ನ್ಯೂಯಾರ್ಕ್ (ಅಮೇರಿಕಾ) – ಅಮೇರಿಕಾದಲ್ಲಿ ವಿಶ್ವ ಹಿಂದೂ ಪರಿಷತ್ ರಥಯಾತ್ರೆಯನ್ನು ಆಯೋಜಿಸುದ್ದು, ಮಾರ್ಚ್ 25 ರಂದು ರಥಯಾತ್ರೆ ಪ್ರಾರಂಭವಾಗಲಿದೆ. ಅಮೆರಿಕದ ಚಿಕಾಗೋದಿಂದ ಈ ರಥಯಾತ್ರೆ ಆರಂಭವಾಗಲಿದೆ. ಈ ರಥಯಾತ್ರೆಯು ಅಮೆರಿಕದ 48 ರಾಜ್ಯಗಳ 851 ದೇವಾಲಯಗಳಿಗೆ ಭೇಟಿ ನೀಡಲಿದೆ. ರಥಯಾತ್ರೆಯನ್ನು ಆಯೋಜಿಸಿರುವ ವಿಶ್ವ ಹಿಂದೂ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಮಿತ್ತಲ್ ಮಾತನಾಡಿ, ‘ರಥದಲ್ಲಿ ಶ್ರೀರಾಮ, ಸೀತಾದೇವಿ, ಶ್ರೀ ಲಕ್ಷ್ಮಣ ಮತ್ತು ಶ್ರೀ ಹನುಮಾನ್ ಅವರ ಮೂರ್ತಿಗಳನ್ನಿಡಲಾಗುವುದು. ಅಯೋಧ್ಯೆಯ ಶ್ರೀರಾಮ ಮಂದಿರದ ವಿಶೇಷ ಪ್ರಸಾದ ಮತ್ತು ಅಕ್ಷತೆಯ ಕಲಶವೂ ರಥದಲ್ಲಿರುವುದು. ಕೆನಡಾದಲ್ಲಿನ 150 ದೇವಸ್ಥಾನಗಳಿಗೂ ಕೂಡ ಭೇಟಿ ನೀಡಲಾಗುವುದು’ ಎಂದು ತಿಳಿಸಿದರು.
‘ಹಿಂದೂ ಟೆಂಪಲ್ ಎಂಪವರ್‌ಮೆಂಟ್ ಕೌನ್ಸಿಲ್’ನ (ಎಚ್.ಎಂ.ಇ.ಸಿ.) ಯ ತೇಜಲ್ ಷಾ ಮಾತನಾಡುತ್ತಾ, “ಹಿಂದೂ ಧರ್ಮದ ಬಗ್ಗೆ ಜನರನ್ನು ಜಾಗೃತಗೊಳಿಸುವುದು, ಶಿಕ್ಷಣ ನೀಡುವುದು ಮತ್ತು ಹಿಂದೂಗಳನ್ನು ಸಬಲೀಕರಣಗೊಳಿಸುವುದು ಈ ರಥಯಾತ್ರೆಯ ಉದ್ದೇಶವಾಗಿದೆ. ಸಮಸ್ತ ಹಿಂದೂಗಳನ್ನು ಒಗ್ಗಟ್ಟಾಗಿಸಲು ಈ ರಥಯಾತ್ರೆಯು ಒಂದು ಉತ್ತಮ ಅವಕಾಶವನ್ನು ಒದಗಿಸುತ್ತಿದೆ. ಪ್ರಪಂಚದಾದ್ಯಂತ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಧರ್ಮ ಪ್ರಸಾರದ ಅಭಿಯಾನದಲ್ಲಿ ಹಿಂದೂಗಳು ಒಗ್ಗೂಡುವುದು ಬಹಳ ಮುಖ್ಯವಾಗಿದೆ’ ಎಂದು ಅವರು ಹೇಳಿದರು.
ಹನುಮ ಜಯಂತಿಯ ದಿನ ಸಮಾರೋಪ !
ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಮಿತ್ತಲ್ ಮಾತನಾಡಿ, ಅಮೆರಿಕಾದಲ್ಲಿ ಪ್ರಪ್ರಥಮ ಬಾರಿಗೆ ಹಿಂದೂ ಸಮುದಾಯದಿಂದ ಈ ರೀತಿಯ ಯಾತ್ರೆ ನಡೆಸಲಾಗಿದೆ.
ಈ ಯಾತ್ರೆಯು ಹನುಮ ಜಯಂತಿಯ ದಿನದಂದು ಏಪ್ರಿಲ್ 23 ರಂದು ಮುಕ್ತಾಯಗೊಳ್ಳಲಿದೆ. ರಥಯಾತ್ರೆಯು ಕೇವಲ ದೊಡ್ಡ ದೇವಸ್ಥಾನಗಳಿಗಷ್ಟೇ ಅಲ್ಲ ಸಣ್ಣ ದೇವಸ್ಥಾನಗಳಿಗೂ ಭೇಟಿ ನೀಡಲಿದೆ ಎಂದವರು ಹೇಳಿದರು.