ಭೋಜನದ ನಂತರ ಎಷ್ಟು ಹೆಜ್ಜೆ ನಡೆಯಬೇಕು ?

‘ಭೋಜನದ ನಂತರ ನೇರವಾಗಿ ಮಲಗಲು ಹೋಗಬೇಡಿ; ಸ್ವಲ್ಪ ನಡೆಯಬೇಕು’, ಎಂಬ ಸಲಹೆಯನ್ನು ಅನೇಕ ಆರೋಗ್ಯತಜ್ಞರು ನೀಡುತ್ತಾರೆ. ‘ಊಟದ ನಂತರ ನೂರು ಹೆಜ್ಜೆ ನಡೆಯಬೇಕು’, ಎಂಬ ಸಲಹೆಯನ್ನು ಕೇಳಿರಬಹುದು; ಆದರೆ ‘ಅವಶ್ಯಕವಿದ್ದುದಕ್ಕಿಂತ ಬಹಳ ಹೆಚ್ಚಾಗಿ ಮಾಡಿದ ಸಂಗತಿ ಹದಗೆಡುತ್ತದೆ’, ಎಂಬ ನಿಯಮ ಈ ಸಲಹೆಗೂ ಅನ್ವಯಿಸುತ್ತದೆ. ‘ಅರ್ಲಿಫುಡ್ಸ್‌’ನ ಸಂಸ್ಥಾಪಕಿ ಶಾಲಿನಿ ಸಂತೋಷ ಕುಮಾರ ಇವರು ‘ಇನ್ಸ್ಟಾಗ್ರಾಮ್’ ಪೋಸ್ಟ್‌ನಲ್ಲಿ, ನನ್ನ ಕಚೇರಿಯಲ್ಲಿ ಅಥವಾ ಮನೆಯಲ್ಲಿರುವಾಗಲೂ ಮಧ್ಯಾಹ್ನ ಅಥವಾ ರಾತ್ರಿ ಊಟದ ನಂತರದ ೩೦ ನಿಮಿಷಗಳ ನಡಿಗೆ ನನಗೆ ಇನ್ನೂ ನೆನಪಿದೆ. ಇದರಿಂದ ಆಯಾಸವಾಗುವುದಷ್ಟೇ ಅಲ್ಲ, ಆದರೆ ಆಹಾರವೂ ಚೆನ್ನಾಗಿ ಪಚನವಾಗುತ್ತಿರಲಿಲ್ಲ ಎಂಬುದನ್ನು ನಾನು ಗಮನಿಸಿದೆ; ಏಕೆಂದರೆ ಎಲ್ಲ ರಕ್ತಸಂಚಾರ ಮತ್ತು ಶಕ್ತಿ ಹೊಟ್ಟೆಯ ಮೇಲೆ ಕೇಂದ್ರಿಕರಿಸುವ ಬದಲು ಕಾಲು ಮತ್ತು ಕೈಗಳಿಗೆ ಪ್ರವಹಿಸಲ್ಪಡುತ್ತದೆ, ಎಂದು ಬರೆದಿದ್ದಾರೆ.

ಭೋಜನದ ನಂತರ ಜೀರ್ಣಕ್ರಿಯೆಗೆ ೧೦೦ ಹೆಜ್ಜೆಗಳ ನಡಿಗೆ ಸಾಕು !

ಶಾಲಿನಿ ಇವರು ಈ ಅನುಭವದ ಬಗ್ಗೆ ಆಯುರ್ವೇದದ ದೃಷ್ಟಿಯಿಂದ ಸವಿಸ್ತಾರ ಮಾಹಿತಿಯನ್ನು ಪಡೆದಿದ್ದಾರೆ. ‘ಸರಳ ವಜ್ರಾಸನ ಅಥವಾ ೧೦೦ ಹೆಜ್ಜೆಗಳಷ್ಟು ನಡೆಯುವುದು ಜೀರ್ಣಕ್ರಿಯೆಗೆ ಸಾಕಾಗುತ್ತದೆ. ಕೆಲವರು ಕೆಲವೊಮ್ಮೆ ಗಂಟೆಗಟ್ಟಲೇ ನಡೆಯುತ್ತಾರೆ; ಆದರೆ ಇದು ಕೇವಲ ಜಾಗರೂಕತೆಯ ಅಭಾವವಾಗಿದೆ. ತೀರಾ ಚಿಕ್ಕ ಮಕ್ಕಳಿಗೂ ಊಟದ ನಂತರ ಆಟವಾಡಲು ಅಥವಾ ಜಾಸ್ತಿ ಜಿಗಿಯಲು ಬಿಡದೇ ಅವರಿಗೆ ಕುಳಿತುಕೊಂಡು ಆಡುವ ಆಟವನ್ನು ಆಡಲು ಬಿಡಿ, ಬರೆಯಲು ಅಥವಾ ಓದಲು ಕೊಡಿ, ಸರಳ ಮತ್ತು ಸುಲಭವಾದ ಚಟುವಟಿಕೆಗಳು ಸಾಕಾಗುತ್ತವೆ’, ಎಂದಿದ್ದಾರೆ.

ಊಟದ ನಂತರ ೧೦೦ ಹೆಜ್ಜೆ ಏಕೆ ನಡೆಯಬೇಕು ?

ಶಿಲ್ಲಿಮ (ಪುಣೆ ಜಿಲ್ಲೆ)ನ ‘ಧಾರಣಾ’ ಸಂಸ್ಥೆಯ ಆರೋಗ್ಯ ಸಂಚಾಲಕರಾದ ಡಾ. ಅರುಣ ಪಿಲ್ಲೈ ಇವರು, ‘ಚರಕ ಸಂಹಿತೆ’ ಸೂತ್ರಕ್ಕನುಸಾರ ಊಟದ ನಂತರ ‘ಶತಪಾವಲಿ’, ಎಂದರೆ ೧೦೦ ಹೆಜ್ಜೆ ನಡೆಯಲು ಸಲಹೆ ನೀಡಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ‘ಥರ್ಮಲ್‌ ವಾಕ್’ ಎಂದು ಈ ಪದ್ಧತಿ ಪ್ರಚಲಿತವಾಗಿದೆ. ಆಯುರ್ವೇದದಲ್ಲಿ ೧೦೦ ಈ ಸಂಖ್ಯೆ ಮಹತ್ವದ್ದಾಗಿದೆ; ಏಕೆಂದರೆ ಮನುಷ್ಯನ ವಯಸ್ಸು ಶತಾಯು (೧೦೦ ವರ್ಷ) ಎಂದು ಅಳೆಯಲಾಗುತ್ತಿತ್ತು. ಆಹಾರದ ಚಯಾಪಚಯ ಕ್ರಿಯೆಗೆ ಜಠರಾಗ್ನಿಯನ್ನು ಸಕ್ರಿಯಗೊಳಿಸಲು ೧೦೦ ಹೆಜ್ಜೆ ನಡೆಯಬೇಕು. ಊಟದ ನಂತರ ನಡೆಯುವುದರಿಂದ ಪಚನ ಮತ್ತು ಮನಸ್ಸಿನ ಸ್ಥಿತಿ ಸರಿಯಾಗಲು ಸಹಾಯವಾಗುತ್ತದೆ. ಊತ, ಹೊಟ್ಟೆ
ಊದಿಕೊಳ್ಳುವುದು ಕಡಿಮೆಯಾಗುತ್ತದೆ ಮತ್ತು ‘ಗ್ಲುಕೋಸ್‌’, (ಸಕ್ಕರೆಯ) ಪ್ರಮಾಣ ಕಡಿಮೆಯಾಗಿ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಶರೀರಕ್ಕೆ ಸಹಾಯ ಆಗುತ್ತದೆ. (ಆಧಾರ : ದೈನಿಕ ‘ಲೋಕಸತ್ತಾ’ದ ಜಾಲತಾಣ)