ಪ.ಪೂ. ಸರಸಂಘಚಾಲಕ ಡಾ. ಮೋಹನ್‌ಜಿ ಭಾಗವತರಿಂದ ಕರೆ
ಬಾರಾ (ರಾಜಸ್ಥಾನ) – ತಮ್ಮ ರಕ್ಷಣೆಗಾಗಿ ಹಿಂದೂ ಸಮಾಜಕ್ಕೆ ಭಾಷೆ, ಜಾತಿ ಮತ್ತು ಪ್ರದೇಶದ ಸಂದರ್ಭದಲ್ಲಿನ ಭಿನ್ನಾಭಿಪ್ರಾಯ ಮತ್ತು ವಿವಾದವನ್ನು ನಷ್ಟಗೊಳಿಸಿ ಸಂಘಟಿತರಾಗಬೇಕಾಗಿದೆ. ಅದರಲ್ಲಿ ಸಂಘಟನೆ, ಸದ್ಭಾವನೆ ಮತ್ತು ಆತ್ಮೀಯತೆಯ ಭಾವವಿರುವಂತಹ ಸಮಾಜ ನಿರ್ಮಾಣವಾಗಬೇಕು ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಇಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರ ಸಮ್ಮೇಳನದಲ್ಲಿ ಕರೆ ನೀಡಿದರು.
ಪ.ಪೂ.ಸರಸಂಘಚಾಲಕರು ಮಾತನ್ನು ಮುಂದುವರಿಸಿ, `ಹಿಂದೂ’ ಶಬ್ದ ನಂತರ ಬಂದಿದ್ದರೂ, ನಾವು ಇಲ್ಲಿ (ಭಾರತದಲ್ಲಿ) ಪ್ರಾಚೀನ ಕಾಲದಿಂದಲೂ ವಾಸಿಸುತ್ತಿದ್ದೇವೆ. ಹಿಂದೂಗಳು ಎಲ್ಲರನ್ನೂ ಸ್ವೀಕರಿಸುತ್ತಾರೆ. ಹಾಗೂ ಸಂವಾದದಿಂದ ಏಕತೆ ಮತ್ತು ಸದ್ಭಾವನೆಯಿಂದ ಜೀವಿಸುತ್ತಾರೆ. ಸಮಾಜ ಕೇವಲ ವ್ಯಕ್ತಿ ಮತ್ತು ಅವನ ಕುಟುಂಬದಿಂದ ರಚಿಸಲ್ಪಟ್ಟಿಲ್ಲ. ಅದು ಒಂದು ಸಮಗ್ರ ದೃಷ್ಟಿಕೋನವಾಗಿದೆ. ಸಂಘದ ಕಾರ್ಯವು ಯಂತ್ರದಂತೆ ಅಲ್ಲ, ಬದಲಾಗಿ ವಿಚಾರಗಳನ್ನು ಆಧರಿಸಿದೆ. ಸಂಘದ ಮೌಲ್ಯಗಳು ಗುಂಪಿನ ನಾಯಕರಿಂದ ಹಿಡಿದು ಸ್ವಯಂಸೇವಕರು ಮತ್ತು ಅವರ ಕುಟುಂಬದ ಸದಸ್ಯರವರೆಗೆ ಪ್ರತಿಯೊಬ್ಬರ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಿದರು.
ಭಾರತ ಹಿಂದೂ ರಾಷ್ಟ್ರವಾಗಿದೆ !
ಪ.ಪೂ. ಸರಸಂಘಚಾಲಕರು ಮಾತನಾಡಿ, ಜಗತ್ತಿನಲ್ಲಿ ಭಾರತದ ಪ್ರತಿಷ್ಠೆ ಅದರ ಶಕ್ತಿಯನ್ನು ಅವಲಂಬಿಸಿದೆ. ಯಾವಾಗ ಒಂದು ರಾಷ್ಟ್ರವು ಶಕ್ತಿಯುತವಾಗುತ್ತದೆಯೋ, ಆಗ ಅಲ್ಲಿನ ವಲಸಿಗರ ಭದ್ರತೆಯನ್ನು ಖಾತ್ರಿಪಡಿಸಲಾಗುತ್ತದೆ. ಭಾರತವು ಹಿಂದೂ ರಾಷ್ಟ್ರವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ ಇಲ್ಲಿ ವಾಸಿಸುವ ಎಲ್ಲಾ ಜನರು ಈ ಅಸ್ಮಿತೆಯೊಂದಿಗೆ ಜೋಡಿಸಲ್ಪಟ್ಟಿದ್ದಾರೆ. ಹಿಂದೂ ಎಂದರೆ ಎಲ್ಲರನ್ನೂ ಆಲಂಗಿಸುವ ಮತ್ತು ಎಲ್ಲರನ್ನು ಸ್ವೀಕರಿಸುವುದಾಗಿದೆ. ನಾವು ಯೋಗ್ಯರಾಗಿದ್ದೇವೆ ಎಂದು ಹಿಂದೂಗಳಿಗೆ ವಿಶ್ವಾಸ ಇದೆ ಮತ್ತು ನೀವೂ (ಹಿಂದೂಗಳಲ್ಲದವರು) ನಿಮ್ಮ ಸ್ಥಾನದಲ್ಲಿ ಯೋಗ್ಯರಾಗಿದ್ದೀರಿ ಎಂದು ಹೇಳಿದರು.