ಹಿಂದೂ ರಾಷ್ಟ್ರವೆಂದರೆ ಸಾತ್ತ್ವಿಕ ಸಮಾಜ ಹಾಗೂ ಅದರ ವೈಶಿಷ್ಟ್ಯಗಳು !

೧. ಸತ್ತ್ವ, ರಜ ಮತ್ತು ತಮ ಪ್ರಧಾನ ವ್ಯಕ್ತಿಗಳ ವ್ಯಾಖ್ಯೆ

ಹಿಂದೂ ರಾಷ್ಟ್ರ ಎಂದರೆ ಸಾತ್ತ್ವಿಕ ಸಮಾಜದ ನಿರ್ಮಿತಿ. ಸಾತ್ತ್ವಿಕ ಸಮಾಜ ಎಂದರೆ ಸಾತ್ತ್ವಿಕ ಆಚರಣೆ ಮಾಡುವ ಸಮಾಜ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸತ್ತ್ವ, ರಜ ಮತ್ತು ತಮ ಹೀಗೆ ಮೂರು ಗುಣಗಳು ಇರುತ್ತವೆ. ತಮೋಪ್ರಧಾನ ವ್ಯಕ್ತಿಯ ಆಚರಣೆ, ಎಂದರೆ ಮತ್ತೊಬ್ಬರನ್ನು ಹಿಂಸಿಸಿ ಅಥವಾ ದುಃಖವನ್ನು ನೀಡಿ ತಾನು ಸುಖ ಪಡುವುದು. ರಜೋಪ್ರಧಾನ ವ್ಯಕ್ತಿಯ ಆಚರಣೆ ಎಂದರೆ ಸ್ವಾರ್ಥ. ತನಗಾಗಿಯೇ ಎಲ್ಲವನ್ನು ಮಾಡಿಕೊಳ್ಳುವುದು. ಆದರೆ ಸತ್ವಪ್ರಧಾನ ವ್ಯಕ್ತಿ ಎಂದರೆ ‘ಸ್ವಂತಕ್ಕೆ ಕಷ್ಟ, ಅಡಚಣೆಯಾದರೂ ಪರವಾಗಿಲ್ಲ; ಆದರೆ ಮತ್ತೊಬ್ಬರಿಗೆ ಅಥವಾ ಸಮಾಜಕ್ಕೆ ತೊಂದರೆ ಆಗಬಾರದು’, ಎಂದು ಬಯಸಿ ಭಗವಂತನ ಚರಣಗಳಲ್ಲಿ ನಿರಂತರ ಕೃತಜ್ಞತೆಯಿಂದಿದ್ದು ಜೀವನವನ್ನು ಮಾಡುವವರು.

ಶ್ರೀ. ಗುರುಪ್ರಸಾದ ಗೌಡ

೨. ಸತ್ತ್ವಪ್ರಧಾನ ವ್ಯಕ್ತಿಗಳಿಂದ ಸಮಾಜದ ಸಾತ್ತ್ವಿಕತೆ ಹೆಚ್ಚಾಗುವುದು ಮತ್ತು ತಮೋಪ್ರಧಾನ ವ್ಯಕ್ತಿಗಳಿಂದ ತಾಮಸಿಕತೆ ಹೆಚ್ಚಾಗುವುದು

ಸಾತ್ತ್ವಿಕವ್ಯಕ್ತಿಗೆ ನಿರಂತರವಾಗಿ ಭಗವಂತನ ಸ್ಮರಣೆ ಯಾಗುತ್ತದೆ ಮತ್ತು ಭಗವಂತನು ಸಹ ಆ ವ್ಯಕ್ತಿಯ ಮೂಲಕ ಸಮಾಜದಲ್ಲಿ ಸಾತ್ತ್ವಿಕತೆಯನ್ನು ಹರಡಲು ಪ್ರಯತ್ನಿಸುತ್ತಾನೆ. ಈ ಪ್ರಕ್ರಿಯೆಯಿಂದ ಸಾತ್ತ್ವಿಕತೆ ಹೆಚ್ಚಾಗಿ ಆ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆದರೆ ತಮ ಪ್ರಧಾನ ವ್ಯಕ್ತಿಯ ತಾಮಸಿಕತೆಯಿಂದ ಕೆಟ್ಟ ಶಕ್ತಿಗಳು ಸಮಾಜ ಸ್ವಾಸ್ಥ್ಯವನ್ನು ಹಾಳುಗೆಡವಲು ಮತ್ತು ಧರ್ಮನಾಶಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿರುತ್ತವೆ. ಇದರಿಂದ ಆ ವ್ಯಕ್ತಿಯ ಪಾಪವು ಹೆಚ್ಚಾಗಿ ಭಗವಂತನಿಂದ ದೂರ ಹೋಗಿ, ಅಧೋಗತಿಯಾಗುತ್ತದೆ.

೩. ಪ್ರತಿಯೊಬ್ಬ ಪ್ರಾಣಿಮಾತ್ರರ ಉನ್ನತಿಗಾಗಿ ಹಿಂದೂ ರಾಷ್ಟ್ರ ಆವಶ್ಯಕವಾಗಿರುವುದು

‘ಹಿಂದೂ ರಾಷ್ಟ್ರ’ವೆಂದರೆ ಸತ್ತ್ವ್ವಪ್ರಧಾನ ರಾಷ್ಟ್ರ, ಸತ್ತ್ವ ಪ್ರಧಾನ ಸಮಾಜ, ಸತ್ತ್ವ್ವಪ್ರಧಾನ ವ್ಯವಸ್ಥೆ, ಸತ್ತ್ವ್ವಪ್ರಧಾನ ಆಚರಣೆ, ಸತ್ತ್ವಪ್ರಧಾನ ವಾತಾವರಣ ಮತ್ತು ಸತ್ತ್ವಪ್ರಧಾನ ಸ್ಥಿತಿ ! ‘ಹಿಂದೂ ರಾಷ್ಟ್ರ’ ಅಂದರೆ ಮನುಷ್ಯ ಸಹಿತ ಎಲ್ಲ ಪ್ರಾಣಿಗಳು, ಪಕ್ಷಿಗಳು, ಜೀವಿಗಳು, ಜಂತುಗಳು, ಗಿಡ ಮರಗಳು ಮತ್ತು ಕ್ರಿಮಿಕೀಟಗಳು ಕೂಡ ಸಾತ್ತ್ವಿಕತೆಯನ್ನು ಅನುಭವ ಮಾಡುವಂತಹ ಸ್ಥಿತಿ ಮತ್ತು ವ್ಯವಸ್ಥೆ’. ಈ ಸತ್ತ್ವ್ವಪ್ರಧಾನ ವ್ಯವಸ್ಥೆಯಲ್ಲಿ ಪ್ರತಿಯೊಂದು ಜೀವದ ಸಾತ್ತ್ವಿಕತೆ ಹೆಚ್ಚಾಗಿ ಅದಕ್ಕೆ ಭಗವಂತನತ್ತ ಮಾರ್ಗಕ್ರಮಣ ಮಾಡಲು ಸಹಾಯವಾಗಿ ಆ ಜೀವದ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆದ್ದರಿಂದ ಸಕಲ ಜೀವ ಸಂಕುಲದ ಆಧ್ಯಾತ್ಮಿಕ ಉನ್ನತಿಗಾಗಿ ಹಿಂದೂ ರಾಷ್ಟ್ರದ ಆವಶ್ಯಕತೆಯಿದೆ. ಅಂತಹ ಹಿಂದೂ ರಾಷ್ಟ್ರಕ್ಕಾಗಿ ಪರಿಶ್ರಮ ಪಡುವವರ ಉನ್ನತಿಯನ್ನು ಸಾಕ್ಷಾತ್‌ ಭಗವಂತನು ಮಾಡಿಸಿಕೊಳ್ಳುತ್ತಾನೆ. ಆದ್ದರಿಂದ ಸಾತ್ತ್ವಿಕ ಸಮಾಜದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ.

೪. ಪ್ರತಿಯೊಂದು ಯುಗದಲ್ಲಿ ಸಮಾಜದ ಅಸ್ತಿತ್ವ ಅಬಾಧಿತವಾಗಿಡಲು ಮತ್ತು ಸಮತೋಲನ ಕಾಪಾಡಲು ಭಗವಂತನು ತಾಮಸಿಕ ವ್ಯಕ್ತಿಗಳನ್ನು ವಧಿಸಿರುವುದು

ಸಮಾಜವನ್ನು ಸಾತ್ತ್ವಿಕವಾಗಿಸಲು ಸಾತ್ತ್ವಿಕ ಆಚರಣೆಯ ಬಗ್ಗೆ ಹೇಳಬೇಕಾಗುತ್ತದೆ ಮತ್ತು ಆ ರೀತಿಯ ಆಚರಣೆಯನ್ನು ಮಾಡಬೇಕಾಗುತ್ತದೆ. ಸದ್ಯದ ಕಲಿಯುಗದಲ್ಲಿ ಸಾತ್ತ್ವಿಕ ಆಚರಣೆಯನ್ನು ಹೇಳಿದರೂ ಅದನ್ನು ಸ್ವೀಕಾರ ಮಾಡದೆ ದ್ವೇಷವನ್ನು ಮಾಡುವವರ ಸಂಖ್ಯೆ ಹೆಚ್ಚಿದೆ. ಬಾರಿ ಬಾರಿ ಹೇಳಿದರೂ ಸಾತ್ತ್ವಿಕ ಆಚರಣೆಯನ್ನು ದುರ್ಲಕ್ಷಿಸಿ ತಾಮಸಿಕ ಆಚರಣೆಯನ್ನು ಅನುಕರಿಸುವ ಜನರ ಪ್ರಮಾಣ ಹೆಚ್ಚಿದೆ. ಆದುದರಿಂದ ಇಡೀ ಸಮಾಜವೇ ಸಾತ್ತ್ವಿಕ ಆಚರಣೆಯನ್ನು ಮಾಡದೆ ತಾಮಸಿಕ ಆಚರಣೆ ಮಾಡುತ್ತದೆ. ಪ್ರತಿಯೊಂದು ಯುಗದಲ್ಲಿ ತಾಮಸಿಕ ಆಚರಣೆ ಮಾಡುವ ವ್ಯಕ್ತಿಗಳನ್ನು ಭಗವಂತನೇ ವಧಿಸಿದ್ದಾನೆ. ಈ ಪ್ರಕ್ರಿಯೆ ಕೇವಲ ಸಮಾಜದ ಅಸ್ತಿತ್ವವನ್ನು ಅಬಾಧಿತವಾಗಿಡಲು ಮತ್ತು ಸಮಾಜದಲ್ಲಿ ಸಮತೋಲನ ಕಾಪಾಡಲು ಇದಕ್ಕಾಗಿಯೆ ಇದೆ. ಇದೇ ನಮ್ಮ ಪರಂಪರೆ ! ಇದೇ ನಮ್ಮ ಗತವೈಭವ !

೫. ‘ಸಾತ್ತ್ವಿಕ ಸಮಾಜದ ನಿರ್ಮಿತಿಗಾಗಿ ಸಾತ್ತ್ವಿಕ ವ್ಯಕ್ತಿಗಳನ್ನು ಜೋಡಿಸಿ ಸಾತ್ತ್ವಿಕ ವಿಚಾರ ಹೇಳುವುದು ಮತ್ತು ಸಮಾಜದಿಂದ ಸಾತ್ತ್ವಿಕ ಆಚರಣೆ ಮಾಡಿಕೊಳ್ಳುವುದು’, ಇದು ಕಲಿಯುಗದಲ್ಲಿ ನಮ್ಮೆಲ್ಲರ ಬಹುದೊಡ್ಡ ಸಮಷ್ಟಿ ಸಾಧನೆಯಾಗಿದೆ.

೬. ಸಮಾಜಕ್ಕೆ ಸಾಧನೆ ಹೇಳುವುದು

ಸಮಾಜವನ್ನು ಸಾತ್ತ್ವಿಕಗೊಳಿಸಲು ಭಗವಂತನು ಮತ್ತು ಗುರುಗಳು (ಪರಾತ್ಪರ ಗುರು ಡಾ. ಆಠವಲೆ) ನೀಡಿದ ಮಾರ್ಗದರ್ಶನವೆಂದರೆ ‘ಸಮಾಜಕ್ಕೆ ಸಾಧನೆಯನ್ನು ಹೇಳುವುದೊಂದೇ ಇದಕ್ಕೆ ಪರ್ಯಾಯವಾಗಿದೆ’. ಈ ಪ್ರಕ್ರಿಯೆಯಿಂದ ನಮ್ಮ ಆಧ್ಯಾತ್ಮಿಕ ಉನ್ನತಿಯು ಆಗುವುದರೊಂದಿಗೆ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ.

– ಶ್ರೀ. ಗುರುಪ್ರಸಾದ ಗೌಡ, ಮಂಗಳೂರು. (೩೦.೭.೨೦೨೩)