ತನ್ನ ಸ್ವಂತ ೪ ವರ್ಷದ ಮಗನನ್ನು ಅಮಾನುಷ ವಾಗಿ ಹತ್ಯೆ ಮಾಡಿದ ೩೯ ವರ್ಷದ ಸೂಚನಾ ಸೆಠ್ ಇವಳ ಪ್ರಕರಣದಿಂದ ಇಡೀ ದೇಶವೇ ಸ್ತಬ್ಧ ಮತ್ತು ಆತಂಕಗೊಂಡಿದೆ. ಯಾವ ಭಾರತೀಯ ಸಂಸ್ಕೃತಿಯು ಜಾಗತಿಕ ಸ್ತರದಲ್ಲಿ ಇತರ ರಾಷ್ಟ್ರಗಳಿಗೆ ಆದರ್ಶವಾಗಿದೆಯೋ, ಯಾವ ಸಂಸ್ಕೃತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ರೂಪಿಸುವ ರಾಜಮಾತಾ ಜೀಜಾಬಾಯಿ, ಬೆನ್ನಿಗೆ ಮಗುವನ್ನು ಕಟ್ಟಿಕೊಂಡು ಆಂಗ್ಲರೊಂದಿಗೆ ಹೋರಾಡುವ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯರಂತಹ ಆದರ್ಶ ಮಹಿಳೆಯರಿರುವರೋ, ಆ ರಾಷ್ಟ್ರದ ಓರ್ವ ಉನ್ನತ ಶಿಕ್ಷಣ ಪಡೆದ ತಾಯಿಯು ಮಗನ ಹತ್ಯೆಗೈದ ಘಟನೆ ‘ಜಾತ್ಯತೀತ ವ್ಯವಸ್ಥೆಯಲ್ಲಿ ಮನುಷ್ಯನ ಮನಸ್ಥಿತಿ ಸುಖದ ಲೋಭಕ್ಕಾಗಿ ಎಷ್ಟು ಬದಲಾಗುತ್ತಿದೆ, ಎಂದು ತೋರಿಸುತ್ತದೆ. ಭಾರತೀಯ ಸಂಸ್ಕೃತಿಯ ದೃಷ್ಟಿಯಿಂದ ತಾಯಿಯ ಪ್ರೇಮ, ಸ್ನೇಹವನ್ನು ಯಾವುದರೊಂದಿಗೂ ತುಲನೆ ಮಾಡಲಾಗುವುದಿಲ್ಲ. ಮಗುವಿಗೆ ಏನಾದರೂ ತಾಗಿದರೆ ಅವಳ ಜೀವ ತಳಮಳಿಸುತ್ತದೆ. ಮನೆಯಲ್ಲಿ ಆಹಾರ ಕಡಿಮೆಯಾದಾಗ ಅವಳು ಸ್ವತಃ ಉಪವಾಸವಿದ್ದು ಅದನ್ನು ಮಕ್ಕಳಿಗೆ ಬಡಿಸುತ್ತಾಳೆ. ತದ್ವಿರುದ್ಧವಾಗಿ ‘ಕೇವಲ ತನ್ನ ಪತಿ ಮಗನನ್ನು ಭೇಟಿಯಾಗಬಾರದು, ಎಂಬ ಸಿಟ್ಟಿನಿಂದ ಒಬ್ಬ ತಾಯಿ ತನ್ನ ಮಗನನ್ನು ಕೊಂದು ವಿಲೇವಾರಿಗಾಗಿ ಅವನ ಮೃತದೇಹವನ್ನು ಚೀಲದಲ್ಲಿ ತುಂಬಿಸುತ್ತಾಳೆಯೋ ಆಗ, ಈ ಘಟನೆಯ ಮೂಲಕ್ಕೆ ಹೋಗುವ ಅವಶ್ಯಕತೆ ಉದ್ಭವಿಸುತ್ತದೆ.
ಹೆಚ್ಚು ಹಣದ ಲೋಭ !
ವೆಂಕಟರಮನ್ ಎಂಬ ವ್ಯಕ್ತಿಯೊಂದಿಗೆ ೨೦೧೦ ರಲ್ಲಿ ಸೂಚನಾ ಸೆಠ್ ಇವಳ ಪ್ರೇಮವಿವಾಹವಾಯಿತು. ಅನಂತರ ನಂತರ ವೆಂಕಟರಮನ್‌ನೊಂದಿಗೆ ಹೊಂದಾಣಿಕೆಯಾಗದೇ ಅವಳು ವಿವಾಹ ವಿಚ್ಛೇದನಕ್ಕಾಗಿ ಅರ್ಜಿಯನ್ನು ಸಲ್ಲಿಸಿದಳು. ಸೂಚನಾ ಸೆಠ್ ಇವಳು ‘ಎ ಮೈಂಡಫುಲ್ ಎಐ ಲ್ಯಾಬ್ ಹೆಸರಿನ ಒಂದು ಕಂಪನಿಯನ್ನು ಸ್ಥಾಪಿಸಿದ್ದಳು. ಈ ಕಂಪನಿ ‘ಆರ್ಟಿಫಿಶಲ್ ಇಂಟೆಲಿಜನ್ಸ್ ಕ್ಷೇತ್ರದಲ್ಲಿ ಕಾರ್ಯನಿರತವಾಗಿದೆ. ೨೦೨೧ ರಲ್ಲಿ ಸೂಚನಾ ಸೆಠ್ ಇವಳನ್ನು ೧೦೦ ಪ್ರತಿಭಾಶಾಲಿ ಮಹಿಳೆಯರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಸೂಚನಾ ಸೆಠ್ ಯಶಸ್ವಿ ಉದ್ಯಮಿಯಾದಳು; ಆದರೆ ಅವಳು ಉತ್ತಮ ತಾಯಿಯಾಗಲು ಸಾಧ್ಯವಾಗಲಿಲ್ಲ. ಸದ್ಯ ನಾವು ಪಡೆಯುತ್ತಿರುವ ಉಚ್ಚ ಶಿಕ್ಷಣ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡುತ್ತದೆ; ಆದರೆ ಸಂಸ್ಕಾರ ನೀಡುವುದಿಲ್ಲ, ಎಂಬುದು ಗಮನಕ್ಕೆ ಬರುತ್ತದೆ. ನಿಮಗೆ ಸಿಟ್ಟಿನ ಮೇಲೆ ನಿಯಂತ್ರಣ ಸಾಧಿಸಲು ಕಲಿಸದ, ತ್ಯಾಗದ ಭಾವನೆಯನ್ನು ಮೂಡಿಸದ, ಮಾತೃತ್ವದ ಕನಿಷ್ಠ ಕರ್ತವ್ಯಗಳನ್ನು ನಿಮ್ಮಲ್ಲಿ ಬೇರೂರಿಸಲು ಸಾಧ್ಯವಾಗದ, ಆ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ ತರುವ ಸಮಯ ಈಗ ಬಂದಿದೆ.
ರಾಜಮಾತಾ ಜೀಜಾಬಾಯಿ
ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಅತ್ಯುನ್ನತ ಸ್ಥಾನವಿದೆ ಮತ್ತು ಪ್ರತಿಯೊಂದು ಧರ್ಮಗ್ರಂಥದಲ್ಲಿ ಅವಳನ್ನು ಗೌರವಿಸಲಾಗಿದೆ. ದುರ್ಗಾಸಪ್ತಶತಿಯಲ್ಲಿ ‘ಕುಪುತ್ರೊ ಜಾಯತೆ ಕ್ವಚಿದಪಿ ಕುಮಾತಾ ನ ಭವತಿ | ಅಂದರೆ ‘ಮಗ ಕೆಟ್ಟವನಿರಬಹುದು; ಆದರೆ ತಾಯಿ ಎಂದಿಗೂ ಕೆಟ್ಟ ತಾಯಿಯಾಗಲು ಸಾಧ್ಯವಿಲ್ಲ, ಎಂಬ ಶ್ಲೋಕವಿದೆ. ರಾಮಾಯಣ ದಲ್ಲಿಯೂ ‘ಜನನಿ ಮತ್ತು ಜನ್ಮಭೂಮಿಗೆ ಸ್ವರ್ಗಕ್ಕಿಂತಲೂ ಹೆಚ್ಚು ಗೌರವವಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ತಾಯಂದಿರು ತಮ್ಮ ಮಕ್ಕಳನ್ನು ಯಾವ ರೀತಿ ಉತ್ತಮವಾಗಿ ರೂಪಿಸಿದ್ದಾರೆ, ಎಂಬುದರ ಅನೇಕ ಉದಾಹರಣೆಗಳು ಭಾರತೀಯ ಇತಿಹಾಸದಲ್ಲಿ ಕಂಡು ಬರುತ್ತವೆ. ಇಂತಹ ಆದರ್ಶ ತಾಯಂದಿರಲ್ಲಿ ರಾಜಮಾತಾ ಜೀಜಾಬಾಯಿ ಇವರು ಬಹಳ ಕಠಿಣ ಪರಿಸ್ಥಿತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ರಲ್ಲಿ ಮೂಡಿಸಿದ ಸಂಸ್ಕಾರಗಳಿಂದಾಗಿ ಅವರಿಂದ ಹಿಂದವೀ ಸ್ವರಾಜ್ಯ ಸ್ಥಾಪಿಸಲು ಸಾಧ್ಯವಾಯಿತು. ಯಶೋದಾಮಾತೆಯು ಶ್ರೀಕೃಷ್ಣನನ್ನು ತನ್ನ ಮಗನಂತೆ ಪಾಲನೆ-ಪೋಷಣೆ ಮಾಡಿ ದೊಡ್ಡವನನ್ನಾಗಿ ಮಾಡಿದಳು. ಭಾರತೀಯ ಸಂಸ್ಕೃತಿಯಲ್ಲಿ ತ್ಯಾಗವೇ ಕೇಂದ್ರಬಿಂದುವಾಗಿದೆ. ಆದುದರಿಂದ ಹಿಂದಿನ ಶಿಕ್ಷಣವ್ಯವಸ್ಥೆಯಲ್ಲಿ ಮಕ್ಕಳಲ್ಲಿ ಅದೇ ರೀತಿಯ ಸಂಸ್ಕಾರಗಳನ್ನು ಮಾಡಲಾಗುತ್ತಿತ್ತು. ಸದ್ಯ ಮಾತ್ರ ಪಾಶ್ಚಿಮಾತ್ಯ ವಿಕೃತಿಯ ಅಂಧಾನುಕರಣೆಯಿಂದ ತ್ಯಾಗ, ನಿರಪೇಕ್ಷ ಪ್ರೇಮ ಇವೆಲ್ಲ ಇತಿಹಾಸದಲ್ಲಿ ಜಮೆಯಾಗುತ್ತಿವೆ.
೧೯೯೦ ರಿಂದ ೧೯೯೬ ಈ ೬ ವರ್ಷಗಳಲ್ಲಿ ಮಹಾರಾಷ್ಟ್ರದ ಕೆಲವು ಭಾಗಗಳಿಂದ ಚಿಕ್ಕ ಮಕ್ಕಳು ಕಾಣೆಯಾಗುತ್ತಿದ್ದರು. ಅಂಜನಾಬಾಯಿ ಗಾವಿತ ಮತ್ತು ಅವಳ ಇಬ್ಬರು ಹೆಣ್ಣು ಮಕ್ಕಳು ಒಳಸಂಚು ಹೂಡಿ ಚಿಕ್ಕ ಮಕ್ಕಳನ್ನು ಅಪಹರಿಸಿ ಭಿಕ್ಷೆ ಬೇಡಲು ಒತ್ತಾಯಿಸುತ್ತಿದ್ದರು. ಅಂಜನಾಬಾಯಿಯು ೧೩ ಮಕ್ಕಳನ್ನು ಅಪಹರಿಸಿರುವುದು ಸಾಬೀತಾಯಿತು, ಅವರಲ್ಲಿನ ೯ ಮಕ್ಕಳನ್ನು ಈ ತಾಯಿ ಮಕ್ಕಳು ಕೊಂದು ಹಾಕಿದರು. ಇದರಲ್ಲಿ ಅಂಜನಾಬಾಯಿ ಗಾವಿತ ಸಾವಿಗೀಡಾದಳು ಮತ್ತು ಅವಳ ಇಬ್ಬರು ಹೆಣ್ಣು ಮಕ್ಕಳಿಗೆ ಗಲ್ಲುಶಿಕ್ಷೆಯನ್ನು ವಿಧಿಸಲಾಯಿತು. ಯಾವ ಅಂಜನಾ ಬಾಯಿಯು ೯ ಚಿಕ್ಕ ಮಕ್ಕಳನ್ನು ಕೊಂದು ಹಾಕಿದಳೋ, ಆ ಕ್ರೂರ ಘಟನೆ ಸೂಚನಾ ಸೆಠ್‌ರ ಪ್ರಕರಣದಿಂದ ಮತ್ತೊಮ್ಮೆ ನೆನಪಿಗೆ ಬಂದಿತು. ಸೂಚನಾ ಸೆಠ್ ಪ್ರಕರಣವು ಪ್ರತಿಯೊಬ್ಬ ತಾಯಿ-ತಂದೆ, ನೌಕರಿ ಮಾಡುವ ಪಾಲಕರ ಜೊತೆಗೆ ಕುಟುಂಬವ್ಯವಸ್ಥೆಯಲ್ಲಿನ ಪ್ರತಿಯೊಬ್ಬರು ಚಿಂತನೆ ಮಾಡಲು ಒತ್ತುನೀಡುವಂತಹ ಘಟನೆಯಾಗಿದೆ.
ಕುಟುಂಬವ್ಯವಸ್ಥೆಯ ಮುಂದೆ ಪ್ರಶ್ನಾರ್ಥಕ ಚಿಹ್ನೆ ?
ಇತ್ತೀಚಿಗೆ ವಿವಾಹವಿಚ್ಛೇದನೆಯ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಪರಸ್ಪರ ವಿಶ್ವಾಸದ ಅಭಾವ, ಪ್ರೀತಿಯ ಕ್ಷಣಗಳಿಗಾಗಿ ಸಮಯ ಸಿಗದಿರುವುದು ಮಕ್ಕಳ ಪಾಲನೆಪೋಷಣೆ ಸರಿಯಾಗಿ ಆಗದಿರುವುದು ಅಥವಾ ಜೊತೆಗಾರರ ಸಿಟ್ಟನ್ನು ಮಕ್ಕಳ ಮೇಲೆ ತೆಗೆಯುವುದು ಮುಂತಾದ ಗಂಭೀರ ಪರಿಣಾಮಗಳಾಗುತ್ತಿವೆ.
ಸೂಚನಾ ಮತ್ತು ಅವಳ ಪತಿ ಇವರ ನಡುವಿನ ವಿವಾಹ ವಿಚ್ಛೇದನದ ಖಟ್ಲೆಯು ಕೊನೆಯ ಹಂತದಲ್ಲಿದ್ದು ಮಗನನ್ನು ಸೂಚನಾಳ ಸ್ವಾಧೀನಕ್ಕೆ ಒಪ್ಪಿಸಲಾಗಿತ್ತು. ಇದರಲ್ಲಿ ಸೂಚನಾಳ ಪತಿಗೆ ಮಗನನ್ನು ವಾರದಲ್ಲಿ ಒಂದು ಸಲ ಭೇಟಿಯಾಗುವ ಅನುಮತಿ ನೀಡಲಾಗಿತ್ತು. ಅದು ಸೂಚನಾಳಿಗೆ ಇಷ್ಟವಾಗಿರಲಿಲ್ಲ. ಪತಿ-ಪತ್ನಿಯರ ನಡುವಿನ ವಾದವು ಮಗನ ಹತ್ಯೆಯಲ್ಲಿ ಮುಕ್ತಾಯಗೊಳ್ಳುವವರೆಗೆ ಹೋಗುತ್ತಿದ್ದರೆ, ‘ತಾಯಿ-ತಂದೆಯ ಜವಾಬ್ದಾರಿ ಏನು ?
ಈ ಹತ್ಯೆ ಕುಟುಂಬವ್ಯವಸ್ಥೆಯ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ಹುಟ್ಟಿಸುವಂತಹ ಘಟನೆಯಾಗಿದೆ. ಪತಿ-ಪತ್ನಿಯರಿಬ್ಬರೂ ನೌಕರಿಯಲ್ಲಿದ್ದರೆ, ಸಹಜವಾಗಿ ಮಕ್ಕಳ ಕಡೆಗೆ ದುರ್ಲಕ್ಷವಾಗುತ್ತದೆ. ‘ಕರಿಯರ್ನ ಸರ್ವೋಚ್ಚ ಶಿಖರವನ್ನು ತಲುಪುವ ಅತಿಆಸೆಯಿಂದ ಇಂದಿನ ತರುಣ-ತರುಣಿಯರಿಗೆ ಸಂಬಂಧಗಳಲ್ಲಿನ ಆರ್ದ್ರತೆ ಬರಿದಾಗುತ್ತಿದೆ. ‘ಹಾರ್ವರ್ಡ್ ವಿದ್ಯಾಪೀಠದಿಂದ ಶಿಕ್ಷಣ ಪಡೆದ ಮತ್ತು ಒಂದು ಕಂಪನಿಯ ಮಾಲೀಕಳಾಗಿರುವ ಸೂಚನಾರಂತಹ ಮಹಿಳೆ ತನ್ನ ಕೋಶದಲ್ಲಿ ಸಿಲುಕಿ ‘ಮಗನೂ ಬೇಡ, ಎಂಬ ಸ್ಥಿತಿಗೆ ಬರುತ್ತಾಳೆ, ಅದರಿಂದ ‘ನಮ್ಮ ಜೀವನಮೌಲ್ಯಗಳು ಎಲ್ಲಿಗೆ ಸಾಗುತ್ತಿವೆ ?, ಎಂದು ಗಾಂಭೀರ್ಯದಿಂದ ವಿಚಾರ ವಾಗಬೇಕು. ಹಿಂದೆ ಅವಿಭಕ್ತ ಕುಟುಂಬಪದ್ಧತಿ ಇತ್ತು ಮತ್ತು ಒತ್ತಡದ ಪ್ರಸಂಗಗಳು ಎದುರಾದಾಗ ಮನೆಯಲ್ಲಿನ ಹಿರಿಯರ ಸಹಾಯದಿಂದ ದೂರವಾಗುತ್ತಿದ್ದವು. ‘ಈಗ ಮನೆಯಲ್ಲಿ ತಾಯಿ-ತಂದೆಯರೇ ಇಲ್ಲದ ಕಾರಣ ಪತಿ-ಪತ್ನಿಯರ ನಡುವಿನ ಮನಸ್ತಾಪ-ಸಮಸ್ಯೆಗಳನ್ನು ಯಾರ ಮುಂದೆ ಮಂಡಿಸಿ ಪರಿಹರಿಸಿಕೊಳ್ಳಬೇಕು ?, ಇದೊಂದು ಮಹತ್ವಪೂರ್ಣ ಪ್ರಶ್ನೆ ಎಲ್ಲರ ಮುಂದಿದೆ.
ಧರ್ಮ ಮತ್ತು ಅಧ್ಯಾತ್ಮ ಈ ಘಟಕಗಳೇ ಮನುಷ್ಯನಿಗೆ ಸಾರಾಸಾರ ವಿಚಾರ ಮಾಡಲು ಕಲಿಸುತ್ತವೆ ಮತ್ತು ಆದರ್ಶ ಮೌಲ್ಯಗಳ ಆಧಾರದಲ್ಲಿ ನಾವು ಜೀವನ ನಡೆಸುತ್ತೇವೆ. ಆದುದರಿಂದ ಸೂಚನಾರಂತಹ ಪ್ರಕರಣಗಳ ಪುನರಾವರ್ತನೆಯಾಗದಿರಲು ಬಾಲ್ಯದಿಂದಲೇ ಹಿಂದೂ ಸಂಸ್ಕೃತಿಯ ಶಿಕ್ಷಣ ನೀಡುವುದು ಮಹತ್ವಪೂರ್ಣವಾಗಿದೆ. ಹೀಗೆ ಮಾಡಿದರೆ ಮಕ್ಕಳು ದೊಡ್ಡವರಾದ ಮೇಲೆ ಅವರಿಗೆ ತಮ್ಮ ಜವಾಬ್ದಾರಿ ಏನಿದೆ, ಎಂದು ತಿಳಿಯುವುದು !