ಬಹಳಷ್ಟು ಪಾಲಕರು, ‘ನೋಡಿ ಡಾಕ್ಟರ ಇವನು ಹಾಲು ಕುಡಿಯುವುದೇ ಇಲ್ಲ. ಹಾಲು ಕುಡಿಯದಿದ್ದರೆ ಇವನಿಗೆ ‘ಕ್ಯಾಲ್ಸಿಯಮ್’ ಎಲ್ಲಿಂದ ಸಿಗುವುದು ? ಇವನ ಮೂಳೆ ಮತ್ತು ಹಲ್ಲು ಹೇಗೆ ಗಟ್ಟಿಯಾಗುವವು ?’ ಹೀಗೆ ಅಸಂಖ್ಯ ಚಿಂತೆಯ ವಿಚಾರಗಳು ಮತ್ತು ದೂರುಗಳೊಂದಿಗೆ ಬರುತ್ತಾರೆ. ಆರಂಭದಲ್ಲಿ ಮಕ್ಕಳು ಹಾಲು ಕುಡಿಯುತ್ತಾರೆ. ಕಾಲಾಂತರದಲ್ಲಿ ನಿಧಾನವಾಗಿ ಹಾಲು ಕುಡಿಯುವುದನ್ನು ನಿಲ್ಲಿಸುತ್ತಾರೆ. ಇವನು ‘ಸರಿಯಾಗಿ ಊಟ ಮಾಡುವುದಿಲ್ಲ’ ಎಂದೂ ಪಾಲಕರು ದೂರುತ್ತಾರೆ. ಇಂತಹ ಸಮಯದಲ್ಲಿ ‘ಕೆಲವು ದಿನ ಹಾಲನ್ನು ಕೊಡಬೇಡಿರಿ’, ಎಂದು ಪಾಲಕರಿಗೆ ಹೇಳಬೇಕಾಗುತ್ತದೆ. ಏಕೆಂದರೆ, ಮಕ್ಕಳು ಯಾವ ಹಾಲನ್ನು ಕುಡಿಯುತ್ತಿದ್ದಾರೆ ? ಎಷ್ಟು ಹಾಲು ಕುಡಿಯುತ್ತಿದ್ದಾರೆ ? ಹಾಲು ಆ ಮಗುವಿಗೆ ಸರಿಯಾಗಿ ಜೀರ್ಣವಾಗುತ್ತಿದೆಯೇ ? ಇದೆಲ್ಲವನ್ನು ಗಮನಿಸದೆ ಮಕ್ಕಳನ್ನು ಹೊಡೆದು ಬಡಿದು, ಒತ್ತಾಯ ಮಾಡಿ ಹಾಲು ಕುಡಿಸುತ್ತಾರೆ. ಮಕ್ಕಳಿಗೆ ಆ ಹಾಲು ಜೀರ್ಣವಾಗದೆ ಅಜೀರ್ಣವಾಗುತ್ತದೆ. ಆಯುರ್ವೇದಕ್ಕನುಸಾರ ಯಾವುದೇ ಪದಾರ್ಥವನ್ನು ಯೋಗ್ಯ ರೀತಿಯಲ್ಲಿ ಜೀರ್ಣಿಸಲು ನಮ್ಮಿಂದ ಆಗುತ್ತಿದೆ ಎಂದಾದರೆ ನಮ್ಮ ಶರೀರದಲ್ಲಿ ಅದರ ಒಳ್ಳೆಯ ಪರಿಣಾಮಗಳು ಕಂಡುಬರುತ್ತವೆ. ಹಾಲಿಗೂ ಇದೇ ನಿಯಮ ಅನ್ವಯಿಸುತ್ತದೆ. ನಾವು ಯಾವ ಪ್ರದೇಶದಲ್ಲಿ ಇರುತ್ತೇವೆ, ಅಂದರೆ ಶುಷ್ಕವಾತಾವರಣದ ಪ್ರದೇಶ, ಅಥವಾ ಆರ್ದ್ರತಾ ವಾತಾವರಣದ ಪ್ರದೇಶ, ಅದಕ್ಕನುಸಾರ ನಾವು ಎಷ್ಟು ಮತ್ತು ಹೇಗೆ ಹಾಲನ್ನು ತೆಗೆದುಕೊಳ್ಳಬೇಕು ? ಅದನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಇಂದಿನ ಲೇಖದಲ್ಲಿ ನಾವು ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.
೧. ಹಾಲು
ಅ. ಹಾಲಿನ ಗುಣಧರ್ಮ : ಹಾಲು ಸಿಹಿ, ಶಕ್ತಿವರ್ಧಕ, ನಮ್ಮ ಶರೀರದಲ್ಲಿನ ಲೋಹಗಳನ್ನು (ಧಾತುಗಳನ್ನು) ಹೆಚ್ಚಿಸುವ. ವಾತ-ಪಿತ್ತವನ್ನು ಕಡಿಮೆ ಮಾಡುವ, ಆದರೆ ಕಫವನ್ನು ಹೆಚ್ಚಿಸುವ, ಜೀರ್ಣವಾಗಲು ಜಡ ಮತ್ತು ತಂಪಾಗಿದೆ. ಆಕಳ ಹಾಲು ಅತ್ಯಂತ ಶ್ರೇಷ್ಠ ಎಂದು ಹೇಳಲಾಗಿದೆ. ಎಮ್ಮೆಯ ಹಾಲು ಆಕಳ ಹಾಲಿಗಿಂತ ಜೀರ್ಣವಾಗಲು ಹೆಚ್ಚು ಜಡ (ಕಠಿಣ) ಮತ್ತು ತಂಪಾಗಿದೆ. ಆದುದರಿಂದ ದೇಶಿ ಆಕಳಿನ ಹಾಲನ್ನು ಕುಡಿಯಬೇಕು. ಆಕಳ ಹಾಲು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಪೌಷ್ಟಿಕವಾಗಿದೆ.
ಆ. ಶುಷ್ಕವಾತಾವರಣದಲ್ಲಿರುವವರು ಹಾಲನ್ನು ಸಹಜವಾಗಿ ಜೀರ್ಣಿಸಬಲ್ಲರು. ಆರ್ದ್ರ ವಾತಾವರಣದಲ್ಲಿರುವವರು ಹಾಲು ಕುಡಿದರೆ ಜೀರ್ಣವಾಗಲು ಬಹಳ ಸಮಯ ತಗಲುತ್ತದೆ.
ಇ. ಹಾಲು ಕುಡಿದ ಮೇಲೆ ೨-೩ ಗಂಟೆ ಏನೂ ತಿನ್ನಬಾರದು. ಹಾಲಿನ ಜೊತೆಗೆ ಹಣ್ಣುಗಳನ್ನು ತಿನ್ನಬಾರದು.
ಈ. ರಾತ್ರಿಯ ಊಟ ಜೀರ್ಣವಾದ ಮೇಲೆ (ಊಟವಾದ ೨ ಗಂಟೆಗಳ ನಂತರ) ಹಾಲು ಕುಡಿಯಬಹುದು; ಆದರೆ ತಡವಾಗಿ ಊಟ ಮಾಡಿ ಮಲಗುವಾಗ ನಾವು ಹಾಲು ಕುಡಿದರೆ, ಆ ಹಾಲು ಜೀರ್ಣವಾಗುವುದಿಲ್ಲ.
ಉ. ಹಸಿ ಹಾಲನ್ನು ಎಂದಿಗೂ ಬಳಸಬಾರದು. ಅದು ಜೀರ್ಣ ವಾಗಲು ಹೆಚ್ಚು ಜಡವಾಗಿರುತ್ತದೆ. ಸದ್ಯದ ಯುವಕರು ‘ಕೊಲ್ಡ (ತಣ್ಣಗಿನ) ಕಾಫಿ’ ಕುಡಿಯುವುದನ್ನು ನಾವು ನೋಡುತ್ತೇವೆ. ಇದನ್ನು ಹಾಲಿನ ಚೀಲವನ್ನು ಕತ್ತರಿಸಿ, ಹಸಿ ಹಾಲನ್ನು ಮಿಕ್ಸಿಗೆ ಹಾಕಿ ಈ ಕಾಫಿಯನ್ನು ತಯಾರಿಸುತ್ತಾರೆ. ಇಂತಹ ಕಾಫಿಯನ್ನು ಪದೇ ಪದೇ ಕುಡಿದರೆ ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತವೆ.
ಊ. ಹಾಲನ್ನು ಬಹಳ ಕಾಯಿಸಿದರೆ ಜೀರ್ಣವಾಗಲು ಜಡವಾಗುತ್ತದೆ. ಆದುದರಿಂದ ಬಾಸುಂದಿ, ರಬಡಿಯಂತಹ ಸಿಹಿಪದಾರ್ಥಗಳು ಜೀರ್ಣವಾಗಲು ಜಡವಾಗಿರುತ್ತವೆ.
ಎ. ನಮ್ಮ ಮನೆಯ ಹತ್ತಿರದ ಗೊಲ್ಲರಿಂದ ದೇಶಿ ಆಕಳಿನ ಶುದ್ಧ ಹಾಲು ಸಿಗುವ ಹಾಗೆ ನೊಡಿಕೊಳ್ಳಬೇಕು. ಕಲಬೆರಕೆ ಹಾಲಿನಿಂದ ಲಾಭಕ್ಕಿಂತ ಹಾನಿಯೇ ಹೆಚ್ಚಾಗುತ್ತದೆ. ಆಕಳಿನ ಹಾಲು ಸಿಗದಿದ್ದರೆ, ಎಮ್ಮೆಯ ಹಾಲಿನಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಸ್ವಲ್ಪ ಶುಂಠಿ ಮತ್ತು ಅರಿಶಿಣವನ್ನು ಹಾಕಿ ಕುಡಿದರೆ ಅದು ಸರಿಯಾದ ರೀತಿಯಲ್ಲಿ ಜೀರ್ಣವಾಗುತ್ತದೆ.
ಏ. ‘ಬಹಳಷ್ಟು ಹಾಲು ಕುಡಿದರೆ ನಮಗೆ ಬಹಳ ಕ್ಯಾಲ್ಶಿಯಮ್ ಸಿಗುತ್ತದೆ’, ಎಂಬ ತಪ್ಪು ಕಲ್ಪನೆಯನ್ನು ಪಾಲಕರು ತಮ್ಮ ಮನಸ್ಸಿನಿಂದ ತೆಗೆಯಬೇಕು. ಹಾಲು ಶುದ್ಧವಾಗಿದ್ದು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಜೀರ್ಣವಾಗುತ್ತಿದ್ದರೆ, ಮಾತ್ರ ಅದರ ಲಾಭ ಸಿಗುತ್ತದೆ. ಮಕ್ಕಳಿಗೆ ಹಾಲು ಜೀರ್ಣವಾಗದಿದ್ದರೆ, ಕ್ಯಾಲ್ಶಿಯಮ್ ಇರುವ ಇತರ ಪದಾರ್ಥಗಳನ್ನು ತಿನ್ನಲು ಕೊಡಬಹುದು, ಉದಾ. ನುಗ್ಗೇಕಾಯಿ, ರಾಗಿ, ಬಾದಾಮಿ, ಒಣಗಿದ ಅಂಜೂರದ ಹಣ್ಣು, ಎಳ್ಳು ಇತ್ಯಾದಿ.
೨. ಮೊಸರು
ಅ. ಮೊಸರು ಸಹ ಜೀರ್ಣವಾಗಲು ಜಡವಾಗಿರುತ್ತದೆ. ಇದು ಉಷ್ಣಗುಣಧರ್ಮದ್ದಾಗಿದೆ. ಮೊಸರು ಊಟದ ರುಚಿಯನ್ನು ಹೆಚ್ಚಿಸುತ್ತದೆ, ಜೊತೆಗೆ ಕಫ-ಪಿತ್ತವನ್ನೂ ಹೆಚ್ಚಿಸುತ್ತದೆ.
ಆ. ರಾತ್ರಿಯ ಹೊತ್ತು ಎಂದಿಗೂ ಮೊಸರನ್ನು ತಿನ್ನಬಾರದು. ತಿನ್ನುವುದಾದರೆ ಹಗಲು ಹೊತ್ತಿನಲ್ಲಿಯೇ ತಿನ್ನಬೇಕು; ಆದರೆ ವಸಂತ ಋತು, ಬೇಸಿಗೆ ಮತ್ತು ಶರದ್ ಋತುವಿನಲ್ಲಿ ಹಗಲಿನಲ್ಲಿಯೂ ಮೊಸರನ್ನು ತಿನ್ನಬಾರದು.
ಇ. ಮೊಸರನ್ನು ಎಂದಿಗೂ ಬಿಸಿ ಮಾಡಬಾರದು. ಅರ್ಧಮರ್ಧ ಹೆಪ್ಪು ಹಾಕಿದ ಮೊಸರನ್ನೂ ಎಂದಿಗೂ ತಿನ್ನಬಾರದು.
ಈ. ಮೇಲಿನ ನಿಯಮಗಳನ್ನು ಪಾಲಿಸದೇ ಮೊಸರನ್ನು ತಿಂದರೆ ಅದು ವಿವಿಧ ರೀತಿಯ ಚರ್ಮ ರೋಗಗಳನ್ನುಂಟು ಮಾಡುತ್ತದೆ.
೩. ಮಜ್ಜಿಗೆ
ಅ. ಮಜ್ಜಿಗೆ ಜೀರ್ಣವಾಗಲು ಹಗುರವಾಗಿದ್ದು, ವಾತ-ಕಫ ಗಳನ್ನು ಕಡಿಮೆ ಮಾಡಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಆ. ಮೊಸರು ಕಡೆದು ಮಜ್ಜಿಗೆ ಮಾಡುವುದರಿಂದ ಮಜ್ಜಿಗೆಯ ಗುಣಧರ್ಮಗಳು ಮೊಸರಿಗಿಂತಲೂ ಬೇರೆಯಾಗಿರುತ್ತವೆ.
ಇ. ಜೀರ್ಣಕ್ರಿಯೆಯ ತೊಂದರೆಗೆ ಮಜ್ಜಿಗೆಯಲ್ಲಿ ಸ್ವಲ್ಪ ಇಂಗು, ಜೀರಿಗೆ ಪುಡಿ ಮತ್ತು ಸೈಂಧವ ಉಪ್ಪು ಅಥವಾ ಕಪ್ಪುಪ್ಪು ಹಾಕಿ ಕುಡಿದರೆ ಒಳ್ಳೆಯದೆನಿಸುತ್ತದೆ.
೪. ಬೆಣ್ಣೆ
ಅ. ತಾಜಾ ಬೆಣ್ಣೆಯ ಗುಣಧರ್ಮವು ತಂಪಾಗಿದ್ದು, ಅದು ಶಕ್ತಿಯನ್ನು ಕೊಡುವ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುವುದಾಗಿದೆ. ಆಧುನಿಕ ವಿಜ್ಞಾನದ ಪ್ರಕಾರ ಬೆಣ್ಣೆ ಮತ್ತು ತುಪ್ಪದಲ್ಲಿ ಕೊಬ್ಬಿನಾಂಶ ಹೆಚ್ಚಿಗೆ ಇದ್ದರೂ ಯೋಗ್ಯ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಅವು ಹಿತಕರವಾಗಿರುತ್ತವೆ.
ಆ. ಪ್ರತಿದಿನ ಒಂದು ಚಮಚ ಬೆಣ್ಣೆಯನ್ನು ತಿನ್ನುವುದರಿಂದ ಕೈಕಾಲು ಉರಿಯುವುದು, ಪಿತ್ತ ಹೆಚ್ಚಾಗುವುದು ಇಂತಹ ತೊಂದರೆಗಳು ಕಡಿಮೆಯಾಗುತ್ತವೆ. ಹದಿಹರೆಯದ ಮಕ್ಕಳಿಗೆ ಬೆಣ್ಣೆ ಮತ್ತು ಸಕ್ಕರೆ ತಿನ್ನಲು ಕೊಟ್ಟರೆ ಅವರ ತೂಕವು ಯೋಗ್ಯ ಪ್ರಮಾಣದಲ್ಲಿ ಹೆಚ್ಚಾಗಿ ಮೈಕಟ್ಟು ಚೆನ್ನಾಗಿ ಆಗುತ್ತದೆ. ಬೆಣ್ಣೆಯಿಂದ ತೂಕ ಹೆಚ್ಚಾಗಿ ಶರೀರ ಬಲಿಷ್ಠವಾಗುತ್ತದೆ ಮತ್ತು ಮೂಳೆಗಳು ಗಟ್ಟಿಯಾಗುತ್ತವೆ.
ಇ. ಮಾರುಕಟ್ಟೆಯಲ್ಲಿ ಸಿಗುವ ಬೆಣ್ಣೆಯು ಕಲಬೆರಕೆಯಿಂದ ಕೂಡಿರುತ್ತದೆ. ಇಂತಹ ಬೆಣ್ಣೆಯು ಆರೋಗ್ಯಕ್ಕೆ ಅಪಾಯಕಾರಿಯಾಗುತ್ತದೆ ಮತ್ತು ಮಾರುಕಟ್ಟೆಯಲ್ಲಿ ಸಿಗುವ ಬೆಣ್ಣೆಯನ್ನು ಹಾಲು ಕಾಯಿಸದೇ ತೆಗೆದಿರುತ್ತಾರೆ. ಆದುದರಿಂದ ಅದು ಜೀರ್ಣವಾಗಲು ಜಡವಾಗಿರುತ್ತದೆ. ಆದುದರಿಂದ ಮನೆಯಲ್ಲಿ ತೆಗೆದ ತಾಜಾ ಬೆಣ್ಣೆಯನ್ನೇ ಬಳಸಬೇಕು.
ಈ. ಮಾರುಕಟ್ಟೆಯಲ್ಲಿ ಬಟರ್ (ಬೆಣ್ಣೆ) ನ ಹೆಸರಿನಲ್ಲಿ ‘ಮಾರ್ಗರಿನ’ ನಂತಹ (ಒಚಿಡಿಗ್ಚಿಡೀಟಿಎ) ಆರೋಗ್ಯಕ್ಕೆ ಅಪಾಯಕಾರಿ ಪದಾರ್ಥಗಳನ್ನು ಮಾರುತ್ತಾರೆ. ಇದು ಬೆಣ್ಣೆಗಿಂತ ಬಹಳ ಕಡಿಮೆ ಬೆಲೆಗೆ ಸಿಗವುದರಿಂದ ಉಪಾಹಾರಗೃಹಗಳಲ್ಲಿ ಇದನ್ನೇ ಹೆಚ್ಚಾಗಿ ಬಳಸುತ್ತಾರೆ. ಇದರಿಂದ ‘ಕೊಲೆಸ್ಟ್ರಾಲ್’ (ರಕ್ತದ ಒಂದು ಘಟಕ) ಹೆಚ್ಚಾಗುವುದು, ಹೃದ್ರೋಗ ಮತ್ತು ಅರ್ಬುದಂತಹ ಗಂಭೀರ ಕಾಯಿಲೆಗಳಾಗುವ ಸಾಧ್ಯತೆಯಿರುತ್ತದೆ.
ತುಪ್ಪ
ಅ. ಆರೋಗ್ಯದ ದೃಷ್ಟಿಯಿಂದ ತುಪ್ಪ ತುಂಬ ಒಳ್ಳೆಯದು. ಅದು ಬುದ್ಧಿ, ಸ್ಮೃತಿ, ಜೀರ್ಣಕ್ರಿಯೆಯ ಶಕ್ತಿ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ, ಚಿಕ್ಕ ಮಕ್ಕಳಿಗೆ ಮತ್ತು ವೃದ್ಧರಿಗೆ ಶಕ್ತಿಯನ್ನು ಕೊಡುತ್ತದೆ.
ಆ. ಆಧುನಿಕ ದೃಷ್ಟಿಯಲ್ಲಿ ತುಪ್ಪವು ಕೊಬ್ಬಿನಾಂಶದಿಂದ ತುಂಬಿದ್ದರೂ ಸಹ, ಪ್ರತಿದಿನದ ಆಹಾರದಲ್ಲಿ ೨ ಚಮಚ ತುಪ್ಪ ಇರುವುದು ಆರೋಗ್ಯಕರವಾಗಿದೆ.
ಇ. ತುಪ್ಪ ತೆಗೆಯುವ ಅನೇಕ ಪದ್ಧತಿಗಳಿವೆ. ಅವುಗಳಲ್ಲಿ ಹೆಚ್ಚಿನ ಗೃಹಿಣಿಯರು ಕೆನೆಯನ್ನು ಒಟ್ಟುಗೂಡಿಸಿ ಹೆಪ್ಪುಹಾಕಿ ನಂತರ ತುಪ್ಪವನ್ನು ಮಾಡುತ್ತಾರೆ. ೮ ರಿಂದ ೧೫ ದಿನ ಹಾಲಿನ ಕೆನೆಯನ್ನು ತಂಪು ಪೆಟ್ಟಿಗೆ ಯಲ್ಲಿ (ಫ್ರೀಜ್) ಇಡುತ್ತಾರೆ. ಕೆಲವೊಮ್ಮೆ ಅದು ಕಹಿಯಾಗುತ್ತದೆ. ಇಂತಹ ಕೆನೆಯಿಂದ ಮಾಡಿದ ತುಪ್ಪವು ಆರೋಗ್ಯಕ್ಕೆ ಹಿತಕರ ಅಲ್ಲ. ಕೆನೆಗೆ ಮೊದಲೇ ಹೆಪ್ಪು ಹಾಕಿ ಅದರಲ್ಲಿ ಪ್ರತಿದಿನದ ಕೆನೆಯನ್ನು ಹಾಕಬೇಕು. ಹೆಪ್ಪು ಹತ್ತುವುದರಿಂದ ಕೆನೆ ಕೆಡುವುದಿಲ್ಲ ಮತ್ತು ಒಳ್ಳೆಯ ತುಪ್ಪವು ಸಿಗುತ್ತದೆ. ಹೀಗೆ ಪ್ರತಿದಿನ ೨-೩ ಚಮಚ ಮನೆಯಲ್ಲಿ ಮಾಡಿದ ತುಪ್ಪವು ನಮ್ಮ ಆಹಾರದಲ್ಲಿರಬೇಕು.
ಈ. ಕಲಬೆರಕೆಯ ತುಪ್ಪ, ವನಸ್ಪತಿ ತುಪ್ಪ (ಡಾಲ್ಡಾ) ಇವು ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ತುಪ್ಪದಲ್ಲಿ ದೇಶೀ ಆಕಳಿನ ತುಪ್ಪ ಸರ್ವಶ್ರೇಷ್ಠವಾಗಿದೆ.
ಉ. ರಾತ್ರಿ ಮಲಗುವಾಗ ಬೆಚ್ಚನೆಯ ನೀರಿನೊಂದಿಗೆ ಒಂದು ಚಮಚ ಶುದ್ಧತುಪ್ಪವನ್ನು ಸೇವಿಸಿದರೆ ಹೊಟ್ಟೆ ಸ್ವಚ್ಛವಾಗುತ್ತದೆ (ಮಲ ವಿಸರ್ಜನೆ ಚೆನ್ನಾಗಿ ಆಗುತ್ತದೆ).
– ವೈದ್ಯೆ (ಸೌ.) ಮುಕ್ತಾ ಲೋಟಲಿಕರ, ಪುಣೆ. (೩೧.೭.೨೦೨೩)