ಮಾರ್ಚ್ ೨೪ : ಹೋಳಿ

೧. ತಿಥಿ : ‘ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ ೫-೬ ದಿನಗಳಲ್ಲಿ ಕೆಲವೆಡೆ ೨ ದಿನ ಮತ್ತು ಇನ್ನು ಕೆಲವೆಡೆ ಐದು ದಿನ ಈ ಉತ್ಸವವನ್ನು ಆಚರಿಸುತ್ತಾರೆ.

೨. ಉತ್ಸವವನ್ನು ಆಚರಿಸುವ ಪದ್ಧತಿ

೨ ಅ. ಸ್ಥಾನ ಮತ್ತು ಸಮಯ : ದೇವಸ್ಥಾನದ ಮುಂದೆ ಅಥವಾ ಅನುಕೂಲತೆಯಿರುವಲ್ಲಿ ಪೂರ್ಣಿಮೆಯ ಸಾಯಂಕಾಲ ಹೋಳಿಯನ್ನು ಹೊತ್ತಿಸುವುದಿರುತ್ತದೆ. ಹೆಚ್ಚಾಗಿ ಗ್ರಾಮದೇವತೆಯ ಎದುರಿಗೆ ಹೋಳಿಯನ್ನು ರಚಿಸಲಾಗುತ್ತದೆ.

೨ ಆ. ಕೃತಿ : ಮಧ್ಯದಲ್ಲಿ ಔಡಲಗಿಡ, ತೆಂಗಿನಗಿಡ, ಅಡಿಕೆಗಿಡ ಅಥವಾ ಕಬ್ಬನ್ನು ನಿಲ್ಲಿಸುತ್ತಾರೆ. ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ರಚಿಸುತ್ತಾರೆ. ಮೊದಲು ಯಜಮಾನನು (ಹೋಳಿ ಮಾಡುವವನು) ಶುಚಿರ್ಭೂತನಾಗಿ, ದೇಶಕಾಲದ ಉಚ್ಚಾರವನ್ನು (ಕಥನ) ಮಾಡಿ ‘ಸಕುಟುಂಬಸ್ಯ ಮಮ ಢುಂಢಾರಾಕ್ಷಸೀಪ್ರೀತ್ಯರ್ಥಂ ತತ್ಪೀಡಾಪರಿಹಾರಾರ್ಥಂ ಹೋಲಿಕಾಪೂಜನಮಹಂ ಕರಿಷ್ಯೇ | ಎಂದು ಸಂಕಲ್ಪ ಮಾಡಬೇಕು. ನಂತರ ಪೂಜೆಯನ್ನು ಮಾಡಿ ನೈವೇದ್ಯ ತೋರಿಸಬೇಕು. ನಂತರ ‘ಹೋಲಿಕಾಯೈ ನಮಃ | ಎಂದು ಹೇಳಿ ಹೋಳಿಯನ್ನು ಹೊತ್ತಿಸಬೇಕು. ಹೋಳಿಯು ಹೊತ್ತಿದ ನಂತರ ಹೋಳಿಗೆ ಪ್ರದಕ್ಷಿಣೆ ಹಾಕಬೇಕು ಮತ್ತು ಬೋರಲು ಕೈಯಿಂದ ಬೊಬ್ಬೆ ಹೊಡೆಯಬೇಕು. ಹೋಳಿಯು ಪೂರ್ಣ ಉರಿದ ನಂತರ ಹಾಲು ಮತ್ತು ತುಪ್ಪವನ್ನು ಚಿಮುಕಿಸಿ ಅದನ್ನು ಶಾಂತಗೊಳಿಸಬೇಕು. ಅನಂತರ ನೆರೆದ ಜನರಿಗೆ ತೆಂಗಿನಕಾಯಿ, ಹೆಬ್ಬಲಸು ಮುಂತಾದ ಹಣ್ಣುಗಳನ್ನು ಹಂಚಬೇಕು. ಮರುದಿನ ಬೆಳಗ್ಗೆ ಹೋಳಿಯ ಬೂದಿಗೆ ವಂದಿಸಬೇಕು. ಆ ಬೂದಿಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಬೇಕು, ಅಂದರೆ ಆಧಿ-ವ್ಯಾಧಿಗಳ ತೊಂದರೆಯಾಗುವುದಿಲ್ಲ. (ಆಧಿ ಎಂದರೆ ಮಾನಸಿಕ ವ್ಯಥೆ ಅಥವಾ ಚಿಂತೆ ಮತ್ತು ವ್ಯಾಧಿ ಎಂದರೆ ರೋಗ.) ಬೆಳಗ್ಗೆ ಅಶ್ಲೀಲ ಮಾತುಗಳನ್ನಾಡಿ ಹೋಳಿಯ ರಕ್ಷೆಯನ್ನು ವಿಸರ್ಜಿಸಬೇಕು. ಅನಂತರ ಹೋಳಿಯ ಪ್ರಾರ್ಥನೆ ಮಾಡಬೇಕು.

ಆ ೧. ಅವಾಚ್ಯ ಉಚ್ಚಾರಣೆಯನ್ನು ಮಾಡುವುದರ ಅರ್ಥ : ‘ಮನಸ್ಸಿ ನಲ್ಲಿನ ದುಷ್ಟ ಪ್ರವೃತ್ತಿಯು ಶಾಂತವಾಗಬೇಕೆಂದು ಈ ವಿಧಿಯಿದೆ.

ಧೂಳಿವಂದನ (ಮಾರ್ಚ್ ೨೫)

೧. ತಿಥಿ : ‘ಫಾಲ್ಗುಣ ಕೃಷ್ಣ ಪ್ರತಿಪದೆ

೨. ಪೂಜೆ : ಈ ದಿನ ಹೋಳಿಯ ಬೂದಿ ಅಥವಾ ಧೂಳಿಯ ಪೂಜೆಯನ್ನು ಮಾಡುವುದಿರುತ್ತದೆ. ಪೂಜೆಯಾದ ನಂತರ ಈ ಕೆಳಗಿನ ಮಂತ್ರದಿಂದ ಅವಳಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

ವಂದಿತಾಸಿ ಸುರೇಂದ್ರೇಣ ಬ್ರಹ್ಮಣಾ ಶಂಙ್ಕರೇಣ ಚ |

ಅತಸ್ತ್ವಂ ಪಾಹಿ ನೋ ದೇವಿ ಭೂತೇ ಭೂತಿಪ್ರದಾ ಭವ ||

ಅರ್ಥ : ಹೇ ಲಕ್ಷ್ಮೀ, ನೀನು ಇಂದ್ರ, ಬ್ರಹ್ಮ ಮತ್ತು ಮಹೇಶ್ವರರಿಂದ ವಂದಿತಳಾಗಿರುವೆ; ಆದುದರಿಂದ ಹೇ ಐಶ್ವರ್ಯವತಿದೇವಿಯೇ, ನೀನು ನಮಗೆ ಐಶ್ವರ್ಯ ಪ್ರದಾನಿಸುವವಳಾಗಿ ನಮ್ಮನ್ನು ರಕ್ಷಿಸು.

ರಂಗಪಂಚಮಿ (ಮಾರ್ಚ್ ೩೦)

೧. ತಿಥಿ : ಫಾಲ್ಗುಣ ಕೃಷ್ಣ ಪಂಚಮಿ (ಇತ್ತೀಚೆಗೆ ಬಹಳ ಕಡೆಗಳಲ್ಲಿ ಹೋಳಿಯ ಮರುದಿನ ರಂಗಪಂಚಮಿಯನ್ನು ಆಚರಿಸಲಾಗುತ್ತದೆ.)

೨. ಉತ್ಸವ : ಈ ದಿನದಂದು ಇತರರ ಮೇಲೆ ಗುಲಾಲು, ಬಣ್ಣದ ನೀರು ಮುಂತಾದವುಗಳನ್ನು ಎರಚುತ್ತಾರೆ. (ಆಧಾರ : ಸನಾತನ ನಿರ್ಮಿತ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ)