ಭಾರತದ್ವೇಷಿ ಹಾಗೂ ಆತ್ಮಘಾತಕ ಅಮೇರಿಕಾ !

ಖಲಿಸ್ತಾನಿ ಭಯೋತ್ಪಾದಕರು ಭಾರತವನ್ನು ತುಂಡರಿಸಿ ‘ಖಲಿಸ್ತಾನ’ ನಿರ್ಮಿಸಲು ಜಾಗತಿಕ ಸ್ತರದಲ್ಲಿ ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಕೆನಡಾ, ಅಮೇರಿಕಾ, ಬ್ರಿಟನ್‌ ಮತ್ತು ಆಸ್ಟ್ರೇಲಿಯಾ ಈ ದೇಶಗಳು ಸೇರಿದ್ದು ಖಲಿಸ್ತಾನಿಗಳಿಗೆ ಪಾಕಿಸ್ತಾನದ ‘ಐ.ಎಸ್‌.ಐ.’ಯ ರಹಸ್ಯ ಬೆಂಬಲ ಇದೆಯೆಂಬ ಸತ್ಯ ಬಯಲಾಗಿದೆ. ಜೂನ್‌ ೨೦೨೩ರಲ್ಲಿ ಕೆನಡಾದ ನಾಗರಿಕ ಹಾಗೂ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರನ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್‌ ಟ್ರುಡೋ ಇವರು ಸಪ್ಟೆಂಬರ್‌ದಲ್ಲಿ ಆರೋಪಿಸಿದ್ದರು. ಹೀಗಿರುವಾಗ ಕೆನಡಾದ ಮಿತ್ರ ಅಮೇರಿಕಾ ಈಗ ಅಲ್ಲಿನ ಒಬ್ಬ ಖಲಿಸ್ತಾನಿಯ ಹತ್ಯೆಯ ಒಳಸಂಚನ್ನು ನಿಷ್ಫಲಗೊಳಿಸಿರುವುದಾಗಿ ಹೇಳಿಕೊಂಡಿದೆ. ಅದು ಈ ವಿಷಯದಲ್ಲಿ ಆರೋಪಪತ್ರ ದಾಖಲಿಸಿದ್ದು ಅದರಲ್ಲಿ ನೇರವಾಗಿ ಭಾರತವನ್ನು ಸಿಲುಕಿಸಿದೆ. ಈ ಪ್ರಸಂಗದಲ್ಲಿ ಭಾರತವು ಮುತ್ಸದ್ದಿತನದಿಂದ ಈ ವಿಷಯದಲ್ಲಿ ಉನ್ನತಮಟ್ಟದ ತನಿಖಾ ಸಮಿತಿಯನ್ನು ಸ್ಥಾಪಿಸಿದ್ದು ‘ಈ ವಿಷಯದಲ್ಲಿ ತನಿಖೆ ಮಾಡುವೆವು’, ಎಂದು ಹೇಳಿದೆ.

ಈ ಭಯೋತ್ಪಾದಕನ ಹೆಸರು ಗುರಪತವಂತ ಸಿಂಹ ಪನ್ನು ! ಅವನು ‘ಸಿಕ್ಖ ಫಾರ್‌ ಜಸ್ಟೀಸ್’ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾಗಿದ್ದಾನೆ ! ಅವನು ಭಾರತದ ವಿರುದ್ಧ ಸತತ ವಿಷಕಾರುತ್ತಿದ್ದು ಸಿಕ್ಖರನ್ನು ಉದ್ರೇಕಿಸಿ ಖಲಿಸ್ತಾನದ ನಿರ್ಮಾಣಕ್ಕಾಗಿ ನೀರುಗೊಬ್ಬರ ಹಾಕುತ್ತಿದ್ದಾನೆ. ೨೦೨೦ ನೇ ಇಸ್ವಿಯಲ್ಲಿ ಭಾರತ ಸರಕಾರ ಸಿದ್ಧಪಡಿಸಿದ ೩ ಕೃಷಿ ಕಾನೂನುಗಳ ವಿರುದ್ಧದ ರಾಜಧಾನಿ ದೆಹಲಿಯ ಆಂದೋಲನದಲ್ಲಿ ಖಲಿಸ್ತಾನಿ ಶಕ್ತಿಯೂ ನುಸುಳಿಕೊಂಡಿತ್ತು. ಅದರಲ್ಲಿನ ಒಂದು ಮುಖ್ಯ ಹೆಸರು ಪನ್ನೂ ಆಗಿತ್ತು ! ಇತ್ತೀಚೆಗೆ ಅಂದರೆ ಕಳೆದ ತಿಂಗಳು ನವೆಂಬರ್‌ ೧೯ ರಂದು ಈ ಪನ್ನೂ ದೆಹಲಿಯಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಬೇಕೆಂದು ಬೆದರಿಕೆ ಹಾಕಿದ್ದನು. ಆ ದಿನ ಕೆಲವು ಖಲಿಸ್ತಾನಿಗಳು ವಿಮಾನನಿಲ್ದಾಣದ ಹೊರಗೆ ಪ್ರತಿಭಟನೆ ನಡೆಸಿದರು. ಭಾರತ ಮೂಲದ ಈ ಪನ್ನೂ ಅಮೇರಿಕಾ ಮತ್ತು ಕೆನಡಾ ಇವೆರಡೂ ದೇಶಗಳ ಪೌರತ್ವ ಹೊಂದಿದ್ದಾನೆ. ಪನ್ನೂವನ್ನು ಬಂಧಿಸಿ ಅವನನ್ನು ಭಾರತಕ್ಕೆ ಒಪ್ಪಿಸಬೇಕೆಂದು ಭಾರತವು ಅನೇಕ ಬಾರಿ ಅಮೇರಿಕಾಗೆ ವಿನಂತಿಸಿದೆ; ಆದರೆ ಅಮೇರಿಕಾ ಅದನ್ನು ದುರ್ಲಕ್ಷಿಸುತ್ತಾ ಬಂದಿದೆ. ಇದರ ಹಿಂದೆ ಅದು ಏನೇ ಕಾರಣ ಹೇಳಿದರೂ ವಾಸ್ತವದಲ್ಲಿ ಇದು ಸಾರ್ವಭೌಮ ಭಾರತದ ಅವಮಾನವಾಗಿದೆ. ಭಾರತದ ಅಖಂಡತೆಗೆ ಆಘಾತ ಮಾಡುತ್ತಿರುವ ಈ ಖಲಿಸ್ತಾನಿಗಳನ್ನು ಬೆಂಬಲಿಸುವ ಹೀನ ಪ್ರಯತ್ನ ಮಾಡುವ ಅಮೇರಿಕಾ ಮತ್ತು ಕೆನಡಾದಂತಹ ದೇಶಗಳು ಭಾರತದ ಮಿತ್ರರಾಗಲು ಸಾಧ್ಯವಾಗದಿರಲು ಇದೇ ಕಾರಣ. ಈ ಆರೋಪಪತ್ರ ಅದರ ಇನ್ನೊಂದು ಸಾಕ್ಷಿಯಾಗಿದೆ !

ಆರೋಪಪತ್ರದಲ್ಲಿನ ಮೋಸಗಾರಿಕೆ

ಪನ್ನೂವಿನ ವಿರುದ್ಧ ಹತ್ಯೆಯ ಒಳಸಂಚು ರೂಪಿಸಿದ್ದಕ್ಕಾಗಿ ದಾಖಲಿಸಿದ ಆರೋಪಪತ್ರದ ಮೇಲೆ ದೃಷ್ಟಿ ಹಾಯಿಸಿದರೆ ಅದರಲ್ಲಿ ಸಾಕಷ್ಟು ರಹಸ್ಯ ಅಡಗಿದೆ. ಹೇಗಾದರೂ ಮಾಡಿ ಭಾರತವನ್ನು ಸಿಲುಕಿಸಲು ಚಾತುರ್ಯದಿಂದ ಪ್ರಯತ್ನಿಸಲಾಗಿದೆ. ಪನ್ನೂವಿನ ಹತ್ಯೆಗೆ ಮಾಜಿ ಭಾರತೀಯ ಅಧಿಕಾರಿಯಾಗಿದ್ದ ಹಾಗೂ ಸದ್ಯ ಅಮೇರಿಕಾದಲ್ಲಿ ನೆಲೆಸಿರುವ ನಿಖಿಲ ಗುಪ್ತಾ ಎಂಬ ಯಾರೋ ಒಬ್ಬ ವ್ಯಕ್ತಿಯು ಅಮೇರಿಕಾದ ನಾಗರಿಕನಿಗೆ ‘ಮರ್ಡರ್‌ ಫಾರ್‌ ಹಾಯರ ಪ್ಲಾಟ್’ ಅಂದರೆ ಕೊಲೆ ಮಾಡಲು ಸುಪಾರಿ ನೀಡಿದ್ದಾನೆ. ಇದರಲ್ಲಿ ಮೋಜಿನ ವಿಷಯವೆಂದರೆ, ಗುಪ್ತಾ ಈತ ಯಾರಿಗೆ ಹತ್ಯೆ ಮಾಡುವ ಹೊಣೆಯನ್ನು ಒಪ್ಪಿಸಿದ್ದನೋ, ಅವನು ಅಮೇರಿಕಾದ ಪ್ರಖ್ಯಾತ ಗುಪ್ತಚರ ಸಂಸ್ಥೆ ‘ಡೀಎ’ ಅಂದರೆ ‘ಡ್ರಗ್‌ ಎನ್ಫೋರ್ಸ್‌ಮೆಂಟ್‌ ಎಡ್ಮಿನಿಸ್ಟ್ರೇಶನ್‌’ನ ದಲಾಲ ಆಗಿದ್ದಾನೆ. ಗುಪ್ತಾ ಓರ್ವ ಭಾರತೀಯ ಅಧಿಕಾರಿಯ ಸಂಪರ್ಕದಲ್ಲಿದ್ದನು ಹಾಗೂ ಅವನ ಆದೇಶಕ್ಕನುಸಾರ ಕೃತಿ ಮಾಡುತ್ತಿದ್ದನಂತೆ ! ಒಂದು ವೇಳೆ ಭಾರತೀಯ ಅಧಿಕಾರಿಗೆ ಅಂದರೆ ಭಾರತ ಸರಕಾರಕ್ಕೆ ಪನ್ನೂವನ್ನು ಹತ್ಯೆ ಮಾಡಲಿಕ್ಕಿರುತ್ತಿದ್ದರೆ, ಅವನು ಗುಪ್ತಾನ ಮೂಲಕ ಈ ತಥಾಕಥಿತ ದಲಾಲನ ಹಿನ್ನೆಲೆಯನ್ನು ತಪಾಸಣೆ ಮಾಡುತ್ತಿರಲಿಲ್ಲವೇ ? ಇದರಲ್ಲಿ ಭಾರತೀಯ ಗುಪ್ತಚರ ಸಂಘಟನೆ ಗುಪ್ತಾನಿಗೆ ಸಹಾಯ ಮಾಡುತ್ತಿತ್ತು. ಇದಕ್ಕೆ ಗುಪ್ತಾನಿಗೆ ಅಮೇರಿಕಾದಲ್ಲಿ ಬೇರೆ ಯಾರೂ ಇಲ್ಲದೆ, ಒಬ್ಬ ಗುಪ್ತಚರನೇ ಹೇಗೆ ಸಿಕ್ಕಿದನು ? ಈಗ ಈ ಗುಪ್ತಾನನ್ನು ೩೦ ಜೂನ್‌ ೨೦೨೩ ರಂದು ಚೆಕ್‌ ರಿಪಬ್ಲಿಕ್‌ನಿಂದ ಅಮೇರಿಕಾ ಬಂಧಿಸಿದೆ, ಎಂದು ಹೇಳಲಾಗುತ್ತಿದೆ. ಜೂನ್‌ ೧೯ ರಂದು ನಿಜ್ಜರನನ್ನು ಬಂಧಿಸಲಾಯಿತು ಹಾಗೂ ಅದೇ ಅವಧಿಯಲ್ಲಿ ಪನ್ನೂವಿನ ಕಥೆ ಕೂಡ ಮುಗಿಸುವುದು ಭಾರತದ ವಿಚಾರವಾಗಿತ್ತು, ಎನ್ನುವ ಆರೋಪವನ್ನೂ ಆರೋಪಪತ್ರದಲ್ಲಿ ಮಾಡಲಾಗಿದೆ. ಇದು ಅತ್ಯಂತ ಚಾತುರ್ಯದಿಂದ ರಚಿಸಿದ ಭಾರತವಿರೋಧಿ ಕಥೆಯಾಗಿದೆ ಹಾಗೂ ಅಮೇರಿಕಾ ಮತ್ತು ಕೆನಡಾ ಇದರ ರೂವಾರಿ ಆಗಿದೆ, ಎಂಬುದು ಶೀಘ್ರದಲ್ಲಿ ಬೆಳಕಿಗೆ ಬರುವುದು.

ನಾವು ಭಾರತದ ಮೇಲಾಗಿರುವ ಈ ಆರೋಪವನ್ನು ಒಂದು ವೇಳೆ ಸತ್ಯವೆಂದು ತಿಳಿದುಕೊಂಡರೂ ಇಲ್ಲಿ ಪ್ರಶ್ನೆಯೆಂದರೆ, ಭಾರತವು ಜಾಗತಿಕ ಸ್ತರದಲ್ಲಿ ಬಲಿಷ್ಠ ರಾಷ್ಟ್ರವಾಗಿರುವ ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಅದರ ನಾಗರಿಕನ ಹತ್ಯೆಯ ಒಳಸಂಚು ರಚಿಸುವುದು ನಿಜವಾಗಿಯೂ ಅಮೇರಿಕಾಗೆ ಮುಖಭಂಗವಾಗಿದೆ. ಆದ್ದರಿಂದಲೇ ಅಮೇರಿಕಾ ರೊಚ್ಚಿಗೆದ್ದಿದೆ ಹಾಗೂ ಅದು ಭಾರತದ ಮೇಲೆ ನೇರವಾಗಿ ಆರೋಪ ಮಾಡಿದೆ, ಎಂದು ಹೇಳುವುದಕ್ಕೂ ಆಸ್ಪದವಿದೆ. ಕೆನಡಾದ ‘ರಾಹುಲ ಗಾಂಧಿ’, ಎಂದು ಪ್ರಸಿದ್ಧನಾಗಿರುವ ಅಲ್ಲಿನ ಪ್ರಧಾನಮಂತ್ರಿ ಜಸ್ಟಿನ್‌ ಟ್ರುಡೋ ಇವರ ಬಗ್ಗೆ ಲೇಖನಿ ಸವೆಸಲು ಈಗ ಸಮಯವಿಲ್ಲ. ಅಮೇರಿಕಾದ ಆರೋಪದಿಂದ ನಾವು ಈ ಮೊದಲು ಮಾಡುತ್ತಿದ್ದ ಬೇಡಿಕೆಗೆ ಪುಷ್ಟಿ ಸಿಕ್ಕಿದೆ, ಎಂದು ಟ್ರುಡೋ ಹೇಳಿದ್ದಾರೆ. ನಿಜ್ಜರನ ಹತ್ಯೆಯ ವಿರುದ್ಧ ಕಳೆದ ೭೫ ದಿನಗಳಲ್ಲಿ ಒಂದೇ ಒಂದು ಸಾಕ್ಷಿಯನ್ನು ಸಲ್ಲಿಸಲು ಸಾಧ್ಯವಾಗದ ಟ್ರುಡೋ ಮಹಾಶಯರ ಈ ಹೇಳಿಕೆಯು ನಾಚಿಕೆಪಡುವಂತಹದ್ದಷ್ಟೇ ಅಲ್ಲ ಅದು ಹಾಸ್ಯಾಸ್ಪದವಾಗಿದೆ.

ಮಾಸ್ಟರ್‌ಸ್ಟ್ರೋಕ್‌ !

ಈಗ ಅಮೇರಿಕಾ ಮಾಡಿದ ಈ ಆರೋಪಗಳ ‘ಟೈಮಿಂಗ್’ ಹೇಗಿದೆ, ಎಂಬುದನ್ನೂ ನೋಡಿರಿ. ಮಧ್ಯಪೂರ್ವದಲ್ಲಿ ಸದ್ಯ ಇಸ್ರೈಲ್‌ ಮತ್ತು ಹಮಾಸದ ಯುದ್ಧವಿರಾಮದ ಅವಧಿಯಲ್ಲಿ ಭಾರತದ ಮೇಲೆ ಆರೋಪ ಮಾಡುವ ಸಂದರ್ಭವನ್ನು ಅಮೇರಿಕಾ ಆರಿಸಿತು. ಹೀಗೆ ಮಾಡಿ ಸಂಪೂರ್ಣ ಜಗತ್ತಿಗೆ ಹೊಸ ವಿಷಯವನ್ನು ಚರ್ಚಿಸುವ ಅವಕಾಶವನ್ನು ಅಮೇರಿಕಾ ನೀಡಿತು. ಅಂದರೆ ಅಂತಾರಾರಾಷ್ಟ್ರೀಯ ರಾಜ ಕಾರಣದಲ್ಲಿ ಭಾರತದ ವಿರುದ್ಧ ಪಾಶ್ಚಾತ್ಯ ಶಕ್ತಿಯನ್ನು ಈ ರೀತಿ ಕೇಂದ್ರೀಕರಿಸಲು ಈಗ ಆರಂಭವಾಗಿರಬಹುದು, ಆದರೆ ಮೋದಿ ಸರಕಾರದ ವಿದೇಶನೀತಿಯ ಸತ್ವಪರೀಕ್ಷೆಯೂ ಈಗ ಬೆಳಕಿಗೆ ಬರಬಹುದು. ಇಂದು ಜಾಗತಿಕ ವರ್ಚಸ್ಸು ಕೇವಲ ಅಮೇರಿಕಾದಲ್ಲಿ ಇರದೆ ವಿವಿಧ ಭೂಭಾಗಗಳಲ್ಲಿ ವಿಭಜಿಸಲ್ಪಟ್ಟಿದೆ. ಅಮೇರಿಕಾದ ಮಹತ್ವವನ್ನು ಕಡಿಮೆಯಾಗಲು ಕೇವಲ ರಷ್ಯಾ ಮಾತ್ರವಲ್ಲ, ಚೀನಾ ಮತ್ತು ಭಾರತವೂ ಕಾರಣವಾಗಿದೆ. ಇದು ಅಮೇರಿಕಾದ ತಲೆನೋವಾಗಿದ್ದು ಈಗ ಭಾರತದ ವಿರುದ್ಧ ಅದು ನೇರವಾಗಿ ದಂಡ ವಿಧಿಸಿರುವುದರಿಂದ ಅದು ಆತ್ಮಾಘಾತ ಮಾಡುತ್ತಿದೆ, ಎಂಬುದನ್ನು ಈಗ ಭಾರತ ಅದಕ್ಕೆ ನಿಶ್ಚಿತವಾಗಿ ತೋರಿಸುವ ಸಮಯ ಬಂದಿದೆ. ಭಾರತ ‘ಮಾಸ್ಟರ್‌ಸ್ಟ್ರೋಕ್’ ಕೊಡಬಹುದೇ ? ಎಂಬುದನ್ನು ಅಮೇರಿಕಾ ಗಮನದಲ್ಲಿಡಬೇಕಷ್ಟೆ !