ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಸುಖಪ್ರಾಪ್ತಿಗಾಗಿ ಪ್ರಯತ್ನ ಮಾಡುತ್ತಿರುತ್ತಾನೆ. ಕೆಲವರು ಬಾಹ್ಯ ವಸ್ತುಗಳಿಂದ ಸಂತೋಷವನ್ನು ಪಡೆಯಲು ಪ್ರಯತ್ನಿಸುತ್ತಾರೆ ಕೆಲವರು ಸಾಂಪ್ರದಾಯಿಕ ಸಾಧನೆ ಮಾಡುತ್ತಾರೆ; ಆದರೆ ಕಲಿಯುಗದಲ್ಲಿ ನಮ್ಮಲ್ಲಿರುವ ಷಡ್ರಿಪುವನ್ನು ತೊಡೆದುಹಾಕದಿದ್ದರೆ ಸಾಧನೆಯಲ್ಲಿನ ನಿಜವಾದ ಆನಂದವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಸನಾತನ ಸಂಸ್ಥೆಯಲ್ಲಿ ಗುರುಕೃಪಾಯೋಗದ ಪ್ರಕಾರ ಅಷ್ಟಾಂಗ ಸಾಧನೆಯನ್ನು ಹೇಳಲಾಗಿದೆ. ಮೊದಲ ಹಂತವೆಂದರೆ ‘ಸ್ವಭಾವದೋಷಗಳ ನಿವಾರಣೆ ಮತ್ತು ಗುಣಗಳ ಸಂವರ್ಧನೆ ಮತ್ತು ‘ಅಹಂಕಾರದ ನಿವಾರಣೆಯು ಎರಡನೆಯ ಹಂತವಾಗಿದೆ. ಸ್ವಭಾವದೋಷಗಳು ಮತ್ತು ಅಹಂಕಾರಗಳನ್ನು ತೊಡೆದುಹಾಕುವ ಪ್ರಕ್ರಿಯೆಯಿಂದ ಸಾವಿರಾರು ಸಾಧಕರು ಜನ್ಮ ಮೃತ್ಯುವಿನ ಚಕ್ರಗಳಿಂದ ಮುಕ್ತರಾಗಿದ್ದಾರೆ. ಅನೇಕ ಸಾಧಕರು ಸಂತರು, ಸದ್ಗುರು ಮತ್ತು ಪರಾತ್ಪರ ಗುರುಗಳ ಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಇದು ಬ್ರಹ್ಮಾಂಡದ ಆಧ್ಯಾತ್ಮಿಕ ಇತಿಹಾಸದಲ್ಲಿ ಒಂದು ಅದ್ವಿತೀಯ ಘಟನೆಯಾಗಿದೆ.
೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಎಂದರೆ ಪರಾತ್ಪರ ಗುರು ಡಾ.ಆಠವಲೆಯವರು ಸಾಧಕರಿಗೆ ಜೀವನ್ಮುಕ್ತರಾಗಲು ನೀಡಿದ ಕಿವಿಮಂತ್ರ ಮತ್ತು ಮೋಕ್ಷಪ್ರಾಪ್ತಿಗಾಗಿ ನೀಡಿದ ಅಮೃತವಾಗಿದೆ !
೧ ಅ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯಿಂದ ವ್ಯಕ್ತಿಯಲ್ಲಿರುವ ರಜ-ತಮ ಕಡಿಮೆಯಾಗಿ ಅವನಲ್ಲಿರುವ ಸತ್ತ್ವಗುಣದಲ್ಲಿ ಹೆಚ್ಚಳವಾಗುವುದು ಮತ್ತು ಅವನಿಗೆ ಅಂತರ್ಮುಖತೆಯನ್ನು ಸಾಧಿಸಲು ಸಾಧ್ಯವಾಗಿ ಅಲ್ಪಾವಧಿಯಲ್ಲಿ ಜೀವನ್ಮುಕ್ತಿಯತ್ತ ಮಾರ್ಗಕ್ರಮಣ ವಾಗುವುದು : ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ನಡೆಸುವುದರಿಂದ ಜೀವವು ಶೀಘ್ರವಾಗಿ ಶಿವನೊಂದಿಗೆ ಏಕರೂಪವಾಗಲು ಅರ್ಹವಾಗುತ್ತದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದು ಮತ್ತು ಗುಣ ಸಂವರ್ಧನೆ ಮಾಡುವುದು ಮತ್ತು ತನ್ನ ಕ್ಷಮತೆಯನ್ನು ವೃದ್ಧಿಸುವುದು ಇದು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಅಡಿಪಾಯವಾಗಿದೆ. ವ್ಯಕ್ತಿಯು ಮಾಡುತ್ತಿರುವ ವಿಚಾರ ಮತ್ತು ಅದರ ಕೃತಿಯು ಆ ವ್ಯಕ್ತಿಯಲ್ಲಿರುವ ರಜತಮಗಳ ಪ್ರಮಾಣದ ಮೇಲೆ ಅವಲಂಬಿಸಿಕೊಂಡಿರುತ್ತದೆ. ವ್ಯಕ್ತಿಯು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಮಾಡುವುದರಿಂದ ಅವನಲ್ಲಿರುವ ರಜತಮ ಕಡಿಮೆಯಾಗಿ ಸತ್ತ್ವಗುಣದಲ್ಲಿ ಹೆಚ್ಚಳ ವಾಗುತ್ತದೆ ಮತ್ತು ಅವನು ಅಂತರ್ಮುಖನಾಗುತ್ತಾನೆ. ಆ ವ್ಯಕ್ತಿ ಕಡಿಮೆ ಕಾಲಾವಧಿಯಲ್ಲಿ ಜೀವನ್ಮುಕ್ತನಾಗುವತ್ತ ಮಾರ್ಗಕ್ರಮಣ ಮಾಡುತ್ತಾನೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಯತ್ನಿಸುವ ವ್ಯಕ್ತಿಗಳಿಗೆ ಅಧ್ಯಾತ್ಮಮಾರ್ಗದ ಮಾರ್ಗಕ್ರಮಣವು ಸಹಜವಾಗಿ ಸಾಧ್ಯವಾಗುತ್ತದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಎಂದರೆ ಗುರುದೇವರು (ಪರಾತ್ಪರ ಗುರು ಡಾ.ಆಠವಲೆ ಇವರು) ಸಾಧಕರಿಗೆ ಜೀವನ್ಮುಕ್ತರಾಗಲು ನೀಡಿದ ಕಿವಿಮಂತ್ರ ಮತ್ತು ಮೋಕ್ಷಪ್ರಾಪ್ತಿಗಾಗಿ ನೀಡಿದ ಅಮೃತವಾಗಿದೆ.
೧ ಆ. ಸ್ವಭಾವದೋಷಗಳಿಂದ ಮನುಷ್ಯನಿಗೆ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸ್ತರದ ಅಡಚಣೆಗಳನ್ನು ಎದುರಿಸಬೇಕಾಗುವುದು : ವ್ಯಕ್ತಿಯಲ್ಲಿರುವ ಸ್ವಭಾವ ದೋಷಗಳಿಂದ ಮನುಷ್ಯನಿಗೆ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಗಂಭೀರ ಪರಿಣಾಮಗಳಾಗುತ್ತವೆ. ಉದಾ. ಮರೆವು ಎಂಬ ಸ್ವಭಾವದೋಷದಿಂದ ಹಾಲು ಉಕ್ಕಿ ಹೋದುದರಿಂದ ಸ್ವಚ್ಛತೆಯನ್ನು ಮಾಡಲು ಸಮಯ ಕೊಡಬೇಕಾಗುತ್ತದೆ. ಹಣ ಮತ್ತು ಇಂಧನ ಸಹ ವ್ಯರ್ಥವಾಗುತ್ತದೆ. ವಾಹನದಲ್ಲಿ ಸರಿಯಾದ ಸಮಯದಲ್ಲಿ ಇಂಧನವನ್ನು ತುಂಬಿಸದಿದ್ದರೆ ಸಮಯ, ಪರಿಶ್ರಮ ಮತ್ತು ಹಣ ವ್ಯರ್ಥವಾಗುತ್ತದೆ. ಸಮಯದಲ್ಲಿ ವಿದ್ಯುತ್ ಬಿಲ್ ತುಂಬಿಸದಿದ್ದರೆ ಹೆಚ್ಚುವರಿ ದಂಡ ತುಂಬಿಸಬೇಕಾಗುತ್ತದೆ. ಕೋಪ ಬರುವುದು ಎಂಬ ಸ್ವಭಾವದೋಷದಿಂದ ಯಾವುದಾದರೊಂದು ಪ್ರಸಂಗದಲ್ಲಿ ಪತಿಯು ಪತ್ನಿಗೆ ಕಪಾಳಕ್ಕೆ ಹೊಡೆದುದರಿಂದ ಜೀವಕ್ಕೆ ಹಾನಿಯಾದಂತಹ ಗಂಭೀರ ಘಟನೆಗಳೂ ಘಟಿಸುತ್ತವೆ ವ್ಯಕ್ತಿಯ ಇಂತಹ ಚಿಕ್ಕಪುಟ್ಟ ಸ್ವಭಾವದೋಷಗಳಿಂದ ಬಹಳ ಸಮಯದ ತನಕ ವೈಯಕ್ತಿಕ, ಕೌಟುಂಬಿಕ ಮತ್ತು ವ್ಯಾವಹಾರಿಕ ಜೀವನದಲ್ಲಿಯೂ ಗಂಭೀರ ಪರಿಣಾಮವಾಗಿ ಆ ವ್ಯಕ್ತಿಯು ದುಃಖ, ನಿರಾಶೆ ಇಂತಹ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಆ ವ್ಯಕ್ತಿಯ ಸಾಧನೆ ವ್ಯರ್ಥವಾಗುತ್ತದೆ. ಅವನಿಂದ ಪಾಪಕರ್ಮಗಳಾಗುತ್ತವೆ ಮತ್ತು ಸನಾತನ ಧರ್ಮದಲ್ಲಿರುವ ಕರ್ಮಫಲಸಿದ್ಧಾಂತಕ್ಕನುಸಾರ ಅವನು ಪಾಪದ ಫಲವನ್ನು ಭೋಗಿಸಬೇಕಾಗುತ್ತದೆ. ವ್ಯಕ್ತಿಯಲ್ಲಿರುವ ಸ್ವಭಾವದೋಷಗಳಿಂದ ಅವನು ಪುನಃಪುನಃ ವಿವಿಧ ಯೋನಿಗಳಲ್ಲಿ ಜನ್ಮ ಪಡೆದು ನರಕಯಾತನೆಯನ್ನು ಭೋಗಿಸಬೇಕಾಗುತ್ತದೆ.
೧ ಇ. ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಸ್ವಭಾವ ದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ತಳಮಳದಿಂದ ಮತ್ತು ಅಪಾರ ಶ್ರದ್ಧೆಯಿಂದ ನಡೆಸಿ ಶೀಘ್ರ ಆಧ್ಯಾತ್ಮಿಕ ಉನ್ನತಿಯ ಆನಂದವನ್ನು ಪಡೆದುಕೊಳ್ಳಬಹುದು : ಪ್ರತಿಯೊಬ್ಬ ವ್ಯಕ್ತಿಯು ತನ್ನ ವಿಚಾರ ಮತ್ತು ಕೃತಿಗನುಸಾರ ಫಲವನ್ನು ಭೋಗಿಸಬೇಕಾಗುತ್ತದೆ. ಅಯೋಗ್ಯ ಕರ್ಮದಿಂದ ಕೆಟ್ಟ ಫಲ ಮತ್ತು ಯೋಗ್ಯ ಕರ್ಮದಿಂದ ಒಳ್ಳೆಯ ಫಲ ಪಾಲಿಗೆ ಬರುತ್ತದೆ. ‘ನಮ್ಮಿಂದ ಅಯೋಗ್ಯ ಕರ್ಮ ಆಗಬಾರದು ಎಂದು ನಮ್ಮ ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳ ಮೇಲೆ ಸತತ ನಿಯಂತ್ರಣವನ್ನಿಟ್ಟುಕೊಳ್ಳಬೇಕಾಗುತ್ತದೆ. ನಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂಗಳ ತ್ಯಾಗವಾಗಬೇಕಾಗುತ್ತದೆ. ಅದಕ್ಕಾಗಿ ಗುರುಕೃಪಾಯೋಗದಲ್ಲಿ ಹೇಳಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ತಳಮಳ ಮತ್ತು ಅಪಾರ ಶ್ರದ್ಧೆಯಿಂದ ನಡೆಸಬೇಕು. ಇದರಿಂದ ನಾವು ಶೀಘ್ರ ಆಧ್ಯಾತ್ಮಿಕ ಉನ್ನತಿಯ ಆನಂದವನ್ನು ಪಡೆಯಬಹುದು
೧ಈ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ ಯನ್ನು ಶ್ರದ್ಧೆಯಿಂದ ಮಾಡಿ ಅದರ ಮೇಲೆ ಗುಣಗಳ ಸಂಸ್ಕಾರ ಮೂಡಿಸುವುದು ಅವಶ್ಯಕ ! : ಸಾಧಕರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ನಡೆಸುವುದರಿಂದ ಸಾಧಕರ ಶ್ರದ್ಧೆ ದೃಢವಾಗಲು ಸಹಾಯವಾಗುತ್ತದೆ ಮತ್ತು ಅವರಿಗೆ ಈಶ್ವರಪ್ರಾಪ್ತಿ ಮಾಡಿಕೊಳ್ಳುವ ಧ್ಯೇಯದಲ್ಲಿನ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಾಧಕರು ಇಂತಹ ಪ್ರಯತ್ನಗಳನ್ನು ನಿರಂತರವಾಗಿ ಮಾಡುವುದರಿಂದ ಅವರಲ್ಲಿ ಸಾಧಕತ್ವ ನಿರ್ಮಾಣವಾಗಿ ಅವರ ಮೇಲೆ ಗುರುಕೃಪೆ ಆಗುತ್ತದೆ. ಸಾಧಕರ ಸೇವೆಯಲ್ಲಿನ ಒತ್ತಡ ದೂರವಾದುದರಿಂದ ಅವರಿಂದ ಸೇವೆಯಲ್ಲಿ ಏಕಾಗ್ರತೆ ಸಾಧಿಸಲ್ಪಟ್ಟು ಪರಿಪೂರ್ಣ ಸೇವೆಯಾಗುತ್ತದೆ. ಅವರ ನಿರ್ಣಯಕ್ಷಮತೆ ಹೆಚ್ಚಾಗುತ್ತದೆ. ವ್ಯಕ್ತಿಯಲ್ಲಿರುವ ಕೋಪಿಷ್ಠತನವು ದೂರವಾಗಿ ಅವನಲ್ಲಿ ಪ್ರೇಮಭಾವ ಹೆಚ್ಚಾಗುತ್ತದೆ ಮತ್ತು ಅವನಲ್ಲಿರುವ ಅನೇಕ ಗುಣಗಳಲ್ಲಿ ವೃದ್ಧಿಯಾಗುತ್ತದೆ. ಅವನ ತಾಮಸಿಕ ವ್ಯಕ್ತಿತ್ವದಿಂದ ಮೊದಲು ರಾಜಸಿಕ ನಂತರ ಸಾತ್ತ್ವಿಕ ವ್ಯಕ್ತಿತ್ವದೆಡೆಗೆ ಮಾರ್ಗಕ್ರಮಣವಾಗುತ್ತದೆ. ಇದಕ್ಕಾಗಿ ಸಾಧಕರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಶ್ರದ್ಧೆಯಿಂದ ನಡೆಸಿ ಚಿತ್ತದ ಮೇಲೆ ಗುಣಗಳ ಸಂಸ್ಕಾರ ಮಾಡುವುದು ಅವಶ್ಯಕವಾಗಿದೆ.
– ಪೂ. ರಮಾನಂದ ಗೌಡ, ಧರ್ಮಪ್ರಸಾರಕರು, ಸನಾತನ ಸಂಸ್ಥೆ (೨೭.೨.೨೦೨೪)