಳ್ಳು ವರದಿ (ರಿಪೋರ್ಟ್‌) ನೀಡುತ್ತಾರೆ.

ಅದರ ನಂತರ ಬೋಗಸ್‌ ನ್ಯಾಯವಾದಿಯ ಹೆಸರಿನಿಂದ ‘ಇ-ಮೇಲ್’ ಮೂಲಕ ‘ನೀವು ಮಾಡಿರುವ ತಪ್ಪಾದ ಕೆಲಸದಿಂದ ನಿಮಗೆ ಕಲಂ ಅನ್ವಯಿಸುತ್ತಿದೆ’ ಎಂದು ಕಾನೂನು ರೀತ್ಯಾ ನೋಟಿಸ್‌ ನೀಡುತ್ತಾರೆ. ಅನಂತರ ಸಂಬಂಧಿತ ವ್ಯಕ್ತಿಯನ್ನು ನ್ಯಾಯವಾದಿಯು ಸಂಪರ್ಕಿಸುತ್ತಾನೆ ಮತ್ತು ನಿಮ್ಮ ಮೊಕದ್ದಮೆ ನ್ಯಾಯಾಲಯದಲ್ಲಿ ದಾಖಲಾಗದೇ ಅದನ್ನು ಮುಚ್ಚಬೇಕೆಂದಿದ್ದರೆ ಹಣ ನೀಡಬೇಕಾಗುತ್ತದೆ ಎಂದು ಹೇಳಿ ಹಣ ವಸೂಲಿ ಮಾಡುತ್ತಾರೆ. ನಂತರ ಕಂಪನಿಯ ಜೊತೆಗೆ ಮಾಡಿರುವ ಒಪ್ಪಂದ ರದ್ದುಪಡಿಸುವುದಕ್ಕಾಗಿ, ಜಾರಿಗೊಳಿಸಿರುವ ಕಲಂಗಳನ್ನು ರದ್ದುಗೊಳಿಸುವುದಕ್ಕಾಗಿ ಹಾಗೂ ತುಂಬಿರುವ ಹಣದ ಮೇಲೆ ಜಿಎಸ್ಟಿ ತುಂಬುವುದಕ್ಕಾಗಿ ಹೀಗೆ ಬೇರೆ ಬೇರೆ ಕಾರಣಗಳನ್ನು ಹೇಳಿ ಆ ವ್ಯಕ್ತಿಯ ಮೇಲೆ ಒತ್ತಡ ತರುತ್ತಾರೆ ಹಾಗೂ ಕಾನೂನುಕ್ರಮ ಕೈಗೊಳ್ಳುವುದಾಗಿ ಬೆದರಿಕೆ ನೀಡಿ ಹಣ ಕಳುಹಿಸಲು ಅನಿವಾರ್ಯಗೊಳಿಸುತ್ತಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನೌಕರಿ ನೀಡುವ ಕಂಪನಿಯ ಜಾಲತಾಣ, ಕಂಪನಿಯು ಮಾಡಿರುವ ಒಪ್ಪಂದ, ಕಂಪನಿಯಿಂದ ಕಳುಹಿಸಿರುವ ಕಾನೂನುರೀತ್ಯಾ ನೋಟೀಸ್‌ ಹಾಗೂ ನ್ಯಾಯವಾದಿ ಇದೆಲ್ಲವೂ ಸುಳ್ಳಾಗಿರುತ್ತದೆ. ಆದ್ದರಿಂದ ಯಾರಾದರೂ ಈ ರೀತಿ ನೌಕರಿ ನೀಡುತ್ತೇವೆ ಎಂದು ಸಂದೇಶ ನೀಡಿದರೆ ಅಥವಾ ಇ-ಮೇಲ್‌ ಕಳುಹಿಸಿದರೆ ಜಾಗರೂಕರಾಗಿ ಈ ರೀತಿ ಪ್ರಸಂಗಗಳಿಗೆ ಪ್ರತಿಕ್ರಿಯಿಸಬೇಡಿ.