ಮೈತೇಯಿ ಭಯೋತ್ಪಾದಕ ಸಂಘಟನೆಗಳ ಮೇಲೆ ನಿರ್ಬಂಧ : ಮಣಿಪುರದಲ್ಲಿ ಶಾಂತಿಯನ್ನು ಸ್ಥಾಪಿಸಲು ಮಹತ್ವದ ಹೆಜ್ಜೆ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ‘ಯುನೈಟೆಡ್‌ ನ್ಯಾಶನಲ್‌ ಲಿಬರೇಶನ್‌ ಫ್ರಂಟ್‌’ನಿಂದ ಶಾಂತಿ ಒಪ್ಪಂದಕ್ಕೆ ಸಹಿ !

ಮಣಿಪುರ ಕಣಿವೆಯಲ್ಲಿನ ಅತ್ಯಂತ ಹಳೆಯ ಬಂಡುಕೋರ ಸಶಸ್ತ್ರ ಗುಂಪಾಗಿರುವ ‘ಯುನೈಟೆಡ್‌ ನ್ಯಾಶನಲ್‌ ಲಿಬರೇಶನ್‌ ಫ್ರಂಟ್’ (ಯು.ಎನ್‌.ಎಲ್‌.ಎಫ್‌.’) ನವೆಂಬರ್‌ ೨೮ ರಂದು ದೆಹಲಿಯಲ್ಲಿ ‘ಶಾಂತಿ ಒಪ್ಪಂದಕ್ಕೆ’ ಸಹಿ ಹಾಕಿತು. ಈ ಗುಂಪು ಹಿಂಸಾಚಾರವನ್ನು ತ್ಯಜಿಸಿ ಮುಖ್ಯ ಪ್ರವಾಹದಲ್ಲಿ ಬರಲು ಒಪ್ಪಿಕೊಂಡಿದೆ. ಕೇಂದ್ರ ಸರಕಾರ ಈ ಗುಂಪಿನ ಮೇಲೆ ೫ ವರ್ಷಗಳ ನಿರ್ಬಂಧ ಹೇರಿದ ನಂತರ ಯು.ಎನ್‌.ಎಲ್‌.ಎಫ್. ಈ ನಿರ್ಣಯ ತೆಗೆದುಕೊಂಡಿತು. ಯು.ಎನ್‌.ಎಲ್‌.ಎಫ್. ಮುಖ್ಯ ಪ್ರವಾಹದಲ್ಲಿ ಸೇರಿಕೊಳ್ಳುವುದು, ಒಂದು ಐತಿಹಾಸಿಕ ಘಟನೆಯಾಗಿದೆ; ಏಕೆಂದರೆ ಇದೊಂದು ಹಿಂಸಾಚಾರಿ ಬಂಡುಕೋರರ ಗುಂಪಾಗಿತ್ತು. ಸರ್ವಸಮಾವೇಶಕ ವಿಕಾಸದ ಕನಸನ್ನು ಸಾಕಾರಗೊಳಿಸುವುದು ಮತ್ತು ಈಶಾನ್ಯ ಭಾರತದಲ್ಲಿನ ಯುವಕರಿಗೆ ಒಳ್ಳೆಯ ಭವಿಷ್ಯವನ್ನು ನೀಡುವ ಧ್ಯೇಯಕ್ಕಾಗಿ ಈ ಘಟನೆ ಮಹತ್ವದ್ದಾಗಿದೆ.

ಕೇಂದ್ರ ಸರಕಾರದೊಂದಿಗಿನ ಒಪ್ಪಂದದಿಂದ ಅರ್ಧ ಶತಮಾನದಿಂದ ನಡೆಯುತ್ತಿದ್ದ ಈ ಸಂಘರ್ಷ ಈಗ ಕೊನೆಗೊಳ್ಳಲಿದೆ. ‘ಯು.ಎನ್‌.ಎಲ್‌.ಎಫ್‌.’ ಮುಖ್ಯ ಪ್ರವಾಹದಲ್ಲಿ ಬಂದಿರುವುದರಿಂದ ಮಣಿಪುರದಲ್ಲಿನ ಇತರ ಸಶಸ್ತ್ರ ಗುಂಪು ಗಳಿಗೂ ಶಾಂತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ಸಿಗಬಹುದು. ಒಪ್ಪಂದದ ಅನುಷ್ಠಾನದ ಮೇಲ್ವಿಚಾರಣೆಗಾಗಿ ‘ಶಾಂತಿ ಒಪ್ಪಂದ ಸಮಿತಿ’ಯ ಸ್ಥಾಪಿಸಲಾಗಿದೆ.

ಭಾರತ ಸರಕಾರವು ಭಯೋತ್ಪಾದನೆಯನ್ನು ಕೊನೆಗಾಣಿಸಲು ೨೦೧೪ ರಿಂದ ಈಶಾನ್ಯ ಭಾರತದಲ್ಲಿನ ಅನೇಕ ಸಶಸ್ತ್ರ ಗುಂಪುಗಳೊಂದಿಗೆ ಒಪ್ಪಂದ ಮಾಡಿಕೊಂಡು ಅವರನ್ನು ವಿಕಾಸದ ಮುಖ್ಯ ವಾಹಿನಿಯಲ್ಲಿ ತರಲು ಪ್ರಾರಂಭಿಸಿದೆ. ಅದರ ಅಂತರ್ಗತ ಮಣಿಪುರದ ಕಣಿವೆಯಲ್ಲಿನ ಸಶಸ್ತ್ರ ಗುಂಪು ಮೊದಲ ಬಾರಿಗೆ ಹಿಂಸಾಚಾರವನ್ನು ತ್ಯಜಿಸಿ ಮುಖ್ಯ ಪ್ರವಾಹದಲ್ಲಿ ಬರಲು ಒಪ್ಪಿಕೊಂಡಿದೆ.

೨. ಇನ್ನೂ ೬ ತಿಂಗಳು ಮಣಿಪುರದಲ್ಲಿ ‘ಆಫ್ಸಾ’ (ಅಶಾಂತ ಕ್ಷೇತ್ರದಲ್ಲಿ ಸೈನ್ಯಕ್ಕೆ ವಿಶೇಷ ಅಧಿಕಾರ) ಅನ್ವಯ !

ಮಣಿಪುರದಲ್ಲಿ ಇನ್ನೂ ೬ ತಿಂಗಳು ‘ಆಫ್ಸಾ’ ಜ್ಯಾರಿಯಲ್ಲಿರುವುದು. ಸರಕಾರವು ಸಪ್ಟೆಂಬರ ೩೦ ರಂದು ಅದನ್ನು ತೆರವುಗೊಳಿಸುವ ಘೋಷಣೆಯನ್ನು ಮಾಡಿತ್ತು; ಆದರೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿ ಈಗ ನಿರ್ಣಯವನ್ನು ಬದಲಾಯಿಸಲಾಗಿದೆ. ಮಣಿಪುರದಲ್ಲಿ ೧೯ ಪೊಲೀಸ್‌ ಠಾಣೆಗಳ ಪರಿಸರಗಳನ್ನು ಹೊರತುಪಡಿಸಿ ಸಂಪೂರ್ಣ ರಾಜ್ಯವನ್ನು ‘ಅಸುರಕ್ಷಿತ ಕ್ಷೇತ್ರ’ವೆಂದು ಘೋಷಿಸಲಾಗಿದೆ.

೩. ದೇಶದ್ರೋಹಿ ಮತ್ತು ಹಿಂಸಾತ್ಮಕ ಕೃತ್ಯಗಳನ್ನು ಮಾಡುವ ೯ ಮೈತೇಯಿ ಭಯೋತ್ಪಾದಕ ಸಂಘಟನೆಗಳ ಮೇಲೆ ೫ ವರ್ಷಗಳ ನಿರ್ಬಂಧ !

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ನವೆಂಬರ್‌ ೧೪ ರಂದು ೯ ಮೈತೇಯಿ ಭಯೋತ್ಪಾದಕ ಸಂಘಟನೆಗಳ ಮೇಲೆ ೫ ವರ್ಷಗಳ ನಿರ್ಬಂಧ ಹೇರಿದೆ. ನಿರ್ಬಂಧ ಹೇರಿದ ಸಂಘಟನೆಗಳು ಮಣಿಪುರದಲ್ಲಿ ಸಕ್ರಿಯವಾಗಿದ್ದು ಅವುಗಳಲ್ಲಿ ‘ಪೀಪಲ್ಸ್ ಲಿಬರೇಶನ್‌ ಆರ್ಮಿ’ ಮತ್ತು ಅದರ ರಾಜಕೀಯ ವಿಭಾಗ, ‘ರಿವೆಲ್ಯುಶನರಿ ಪೀಪಲ್ಸ್ ಫ್ರಂಟ್‌’, ‘ದ ಯುನೈಟೆಡ್‌ ನ್ಯಾಶನಲ್‌ ಲಿಬರೇಶನ್‌ ಫ್ರಂಟ್’ ಮತ್ತು ಅದರ ಸಶಸ್ತ್ರ ವಿಭಾಗ, ‘ಮಣಿಪುರ ಪೀಪಲ್ಸ್ ಆರ್ಮಿ’, ‘ಪೀಪಲ್ಸ ರೆವೆಲ್ಯುಶನರಿ ಪಾರ್ಟಿಆಫ್‌ ಕಾಂಗಲೈಪಾಕ’ ಮತ್ತು ಅದರ ಸಶಸ್ತ್ರ ವಿಭಾಗ, ‘ಕಾಂಗಲೀ ಯಾವೋಲ ಕನ್ನಾಲುಪ’, ‘ಕೋ-ಆರ್ಡಿನೇಶನ್‌ ಕಮಿಟಿ’ ಮತ್ತು ‘ಅಲಾಯನ್ಸ್ ಫಾರ್‌ ಸೋಶಲಿಸ್ಟ್ ಯುನಿಟಿ ಕಾಂಗಲೀಪಕ’ ಇವುಗಳು ಸೇರಿವೆ.
‘ಈ ಸಂಘಟನೆಗಳು ಭಾರತದ ಸಾರ್ವಭೌಮತೆ ಮತ್ತು ಅಖಂಡತೆಗೆ ಅಪಾಯವನ್ನುಂಟು ಮಾಡುವಂತಹದ್ದಾಗಿವೆ’, ಎಂದು ಕೇಂದ್ರ ಸರಕಾರ ಹೇಳಿದೆ. ಈ ಸಂಘಟನೆಗಳು ಮಣಿಪುರದ ಭದ್ರತಾಪಡೆ, ಪೊಲೀಸ್‌ ಮತ್ತು ನಾಗರಿಕರ ಮೇಲೆ ಆಕ್ರಮಣ ಮಾಡುತ್ತಿದ್ದು, ಅದರಿಂದ ಕಾನೂನು-ಸುವ್ಯವಸ್ಥೆಗೆ ಅಪಾಯವುಂಟಾಗಿದೆ. ಅದರ ಜೊತೆಗೆ ಮಣಿಪುರವನ್ನು ದೇಶದಿಂದ ವಿಭಜಿಸುವ ಷಡ್ಯಂತ್ರವನ್ನೂ ಅವುಗಳು ರೂಪಿಸಿವೆ. ಗೃಹಸಚಿವಾಲಯವು ಈ ವಿಷಯದಲ್ಲಿ ಒಂದು ಸುತ್ತೋಲೆಯನ್ನು ಹೊರಡಿಸಿದೆ. ಸಶಸ್ತ್ರ ಸಂಘರ್ಷದ ಮೂಲಕ ಭಾರತದಿಂದ ಮಣಿಪುರವನ್ನು ವಿಭಜಿಸುವ ಉದ್ದೇಶದಿಂದ ಸ್ಥಳೀಯ ಜನರನ್ನು ಉದ್ರೇಕಿಸುವ ಕಾರ್ಯವನ್ನು ಈ ಸಂಘಟನೆಗಳಿಂದ ಮಾಡಲಾಗುತ್ತಿದೆ. ಸಂಘಟನೆಗಾಗಿ ಹಣ ಸಂಗ್ರಹಿಸಲು ಜನರನ್ನು ಬೆದರಿಸುವುದು, ಅವರಿಂದ ಹಪ್ತಾ ವಸೂಲು ಮಾಡುವುದು, ಲೂಟಿ ಮಾಡುವುದು, ವಿದೇಶಗಳಿಂದ ನಿಧಿ ಸ್ವೀಕರಿಸುವುದು, ನೆರೆ ರಾಷ್ಟ್ರಗಳಲ್ಲಿ ಬಿಡಾರ ಹಾಕುವುದು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಖರೀದಿಸುವುದು ಇತ್ಯಾದಿ ದೇಶದ್ರೋಹಿ ಕೃತ್ಯಗಳನ್ನು ಈ ಸಂಘಟನೆಗಳು ಮಾಡುತ್ತಿವೆ. ಇವೆಲ್ಲವೂ ಗಮನಕ್ಕೆ ಬಂದನಂತರವೇ ಈ ಸಂಘಟನೆಗಳ ಮೇಲೆ ಕ್ರಮತೆಗೆದುಕೊಳ್ಳಲಾಗಿದೆ. ಸಂಘಟನೆಗಳ ಮೇಲೆ ನಿಯಂತ್ರಣವಿಲ್ಲದಿದ್ದರೆ, ಅದರಿಂದ ಲಾಭ ಪಡೆದು ಭಯೋತ್ಪಾದಕರೂ ದೇಶದ್ರೋಹಿ ಕೃತ್ಯಗಳಿಗಾಗಿ ಇಂತಹ ಸಂಘಟನೆಗಳನ್ನು ಬಳಸಬಹುದು. ದೇಶದ್ರೋಹಿ ಕಾರ್ಯಾಚರಣೆಯ ಪ್ರಚಾರಕ್ಕಾಗಿ ಮತ್ತು ಹಿಂಸಾತ್ಮಕ ಕಾರ್ಯಗಳಿಗಾಗಿ ಅವರನ್ನು ಉಪಯೋಗಿಸಿಕೊಳ್ಳಬಹುದು; ಆದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.

೪. ಮೈತೇಯಿ ಸಮಾಜವು ಭಯೋತ್ಪಾದಕ ಸಂಘಟನೆಗಳ ಮೇಲಿನ ನಿರ್ಬಂಧವನ್ನು ಸ್ವೀಕರಿಸದಿರುವುದು ಮತ್ತು ಸರಕಾರದ ನಿಲುವು !

ಮೇ ೩ ರಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕೀ ಸಮುದಾಯಗಳಲ್ಲಿ ಕೋಮುಗಲಭೆ ಭುಗಿಲೆದ್ದಿತ್ತು. ಪ್ರತ್ಯೇಕತಾವಾದಿ, ವಿಧ್ವಂಸಕ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ಕಾರ್ಯಗಳಿಗೆ ಕಡಿವಾಣ ಹಾಕಲು ಈ ನಿರ್ಬಂಧ ಆವಶ್ಯಕವಾಗಿದೆ. ದೇಶದ ಸಾರ್ವಭೌಮತೆ ಮತ್ತು ಅಖಂಡತೆಗೆ ಧಕ್ಕೆ ತರುವ ಭಯೋತ್ಪಾದಕ ಸಂಘಟನೆಗಳ ಮೇಲೆ ನಿರ್ಬಂಧ ಹೇರುವುದು ಸರಕಾರದ ನಿಲುವಾಗಿದೆ; ಆದರೆ ಮೈತೇಯಿ ಸಮಾಜವು ಈ ನಿರ್ಬಂಧವನ್ನು ಖಂಡಿಸಿದ್ದು ‘ಅದು ಅನ್ಯಾಯಕಾರಿ’ ಮತ್ತು ‘ಭೇದಭಾವ ಮಾಡುವುದಾಗಿದೆ’, ಎಂದು ಆರೋಪಿಸಿದೆ; ಏಕೆಂದರೆ ಮೈತೇಯಿ ಮತ್ತು ಕುಕೀ ಇವರ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಸಂಘರ್ಷದಲ್ಲಿ ಮೈತೇಯಿ ಜನರು ಮೈತೇಯಿ ಬಂಡುಕೋರ ಗುಂಪುಗಳನ್ನು ತಮ್ಮ ರಕ್ಷಕರೆಂದು ನಂಬುತ್ತಾರೆ; ಆದರೆ ಈ ಸಂಸ್ಥೆಗಳು ನಿಜವಾಗಿಯೂ ಮೈತೇಯಿಗಳ ರಕ್ಷಕರಲ್ಲ, ಮತ್ತೆ ಅವು ದೇಶದ ಶತ್ರುಗಳಾಗಿವೆ. ಅಮಾಯಕ ನಾಗರಿಕರನ್ನು ಮತ್ತು ಸಂಪತ್ತನ್ನು ರಕ್ಷಿಸಲು ಮತ್ತು ಈ ಸಂಘಟನೆಗಳು ಹಿಂಸಾತ್ಮಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದ ಕಾರಣ ನಿರ್ಬಂಧ ಹೇರಲಾಗಿದೆ. ಇದರ ಜೊತೆಗೆ ಈ ರೀತಿಯ ಕೃತ್ಯಗಳನ್ನು ಇನ್ನಿತರ ಯಾವುದೇ ಸಂಘಟನೆಗಳು ಮಾಡುತ್ತಿದ್ದರೂ, ಅವುಗಳ ವಿರುದ್ಧವೂ ಇದೇ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು.

– ಬ್ರಿಗೇಡಿಯರ್‌ ಹೇಮಂತ ಮಹಾಜನ (ನಿವೃತ್ತ), ಪುಣೆ. (೧.೧೨.೨೦೨೩)