ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ೧೦೮ ಘಂಟೆಗಳನ್ನು ಅಳವಡಿಸಲಾಗುವುದು ಮತ್ತು ತಮಿಳುನಾಡಿನ ನಾಮಕ್ಕಲ ಜಿಲ್ಲೆಯ ‘ಶ್ರೀ ಅಂಡಾಲ್ ಮೌಲ್ಡಿಂಗ್ ವರ್ಕ್ಸ್’ ಇವರಿಗೆ ಈ ಘಂಟೆಗಳನ್ನು ಸಿದ್ಧಪಡಿಸಲು ಆದೇಶಿಸಲಾಗಿದೆ. ಈ ಮಂದಿರಕ್ಕೆ ಅಗತ್ಯವಿರುವ ಒಟ್ಟು ೪೮ ಘಂಟೆಗಳನ್ನು ನಾಮಕ್ಕಲನಲ್ಲಿ ಕಳೆದ ಒಂದು ತಿಂಗಳೊಳಗೆ ಮಾಡಲಾಗಿದೆ. ಈ ಕುರಿತು ‘ಶ್ರೀ ಅಂಡಾಲ್ ಮೌಲ್ಡಿಂಗ್ ವರ್ಕ್ಸ್’ನ ಶ್ರೀ. ಕೆ. ರಾಜೇಂದ್ರನ್ ಹೇಳಿದ ಮಾಹಿತಿಯನ್ನು ನೀಡುತ್ತಿದ್ದೇವೆ. ಶ್ರೀ. ರಾಜೇಂದ್ರನ್ ಇವರು ಬೆಂಗಳೂರಿನ ಉದ್ಯಮಿಯಾಗಿದ್ದು, ಕಳೆದ ೭ ತಲೆಮಾರುಗಳಿಂದ ದೇವಾಲಯಗಳಿಗೆ ಘಂಟೆಗಳನ್ನು ತಯಾರಿಸುತ್ತಿದ್ದಾರೆ. ಶ್ರೀ. ರಾಜೇಂದ್ರನ್ ತಯಾರಿಸಿದ ಘಂಟೆಗಳು ಭಾರತದಾದ್ಯಂತ ಹಾಗೂ ಮಲೇಷ್ಯಾ, ಸಿಂಗಾಪುರ, ಲಂಡನ್ ಸೇರಿದಂತೆ ಇತರ ದೇಶಗಳಿಗೆ ರವಾನೆಯಾಗುತ್ತವೆ.
ಘಂಟೆಗಳಲ್ಲಿ ಬಳಸುವ ಲೋಹಗಳು
ಶ್ರೀ. ಕೆ. ರಾಜೇಂದ್ರನ್ ಮಾತನಾಡುತ್ತಾ, ”ನಮಗೆ ೭೦ ಕಿಲೋ. ತೂಕದ ೫ ಘಂಟೆ, ೬೦ ಕಿಲೋ ತೂಕದ ೬ ಘಂಟೆ ಹಾಗೂ ೨೫ ಕಿಲೋ ತೂಕದ ೧ ಘಂಟೆ ಹೀಗೆ ಒಟ್ಟು ೧೨ ಘಂಟೆ ಹಾಗೂ ೩೬ ಚಿಕ್ಕ ಘಂಟೆಗಳನ್ನು ಸಿದ್ಧ ಮಾಡುವಂತೆ ಒಂದು ತಿಂಗಳ ಹಿಂದೆ ಬೇಡಿಕೆ ಬಂದಿತ್ತು. ನವೆಂಬರ್ ೨೦೨೩ ರಲ್ಲಿ ಘಂಟೆಗಳನ್ನು ತಯಾರಿಸುವ ಬಗ್ಗೆ ನಮ್ಮನ್ನು ಸಂಪರ್ಕಿಸಲಾಯಿತು. ಆಗ ನಮಗೆ ಮೇಲಿನ ಬೇಡಿಕೆ ಸಿಕ್ಕಿತು. ೨೫ ಜನ ಹಗಲಿರುಳು ಪರಿಶ್ರಮಪಟ್ಟು ಘಂಟೆಗಳನ್ನು ತಯಾರಿಸಿದ್ದಾರೆ. ಘಂಟೆಗಳನ್ನು ತಯಾರಿಸಲು ತಾಮ್ರ, ಬೆಳ್ಳಿ ಮತ್ತು ಸತು ಇಂತಹ ಲೋಹಗಳನ್ನು ಬಳಸಲಾಗಿದೆ. ಈ ಘಂಟೆಗಳಲ್ಲಿ ನಾವು ಕಬ್ಬಿಣವನ್ನು ಬಳಸಿಲ್ಲ. ನಮ್ಮಲ್ಲಿ ಕಡಿಮೆ ಸಮಯದಲ್ಲಿ ಘಂಟೆಯನ್ನು ತಯಾರಿಸುವ ತಂತ್ರಜ್ಞಾನವು ಲಭ್ಯವಿದೆ’’ ಎಂದು ಹೇಳಿದರು.
ರಾಮಮಂದಿರಕ್ಕೆ ಘಂಟೆಗಳನ್ನು ತಯಾರಿಸಲು ಸಿಗುವುದು ಮತ್ತು ಆ ಸಮಯಕ್ಕೆ ಸರಿಯಾಗಿ ಕಳುಹಿಸಿರುವುದು ನಮಗೆ ತುಂಬಾ ಆನಂದ ತಂದಿದೆ’’, ಎಂದೂ ಶ್ರೀ. ಕೆ. ರಾಜೇಂದ್ರನ್ ಇವರು ಹೇಳಿದರು.