ಕಾಲ ಅನಂತವಾಗಿದೆ. ಅದರ (ಕಾಲದ) ಮುಂದೆ ಯಾರದ್ದೂ ಏನೂ ನಡೆಯುವುದಿಲ್ಲ. ಅವನು ಎಲ್ಲಕ್ಕಿಂತ ಬಲಶಾಲಿಯಾಗಿದ್ದು ಅವನು ಸಮುದ್ರವನ್ನೂ ನಾಶ ಮಾಡಬಹುದು. ಆಕಾಶದಲ್ಲಿನ ಎಲ್ಲ ನಕ್ಷತ್ರಗಳನ್ನು ಅಸ್ತಗೊಳಿಸುವ ಕ್ಷಮತೆ ಅವನಲ್ಲಿದೆ. ಅವನು ಸಿದ್ಧರನ್ನು, ದಾನವರನ್ನು ನಾಶ ಗೊಳಿಸುತ್ತಾನೆ. ಶಾಶ್ವತ ಸ್ಥಾನವನ್ನು ಪ್ರಾಪ್ತಮಾಡಿಕೊಂಡ ಧ್ರುವನನ್ನು ಅವನು ನಾಶಗೊಳಿಸುತ್ತಾನೆ. ಎಲ್ಲರ ಪ್ರಾಣಹರಣ ಮಾಡುವ ಯಮನ ಪ್ರಾಣಹರಣದ ಕ್ಷಮತೆ ಅವನಲ್ಲಿದೆ. ಎಲ್ಲರಿಗಿಂತ ಶ್ರೇಷ್ಠರೆಂದು ಪರಿಗಣಿಸಲ್ಪಡುವ ಬ್ರಹ್ಮದೇವ, ವಿಷ್ಣು ಮತ್ತು ಶಂಕರ ಈ ತ್ರಿದೇವರು ಕೂಡ ಕಾಲಕ್ಕೆ ಶರಣಾಗಬೇಕಾಗುತ್ತದೆ. ಅವರು ಕೂಡ ಮರಣವನ್ನು ಸ್ವೀಕರಿಸ ಬೇಕಾಗುತ್ತದೆ, ಇಂತಹ ವರ್ಣನೆಯು ನಮಗೆ ‘ಯೋಗವಾಸಿಷ್ಠ ಎಂಬ ಗ್ರಂಥದಲ್ಲಿ ಓದಲು ಸಿಗುತ್ತದೆ. ಇದರಿಂದ ನಮಗೆ ಕಾಲದ ಸಾಮರ್ಥ್ಯದ ಕಲ್ಪನೆ ಬರಬಹುದು.
೧. ಕಾಲದ ಸತ್ತ್ವಪರೀಕ್ಷೆಯನ್ನು ಎದುರಿಸಿದಾಗ ಧ್ಯೇಯ ಸಾಧ್ಯವಾಗುವುದು !
ನಾವು ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಗ್ರಂಥಗಳ ಪರಿಶೀಲನೆ ಮಾಡಿದರೆ, ನಮಗೆ, ಕಾಲವು ಅನೇಕರಿಗೆ ಉಪದ್ರವವನ್ನು ನೀಡಿದೆ, ಉಪದ್ರವ ಮಾಡುವಾಗ ಅದು ಶ್ರೇಷ್ಠ ಮತ್ತು ಕನಿಷ್ಠ ಎಂಬ ಭೇದಭಾವ ಮಾಡಿರುವುದು ಕಂಡು ಬರುವುದಿಲ್ಲ. ಇಂತಹ ಅತ್ಯಂತ ಕಠೋರವಾಗಿರುವ ಕಾಲವು ಪ್ರತಿಯೊಬ್ಬರ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣ ರಾದ ವ್ಯಕ್ತಿಗೆ ಅನುಕೂಲವಾಗುತ್ತದೆ ಎಂಬುದೂ ಅಷ್ಟೇ ಸತ್ಯ ವಾಗಿದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಮಾನವನ ಜೀವನದಲ್ಲಿ ಬರುವ ಕಷ್ಟಕಾರ್ಪಣ್ಯಗಳನ್ನು ಯಾರು ಧೈರ್ಯದಿಂದ ಎದುರಿಸುತ್ತಾರೆ ಮತ್ತು ಸ್ವಲ್ಪವೂ ವಿಚಲಿತನಾಗುವುದಿಲ್ಲ, ಇಂತಹ ಮನುಷ್ಯನ ಸತ್ತ್ವಪರಿಕ್ಷೆ ತೆಗೆದುಕೊಂಡ ನಂತರವೇ ಅದು ಅವನಿಗೆ ಅನುಕೂಲವಾಗುತ್ತದೆ.
ರಘುಕುಲ ಕುಲದ ಭಗೀರಥನಿಗೂ ಕಾಲದ ಆಘಾತವನ್ನು ಸಹಿಸಿಕೊಳ್ಳಬೇಕಾಯಿತು. ಅವನು ಕಠೋರ ಪರಿಶ್ರಮ ಪಡಬೇಕಾಯಿತು; ಆದರೆ ಅವನು ತನ್ನ ಪೂರ್ವಜರ ಉದ್ಧಾರವಾಗಬೇಕೆಂಬ ಧ್ಯೇಯವನ್ನು ನಿರ್ಧರಿಸಿದ್ದನು, ಅದು ಪ್ರಾಪ್ತಿಯಾಗುವ ತನಕ ಸೋಲೊಪ್ಪಲಿಲ್ಲ. ಅವನ ಈ ಪ್ರಯತ್ನದಿಂದಲೇ ಸ್ವರ್ಗದಲ್ಲಿನ ಗಂಗಾ ನದಿ ಭೂಮಿಯ ಮೇಲೆ ಅವತರಿಸಿತು. ಅದರ ವೇಗವನ್ನು ತನ್ನ ಶಕ್ತಿಯಿಂದ ಕಡಿಮೆಗೊಳಿಸುವ ಶಕ್ತಿಯಿರುವ ಭಗವಾನ ಶಂಕರನನ್ನು ಪ್ರಸನ್ನಗೊಳಿಸಲು ಭಗೀರಥನಿಗೆ ತಪಶ್ಚರ್ಯ ಮಾಡಬೇಕಾಯಿತು. ಇದಕ್ಕೆಲ್ಲ ಬಹಳಷ್ಟು ಸಮಯ ತಗಲಿತು. ಯಶಸ್ಸನ್ನು ಪಡೆಯಲು ಕಾಯಬೇಕಾಯಿತು; ಆದರೆ ಭಗೀರಥನು ಹಿಮ್ಮೆಟ್ಟಲಿಲ್ಲ; ಆದ್ದರಿಂದ ಕಾಲವು ಅವನ ಮೇಲೆ ಕೃಪೆ ಮಾಡಿ ಅವನಿಗೆ ಅವನ ಧ್ಯೇಯವನ್ನು ಸಾಧಿಸಲು ಸಹಾಯ ಮಾಡಿತು.
೨. ಕಾಲದ ಮರ್ಮವನ್ನು ಅರಿತು ಪ್ರಯತ್ನಿಸುವವರು ಗೌರವಿಸಲ್ಪಡುವುದು
ಕಾಲವು ದೈವವಾದದ ಮೇಲೆ ವಿಶ್ವಾಸವನ್ನು ಇಡುವುದಿಲ್ಲ. ‘ಕಾಲ ಮಾನವನನ್ನು ಪ್ರಯತ್ನವಾದಿಯನ್ನಾಗಿಸಲು ಹೀಗೆಲ್ಲ ಮಾಡುತ್ತಿರುತ್ತದೆ. ಅದೇ ರೀತಿ ಕಾಲದ ಆಘಾತದಿಂದ ಮನುಷ್ಯ ಉನ್ಮತ್ತನಾಗುವುದಿಲ್ಲ. ‘ಮನುಷ್ಯನ ಉನ್ಮತ್ತತನ, ಅಹಂಕಾರವನ್ನು ನಾಶಗೊಳಿಸುವ ಶ್ರೇಷ್ಠಕಾರ್ಯವನ್ನು ಕಾಲವು ಮಾಡುತ್ತಿರುತ್ತದೆ, ಎಂಬುದನ್ನು ನಾವು ತಿಳಿದು ಕೊಳ್ಳಬೇಕು. ಯಾರಿಗೆ ಕಾಲದ ಮಹತ್ವ ಮತ್ತು ಅದರ ಸ್ವಭಾವ ತಿಳಿಯಿತೋ, ಆ ಮನುಷ್ಯನು ತನ್ನ ಸಂಕಟಗಳನ್ನು ಎದುರಿಸಿದರೆ, ಗಡಿಬಿಡಿ ಮಾಡದಿದ್ದರೆ ಮತ್ತು ಸಂಕಟಗಳಿಗೆ ಹೆದರಿ ಅಥವಾ ಬೇಸರಪಟ್ಟು ಕೈಗೆತ್ತಿಕೊಂಡ ಕಾರ್ಯವನ್ನು ಅರ್ಧದಲ್ಲಿ ಬಿಡದಿದ್ದರೆ, ‘ಕಾಲದ ಈ ಪರೀಕ್ಷೆಯಲ್ಲಿ ಯಾರು ಉತ್ತೀರ್ಣನಾಗುತ್ತಾರೋ, ಅವರ ಮೇಲೆ ಕಾಲ ಪ್ರಸನ್ನವಾಗಿ ಅವರಿಗೆ ಅನುಕೂಲಕರ ರೂಪಧಾರಣೆ ಮಾಡುತ್ತದೆ, ಎನ್ನುವ ಮರ್ಮ ಯಾರಿಗೆ ತಿಳಿಯುತ್ತದೆಯೋ, ಅವನು ನಿಜವಾದ ಪುರುಷಾರ್ಥ ಮಾಡಿದನು; ಎಂದು ಅವನನ್ನು ಗೌರವಿಸಲಾಗುತ್ತದೆ.
೩. ಕಾಲ ಯಾರಿಗೆ ಅನುಕೂಲವಾಗುತ್ತದೆ ?
ಶ್ರೀಕೃಷ್ಣನ ಜನ್ಮವಾಯಿತು ಸೆರೆಮನೆಯಲ್ಲಿ. ಅದಕ್ಕಾಗಿ ಶ್ರೀಕೃಷ್ಣನ ತಾಯಿ-ತಂದೆ ದೇವಕಿ ಮತ್ತು ವಸುದೇವರಿಗೆ ಕಾಲ ಅನುಕೂಲಕರವಾಗಿರಲಿಲ್ಲ. ಅವರು ಸೆರೆಮನೆಯಲ್ಲಿ ಕಾಲ ಕಳೆಯಬೇಕಾಯಿತು. ಜನ್ಮ ತಾಳುವ ಪ್ರತಿಯೊಂದು ಮಗುವಿನ ಮರಣವನ್ನು ತೆರೆದ ಕಣ್ಣುಗಳಿಂದ ನೋಡಬೇಕಾ ಯಿತು. ಆ ದುಃಖ ಮತ್ತು ಯಾತನೆಯನ್ನು ಸಹಿಸಿಕೊಂಡ ನಂತರ ಭಗವಂತನು ಅವರ ಉದರದಿಂದ ಜನ್ಮ ತಾಳಿದನು. ಅವನು ಜನ್ಮ ತಾಳಿದ ಕೂಡಲೇ ವಸುದೇವರು ಬಂಧನದಿಂದ ಮುಕ್ತರಾಗಿ ಶ್ರೀಕೃಷ್ಣನನ್ನು ಗೋಕುಲಕ್ಕೆ ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಸಾಧ್ಯವಾಯಿತು. ಅಲ್ಲಿಂದ ಹಿಂತಿರುಗಿದ ನಂತರ ಅವರು ಪುನಃ ಬಂಧನದಲ್ಲಿ ಸಿಲುಕಬೇಕಾಯಿತು. ಒಂದುವರೆ ದಶಮಾನದಷ್ಟು ಕಾಲ ಭಗವಂತನ ವಿರಹವನ್ನು ಸಹಿಸಿಕೊಳ್ಳಬೇಕಾಯಿತು. ಈ ಅಗ್ನಿಪರೀಕ್ಷೆಯಿಂದ ಹೊರಗೆ ಬಂದ ನಂತರವೇ ಅವರ ಬಿಡುಗಡೆಯಾಯಿತು. ಈ ವಿಷಯವನ್ನು ನಾವು ಕಡೆಗಣಿಸುವಂತಿಲ್ಲ.
ಪಾಂಡವರ ವಿಷಯದಲ್ಲಿಯೂ ಹಾಗೆಯೇ ನಡೆಯಿತು. ಕಾಲವು ಯಾವಾಗಲೂ ದುಷ್ಟರಿಗೆ ಅನುಕೂಲ ಮತ್ತು ಸಜ್ಜನರಿಗೆ ಪ್ರತಿಕೂಲ ಆಗಿರುತ್ತದೆ. ದುಷ್ಟರಲ್ಲಿ ಮೂಲತಃ ಇತರರಿಗೆ ಉಪದ್ರವ ಕೊಡುವುದು ಹೆಚ್ಚು ಪ್ರಮಾಣದಲ್ಲಿರುತ್ತದೆ ಮತ್ತು ಅವರಲ್ಲಿ ಸಾಮರ್ಥ್ಯವೂ ಬಹಳಷ್ಟಿರುತ್ತದೆ. ನಮ್ಮಲ್ಲಿ ಬಲ ನಿರ್ಮಾಣ ಮಾಡಿಕೊಳ್ಳಲು ಜಿಗುಟುತನದಿಂದ ಪರಾಕಾಷ್ಠೆಯ ಪ್ರಯತ್ನ ಮಾಡಬೇಕಾಗುತ್ತದೆ. ಪಟ್ಟು ಹಿಡಿಯುವುದರಿಂದ ಸಾಮರ್ಥ್ಯ ಹೆಚ್ಚಾಗುತ್ತದೆ. ದುಷ್ಟರ ಸಂಹಾರಕ್ಕಾಗಿ ಆವಶ್ಯಕವಿರುವ ಸಾಮರ್ಥ್ಯ ಪ್ರಾಪ್ತವಾದ ತಕ್ಷಣ ಕಾಲ ಅನುಕೂಲವಾಗುತ್ತದೆ ಮತ್ತು ದುಷ್ಟರನ್ನು ಸಹಜವಾಗಿ ಸೋಲಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಸಾಮರ್ಥ್ಯಸಂಪನ್ನನಾಗಿರುವ ಮನುಷ್ಯ ವಿನಯಶೀಲನಾಗಿರಬೇಕು. ಯಾರು ದುರ್ಬಲ, ಪ್ರಾಮಾಣಿಕ ಮತ್ತು ಜನಸಾಮಾನ್ಯರಾಗಿರುತ್ತಾರೊ, ಅಂತಹ ವ್ಯಕ್ತಿಗಳ ಬಗ್ಗೆ ಯಾರ ಮನಸ್ಸಿನಲ್ಲಿ ಆತ್ಮೀಯತೆ ಮತ್ತು ಕರುಣೆ ಇರುತ್ತದೆಯೋ, ಅವರಿಗೆ ಮಾತ್ರ ಕಾಲ ಅನುಕೂಲವಾಗುತ್ತದೆ. ಪ್ರಭು ರಾಮಚಂದ್ರ ಮತ್ತು ಭಗವಾನ ಶ್ರೀಕೃಷ್ಣ ಇವರಿಬ್ಬರನ್ನೂ ಕಾಲ ಪರೀಕ್ಷೆ ಮಾಡಿತು. ಅದರಲ್ಲಿ ಅವರು ಉತ್ತೀರ್ಣರಾದರು; ಆದ್ದರಿಂದ ಕಾಲವು ಅವರಿಗೆ ಅನುಕೂಲವಾಯಿತು, ಎಂಬುದು ಈ ದೇವತೆಗಳ ಚರಿತ್ರೆಯಿಂದ ನಮಗೆ ತಿಳಿಯುತ್ತದೆ.
೪. ಶ್ರೀರಾಮರ ರಾಜ್ಯಾಭಿಷೇಕ ಮತ್ತು ಇಂದು ಅವರ ಮಂದಿರಕ್ಕಾಗಿ ಮಾಡಬೇಕಾಗಿ ಬಂದ ಸಂಘರ್ಷ !
ಬಾಬರನು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ ಅಯೋಧ್ಯೆಯ ಪ್ರಭು ಶ್ರೀರಾಮರ ಮಂದಿರವನ್ನು ಧ್ವಂಸ ಮಾಡಿದನು. ಆ ಮಂದಿರವನ್ನು ಪುನಃ ಸ್ಥಾಪಿಸಲು ನಮಗೆ ೫ ಶತಮಾನಕ್ಕಿಂತಲೂ ಹೆಚ್ಚು ಸಮಯ ಸಂಘರ್ಷ ಮಾಡ ಬೇಕಾಯಿತು. ಅದರ ನೆನಪಿಸಿ ಕೊಡುವಾಗ ಭಾಜಪದ ವಕ್ತಾರ ಶ್ರೀ. ಸುಧಾಂಶು ತ್ರಿವೇದಿ ಇವರು ಕೆಲವು ವಿಷಯಗಳನ್ನು ಮಂಡಿಸಿದ್ದಾರೆ, ನಾವು ಅವುಗಳನ್ನು ನೋಡೋಣ…
ಅ. ೯ ನವೆಂಬರ್ ೧೯೮೯ ರಂದು ರಾಮಮಂದಿರದ ಶಿಲಾನ್ಯಾಸ ಮಾಡಲಾಯಿತು. ಆ ದಿನ ಕಾರ್ತಿಕ ಶುಕ್ಲ ಏಕಾದಶಿ ಇತ್ತು ! ಇದನ್ನು ‘ಪ್ರಬೋಧಿನಿ ಏಕಾದಶಿ ಎಂದೂ ಹೇಳುತ್ತಾರೆ. ಈ ದಿನ ದೇವರು ಎಚ್ಚರಗೊಳ್ಳುತ್ತಾರೆ.
ಆ. ಮೊದಲ ಕಾರಸೇವೆ ಆರಂಭವಾದ ದಿನ ಗುಂಡು ಹಾರಾಟ ನಡೆಯಿತು. ಆ ದಿನ ೩೦ ಅಕ್ಟೋಬರ್ ೧೯೯೦ ಆಗಿತ್ತು. ಆ ದಿನವೂ ಕಾರ್ತಿಕ ಶುಕ್ಲ ಏಕಾದಶಿಯೆ ಇತ್ತು.
ಇ. ೯ ನವೆಂಬರ್ ೨೦೧೯ ರಂದು ನ್ಯಾಯಾಲಯ ರಾಮ ಮಂದಿರ ನಿರ್ಮಾಣಕ್ಕಾಗಿ ಅನುಮತಿ ನೀಡುವ ತೀರ್ಪನ್ನು ಘೋಷಿಸಿತು. ಆ ದಿನವೂ ಕಾರ್ತಿಕ ಶುಕ್ಲ ಏಕಾದಶಿಯೇ ಇತ್ತು.
ಈ. ಪ್ರಭು ಶ್ರೀರಾಮರು ಜನ್ಮ ತಾಳಿದ ಜಾಗದಲ್ಲಿ, ಮೊದಲ ಪೂಜೆಯನ್ನು ಮಹಂತ ದಿಗ್ವಿಜಯ ನಾಥರು ಮಾಡಿದರು. ೧೯೮೬ ರಲ್ಲಿ ರಾಮಜನ್ಮಭೂಮಿ ನ್ಯಾಸದ ಮೊದಲ ಅಧ್ಯಕ್ಷರು ದಿಗ್ವಿಜಯನಾಥರ ಶಿಷ್ಯ ಮಹಂತ ಅವೈದ್ಯನಾಥಜೀ ಆಗಿದ್ದರು ! ೨೦೧೯ ರಲ್ಲಿ ಶಿಲಾನ್ಯಾಸವಾಯಿತು, ಆಗ ಮುಖ್ಯಮಂತ್ರಿಯ ಹುದ್ದೆಯಲ್ಲಿ ಮಹಂತ ಅವೈದ್ಯನಾಥರ ಶಿಷ್ಯ ಯೋಗಿ ಆದಿತ್ಯನಾಥರು ವಿರಾಜಮಾನರಾಗಿದ್ದರು !
ಇಂತಹ ದಾಖಲೆಗಳನ್ನು ನೀಡಿದ ನಂತರ ಶ್ರೀ. ತ್ರಿವೇದಿ ಯವರು ಕಾಲಚಕ್ರದ ಮಹಿಮೆಯ ಬಗ್ಗೆ ಹೇಳುತ್ತಾರೆ, “ಶ್ರೀರಾಮರ ರಾಜ್ಯಾಭಿಷೇಕ ಸಹಜವಾಗಿ ಆಗಿರಲಿಲ್ಲ. ರಾಜ್ಯಾಭಿಷೇಕದಂದೇ ಅವರಿಗೆ ರಾಜವಸ್ತ್ರಗಳನ್ನು ತ್ಯಜಿಸಿ ಯತಿವೇಷ ಧರಿಸಿ ವನವಾಸಕ್ಕೆ ಹೋಗಬೇಕಾಯಿತು. ಈ ೧೪ ವರ್ಷಗಳ ವನವಾಸದಲ್ಲಿ ಅವರಿಗೆ ಮಹಾತಪಸ್ವಿಗಳನ್ನು ಉದ್ಧರಿಸಬೇಕಾಯಿತು. ಅನಂತರ ನಿಷಾಧ ರಾಜನ ರಾಜ್ಯಾಭಿಷೇಕ ಮಾಡಬೇಕಾಯಿತು. ಇಷ್ಟರಲ್ಲಿ ಮುಗಿಯಲಿಲ್ಲ, ಮುಂದೆ ಶ್ರೀರಾಮರ ಹಸ್ತದಿಂದ ಸುಗ್ರೀವ ಮತ್ತು ವಿಭೀಷಣರ ರಾಜ್ಯಾಭಿಷೇಕವಾಯಿತು. ಜಗತ್ತಿಗೆ ಅನ್ಯಾಯ ಮಾಡುತ್ತಿದ್ದ ಅನೇಕ ರಾಕ್ಷಸರೊಂದಿಗೆ ಯುದ್ಧ ಮಾಡಿ ಅವರನ್ನು ನಾಶಗೊಳಿಸಬೇಕಾಯಿತು.
ರಾವಣನಂತಹ ಮಹಾಭಯಂಕರ ರಾಕ್ಷಸರೊಂದಿಗೆ ಸಂಘರ್ಷ ಮಾಡಿ ಅವರನ್ನು ಸೋಲಿಸಬೇಕಾಯಿತು. ಇಂತಹ ಅನೇಕ ಸಂಕಟಗಳನ್ನು ಎದುರಿಸಬೇಕಾಯಿತು. ಪ್ರಭು ಶ್ರೀರಾಮರ ಪತ್ನಿಯ ಅಪಹರಣವಾಯಿತು. ಒಬ್ಬ ಮಹಾಪರಾಕ್ರಮಿ ರಾಜನ ಪತ್ನಿಯ ಅಪಹರಣವಾಗುವುದೆಂದರೆ, ಆ ರಾಜನ ಹೃದಯವನ್ನು ಭೇದಿಸುವುದಾಗಿರುತ್ತದೆ. ಆ ಯಾತನೆಯನ್ನೂ ಅವರು ಸಹಿಸಿಕೊಳ್ಳಬೇಕಾಯಿತು. ಅನಂತರ ಶ್ರೀರಾಮರ ರಾಜ್ಯಾಭಿಷೇಕವಾಯಿತು.
‘ವರ್ತಮಾನಕಾಲದಲ್ಲಿ ಏನಾಯಿತು, ಎಂಬುದನ್ನು ಹೇಳುವಾಗ ಶ್ರೀ. ಸುಧಾಂಶು ತ್ರಿವೇದಿ ಹೇಳುತ್ತಾರೆ, “ರಾಮ ಮಂದಿರ ನಿರ್ಮಾಣದ ಮೊದಲು ರಾಷ್ಟ್ರಪತಿಯ ಹುದ್ದೆಯಲ್ಲಿ ರಾಮನಾಥ ಕೋವಿಂದ ಮತ್ತು ಅವರ ನಂತರ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಶ್ರೀಮತಿ ದ್ರೌಪದಿ ಮುರ್ಮೂ ವಿರಾಜಮಾನರಾದರು. ಶ್ರೀರಾಮರ ಕಾಲದಲ್ಲಿ ಅವರಿಗೆ ಏನೇನು ಮಾಡಬೇಕಾಯಿತೊ, ಅದನ್ನೇ ಇಂದು ಕೂಡ ನಾವು ಮಾಡಬೇಕಾಯಿತು. ಆದ್ದರಿಂದ ನಮಗೆ ಯಶಸ್ಸು ಲಭಿಸಿತು, ಇದು ಕಾಲಮಹಿಮೆಯಾಗಿದೆ.
೫. ‘ಯಶಸ್ವಿಯಾಗುವ ತನಕ ಪ್ರಯತ್ನಿಸುತ್ತಿರುವುದೇ ಪುರುಷಾರ್ಥ, ಇದೇ ಕಾಲದ ಬೋಧನೆ !
ನ್ಯಾಯ ಸ್ಥಾಪನೆ, ನೈತಿಕತೆಯ ಜೋಪಾಸನೆ, ಸಂಸ್ಕೃತಿ ಮತ್ತು ಧರ್ಮದ ರಕ್ಷಣೆ, ಇದಕ್ಕಾಗಿ ಬಹಳ ದೊಡ್ಡ ಸಂಘರ್ಷ ಮತ್ತು ಅನಂತ ಯಾತನೆಗಳನ್ನು ಸಹಿಸಬೇಕಾಗುತ್ತದೆ. ಅನೇಕರಿಗೆ ತಮ್ಮ ಪ್ರಾಣವನ್ನೂ ಆಹುತಿ ಕೊಡಬೇಕಾಗುತ್ತದೆ. ಅದರ ಹೊರತು ಸಂಸ್ಕೃತಿ, ಧರ್ಮ, ನ್ಯಾಯ ಮತ್ತು ನೀತಿ ವಿಜಯವಾಗಲು ಸಾಧ್ಯವಿಲ್ಲ. ‘ವಿಜಯ ಸಾಧಿಸಲು ನಿರಂತರ ಪರಿಶ್ರಮ ಮಾಡುವುದರೊಂದಿಗೆ ಅಪಜಯವನ್ನು ಎದುರಿಸಬೇಕಾದರೂ ಪ್ರಯತ್ನವನ್ನು ಬಿಡಬಾರದು. ದೈವವಾದವನ್ನು ಅವಲಂಬಿಸಿರದೆ ಪುರುಷಾರ್ಥವನ್ನು ಮಾಡಬೇಕಾಗುತ್ತದೆ, ಆಗ ಮಾತ್ರ ಪ್ರತಿಕೂಲವಾಗಿರುವ ಕಾಲ ನಮಗೆ ಅನುಕೂಲವಾಗುತ್ತದೆ, ಎಂದು ಬೋಧಿಸುವ ಕಾರ್ಯವನ್ನು ಸರ್ವಸಾಮರ್ಥ್ಯಶಾಲಿ ಕಾಲ ಮಾಡುತ್ತದೆ, ಎಂಬುದನ್ನು ನಾವು ಗಮನದಲ್ಲಿಡಬೇಕು. ತಾತ್ಪರ್ಯವೇನೆಂದರೆ, ಕಾಲವು ಎಲ್ಲಕ್ಕಿಂತ ಶಕ್ತಿಶಾಲಿ ಮತ್ತು ಪ್ರತಿಕೂಲವಾಗಿದ್ದರೂ, ನಾವು ನಮ್ಮ ಪ್ರಯತ್ನವನ್ನು ಬಿಡಬಾರದು. ಯಶಸ್ಸು ಸಿಗುವವರೆಗೆ ಪ್ರಯತ್ನಿಸುತ್ತಿರುವುದು, ಇದೇ ಪುರುಷಾರ್ಥವಾಗಿದೆ. ನಮ್ಮ ಸಂಸ್ಕೃತಿಯು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ೪ ಪುರುಷಾರ್ಥಗಳನ್ನು ಹೇಳಿದೆ. ಅಧರ್ಮವನ್ನು ನಾಶ ಮಾಡಿ ಧರ್ಮಸ್ಥಾಪನೆ ಮಾಡಲು ಅಪಾರ ಸಂಘರ್ಷ ಮಾಡಬೇಕಾಗುತ್ತದೆ. ಸನ್ಮಾರ್ಗದಲ್ಲಿ ಮತ್ತು ಪ್ರಾಮಾಣಿಕವಾಗಿ ಅರ್ಥಾರ್ಜನೆ ಮಾಡಲು ಕೂಡ ಬಹಳಷ್ಟು ಶ್ರಮ ಮತ್ತು ಪ್ರಯತ್ನ ಮಾಡ ಬೇಕಾಗುತ್ತದೆ. ನಮ್ಮ ಶುಭ ವಾಸನೆಗಳನ್ನು ಪೂರ್ಣಗೊಳಿಸಲು ಕೂಡ ಪ್ರಯತ್ನ ಮಾಡದೆ ಪರ್ಯಾಯವಿಲ್ಲ, ಅದೇ ರೀತಿ ಮೋಕ್ಷಪ್ರಾಪ್ತಿಗಾಗಿ ಸಾಧನೆ, ತಪಶ್ಚರ್ಯ, ಅಧ್ಯಯನ ಮತ್ತು ಸತ್ಕರ್ಮ ಮುಂತಾದ ಎಲ್ಲ ಪ್ರಕಾರದ ಪ್ರಯತ್ನ ಮಾಡ ಬೇಕಾಗುತ್ತದೆ. ಈ ಪ್ರಯತ್ನದಿಂದ ಮನುಷ್ಯನಲ್ಲಿ ಪ್ರತೀಕಾರ ಕ್ಷಮತೆ ನಿರ್ಮಾಣವಾಗುತ್ತದೆ. ಈ ಪ್ರತೀಕಾರಶಕ್ತಿಯೇ ಯಶಸ್ಸು ಪ್ರಾಪ್ತಿಗಾಗಿ ಮಹತ್ವದ್ದಾಗಿರುತ್ತದೆ.
ಪ್ರಭು ಶ್ರೀರಾಮರು ರಾಜ್ಯಾಭಿಷೇಕವಾಗುವ ಬದಲು ವನವಾಸ ಅನುಭವಿಸಬೇಕಾಯಿತು, ಈ ವಿಷಯ ಅವರ ಗಮನಕ್ಕೆ ಬಂದ ತಕ್ಷಣ ಕಾಲ ಪ್ರತಿಕೂಲವಿರುವುದು ಅವರಿಗೆ ತಿಳಿಯಿತು. ಆ ಪ್ರತಿಕೂಲ ಕಾಲವನ್ನು ಅನುಕೂಲ ಮಾಡಲು ಅವರು ಅನೇಕ ಸಂಕಟಗಳನ್ನು ಎದುರಿಸಬೇಕಾಯಿತು. ಆ ಸಂಕಟಗಳನ್ನು ಜಯಿಸಬೇಕಾಯಿತು, ಅದೇ ರೀತಿ ತಮ್ಮ ಕೈಯಿಂದ ಸತ್ಕಾರ್ಯಗಳನ್ನೂ ಮಾಡಬೇಕಾಯಿತು. ಇದೆಲ್ಲವನ್ನೂ ಮಾಡಿದ ನಂತರ ಅವರಿಗೆ ಕಾಲ ಅನುಕೂಲ ವಾಯಿತು. ಭಗವಾನ ಶ್ರೀಕೃಷ್ಣನ ವಿಷಯದಲ್ಲಿಯೂ ಹಾಗೆಯೇ ಘಟಿಸಿರುವುದು ಕಾಣಿಸುತ್ತದೆ. ಶ್ರೀರಾಮ ಮತ್ತು ಶ್ರೀಕೃಷ್ಣ ಇವರಿಬ್ಬರೂ ಹೇಗೆ ದೇವರಾಗಿದ್ದಾರೆಯೋ, ಹಾಗೆಯೆ ಅವರು ರಾಷ್ಟ್ರಪುರುಷರೂ ಆಗಿದ್ದರು. ಅವರು ಅಧಿಕಾರರೂಢರೂ ಆಗಿದ್ದರು. ಅವರು ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯವನ್ನು ಪ್ರಸ್ಥಾಪಿಸಿದರು. ಆದ್ದರಿಂದಲೇ ಮಹಾಭಾರತದಲ್ಲಿ ಮಹರ್ಷಿ ವ್ಯಾಸರು ‘ರಾಜಾ ಕಾಲಸ್ಯ ಕಾರಣಮ್ (ರಾಜನೇ ಕಾಲಕ್ಕೆ ಕಾರಣನಾಗಿರುತ್ತಾನೆ), ಎನ್ನುವ ಸಿದ್ಧಾಂತವನ್ನು ಮಂಡಿಸಿದರು. ಯಾವನು ಕೀಳ್ಮಟ್ಟ ಕ್ಕಿಳಿಯುತ್ತಾನೆಯೋ, ಅವನಿಂದ ಯಾವುದೇ ಪುರುಷಾರ್ಥ ಅಥವಾ ಪರಾಕ್ರಮ ನಡೆಯುವುದಿಲ್ಲ. ಅವನಲ್ಲಿ ಪ್ರತೀಕಾರನಿಷ್ಠೆ ಇರುವುದಿಲ್ಲ. ಆದ್ದರಿಂದ ಅವನು ಕಾಲದ ಪ್ರವಾಹದಲ್ಲಿ ಸಿಲುಕಿ ನಾಶವಾಗುತ್ತಾನೆ.
೬. ತೀರ್ಥಕ್ಷೇತ್ರಗಳ ಪಾವಿತ್ರ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ !
ಯಾವ ಯಾವ ಮಹಾಪುರುಷರು ಆಗಿ ಹೋದರೋ, ಅವರೆಲ್ಲರೂ ಪ್ರತಿಕೂಲ ಕಾಲವನ್ನು ಎದುರಿಸಿದ್ದಾರೆ; ಆದರೆ ಅವರು ಆ ಪ್ರತಿಕೂಲ ಕಾಲವನ್ನು ಅನುಕೂಲ ಕಾಲವನ್ನಾಗಿ ಮಾಡಿಕೊಂಡರು. ‘ಯೋಗವಾಸಿಷ್ಠ ಈ ಗ್ರಂಥದಲ್ಲಿ “ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ಮೂವರೂ ದೇವರು ಕಾಲದ ಪ್ರಭಾವದಿಂದ ನಾಶವಾಗುತ್ತಾರೆ, ಎಂದು ಬರೆಯಲಾಗಿದೆ.
ಅಪರಿಮಿತ ಕಷ್ಟಪಟ್ಟು ಪ್ರತಿಕೂಲ ಕಾಲವನ್ನು ಜಯಿಸಿ ಅನುಕೂಲ ಕಾಲವನ್ನು ಪ್ರಸ್ಥಾಪಿಸುವ ಕಾರ್ಯವನ್ನು ಮಹಾ ಪುರುಷರು ಮಾಡಿರುತ್ತಾರೆ. ಅವರು ಈ ಕಾರ್ಯವನ್ನು ಯಾವ ಕ್ಷೇತ್ರದಲ್ಲಿ ಮಾಡಿದರೊ, ಆ ಕ್ಷೇತ್ರವನ್ನು ‘ಪವಿತ್ರ ತೀರ್ಥಕ್ಷೇತ್ರ ವೆಂದು ಗುರುತಿಸಲಾಗುತ್ತದೆ. ಇಂತಹ ತೀರ್ಥ ಕ್ಷೇತ್ರಗಳಿಗೆ ಹೋಗಿ ನಾವು ಅಯೋಗ್ಯವಾಗಿ ವರ್ತಿಸಿದರೆ ಅನುಕೂಲವಿರುವ ಕಾಲ ಕ್ರಮೇಣ ಪ್ರತಿಕೂಲವಾಗಲು ಕಾರಣವಾಗುತ್ತದೆ. ಅದಕ್ಕಾಗಿ ತೀರ್ಥಕ್ಷೇತ್ರಗಳ ಪಾವಿತ್ರ್ಯವನ್ನು ಕಾಪಾಡಬೇಕಾಗುತ್ತದೆ. ಇಲ್ಲದಿದ್ದರೆ ಅಪಾರ ಕಷ್ಟಪಟ್ಟು ಕಾಲವನ್ನು ಅನುಕೂಲವನ್ನಾಗಿ ಮಾಡಿದ ಮಹಾಪುರುಷರ ಪ್ರಯತ್ನಗಳಿಗೆ ತಿಲಾಂಜಲಿ ನೀಡಿದಂತಾಗುತ್ತದೆ. ಇಂತಹ ಪಾಪ ನಮ್ಮ ಕೈಯಿಂದ ಆಗಬಾರದೆಂದು ‘ಎಲ್ಲ ತೀರ್ಥಕ್ಷೇತ್ರ ಗಳ ಪಾವಿತ್ರ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಅದನ್ನು ನಿಷ್ಠೆಯಿಂದ ಪ್ರಯತ್ನಪೂರ್ವಕ ನಿರ್ವಹಿಸಬೇಕು, ಎನ್ನುವ ಬೋಧನೆಯನ್ನು ಇದರಿಂದ ನಾವು ಪಡೆದರೆ ಮಾತ್ರ ನಮ್ಮೆಲ್ಲರ ಕಲ್ಯಾಣ ಆಗುವುದು.
– ಶ್ರೀ. ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಿಲಿ. (೫.೧೨.೨೦೨೩)