ಸ್ವಾತಂತ್ರ್ಯವೀರ ಸಾವರಕರರು ಭಾರತದ ದೃಷ್ಟಿಕೋನದಿಂದ ಅರಿತುಕೊಂಡಿದ್ದ ಇಸ್ರೈಲ್‌ನ ಮಹತ್ವ !

ಸ್ವಾತಂತ್ರ್ಯವೀರ ಸಾವರಕರ
ಸ್ವಾತಂತ್ರ್ಯವೀರ ಸಾವರಕರರು ಅದ್ವಿತೀಯ ರಾಜಕಾರಣಿ ಮತ್ತು ದಾರ್ಶನಿಕರಾಗಿದ್ದರು. ಅವರು ಮುಂದಿನ ಕಾಲವನ್ನು ಬಹಳ ಮೊದಲೇ ನೋಡಬಲ್ಲವರಾಗಿದ್ದರು. ಅವರು ಸ್ವತಃ, ನನ್ನ ವಿಚಾರಗಳು ನಿಮಗೆ ೫೦ ವರ್ಷಗಳ ನಂತರ ಮನದಟ್ಟಾಗುವವು ಎಂದು ಹೇಳಿದ್ದರು; ಆದರೆ ದುರದೃಷ್ಟವಶಾತ್‌ ಅವರ ವಿಚಾರಗಳು ನಮಗೆ ಮನವರಿಕೆ ಯಾಗಲು ೫೦ ವರ್ಷಗಳೂ ಸಾಕಾಗಲಿಲ್ಲ. ಇಸ್ರೈಲ್‌ ಬಗೆಗಿನ ಅವರ ಒಂದು ವಿಚಾರ ನಮಗೆ ಮನವರಿಕೆಯಾಗಲು ೯೪ ವರ್ಷಗಳು ಬೇಕಾದವು !

೧. ಸ್ವಾತಂತ್ರ್ಯವೀರ ಸಾವರಕರರು ಜ್ಯೂ ರಾಜ್ಯದ ಸ್ಥಾಪನೆಗೆ ನೀಡಿದ ಬೆಂಬಲ

೧೯೨೩ ರಲ್ಲಿ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ನೆಲೆಸಿದ್ದಾಗ ಸ್ವಾತಂತ್ರ್ಯವೀರ ಸಾವರಕರರು ಬರೆದಿರುವ ‘ಹಿಂದುತ್ವ’ ಎಂಬ ಗ್ರಂಥದಲ್ಲಿ ಸ್ವತಂತ್ರ ಜ್ಯೂ ರಾಜ್ಯದ ಸ್ಥಾಪನೆಗೆ ಬೆಂಬಲವನ್ನು ನೀಡಿದ್ದರು. ಅದರಲ್ಲಿ ಸಾವರಕರರು ಮುಂದಿನಂತೆ ಬರೆದಿದ್ದಾರೆ, ”ಜ್ಯೂ ಜನರ ಸುಖಸ್ವಪ್ನಗಳು ನಿಜವಾದರೆ ಮತ್ತು ಪ್ಯಾಲೆಸ್ಟೈನ್‌ ಇದು ಜ್ಯೂ ಜನರ ರಾಷ್ಟ್ರವೆಂದು ಸ್ಥಾಪನೆಯಾದರೆ, ಅವರಿಗೆ ಎಷ್ಟು ಆನಂದವಾಗುವುದೋ, ಅಷ್ಟೇ ಆನಂದ ನಮಗೂ ಆಗುವುದು.” ಯುರೋಪ್‌ನಿಂದ ಹೊರದಬ್ಬಲ್ಪಟ್ಟ ಜ್ಯೂಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಸಾವರಕರರು ೧೯೩೮ ರಲ್ಲಿ ತೆಗೆದ ಕರಪತ್ರದಲ್ಲಿ ಮುಂದಿನಂತೆ ಬರೆದಿದ್ದಾರೆ, ”ಅವರಿಗೆ ಭಾರತದಲ್ಲಿ ಆಶ್ರಯ ನೀಡುವ ಬದಲು ಅವರು ಪ್ಯಾಲೆಸ್ಟೈನ್‌ನಲ್ಲಿಯೆ ನೆಲೆಸಬೇಕು; ಏಕೆಂದರೆ ಅದೇ ಅವರ ಪಿತೃಭೂ (ಹಿರಿಯರ ಭೂಮಿ) ಹಾಗೂ ಪುಣ್ಯಭೂ (ಧರ್ಮ ಉಗಮವಾದ ಭೂಮಿ) ಆಗಿದೆ.” ಯಾವಾಗ ಇಸ್ರೈಲ್‌ ಸ್ಥಾಪನೆಯಾಯಿತೋ, ಆಗ ಹೆಚ್ಚಿನ ಜ್ಯೂಜನರು ಇಸ್ರೈಲ್‌ನಲ್ಲಿ ನೆಲೆಸಲು ಇಷ್ಟಪಟ್ಟರು ಮತ್ತು ಅಮೇರಿಕಾದಲ್ಲಿ ನೆಲೆಸಿರುವ ಜ್ಯೂಜನರು ಇಸ್ರೈಲ್‌ನ ಸ್ಥಾಪನೆಗೆ ಆರ್ಥಿಕ ಸಹಾಯ ನೀಡಿದರು.

೨. ಇಸ್ರೈಲ್‌ ಸ್ಥಾಪನೆಯಾದ ನಂತರ ಸಾವರಕರರು ಮಾಡಿದ ‘ಐತಿಹಾಸಿಕ ಮನವಿ’

ಇಸ್ರೈಲ್‌ ಸ್ಥಾಪನೆಯಾದ ನಂತರ ೧೯ ಡಿಸೆಂಬರ್‌ ೧೯೪೭ ರಂದು ಮಾಡಿದ ‘ಐತಿಹಾಸಿಕ ಮನವಿಯಲ್ಲಿ’ ಸಾವರಕರರು ಮುಂದಿನಂತೆ ಬರೆದಿದ್ದಾರೆ, ”ಜಗತ್ತಿನ ಬಹಳಷ್ಟು ಪ್ರಮುಖ ದೇಶಗಳು ಪ್ಯಾಲೆಸ್ಟೈನ್‌ನಲ್ಲಿ ಸ್ವತಂತ್ರ ಜ್ಯೂ ರಾಜ್ಯವನ್ನು ಸ್ಥಾಪಿಸುವ ಜ್ಯೂ ಜನರ ಅಧಿಕಾರವನ್ನು ಮನ್ನಿಸಿದವು ಹಾಗೂ ಅದಕ್ಕೆ ಶಸ್ತ್ರಾಸ್ತ್ರಗಳ ಸಹಾಯವನ್ನೂ ಮಾಡುವ ವಚನ ನೀಡಿದವು. ಈ ವಾರ್ತೆಯನ್ನು ಓದಿ ನನಗೆ ಬಹಳ ಆನಂದವಾಯಿತು. ಇದರ ಬಗ್ಗೆ ನಮ್ಮ ಭಾರತೀಯ ವರ್ತಮಾನಪತ್ರಿಕೆಗಳು ತಮ್ಮ ಮುಸಲ್ಮಾನಪ್ರೇಮಿ ನಿಲುವಿಗನುಸಾರ ತಪ್ಪು ಮಾಹಿತಿಗಳನ್ನು ನೀಡುತ್ತಿವೆ.

ವಾಸ್ತವದಲ್ಲಿ ಇಸ್ಲಾಂ ಸ್ಥಾಪನೆಯಾಗುವ ಮೊದಲೇ ಸುಮಾರು ೨ ಸಾವಿರ ವರ್ಷ ಅಬ್ರಾಹಮ್, ಮೋಝೆಸ್, ಡೇವಿಡ್, ಸಾಲೋಮನ್‌ ಇವರಂತಹ ಅನೇಕ ರಾಜರು ಮತ್ತು ಋಷಿಗಳು ಆ ದೇಶವನ್ನು ಪಿತೃಭೂ ಹಾಗೂ ಪುಣ್ಯಭೂ ಎಂದು ನಂಬಿದ್ದರು. ಅರಬೀ ಮುಸಲ್ಮಾನರು ಸಿಂಧ್‌ದ ಮೇಲೆ ಆಕ್ರಮಣ ಮಾಡುವ ಮೊದಲು, ಪ್ರಾಚೀನ ಇಜಿಪ್ತ್ ಹಾಗೂ ಪರ್ಶಿಯಾದ ಮೇಲೆ ದಾಳಿ ಮಾಡಿ ಅಲ್ಲಿನ ಸಂಸ್ಕೃತಿಯನ್ನು ನಾಶ ಮಾಡಿದರು. ಅದೇ ರೀತಿ ಅವರು ಜ್ಯೂಗಳನ್ನೂ ಮೂಲದಿಂದ ನಾಶ ಮಾಡಲು ಪ್ರಯತ್ನಿಸಿದರು; ಆದರೆ ಅವರ ಈ ರಾಕ್ಷಸೀ ಮಹತ್ವಾಕಾಂಕ್ಷೆ ಸಫಲವಾಗಲಿಲ್ಲ. ಅರಬಸ್ತಾನವು ಅರಬಿ ಮುಸಲ್ಮಾನರ ಪಿತೃಭೂಮಿ ಮತ್ತು ಪುಣ್ಯಭೂಮಿಯಾಗಿದೆ, ಪ್ಯಾಲೆಸ್ಟೈನ್‌ ಅಲ್ಲ ! ಈ ಇತಿಹಾಸವನ್ನು ನಮ್ಮ ವಾರ್ತಾಪತ್ರಿಕೆಗಳು ಹಾಗೂ ನೇತಾರರು ತಿಳಿದುಕೊಳ್ಳಬೇಕು.”

೩. ಜ್ಯೂ ರಾಜ್ಯದ ರಚನೆಗೆ ಬೆಂಬಲವನ್ನು ನೀಡದೆ ಅಪಹಾಸ್ಯಕ್ಕೀಡಾದ ಕಾಂಗ್ರೆಸ್ಸಿನ ಅಂದಿನ ನೆಹರು ಸರಕಾರ

ಈ ವಿಷಯದಲ್ಲಿ ಸಂಯುಕ್ತ ರಾಷ್ಟ್ರದಲ್ಲಿನ ಭಾರತೀಯ ಪ್ರತಿನಿಧಿಗಳು ಜ್ಯೂ ರಾಜ್ಯ ಸ್ಥಾಪನೆಗೆ ಮಾಡಿದ ವಿರೋಧವು ದುಃಖದಾಯಕವಾಗಿದೆ. ಇದಕ್ಕೆ ಸಂಬಂಧಿಸಿದ ಭಾಷಣದಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಮುಂದಿನಂತೆ ಹೇಳಿದರು, ”ಸ್ವತಂತ್ರ ಜ್ಯೂ ರಾಜ್ಯ ಸ್ಥಾಪನೆಗೆ ಬೆಂಬಲ ನೀಡಿ ನಾವು ಪ್ಯಾಲೆಸ್ಟೈನ್‌ನ ಬೆನ್ನಿಗೆ ಚೂರಿ ಇರಿಯುವ ಪಾಪವನ್ನು ಮಾಡುವುದಿಲ್ಲ,” ಎಂದರು. ಅವರ ಈ ವಾಕ್ಯ ಅನೇಕ ರಾಷ್ಟ್ರಗಳ ಪ್ರತಿನಿಧಿಗಳಿಗೆ ನಾಟಕವೆಂದು ಅನಿಸಿ ಅವರ ಹಾಸ್ಯವನ್ನು ಮಾಡಿದರು, ಏಕೆಂದರೆ ಇದೇ ಭಾರತ ತನ್ನ ಅನೇಕ ವರ್ಷಗಳಿಂದ ಅಖಂಡವಾಗಿದ್ದ ದೇಶದ ವಿಭಜನೆಗೆ ಮನ್ನಣೆಯನ್ನು ಕೊಟ್ಟು ಆ ವಿಭಜನೆಯ ದಿನವನ್ನು ಆನಂದೋತ್ಸವವೆಂದು ಆಚರಿಸಿತ್ತು. ಈ ವಿಷಯದಲ್ಲಿ ನೆಹರುರವರು, ”ಏಶಿಯಾದಲ್ಲಿನ ಸಣ್ಣ ಇಸ್ಲಾಮ್‌ ದೇಶಗಳ ಸಹಾನುಭೂತಿಯನ್ನು ಗಳಿಸಲು ನಾವು ಜ್ಯೂ ರಾಜ್ಯವನ್ನು ವಿರೋಧಿಸಿದೆವು” ಎಂದಾಗಲಂತೂ ಅವರ ಹೇಳಿಕೆಯು ಇನ್ನೂ ಹೆಚ್ಚು ಅಸಮರ್ಥನೀಯವಾಯಿತು, ಏಕೆಂದರೆ ಈಗ ಭಾರತದ ಹಾಗೂ ಜಗತ್ತಿನಲ್ಲಿನ ಜ್ಯೂಜನರಿಗೆ ಮತ್ತು ಅವರನ್ನು ಬೆಂಬಲಿಸುವ ಬಲಿಷ್ಠ ದೇಶಗಳಿಗೆ ಏನನಿಸುವುದೆಂದು ನೆಹರೂ ಅವರು ವಿಚಾರ ಮಾಡಲಿಲ್ಲ. ಸಣ್ಣ ದುರ್ಬಲ ದೇಶಗಳ ಸಹಾನುಭೂತಿಯನ್ನು ಪಡೆಯಲು ದೊಡ್ಡ ಸಬಲ ದೇಶಗಳ ಸಹಾನುಭೂತಿಯನ್ನು ಕಳೆದುಕೊಳ್ಳುವ ಈ ನಿಲುವು ಅಯೋಗ್ಯ ಹಾಗೂ ಹಾಸ್ಯಾಸ್ಪದವಾಗಿದೆ.

೪. ಜ್ಯೂ ಜನರ ವಿಷಯದಲ್ಲಿ ಸ್ವಾತಂತ್ರ್ಯವೀರ ಸಾವರಕರರ ಅಭಿಪ್ರಾಯ

ಈ ಸಮಯದಲ್ಲಿ ಅವರೂ ಇದನ್ನು ಗಮನದಲ್ಲಿಡ ಬೇಕು, ”ಈ ಚಿಕ್ಕ ಚಿಕ್ಕ ಇಸ್ಲಾಮೀ ರಾಜ್ಯಗಳು ಹಾಗೂ ಚೀನಾದಲ್ಲಿಯೂ ಇಸ್ಲಾಮೀ ರಾಜ್ಯವನ್ನು ನಿರ್ಮಿಸಬೇಕೆಂಬ ಬೇಡಿಕೆಯನ್ನು ಮುಂದಿಡುವ ಇವೆಲ್ಲ ಇಸ್ಲಾಮೀ ಗುಂಪುಗಳು ಭಾರತದಲ್ಲಿ ಇಸ್ಲಾಮೀ ರಾಜ್ಯವನ್ನು ಸ್ಥಾಪಿಸಬೇಕೆಂಬ ಪಾಪಸ್ತಾನಿ ಗುಂಪಿಗೆ ಬೆಂಬಲವನ್ನು ನೀಡುತ್ತಿವೆ. ಹೀಗಿರುವಾಗ ಆಫ್ರಿಕಾದಿಂದ ಮಲೇಶಿಯಾದ ವರೆಗೆ ಒಂದು ಮುಸಲ್ಮಾನ ಮೈತ್ರಿ ಕೂಟ ರಚಿಸಲು ಪ್ರಯತ್ನಿಸುವ ಇಸ್ಲಾಮೀ ಗುಂಪಿನ ಶಕ್ತಿಯನ್ನು ದುರ್ಬಲಗೊಳಿಸುವ ಅಂತರರಾಷ್ಟ್ರೀಯ ನಿಲುವನ್ನು ಭಾರತ ಅವಲಂಬಿಸಬೇಕು. ಈ ಆಕ್ರಮಕ ಇಸ್ಲಾಮೀ ಶಕ್ತಿಗೆ ಪ್ರತೀಕಾರ ಮಾಡುವ ಕಾರ್ಯವನ್ನು ಸಮರ್ಥ ಹಾಗೂ ಸ್ವತಂತ್ರ ಜ್ಯೂ ರಾಜ್ಯ ಮಾಡಬಹುದು. ಜ್ಯೂ ಜನರ ಮನಸ್ಸಿನಲ್ಲಿ ಹಿಂದೂ ಜಗತ್ತಿನ ಬಗ್ಗೆ ದ್ವೇಷವಿಲ್ಲ. ಭಾರತದಲ್ಲಿನ ಅಲ್ಪಸಂಖ್ಯಾತ ಜ್ಯೂಗಳ ವಿಷಯದಲ್ಲಿ ಸಂಶಯ ಪಡುವ ಯಾವುದೇ ಕಾರಣ ಕಾಣಿಸುವುದಿಲ್ಲ. ಇಂದಿನ ಕಾಂಗ್ರೆಸ್ಸಿನ ಮುಖಂಡರ ನಿಲುವು ಹೇಗಿದ್ದರೂ, ಭಾರತದಲ್ಲಿನ ಹಿಂದುತ್ವವಾದಿ ಪಕ್ಷಗಳು ನೈತಿಕ ಹಾಗೂ ರಾಜಕೀಯ ನಿಲುವೆಂದು ಕೂಡ ಸ್ವತಂತ್ರ ಜ್ಯೂ ರಾಜ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡಿ ಆ ವಿಷಯದಲ್ಲಿ ಸದಿಚ್ಛೆಯನ್ನೂ ವ್ಯಕ್ತಪಡಿಸಬೇಕು.”

೫. ‘ಭಾರತ ಇಸ್ರೈಲ್‌ಗೆ ಮನ್ನಣೆಯನ್ನು ಕೊಡುವ ಅವಶ್ಯಕತೆಯೇನಿದೆ ?’, ಎಂಬ ವಿಷಯದಲ್ಲಿ ಸಾವರಕರರ ಮಹತ್ವಪೂರ್ಣ ವಿಚಾರ

೧೯೫೬ ರಲ್ಲಿ ಜೋಧಪುರದಲ್ಲಾದ ಹಿಂದೂ ಮಹಾಸಭೆಯ ಅಧಿವೇಶನದಲ್ಲಿ ಸ್ವಾತಂತ್ರ್ಯವೀರ ಸಾವರಕರರು ಇಸ್ರೈಲ್‌ನ ವಿಷಯದಲ್ಲಿ ಅತ್ಯಂತ ಮಹತ್ವದ ವಿಚಾರವನ್ನು ಮಂಡಿಸಿದರು. ”ಭಾರತ ಇಸ್ರೈಲ್‌ ಅನ್ನು ಬಿಟ್ಟು ಜಗತ್ತಿನ ಬಹಳಷ್ಟು ರಾಷ್ಟ್ರಗಳಿಗೆ ಮನ್ನಣೆಯನ್ನು ನೀಡಿದೆ. ಇಸ್ರೈಲ್‌ಗೆ ಮನ್ನಣೆ ನೀಡಿದರೆ ಅದು ಮುಸಲ್ಮಾನವಿರೋಧಿ ಕೃತ್ಯವೆಂದು ಪರಿಗಣಿಸಲ್ಪಡುವುದು, ಎಂಬ ಭಯ ಭಾರತಕ್ಕಿದೆ; ಆದರೆ ನಾಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವಾದರೆ, ಬಹಳಷ್ಟು ಮುಸಲ್ಮಾನ ರಾಷ್ಟ್ರಗಳು ನಮ್ಮ ವಿರುದ್ಧ ಪಾಕಿಸ್ತಾನವನ್ನು ಬೆಂಬಲಿಸುವವು ಹಾಗೂ ಅವರ ಒಂದೇ ಶತ್ರು ಆಗಿರುವ ಇಸ್ರೈಲ್‌ ನಮ್ಮ ಮಿತ್ರನಾಗಿ ಉಳಿಯುವುದು. ಆದ್ದರಿಂದ ಭಾರತ ದೇಶವು ಇಸ್ರೈಲ್‌ಗೆ ನಿಃಸಂಕೋಚವಾಗಿ ಮನ್ನಣೆಯನ್ನು ಕೊಡಬೇಕು.”

‘ಶತ್ರುವಿನ ಶತ್ರು ನಮ್ಮ ಮಿತ್ರ’, ಎಂಬ ಸ್ವಾತಂತ್ರ್ಯವೀರ ಸಾವರಕರರ ವಿಚಾರದಿಂದ ಇಂದು ಇಸ್ರೈಲ್‌ನೊಂದಿಗೆ ಭಾರತದ ಮೈತ್ರಿಪೂರ್ಣ ಸಂಬಂಧ ಸ್ಥಾಪನೆಯಾಗಿದೆ, ಇದು ಅತ್ಯಂತ ಸ್ವಾಗತಾರ್ಹವಾಗಿದೆ.

(ಆಭಾರ : ಸ್ವಾತಂತ್ರ್ಯವೀರ ಸಾವರಕರ ಲಿಖಿತ ‘ಹಿಂದುತ್ವ’, ‘ಐತಿಹಾಸಿಕ ನಿವೇದನೆ’ ಮತ್ತು ‘ಸಮಗ್ರ ಸಾವರಕರ ವಾಙ್ಮಯ)