ನಿರ್ದಿಷ್ಟವಾಗಿ ಯಾವ ಕಾರಣದಿಂದ ತಲೆನೋವು ಬರುತ್ತದೆ ?

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

ತಲೆನೋವು ಬಂದರೆ, ತಕ್ಷಣ ಮಾತ್ರೆಯನ್ನು ತೆಗೆದುಕೊಂಡು ತಾತ್ಕಾಲಿಕವಾಗಿ ಅದನ್ನು ಕಡಿಮೆ ಮಾಡಲಾಗುತ್ತದೆ. ಅನೇಕ ರೋಗಿಗಳಲ್ಲಿ ತಲೆನೋವು ತಾತ್ಕಾಲಿಕವಾಗಿ ಕಡಿಮೆಯಾಗಿದ್ದರೂ ಪುನಃ ಪುನಃ ಬರುತ್ತದೆ. ತಲೆ ನೋವಿನ ಮೂಲ ಕಾರಣವನ್ನು ಗಮನಿಸದೇ ಕೇವಲ ತಲೆನೋವು ಕಡಿಮೆಯಾಗಲು ಔಷಧಿಗಳನ್ನು ತೆಗೆದುಕೊಳ್ಳುವುದು ಯೋಗ್ಯವಲ್ಲ. ಅನೇಕ ಜನರಿಗೆ ನಾವು ಊಟ-ತಿಂಡಿಯಲ್ಲಿ ಏನು ತಪ್ಪು ಮಾಡಿದ್ದೇವೆ ಮತ್ತು ಯಾವ ಕಾರಣದಿಂದ ತಲೆ ನೋಯುತ್ತಿದೆ ? ಎಂಬುದು ಗಮನಕ್ಕೆ ಬರುತ್ತದೆ, ಉದಾ. ಪಿತ್ತ ಹೆಚ್ಚಾಗುವ ಪದಾರ್ಥಗಳನ್ನು ತಿಂದಿದ್ದರಿಂದ, ಜಾಗರಣೆ ಮಾಡಿದ್ದರಿಂದ ಇತ್ಯಾದಿ. ಈ ರೀತಿ ದಿನಚರಿಯಲ್ಲಿ ಏನಾದರೂ ತಪ್ಪು ಕೃತಿಗಳಾದರೆ, ತಲೆನೋವು ಉದ್ಭವಿಸುತ್ತದೆ; ಮೇಲಿಂದಮೇಲೆ ನಮ್ಮ ಆಹಾರ ವಿಹಾರದಲ್ಲಿ ತಪ್ಪುಗಳಾಗುತ್ತಿರುವಾಗ, ತಲೆನೋವು ಆಗಾಗ ಬರುತ್ತಿರುತ್ತದೆ. ಕೆಲವರಲ್ಲಿ ಇತರ ರೋಗಗಳ ಲಕ್ಷಣವೆಂದೂ ತಲೆನೋವು ಬರುತ್ತದೆ.

ಈ ವಾರ ನಾವು ಇಂದು ತಲೆನೋವಿಗೆ ಯಾವೆಲ್ಲ ಕಾರಣಗಳಿವೆ ? ಎಂಬುದನ್ನು ತಿಳಿದುಕೊಳ್ಳಲಿದ್ದೇವೆ. ಇದರಿಂದ ನಮ್ಮ ತಲೆ ನೋವು ನಿರ್ದಿಷ್ಟವಾಗಿ ಯಾವ ಕಾರಣದಿಂದ ಬರುತ್ತದೆ, ಎಂಬುದರ ಬಗ್ಗೆ ನಾವು ಅಧ್ಯಯನ ಮಾಡಬಹುದು. ಇದರಿಂದ ತಕ್ಷಣ ತಲೆ ನೋವಿನ ಮಾತ್ರೆಯನ್ನು ತೆಗೆದುಕೊಳ್ಳದೇ ಅದರ ಮೂಲಕ್ಕೆ ಹೋಗಿ ಉಪಾಯಯೋಜನೆಯನ್ನು ಹುಡುಕಲು ಪ್ರಯತ್ನವಾಗುವುದು.

ತಲೆನೋವಿನ ಮೂಲ ಕಾರಣವನ್ನು ಗಮನದಲ್ಲಿಡದೇ ಕೇವಲ ತಲೆನೋವು ಕಡಿಮೆಯಾಗಲು ಔಷಧಿ ತೆಗೆದು ಕೊಳ್ಳುವುದು ಯೋಗ್ಯವಲ್ಲ !

೧. ಶಾರೀರಿಕ ಕಾರಣಗಳು

ಅ. ಮೆದುಳಿನ ವಿವಿಧ ರೋಗಗಳಲ್ಲಿ, ಉದಾ. ಮೆದುಳಿನಲ್ಲಿ ಎಲ್ಲಿಯಾದರೂ ಗಂಟಾಗಿದ್ದರೆ ಅಥವಾ ಮೆದುಳಿನ ಸುತ್ತಲಿರುವ ಆವರಣಕ್ಕೆ ಬಾವು ಬಂದಿದ್ದರೂ, ತಲೆ ನೋಯುತ್ತದೆ. ತಲೆಗೆ ಪೆಟ್ಟು ಬಿದ್ದು ಮೆದುಳಿನಲ್ಲಿ ರಕ್ತಸ್ರಾವ ಆಗಿದ್ದರೂ, ತಲೆನೋವಾಗುತ್ತದೆ.
ಆ. ಕುತ್ತಿಗೆಯ ಕಶೇರುಖಂಡಗಳ ರಚನೆಯಲ್ಲಿ ಅಡಚಣೆ ಉಂಟಾಗಿದ್ದರೆ ತಲೆನೋಯುತ್ತದೆ.
ಇ. ಹಲ್ಲು ಅಥವಾ ಕಿವಿಯ ನೋವಿನ ಪರಿಣಾಮದಿಂದಲೂ ತಲೆನೋಯುತ್ತದೆ.
ಈ. ವಾಂತಿ ಅಥವಾ ಭೇದಿಯಾಗುವುದು ಮತ್ತು ರಕ್ತಸ್ರಾವ ಆಗುವುದು, ಇದರಿಂದ ಶರೀರದಲ್ಲಿನ ನೀರಿನ ಮಟ್ಟ ಕಡಿಮೆಯಾಗುವುದು ಇತ್ಯಾದಿಗಳಿಂದ ತಲೆನೋವು ಬರಬಹುದು.
ಉ. ರಕ್ತದೊತ್ತಡ ಹೆಚ್ಚಾದರೆ, ಮೂತ್ರಪಿಂಡಗಳ ವಿವಿಧ ಕಾಯಿಲೆಗಳು, ರಕ್ತದಲ್ಲಿನ ಸಕ್ಕರೆ ಕಡಿಮೆ ಅಥವಾ ಹೆಚ್ಚಾಗುವುದು, ಪಚನಕ್ರಿಯೆ ಕೆಟ್ಟು ಹೋಗಿದ್ದರೆ ತಲೆನೋವು ಬರುತ್ತದೆ.
ಊ. ಸರಾಯಿಯ ವ್ಯಸನವಿದ್ದಲ್ಲಿ ಒಂದು ವೇಳೆ ಸರಾಯಿ ಸಿಗದಿದ್ದರೆ ಅಥವಾ ಸಮಯಕ್ಕೆ ಸರಿಯಾಗಿ ಚಹಾ ಅಥವಾ ಕಾಫಿ ಸಿಗದಿದ್ದರೂ ತಲೆನೋಯುತ್ತದೆ.
ಎ. ಕಣ್ಣುಗಳ ಮೇಲೆ ಒತ್ತಡ ಬರುತ್ತಿದ್ದರೆ ತಲೆಯ ಹಿಂದಿನ ಬದಿ ನೋಯಿಸುತ್ತದೆ. ಕನ್ನಡಕದ ನಂಬರ (ಸಂಖ್ಯೆ) ಇದ್ದೂ ಕನ್ನಡಕವನ್ನು ಹಾಕಿಕೊಳ್ಳದಿದ್ದರೂ ತಲೆನೋಯುತ್ತದೆ.
ಐ. ವಿವಿಧ ಔಷಧಿಗಳ ಪರಿಣಾಮಗಳಿಂದಲೂ ತಲೆನೋವು ಬರುತ್ತದೆ.
ಓ. ಮಲ, ಮೂತ್ರ, ಸೀನು, ಆಕಳಿಕೆ ಮತ್ತು ದುಃಖವನ್ನು ತಡೆಹಿಡಿದರೆ ತಲೆನೋಯುತ್ತದೆ.
ಔ. ಮಧ್ಯಾಹ್ನ ಹೆಚ್ಚು ನಿದ್ರೆ ಅಥವಾ ರಾತ್ರಿ ಜಾಗರಣೆ ಮಾಡಿದರೆ ತಲೆ ನೋಯುತ್ತದೆ.
ಅಂ. ಬಹಳ ಶ್ರಮ, ಬಹಳ ಪ್ರವಾಸ, ಬಹಳಷ್ಟು ಮಾತನಾಡುವುದರಿಂದಲೂ ತಲೆ ನೋಯುತ್ತದೆ.
ಕ. ಹೊಗೆಯ ವಾತಾವರಣದಲ್ಲಿ, ತಂಪುಗಾಳಿಯಲ್ಲಿ ಅಥವಾ ಬಿಸಿಲಿನಲ್ಲಿ ಬಹಳಷ್ಟು ಓಡಾಡುವುದು.
ಖ. ಕರ್ಕಶ ಧ್ವನಿಯನ್ನು ಕೇಳುವುದು, ರಾತ್ರಿಯಿಡಿ ಟಿ.ವಿ. ನೋಡುವುದು ಇತ್ಯಾದಿ.
ಗ. ಅಪಚನ, ಹೆಚ್ಚು ಊಟ ಮಾಡುವುದು, ಎಣ್ಣೆಯಲ್ಲಿ ಕರಿದ, ಖಾರ, ಉಪ್ಪು, ಹುಳಿ ಪದಾರ್ಥಗಳನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನುವುದು.
ಘ. ಮೈಗ್ರೇನ್‌ (ವಾಂತಿ ಬಂದಂತಾಗಿ ತಲೆ ತಿರುಗುವುದು ಜೊತೆಗೆ ತಲೆ ನೋಯುವುದು.)

೨. ಮಾನಸಿಕ ಕಾರಣಗಳು

ಕಾಳಜಿ ಮಾಡುವುದು, ಭಯ ಪಡುವುದು, ಸಿಟ್ಟು ಬರುವುದು ಮತ್ತು ದುಃಖವಾಗುವುದು ಇವು ತಲೆನೋವಿನ ಮಾನಸಿಕ ಕಾರಣಗಳಾಗಿವೆ. ನಮ್ಮ ಮನಸ್ಸಿನಲ್ಲಿನ ವಿಚಾರಗಳಿಂದ ನಮ್ಮ ದೇಹದ ಮೇಲೆ ಪರಿಣಾಮವಾಗುತ್ತಿರುತ್ತದೆ, ಎಂಬುದನ್ನು ನಾವು ಈ ಮೊದಲೇ ನೋಡಿದ್ದೇವೆ.

೩. ಮೇಲಿಂದಮೇಲೆ ಬರುವ ತಲೆನೋವಿಗೆ ವೈದ್ಯರ ಸಲಹೆ ಮಹತ್ವದ್ದಾಗಿದೆ !

ತಲೆನೋವಿಗಾಗಿ ಮೇಲಿನಂತೆ ಅನೇಕ ಕಾರಣಗಳಿರುತ್ತವೆ. ನಮ್ಮ ತಲೆನೋವಿನ ನಿರ್ದಿಷ್ಟ ಕಾರಣವನ್ನು ಹುಡುಕುವುದೂ ಒಂದು ತಲೆನೋವೇ ಆಗಿದೆ. ಯಾವಾಗಲಾದರೊಮ್ಮೆ ಬರುವ ತಲೆನೋವಿದ್ದರೆ ಅದಕ್ಕೆ ಮನೆಮದ್ದನ್ನು ಮಾಡಬಹುದು. ಅನೇಕ ಜನರು ‘ಪ್ಯಾರಾಸಿಟಾಮಲ್‌’ನಂತಹ ಮಾತ್ರೆಗಳನ್ನೇ ತೆಗೆದುಕೊಳ್ಳುತ್ತಾರೆ; ಆದರೆ ಗಂಭೀರ ತಲೆನೋವು ಇದ್ದರೆ ಅದನ್ನು ದುರ್ಲಕ್ಷ ಮಾಡದೇ ವೈದ್ಯರ ಸಲಹೆಯಿಂದ ವಿವಿಧ ಪರೀಕ್ಷೆ ಮತ್ತು ಔಷಧೋಪಚಾರವನ್ನು ಮಾಡಬೇಕು. ತೀವ್ರ ಸ್ವರೂಪದ ಮತ್ತು ಮೇಲಿಂದ ಮೇಲೆ ಬರುವ ತಲೆನೋವಿಗೆ ಮನಸ್ಸಿಗೆ ತೋಚಿದ ಔಷಧೋಪಚಾರ ವನ್ನು ಮಾಡಬಾರದು.

೪. ತಲೆನೋವು ಬರದಿರಲು ನಮ್ಮ ದಿನಚರಿಯಲ್ಲಿ ಹೇಗೆ ಬದಲಾವಣೆ ಮಾಡಬೇಕು ?

ತಲೆನೋವು ಬರದಿರಲು ನಮ್ಮ ದಿನಚರಿಯಲ್ಲಿ ಬದಲಾವಣೆ ಮಾಡಬೇಕು ಅಥವಾ ಹೇಗೆ ಕಾಳಜಿ ವಹಿಸ ಬೇಕು, ಎಂಬುದನ್ನು ಈಗ ತಿಳಿದುಕೊಳ್ಳೋಣ.

ಅ. ತಂಪು ಗಾಳಿ ಮತ್ತು ತೀವ್ರ ಬಿಸಿಲಿನ ನೇರ ಸಂಪರ್ಕವನ್ನು ತಡೆಯಲು ಹೊರಗೆ ಹೋಗುವಾಗ ತಲೆಗೆ ಕರವಸ್ತ್ರವನ್ನು (ಬಟ್ಟೆಯನ್ನು) ಕಟ್ಟುವುದು ಮತ್ತು ಕಿವಿಯಲ್ಲಿ ಹತ್ತಿಯನ್ನು ಇಟ್ಟುಕೊಳ್ಳುವುದು, ಇಂತಹ ಕಾಳಜಿಯನ್ನು ಆವಶ್ಯಕ ತೆಗೆದುಕೊಳ್ಳಬೇಕು.
ಆ. ನಿಯಮಿತವಾಗಿ ತಲೆಗೆ ಎಣ್ಣೆಯನ್ನು ಹಚ್ಚಬೇಕು. ಎರಡೂ ಮೂಗಿನ ಹೊಳ್ಳೆಗಳಲ್ಲಿ ದೇಶಿ ಹಸುವಿನ ತುಪ್ಪವನ್ನು ೨-೨ ಹನಿ ಹಾಕಬೇಕು. ನಿದ್ರೆ ಬರದಿದ್ದರೆ ರಾತ್ರಿ ಮಲಗುವಾಗ ಅಂಗಾಲುಗಳಿಗೂ ಎಣ್ಣೆಯನ್ನು ಹಚ್ಚಿ ಉಜ್ಜಬೇಕು.
ಇ. ಊಟದ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಈ. ಆಯುರ್ವೇದದಲ್ಲಿ ತಲೆನೋವು ನಿರ್ದಿಷ್ಟವಾಗಿ ಯಾವ ದೋಷದಿಂದ ಬರುತ್ತದೆ ? (ವಾತ, ಪಿತ್ತ, ಕಫ) ಇದನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿರುತ್ತದೆ ಮತ್ತು ಅದರಂತೆ ಊಟ-ತಿಂಡಿಯಲ್ಲಿ ಬದಲಾವಣೆಯನ್ನು ಮಾಡಲು ಸೂಚಿಸಲಾಗುತ್ತದೆ. ವಾತದಿಂದ ತಲೆನೋವು ಇದ್ದರೆ, ಅದರಂತೆ ಆಹಾರದಲ್ಲಿ ಹಾಲು, ತುಪ್ಪ, ಬೆಣ್ಣೆ ಇಂತಹ ಸ್ನಿಗ್ಧ ಪದಾರ್ಥಗಳಿರಬೇಕು. ತಂಗಳು ಮತ್ತು ಒಣ ಅನ್ನವನ್ನು ತಿನ್ನಬಾರದು. ತಾಜಾ ಮತ್ತು ಬಿಸಿ ಊಟವನ್ನು ಮಾಡಬೇಕು. ಮಲ-ಮೂತ್ರ ಬಂದಲ್ಲಿ ಅದನ್ನು ತಡೆಹಿಡಿಯಬಾರದು. ಇದರಿಂದ ವಾತದ ಗತಿಯಲ್ಲಿ ತೊಂದರೆ ಉಂಟಾಗಿ ಅನೇಕ ರೋಗಗಳಾಗುತ್ತವೆ.
ಉ. ಪಿತ್ತದ ದೋಷದಿಂದ ತಲೆನೋವು ಬರುತ್ತಿದ್ದರೆ, ಎಣ್ಣೆಯ ಪದಾರ್ಥ, ಮಸಾಲೆ ಪದಾರ್ಥ ಮತ್ತು ಹುಳಿ ಪದಾರ್ಥಗಳನ್ನು ತಿನ್ನಬಾರದು, ಹಾಗೆಯೇ ಸಿಟ್ಟು ಬರುವುದು ಈ ದೋಷವನ್ನೂ ಕಡಿಮೆಮಾಡಲು ಪ್ರಯತ್ನಿಸಬೇಕು.
ಊ. ಮನಸ್ಸಿನಲ್ಲಿನ ದುಃಖವನ್ನು ಮನಸ್ಸಿನಲ್ಲಿ ಇಡುವುದರಿಂದ ಮತ್ತು ಅತೀ ವಿಚಾರಗಳಿಂದಲೂ ತಲೆನೋವು ಬರುತ್ತದೆ. ಇಂತಹ ಸಮಯದಲ್ಲಿ ಯೋಗ್ಯ ತಜ್ಞರ ಮಾರ್ಗದರ್ಶನವನ್ನು ಪಡೆಯುವುದು, ಮನಮುಕ್ತತೆಯಿಂದ ಮಾತನಾಡುವುದು ಆವಶ್ಯಕವಾಗಿದೆ. ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯ ಲಾಭವು ನಮಗೆ ಇಲ್ಲಿ ಕಂಡುಬರುತ್ತದೆ.
ಎ. ಆಯುರ್ವೇದದಲ್ಲಿ ತಲೆನೋವಿನ ಸ್ವರೂಪಕ್ಕನುಸಾರ ವಿರೇಚನ, ಶಿರೋಧಾರಾ, ನಸ್ಯ, ರಕ್ತಮೋಕ್ಷಣಗಳಂತಹ ವಿವಿಧ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ವೈದ್ಯರ ಸಲಹೆಯಿಂದ ಈ ಚಿಕಿತ್ಸೆಗಳನ್ನು ಅವಶ್ಯ ಮಾಡಿಸಿಕೊಳ್ಳಬೇಕು.

– ವೈದ್ಯೆ (ಸೌ.) ಮುಕ್ತಾ ಲೊಟಲೀಕರ, ಪುಣೆ. (೨೦.೧೧.೨೦೨೩)