ಪ.ಪೂ. ಗುರುದೇವ ಡಾ. ಕಾಟೇಸ್ವಾಮೀಜಿಯವರ ವಿಚಾರಧಾರೆ !
೧. ಸಂದೇಹ : ಸಂನ್ಯಾಸವೆಂದರೆ ಸಂಸಾರದಿಂದ ಪಲಾಯನ ಮಾಡಿ ಹೋಗುವುದೇ ?
ಉತ್ತರ : ಅಲ್ಲ, ಇದು ಪಲಾಯನದ ದಾರಿಯಲ್ಲ, ಇದು ಅದಮ್ಯ ಸಾಹಸವಾಗಿದೆ; ಏಕೆಂದರೆ ಒಬ್ಬಂಟಿ, ಏಕಾಂಗಿಯಾಗುವುದು ಹಾಗೂ ಸಂಪೂರ್ಣ ಅಪರಿಗ್ರಹಿ ಆಗಿರುವುದು, ಇದಂತೂ ಪಲಾಯನಗೈಯ್ಯುವವನಿಗೆ ಸಾಧ್ಯವಿಲ್ಲ. ಇದನ್ನು ಕೇವಲ ಉತ್ಕಟ ಮುಮುಕ್ಷುನಾಗಿರುವವನೇ ಮಾಡಲು ಸಾಧ್ಯ. ಸಂಸಾರವೆಂದರೆ, ಜನನ-ಮರಣದ ಅಖಂಡ ಸುತ್ತುವ ಚಕ್ರ. ಈ ಜನ್ಮ-ಮರಣದಿಂದ ಮುಕ್ತನಾಗುವ ಉತ್ಕಟತೆ ಹೆಚ್ಚಾದಾಗ ಸಾಧಕನು ಆತ್ಮಸಾಕ್ಷಾತ್ಕಾರದತ್ತ ಪ್ರಯಾಣಿಸತೊಡಗುತ್ತಾನೆ. ಅದಕ್ಕಾಗಿ ಅಂದರೆ ಪೂರ್ಣ ಸಮಯ ಯೋಗ ಸಾಧನೆಯಲ್ಲಿ, ಆತ್ಮಸಾಕ್ಷಾತ್ಕಾರದತ್ತ ಸಾಗತೊಡಗುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಸಾಧನೆಗೆ ಆವಶ್ಯಕವಿರುವ ವಾತಾವರಣ ಹಾಗೂ ಪರಿಸ್ಥಿತಿ ನಿರ್ಮಾಣ ಮಾಡಲು ಸಂನ್ಯಾಸ ಅನುಕೂಲ ಹಾಗೂ ಆವಶ್ಯಕವಿದ್ದರೆ, ಅದನ್ನು ಖಂಡಿತ ಸ್ವೀಕರಿಸಬಹುದು, ಅಲ್ಲ, ಸ್ವೀಕರಿಸಲೇ ಬೇಕು.
೨. ಸಂದೇಹ : ಸಂನ್ಯಾಸ ಸ್ವೀಕರಿಸುವ ಮೊದಲು ಏನಾದರೂ ಪೂರ್ವಸಿದ್ಧತೆ ಮಾಡಬೇಕಾಗುತ್ತದೆಯೆ ?
ಉತ್ತರ : ಹೌದು, ಖಂಡಿತ ಮಾಡಬೇಕಾಗುತ್ತದೆ. ಸಾಧಕನು ಆರಂಭದಲ್ಲಿ ವರ್ಣಾಶ್ರಮದ ಶಾಸ್ತ್ರೀಯ ಕರ್ಮ ಮಾಡುತ್ತಾನೆ, ಅಂದರೆ ನಿತ್ಯ ನೈಮಿತ್ತಿಕ ಕರ್ಮ ಮಾಡುತ್ತಾನೆ. ಕಾಮ್ಯ ಹಾಗೂ ನಿಷಿದ್ಧ ಕರ್ಮವನ್ನು ತ್ಯಜಿಸುತ್ತಾನೆ. ನಿತ್ಯ ನೈಮಿತ್ತಿಕ ಕರ್ಮವನ್ನೂ ನಿಷ್ಕಾಮದಿಂದ ಮಾಡುತ್ತಾನೆ. ಯೋಗ ಸಾಧನೆ ಮಾಡುತ್ತಾನೆ. ಧ್ಯಾನ ಮಾಡುತ್ತಾನೆ. ಕ್ರಮೇಣ ವಾಸನಾ ವಿಲೀನವಾಗುತ್ತಾ ಹೋಗುತ್ತದೆ ಹಾಗೂ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಮನೆ-ಮಠ, ಪತ್ನಿ, ಧನ-ಸಂಪತ್ತು, ಹುದ್ದೆ, ಪ್ರತಿಷ್ಠೆ, ಅಧಿಕಾರ ಇವುಗಳ ಆಸಕ್ತಿ ಹೊರಟುಹೋಗುತ್ತದೆ. ಇಚ್ಛಾನುಸಾರ ನಡೆಯುವ ಇಂದ್ರಿಯಗಳನ್ನು ಪ್ರತ್ಯಾಹಾರದಿಂದ ನಿಯಂತ್ರಿಸುತ್ತಾನೆ. ಕರ್ಮಫಲವನ್ನು ಭಗವಂತನಿಗೆ ಅರ್ಪಿಸುತ್ತಾನೆ. ಸದ್ಗುರುಗಳ ಆಶ್ರಯದಲ್ಲಿ ಆತ್ಮಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸುತ್ತಾನೆ.
೩. ಸಂದೇಹ : ಹಾಗಾದರೆ ಇಲ್ಲಿ ಸಂನ್ಯಾಸವೆಲ್ಲಿದೇ ?
ಉತ್ತರ : ಮುಮುಕ್ಷುವಿಗೆ ಈಗ ಮುಂದಿನ ಪ್ರಯಾಣ ಮಾಡಲಿಕ್ಕಿರುತ್ತದೆ. ಮುಂದಿನ ಅಧ್ಯಯನಕ್ಕಾಗಿ ಅವನಿಗೆ ಏಕಾಂತ ಬೇಕಾಗುತ್ತದೆ. ಇವೆಲ್ಲ ಪೂರ್ವಸಿದ್ಧತೆ ಆದನಂತರವೇ ಯೋಗಸಾಧನೆಗೆ ಆವಶ್ಯಕವಾದ ವಾತಾವರಣ ನಿರ್ಮಾಣ ಮಾಡಲು ಸಂನ್ಯಾಸ ಅನುಕೂಲವಾಗಿರುತ್ತದೆ. ಇಷ್ಟು ಮಾತ್ರವಲ್ಲ, ಅದು ಆವಶ್ಯಕವಾಗಿರುತ್ತದೆ.
೪. ಸಂದೇಹ : ಮುಂದೇನಾಗುತ್ತದೆ ?
ಉತ್ತರ : ಈಗ ಮುಮುಕ್ಷು ವನದಲ್ಲಿ ಏಕಾಂತದಲ್ಲಿ, ಪವಿತ್ರ ಸ್ಥಳದಲ್ಲಿ ಒಬ್ಬನೇ ಇರುತ್ತಾನೆ. ಒಬ್ಬನೇ ಅಭ್ಯಾಸ ಮಾಡುತ್ತಾನೆ; ಏಕೆಂದರೆ ಬೇರೆ ಯಾರಾದರೂ ಬಂದರೆ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ !
ಭಯವಾಗುತ್ತದೆ ! ಅವನು ವೃತ್ತಿಶೂನ್ಯವಾಗಲು ನಿರಂತರ ಅಭ್ಯಾಸ ಮಾಡುತ್ತಾನೆ. ಮೊದಲ ವೃತ್ತಿ ನಶಿಸುವಾಗ ಎರಡನೆಯ ವೃತ್ತಿ ನಶಿಸುವ ಪ್ರಕ್ರಿಯೆ ಆರಂಭವಾಗಬೇಕು. ಈ ನಡುವಿನ ಸಂಧಿಕಾಲದಲ್ಲಿ ಅವನು ಪರಮವಿಶ್ರಾಂತಿ ಹಾಗೂ ಪರಮ ಶಾಂತಿಯನ್ನು ಅನುಭವಿಸುತ್ತಾನೆ. ಶರೀರ ನಿರ್ವಹಣೆಗಾಗಿ ಮಾತ್ರ ಕೈ-ಕಾಲುಗಳನ್ನು ಅಲ್ಲಾಡಿಸುತ್ತಾನೆ. ವೈರಾಗ್ಯವೇ ಅವನ ಜೊತೆಗಾರ ನಾಗಿರುತ್ತದೆ. ಈಗ ಅವನು ಜಗತ್ತಿನ ಚಿಂತೆ ಮಾಡುವುದಿಲ್ಲ. ಸಂಪೂರ್ಣ ಜಗತ್ತು ಅವನ ವಿರುದ್ಧವಿದ್ದರೂ ಒಬ್ಬನೇ ಜೀವಿಸಲು ಅವನ ಸಿದ್ಧತೆ ಇರುತ್ತದೆ. ಹೀಗೆ ಸತತ ಆತ್ಮಚಿಂತನೆ ಮಾಡುವ ಸಂನ್ಯಾಸಿಯು ತಾನು ಪವಿತ್ರವಾಗುತ್ತಾನೆ; ಆದರೊಂದಿಗೆ ಅವನು ಸಮಾಜವನ್ನೂ ಪವಿತ್ರಗೊಳಿಸುತ್ತಾನೆ. ಆದ್ದರಿಂದ ಅವನ ಸುತ್ತಮುತ್ತಲಿನ ಪರಿಸರ ಪಾವನವಾಗುತ್ತದೆ. ಇಂತಹ ಸಂನ್ಯಾಸಿ, ಯೋಗಿ ಹಾಗೂ ಜ್ಞಾನಿಯ ಸೇವೆ ಪರಮ ಭಾಗ್ಯದಿಂದ ಲಭಿಸುತ್ತದೆ.
೫. ಕರ್ಮಯೋಗಿಗೆ ಸಾಧ್ಯವಾಗದ ಅದ್ಭುತ ಕರ್ಮಗಳನ್ನು ಸಂನ್ಯಾಸಿಗಳು ಮಾಡುತ್ತಾರೆ. ಚಿಂತೆಯಿಂದ ದುಃಖದಿಂದ, ಒತ್ತಡದಿಂದ, ಸಂಸಾರದ ಜಂಜಾಟದಿಂದ ಆತ್ಮಹತ್ಯೆ ಮಾಡುವುದೊಂದೇ ಉಳಿದಿದೆ, ಎಂಬಂತಹ ಸ್ಥಿತಿಯಲ್ಲಿರುವ ಎಷ್ಟೋ ಜನರಿಗೆ ಈ ಸಂನ್ಯಾಸಿಗಳು ಜೀವನ ನೀಡಿದ್ದಾರೆ. ಅವರ ಋಣವನ್ನು ಹೇಗೆ ತೀರಿಸುವಿರಿ ?
– ಪ.ಪೂ. ಗುರುದೇವ ಕಾಟೇಸ್ವಾಮೀಜಿ
(ಆಧಾರ : ಮಾಸಿಕ ‘ಘನಗರ್ಜಿತ’ ಅಕ್ಟೋಬರ ೨೦೨೩)
ಸಾಹಸಿ ಸಂನ್ಯಾಸಿಗಳ ಮೇಲೆ ಸಮಾಜ ಅವಲಂಬಿಸಿರುತ್ತದೆ !‘ಇಂತಹ ಅದಮ್ಯ ಸಾಹಸಿಯಾಗಿರುವ ಸಂನ್ಯಾಸಿಗಳು (ಒಬ್ಬರೆ, ಏಕಾಕಿ, ಅಪರಿಗ್ರಹಿ) ಸಮಾಜವನ್ನು ಅವಲಂಬಿಸಿಲ್ಲ, ಆದರೆ ಸಮಾಜ ಅವರನ್ನು ಅವಲಂಬಿಸಿರುತ್ತದೆ. ಸನ್ಯಾಸಿ ರಾಮತೀರ್ಥರು ಹೇಳುತ್ತಾರೆ, ‘ನನ್ನಿಂದಲೆ ಈ ಧರಣಿ(ಪೃಥ್ವಿ) ಧಾರಣೆ ಮಾಡಲು ಸಾಧ್ಯವಾಗುತ್ತಿದೆ. ನನಗಾಗಿಯೇ ಸೂರ್ಯ ಮತ್ತು ಚಂದ್ರರು ಉದಯಿಸುತ್ತಾರೆ. ನನಗಾಗಿಯೇ ಗಾಳಿ, ನದಿಗಳು ಹರಿಯುತ್ತವೆ ಹಾಗೂ ಮಳೆ ಬೀಳುತ್ತದೆ.’ – ಪ.ಪೂ. ಗುರುದೇವ ಕಾಟೇಸ್ವಾಮೀಜಿ (ಆಧಾರ : ಮಾಸಿಕ ‘ಘನಗರ್ಜಿತ’ ಅಕ್ಟೋಬರ ೨೦೨೩) |