ಶ್ರೀರಾಮ ಮಂದಿರದ ಭವ್ಯ ಉದ್ಘಾಟನೆಯ ಸಿದ್ಧತೆ ಸಮರೋಪಾದಿಯಲ್ಲಿ ಆರಂಭ !

ಅಯೋಧ್ಯೆ (ಉತ್ತರಪ್ರದೇಶ) – ೫೫೦ ವರ್ಷಗಳ ಅತಿಕ್ರಮಣದ ನಂತರ ಶ್ರೀರಾಮಜನ್ಮಭೂಮಿಯನ್ನು ಮುಕ್ತಗೊಳಿಸಲು ಹಿಂದೂಗಳಿಗೆ ಯಶಸ್ಸು ಸಿಕ್ಕಿತು ಮತ್ತು ಈಗ ಅಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿದೆ. ಬರುವ ೨೨ ಜನವರಿ ೨೦೨೪ ರಂದು ಹಿಂದುತ್ವನಿಷ್ಠ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಸ್ತಗಳಿಂದ, ಸಾವಿರಾರು ಸಾಧು-ಸಂತರು, ಮಹಂತರು, ರಾಮಮಂದಿರಕ್ಕಾಗಿ ಹೋರಾಡಿದ ಕಾರಸೇವಕರು ಮುಂತಾದವರ ಉಪಸ್ಥಿತಿಯಲ್ಲಿ ಈ ಭವ್ಯ ಶ್ರೀರಾಮಮಂದಿರದ ಉದ್ಘಾಟನೆಯ ಸಮಾರಂಭವನ್ನು ಆಚರಿಸಲಾಗುವುದು. ಇದಕ್ಕಾಗಿ ಸಮರೋಪಾದಿಯಲ್ಲಿ ಸಿದ್ಧತೆ ಮುಂದುವರಿದಿದೆ. ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ಈ ಸಿದ್ಧತೆ ನಡೆದಿದೆ. ಎಲ್ಲರಿಗೂ ಆಮಂತ್ರಣಗಳನ್ನು ಕಳುಹಿಸಲಾಗುತ್ತಿದೆ. ಈ ಸಮಾರಂಭವನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ದೇಶ ಮತ್ತು ವಿದೇಶಗಳಿಂದ ಹಿಂದೂಗಳು ಉಪಸ್ಥಿತ ಇರಲಿದ್ದಾರೆ. ಈ ಸಮಾರಂಭವನ್ನು ನೋಡುವ ಭಾಗ್ಯ ಲಭಿಸಬೇಕೆಂದು ಎಲ್ಲ ಶ್ರೀರಾಮಭಕ್ತರು ಪ್ರಯತ್ನಿಸುತ್ತಿದ್ದಾರೆ.

ಶ್ರೀರಾಮಲಲ್ಲಾನ ೫೧ ಇಂಚಿನ ವಿಗ್ರಹ !

ಶ್ರೀರಾಮಮಂದಿರದ ಗರ್ಭಗುಡಿಯಲ್ಲಿ ೫೧ ಇಂಚಿನ ರಾಮಲಲ್ಲಾನ ವಿಗ್ರಹವನ್ನು ಸ್ಥಾಪಿಸಲಾಗುವುದು. ಈ ಮೂರ್ತಿ ಬಾಲಸ್ವರೂಪದ್ದಾಗಿದೆ. ಇದಕ್ಕಾಗಿ ೩ ವಿಗ್ರಹಗಳನ್ನು ೩ ಬೇರೆ ಬೇರೆ ಶಿಲ್ಪಿಗಳಿಂದ ನಿರ್ಮಿಸಲಾಗುತ್ತಿದೆ. ಈ ಮೂರರಲ್ಲಿ ಒಂದು ಮೂರ್ತಿಯನ್ನು ಆಯ್ಕೆ ಮಾಡಿ ಅದರ ಪ್ರಾಣಪ್ರತಿಷ್ಠೆಯನ್ನು ಮಾಡಲಾಗುವುದು, ಹಾಗೆಯೇ ಉಳಿದ ೨ ವಿಗ್ರಹಗಳೂ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬಳಿಯೇ ಇರಲಿವೆ. ನೇಪಾಳದ ಗಂಡಕಿ ನದಿಯಿಂದ ಈ ವಿಗ್ರಹಕ್ಕಾಗಿ ೨ ಸಾಲಿಗ್ರಾಮಗಳನ್ನು ತರಲಾಗಿತ್ತು. ಶಿಲ್ಪ ಮತ್ತು ಕಲಾ ಕ್ಷೇತ್ರಗಳ ಹೆಸರುವಾಸಿ ವ್ಯಕ್ತಿಗಳಿಂದ ಈ ವಿಗ್ರಹದ ರೇಖಾಚಿತ್ರವನ್ನು ಬಿಡಿಸಲಾಗಿದೆ. ಅನಂತರ ಅವುಗಳಲ್ಲಿನ ಒಂದು ರೇಖಾಚಿತ್ರವನ್ನು ಅಂತಿಮ ಮಾಡಲಾಗಿತ್ತು. ಸದ್ಯ ಶ್ರೀರಾಮಜನ್ಮಭೂಮಿಯಲ್ಲಿರುವ ಶ್ರೀರಾಮಲಲ್ಲಾನ ಧಾತುವಿನ ಚಿಕ್ಕ ಮೂರ್ತಿಯನ್ನೂ ಈ ಗರ್ಭಗುಡಿಯಲ್ಲಿ ಪೂಜೆಗಾಗಿ ಇಡಲಾಗುವುದು. ಈ ಗರ್ಭಗುಡಿಯು ಅರ್ಧವರ್ತುಲಾಕಾರದಲ್ಲಿದೆ.

ದರ್ಶನಕ್ಕೆ ೧೫-೨೦ ಸೆಕೆಂಡ್‌ ಅವಕಾಶ !

ಭಗವಾನ ಶ್ರೀರಾಮಲಲ್ಲಾನ ಅಭಿಷೇಕವನ್ನು ೨೨ ಜನವರಿ ೨೦೨೪ ರಂದು ಅಭಿಜಿತ ಮುಹೂರ್ತ ಮೃಗಶಿರಾ ನಕ್ಷತ್ರದಲ್ಲಿ ಮಧ್ಯಾಹ್ನ ೧೨:೨೦ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಲಿದ್ದಾರೆ. ಅಭಿಷೇಕದ ನಂತರ ಎರಡನೇ ದಿನದಿಂದ ದೇವಸ್ಥಾನವನ್ನು ಸಾರ್ವಜನಿಕರಿಗಾಗಿ ತೆರೆಯಲಾಗುವುದು. ಇದರ ನಂತರ ಪ್ರತಿದಿನ ಒಂದೂವರೆ ಲಕ್ಷ ಭಕ್ತರು ಬರುವ ಸಾಧ್ಯತೆ ಇದೆ. ಆದುದರಿಂದ ಪ್ರತಿಯೊಬ್ಬ ಭಕ್ತನಿಗೆ ರಾಮಲಲ್ಲಾನ ದರ್ಶನ ಪಡೆಯಲು ಕೇವಲ ೧೫ ರಿಂದ ೨೦ ಸೆಕೆಂಡ್‌ ಸಿಗಲಿದೆ.

ಶ್ರೀರಾಮನವಮಿಯಂದು ವಿಗ್ರಹದ ಹಣೆಯ ಮೇಲೆ ಬೀಳಲಿದೆ ಸೂರ್ಯಕಿರಣ !

ಗರ್ಭಗುಡಿಯಲ್ಲಿ ಸ್ಥಾಪಿಸಲಾಗುವ ಬಾಲಸ್ವರೂಪದ ಶ್ರೀರಾಮನ ವಿಗ್ರಹದ ಮೇಲೆ ಶ್ರೀರಾಮನವಮಿಯ ದಿನ ಸೂರ್ಯಕಿರಣಗಳು ಬೀಳುವವು. ರಾಮಲಲ್ಲಾನ ಹಣೆಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗಿನ ಆ ದೃಶ್ಯ ನೋಡಲು ಅತ್ಯಂತ ಸುಂದರವಾಗಿರುವುದು, ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್‌ನ ಅಧಿಕಾರಿಗಳು ಹೇಳಿದರು.

ಹೀಗಿದೆ ಶ್ರೀರಾಮಮಂದಿರ !

ಶ್ರೀರಾಮಜನ್ಮಭೂಮಿ ಪರಿಸರದಲ್ಲಿ ೨.೭ ಎಕರೆ ಜಾಗದಲ್ಲಿ ಶ್ರೀರಾಮಮಂದಿರವನ್ನು ಕಟ್ಟಲಾಗಿದೆ. ಅದು ೩ ಮಹಡಿಗಳದಾಗಿದ್ದು ಅದರ ಎತ್ತರ ೧೬೨ ಅಡಿ ಇದೆ. ಈಗ ಇದರಲ್ಲಿನ ಕೆಳಮಹಡಿ ಮತ್ತು ಮೊದಲ ಮಹಡಿ ಪೂರ್ಣವಾಗಿದ್ದು ಬಾಕಿ ಎರಡು ಮಹಡಿಗಳ ಕೆಲಸ ನಡೆದಿದೆ. ದೇವಸ್ಥಾನದ ನಿರ್ಮಾಣಕ್ಕಾಗಿ ಕೆತ್ತನೆ ಮಾಡಿದ ಕಲ್ಲುಗಳನ್ನು ರಾಜಸ್ಥಾನದಿಂದ ತರಲಾಗಿದೆ. ದೇವಸ್ಥಾನದ ಸುತ್ತಲೂ ೮ ಎಕರೆ ಪರಿಸರದಲ್ಲಿ ೪೮ ಅಡಿ ಎತ್ತರದ ರಕ್ಷಣಾಗೋಡೆಯನ್ನೂ ಕಟ್ಟಲಾಗುತ್ತಿದೆ. ಶ್ರೀರಾಮಮಂದಿರದ ಹೊರತಾಗಿ ದೇವಸ್ಥಾನದ ಪರಿಸರದಲ್ಲಿ ಇನ್ನೂ ೬ ದೇವಸ್ಥಾನಗಳನ್ನು ಕಟ್ಟಲಾಗುತ್ತಿದೆ. ಇದರಲ್ಲಿ ಸೂರ್ಯದೇವರು, ಭಗವಾನ ವಿಷ್ಣು, ಪಂಚದೇವ ದೇವಸ್ಥಾನ ಮುಂತಾದ ದೇವಸ್ಥಾನಗಳು ಇರಲಿವೆ. ಶ್ರೀರಾಮಮಂದಿರದಲ್ಲಿ ಒಟ್ಟು ೩೯೨ ಕಂಬಗಳಿರಲಿವೆ. ಗರ್ಭಗುಡಿಯಲ್ಲಿ ೧೬೦ ಕಂಬಗಳು ಮತ್ತು ಮೇಲಿನ ಮಹಡಿಯಲ್ಲಿ ೧೩೨ ಕಂಬಗಳು ಇರುವವು. ದೇವಸ್ಥಾನಕ್ಕೆ ೧೨ ಬಾಗಿಲುಗಳು ಇರಲಿವೆ. ಇವುಗಳನ್ನು ಸಾಗುವಾನಿ ಮರದಿಂದ ತಯಾರಿಸಲಾಗುತ್ತಿದೆ.

ದೇವಸ್ಥಾನಕ್ಕೆ ೮ ದ್ವಾರಗಳು ಇರಲಿವೆ. ದೇವಸ್ಥಾನದ ಮುಖ್ಯ ಪ್ರವೇಶದ್ವಾರವು ಸಿಂಹ ದ್ವಾರವಾಗಿರಲಿದೆ. ಸಿಂಹ ದ್ವಾರದಿಂದ ದೇವಸ್ಥಾನದಲ್ಲಿ ಪ್ರವೇಶಿಸುವಾಗ ಎದುರಿಗೆ ನೃತ್ಯ ಮಂಟಪ, ರಂಗಮಂಟಪ ಮತ್ತು ಗೂಢ ಮಂಟಪವೂ ಕಾಣಿಸುವುದು. ಶ್ರೀರಾಮಮಂದಿರದಲ್ಲಿ ಪ್ರವೇಶಿಸುವ ಮೊದಲು ಪೂರ್ವಕ್ಕೆ ಒಂದು ಮುಖ್ಯ ಬಾಗಿಲು ಇರುವುದು, ಅಲ್ಲಿಂದ ಭಕ್ತರು ಸಂಕುಲದಲ್ಲಿ ಪ್ರವೇಶಿಸಬಹುದು. ಮುಖ್ಯ ದ್ವಾರಕ್ಕೆ ತಾಗಿಯೇ ಹೊರಗೆ ಬರಲು ಇನ್ನೊಂದು ದ್ವಾರ ಇದೆ. ಇದಲ್ಲದೇ ಭಕ್ತರು ಬಂದು ಹೋಗಬಹುದಾದ ಸುರಂಗ ಮಾರ್ಗವನ್ನೂ ನಿರ್ಮಿಸಲಾಗುತ್ತಿದೆ.