ಭಗವಾನ ಶ್ರೀಕೃಷ್ಣನು ಭಗವದ್ಗೀತೆಯ ಅಧ್ಯಾಯ ೩, ಶ್ಲೋಕ ೩೫ ರಲ್ಲಿ, ’ಸರಿಯಾಗಿ ಆಚರಿಸಲಾಗುವ ಪರಧರ್ಮ ಕ್ಕಿಂತ ನಮ್ಮ ಧರ್ಮ ಗುಣಹೀನವಾಗಿದ್ದರೂ ಅದು ಶ್ರೇಷ್ಠ. ನಮ್ಮ ಧರ್ಮದಲ್ಲಿನ ಮರಣವೂ ಕಲ್ಯಾಣಕಾರಿಯಾಗಿದೆ, ಪರಧರ್ಮವು ಭೀತಿದಾಯಕವಾಗಿರುತ್ತದೆ’ ಎಂದು ಹೇಳಿದ್ದಾನೆ. ಇದರ ಮೇಲಿನಿಂದ ಇದನ್ನು ’ಮತಾಂತರದ ಬಗ್ಗೆ ಹೇಳಲಾಗಿದೆ ಮತ್ತು ಅದರ ಅರ್ಥ ಸನಾತನ ಧರ್ಮದವರು ಪರಧರ್ಮವನ್ನು ಸ್ವೀಕರಿಸಬಾರದು, ಅದಕ್ಕಿಂತಲೂ ತಮ್ಮ ಧರ್ಮದಲ್ಲಿಯೇ ಸಾಯುವುದು ಹೆಚ್ಚು ಕಲ್ಯಾಣಕಾರಿಯಾಗಿದೆ’, ಹೀಗೆ ಕೆಲವು ಜನರು ತಪ್ಪಾಗಿ ಅರ್ಥೈಸಿಕೊಂಡಿರುವುದು ಕಂಡು ಬರುತ್ತದೆ.
ಭಗವಾನ ಶ್ರೀಕೃಷ್ಣನ ಕಾಲದಲ್ಲಿ ಕೇವಲ ಒಂದೇ ಒಂದು ಧರ್ಮವಿತ್ತು ಅದಕ್ಕೆ ಇಂದು ನಾವು ಸನಾತನ ಧರ್ಮ ಅಥವಾ ವೈದಿಕ ಧರ್ಮ ಅಥವಾ ಹಿಂದೂ ಧರ್ಮ ಎಂದು ಕರೆಯುತ್ತೇವೆ. ಆ ಸಮಯದಲ್ಲಿ ಇತರ ಯಾವುದೇ ಧರ್ಮ ಅಸ್ತಿತ್ವದಲ್ಲಿರಲಿಲ್ಲ; ಆದುದರಿಂದ ಭಗವಾನ ಶ್ರೀಕೃಷ್ಣನು ಯಾವಾಗ ’ಇತರ ಧರ್ಮಗಳ ಬಗ್ಗೆ’ ಮಾತನಾಡುತ್ತಾನೆಯೋ ಆಗ ಅದರ ಅರ್ಥ ಬೇರೆ ಆಗಿದೆ ಎಂಬುದು ಸ್ಪಷ್ಟವಾಗುತ್ತದೆ. ಧರ್ಮ ಈ ವಿಷಯಕ್ಕೆ ಸಂಬಂಧಿಸಿದ ಒಂದು ವಿಸ್ತೃತ ಲೇಖನ ಈ ಹಿಂದೆಯೇ ಸನಾತನ ಪ್ರಭಾತದಲ್ಲಿ ಪ್ರಕಾಶನ ವಾಗಿದೆ, ಆದುದರಿಂದ ಪುನರಾವರ್ತಿಸಬೇಕಾಗಿಲ್ಲ. ಧರ್ಮ ವೆಂದರೆ ಮುಖ್ಯವಾಗಿ ಆಚರಣೆಯ, ನಡವಳಿಕೆಯ ನಿಯಮ. ಇಲ್ಲಿ ಭಗವಾನ ಶ್ರೀಕೃಷ್ಣನು ವರ್ಣಾಶ್ರಮಧರ್ಮದ ಬಗ್ಗೆ ಹೇಳುತ್ತಿದ್ದಾನೆ. ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಈ ನಾಲ್ಕು ವರ್ಣಗಳ ಪೈಕಿ ಪ್ರತಿಯೊಂದು ವರ್ಣದ ಆಚರಣೆ, ಅಂದರೆ ಕರ್ಮವು ಬೇರೆ ಬೇರೆಯಾಗಿರುತ್ತದೆ ಮತ್ತು ಆ ಕರ್ಮದ ಬಗ್ಗೆ ಭಗವಾನ ಶ್ರೀಕೃಷ್ಣನು ಗೀತೆಯ ಅಧ್ಯಾಯ ೧೮, ಶ್ಲೋಕ ೪೨ ರಿಂದ ೪೪ ರಲ್ಲಿ ಹೇಳಿದ್ದಾನೆ. ಅರ್ಜುನನು, ಅಧ್ಯಾಯ ೨ ಶ್ಲೋಕ ೫ ರಲ್ಲಿ ’ಗುರುಜನರನ್ನು ಕೊಲ್ಲುವುದಕ್ಕಿಂತ ಈ ಜಗತ್ತಿನಲ್ಲಿ ಭಿಕ್ಷೆ ಬೇಡಿ ಅನ್ನ ತಿನ್ನುವುದು ಶ್ರೇಯಸ್ಕರವಾಗಿದೆ’, ಎಂದು ಹೇಳುತ್ತಾನೆ. ಅರ್ಜುನನು ಕ್ಷತ್ರೀಯನಾಗಿದ್ದನು. ಭಿಕ್ಷೆ ಬೇಡುವುದು ಕ್ಷತ್ರೀಯರ ಧರ್ಮ ವಲ್ಲ, ಅದು ಬ್ರಾಹ್ಮಣರ ಧರ್ಮವಾಗಿದೆ. ಸಮರ್ಥ ರಾಮದಾಸ ಸ್ವಾಮಿಗಳು ದಾಸಬೋಧದಲ್ಲಿ ’ಬ್ರಾಹ್ಮಣರ ಮುಖ್ಯ ದೀಕ್ಷೆ | ಭಿಕ್ಷೆ ಬೇಡುವುದು | ಎಂದು ೧೪-೨-೧’ ರಲ್ಲಿ ಹೇಳಿದ್ದಾರೆ. ಧರ್ಮಶಾಸ್ತ್ರವು ಸಹ ಏನು ಹೇಳುತ್ತದೆ ಎಂದರೆ ’ಅಧ್ಯಯನ-ಅಧ್ಯಾಪನ, ಯಜನ-ಯಾಜನ, ದಾನ-ಪ್ರತಿಗ್ರಹ’ (ಸ್ವತಃ ಕಲಿಯುವುದು-ಇತರರಿಗೆ ಕಲಿಸುವುದು, ಸ್ವತಃ ಪೂಜೆ, ಯಜ್ಞ ಇತ್ಯಾದಿ ಪೌರೋಹಿತ್ಯವನ್ನು ಮಾಡುವುದು ಮತ್ತು ಇತರರಿಂದ ಪೌರೋಹಿತ್ಯವನ್ನು ಮಾಡಿಸಿಕೊಳ್ಳುವುದು, ದಾನ ಕೊಡುವುದು-ದಾನ ಪಡೆಯುವುದು) ಇದು ಬ್ರಾಹ್ಮಣರ ಕರ್ಮವಾಗಿದೆ. ಅರ್ಜುನನು ಇತರರ ಕೆಲಸವನ್ನು, ಅಂದರೆ ಬ್ರಾಹ್ಮಣರ ವರ್ಣಾಶ್ರಮಧರ್ಮದ ಕೆಲಸವಾದ ಭಿಕ್ಷೆ ಬೇಡಲು ಬಯಸಿದನು. ಈ ರೀತಿ ಇತರರ ಧರ್ಮವನ್ನು ಸ್ವೀಕರಿಸುವುದಕ್ಕಿಂತ ತಮ್ಮ ಧರ್ಮದಲ್ಲಿ (ಯುದ್ಧದಲ್ಲಿ) ಸಾಯುವುದು ಉತ್ತಮ, ಎಂಬುದು ಭಗವಾನ ಶ್ರೀಕೃಷ್ಣನ ಪ್ರತಿಪಾದನೆಯಾಗಿದೆ. ಅರ್ಜುನನು ಅನೇಕ ಕಾರಣಗಳನ್ನು ಹೇಳಿ ಯುದ್ಧದಿಂದ ತಪ್ಪಿಸಿಕೊಳ್ಳುವ ಯುಕ್ತಿಯ ಮಾರ್ಗ ವನ್ನು ಹುಡುಕುತ್ತಿದ್ದನು. ಭಗವಾನ ಶ್ರೀಕೃಷ್ಣನು ’ಕ್ಷತ್ರೀಯರ ಸ್ವಾಭಾವಿಕ ಧರ್ಮ ’ಯುದ್ಧೆ ಚಾಪ್ಯಪಲಾಯನಮ್’ ಅಂದರೆ ಯುದ್ಧದಿಂದ ಪಲಾಯನಗೈಯದಿರುವುದು, (ಭಗವದ್ಗೀತೆ ಅಧ್ಯಾಯ ೧೮, ಶ್ಲೋಕ ೪೩)’ ಎಂದು ಹೇಳಿ ಅದನ್ನು ಪಾಲಿಸುವಂತೆ ಹೇಳುತ್ತಾನೆ. ವರ್ಣಾಶ್ರಮಧರ್ಮಕ್ಕೇ ಗೀತೆಯಲ್ಲಿ ಸ್ವಾಭಾವಿಕ ಕರ್ಮ, ಸಹಜ ಕರ್ಮ, ನಿಯತಕರ್ಮ, ಸ್ವಭಾವ ಕರ್ಮ ಇತ್ಯಾದಿ ಎಂದು ಹೇಳಲಾಗಿದೆ. ಭಗವಾನ ಶ್ರೀಕೃಷ್ಣನು ಅಧ್ಯಾಯ ೧೮ ಶ್ಲೋಕ ೪೭ ರಲ್ಲಿ, ’ಬೇರೆಯವರ ಧರ್ಮದ ಒಳ್ಳೆಯ ಆಚರಣೆಗಿಂತ ತನ್ನ ಸ್ವಧರ್ಮ ಗುಣಹೀನವಾಗಿದ್ದರೂ ಅದು ಶ್ರೇಯಸ್ಕರವಾಗಿದೆ ಎಂದು ಹೇಳಿದ್ದಾನೆ. ’ಸ್ವಭಾವದಿಂದ ನಿಶ್ಚಿತವಾದ ಕರ್ಮ ವನ್ನು ಮಾಡುವಾಗ ಪಾಪ ತಗಲುವುದಿಲ್ಲ’. ಸದ್ಯ ಹಿಂದಿನಂತೆ ವರ್ಣ ಮತ್ತು ಆಶ್ರಮಗಳು ಉಳಿದಿಲ್ಲ, ಆದರೂ ಹೊಸ ವ್ಯವಸ್ಥೆಯಲ್ಲಿಯೂ ಭಗವಾನ ಶ್ರೀಕೃಷ್ಣನ ನಿರೂಪಣೆ ಅನ್ವಯವಾಗುತ್ತದೆ, ಇದು ಉದಾಹರಣೆಗಳಿಂದ ಸ್ಪಷ್ಟವಾಗಬಹುದು. ನ್ಯಾಯಾಧೀಶರು ಅಪರಾಧಿಗೆ ಮೃತ್ಯುದಂಡವನ್ನು ನಿರ್ಧರಿಸು ತ್ತಾರೆ ಮತ್ತು ಗಲ್ಲಿಗೇರಿಸುವವನು ಅವನನ್ನು ಗಲ್ಲಿಗೇರಿಸುತ್ತಾನೆ. ಅವರಿಬ್ಬರಿಗೂ ಹತ್ಯೆಯ ಪಾಪ ತಗಲುವುದಿಲ್ಲ, ಏಕೆಂದರೆ ಅವರು ತಮ್ಮ ಸ್ವಾಭಾವಿಕ ಕರ್ಮಗಳನ್ನು ಮಾಡುತ್ತಿರುತ್ತಾರೆ. ಇನ್ನೊಂದು ಉದಾಹರಣೆ. ಎರಡು ದೇಶಗಳ ಸೈನ್ಯಗಳ ನಡುವೆ ಯುದ್ಧವಾಗುತ್ತದೆ. ಅವರು ಪರಸ್ಪರರ ಸೈನಿಕರನ್ನು ಕೊಲ್ಲುತ್ತಾರೆ, ಆದರೂ ಸೈನಿಕರಿಗೆ ಹತ್ಯೆಯ ಪಾಪ ತಗಲುವುದಿಲ್ಲ, ಏಕೆಂದರೆ ಅವರು ತಮ್ಮ ನಿಗದಿತ ಕರ್ಮವನ್ನು ಮಾಡುತ್ತಿರುತ್ತಾರೆ. ತನ್ನ ಸಂಬಂಧಿಕರನ್ನು ಕೊಂದರೆ ಪಾಪ ತಗಲುವುದು ಎಂಬ ಅರ್ಜುನನ ಆಕ್ಷೇಪಣೆಯನ್ನು ಶ್ರೀಕೃಷ್ಣನು ಕ್ಷಾತ್ರಧರ್ಮದ ಆಧಾರದ ಮೇಲೆ ತಿರಸ್ಕರಿಸಿದ್ದಾನೆ. ಅನಂತ ಆಠವಲೆ ೦೭.೯.೨೦೨೩ || ಶ್ರೀಕೃಷ್ಣಾರ್ಪಣಮಸ್ತು ||