ಮಧುಮೇಹ (ಡೈಬೆಟಿಸ್) ರೋಗಿಗಳು ಗಮನದಲ್ಲಿಡಬೇಕಾದ ಮಹತ್ವದ ಅಂಶಗಳು !

ಸದ್ಯ ಜನರಲ್ಲಿ ಮಧುಮೇಹ (ಡೈಬೆಟಿಸ್) ಆಗುವ ಪ್ರಮಾಣ ಬಹಳ ಹೆಚ್ಚಾಗಿದೆ. ಒಂದು ಸಲ ಈ ರೋಗ ಪ್ರಾರಂಭವಾದರೆ, ‘ಜೀವನಪೂರ್ತಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’, ಈ ಒತ್ತಡದಿಂದಲೇ ಅನೇಕ ಜನರು ಹತಾಶರಾಗುತ್ತಾರೆ. ನಮ್ಮ ಜೀವನಶೈಲಿ ಕಾಯಿಲೆಯ ಜೊತೆಗೆ ಹೊಂದಿಕೊಳ್ಳುವಂತಹದಿದ್ದರೆ, ಮಧುಮೇಹವಾಗಿದ್ದರೂ ದೀರ್ಘಾಯುಷಿಗಳಾಗಬಹುದು. ಮಧುಮೇಹಕ್ಕೆ ಅನುವಂಶಿಕತೆ ಇದೊಂದು ಕಾರಣವಾಗಿದೆ; ಆದರೆ ಅದಕ್ಕಿಂತಲೂ ಹೆಚ್ಚು ಮಹತ್ವದೆಂದರೆ ಅಯೋಗ್ಯ ಜೀವನಶೈಲಿ. ಈ ಲೇಖನದಲ್ಲಿ ನಾವು ಮಧುಮೇಹ ರೋಗಿಗಳು ಗಮನದಲ್ಲಿಡಬೇಕಾದ ಕೆಲವು ಅಂಶಗಳನ್ನು ತಿಳಿದುಕೊಳ್ಳುವವರಿದ್ದೇವೆ.

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

೧. ಮಧುಮೇಹ ರೋಗಿಗಳು ತಮ್ಮ ಕಾಯಿಲೆಯನ್ನು ಸ್ವೀಕರಿಸಿ ಯೋಗ್ಯ ಉಪಾಯಯೋಜನೆಗಳನ್ನು ಮಾಡುವುದರ ಕಡೆಗೆ ಗಮನಕೊಡಬೇಕು !

ಅನೇಕ ಜನರು ತಮಗೆ ಮಧುಮೇಹವಾಗಿದೆ ಅಥವಾ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಅಪಾಯದ ಮಟ್ಟವನ್ನ್ಕು ತಲುಪಿದೆ, ಎಂಬುದು ತಿಳಿದ ನಂತರ ಒತ್ತಡಕ್ಕೆ (ಟೆನ್ಶನ್) ಒಳಗಾಗುತ್ತಾರೆ; ಆದರೆ ಉಪಾಯಯೋಜನೆಯನ್ನು ಮಾಡುವುದರ ಕಡೆಗೆ ಅವರ ಗಮನ ಕಡಿಮೆ ಇರುತ್ತದೆ. ಒತ್ತಡವನ್ನು ತೆಗೆದುಕೊಳ್ಳದೇ ಪರಿಸ್ಥಿತಿಯನ್ನು ಸ್ವೀಕರಿಸಿ ತಮಗೆ ಯೋಗ್ಯವಾಗಿರುವ ಔಷಧೋಪಚಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳಿಂದ ದೀರ್ಘಕಾಲದ ವರೆಗೆ ಖಂಡಿತವಾಗಿಯೂ ಆರೋಗ್ಯದಿಂದಿರಬಹುದು. ಇದರ ಬಗ್ಗೆ ಯಾವುದೇ ಸಂದೇಹವಿಲ್ಲ.

೨. ಮಧುಮೇಹವಾದರೆ ವೈದ್ಯರ ಸಲಹೆಯಂತೆಯೇ ಔಷಧೋಪಚಾರವನ್ನು ಮಾಡಬೇಕು !

ಮಧುಮೇಹವಾದ ನಂತರ ಬಹಳಷ್ಟು ಜನರು ತಮ್ಮ ಮನಸ್ಸಿನಂತೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯ ಇರುವ ಮಾಹಿತಿಯ ಆಧಾರದಲ್ಲಿ ಔಷಧೋಪಚಾರಗಳನ್ನು ಮಾಡುತ್ತಾರೆ; ಆದರೆ ಈ ರೀತಿ ಉಪಚಾರ ಮಾಡುವಾಗ ಅವು (ಔಷಧಗಳು) ತಮ್ಮ ಪ್ರಕೃತಿಯ ದೃಷ್ಟಿಯಿಂದ ಯೋಗ್ಯವಾಗಿವೆಯೇ ? ಎಂಬುದನ್ನು ಮಾತ್ರ ಖಚಿತ ಪಡಿಸಿಕೊಳ್ಳುವುದಿಲ್ಲ. ಆದ್ದರಿಂದ ಅವರಿಗೆ ಇಂತಹ ಔಷಧಗಳ ಲಾಭವಾಗುವ ಬದಲು ಅಪಾಯವೇ ಆಗುವುದು ಕಂಡುಬರುತ್ತದೆ. ಒಂದು ಉದಾಹರಣೆ ಕೊಡುವುದಾದರೆ, ಒಬ್ಬ ಮಧುಮೇಹ ರೋಗಿಯು ಮಧುಮೇಹವಾದ ನಂತರ ಪ್ರತಿದಿನ ೨ ಚಮಚದಷ್ಟು ಮೆಂತೆಕಾಳಿನ ಪುಡಿಯನ್ನು ಸೇವಿಸಲು ಪ್ರಾರಂಭಿಸಿದನು. ಅದರ ಪರಿಣಾಮವೆಂದು ರೋಗಿಗೆ ಪಿತ್ತದ ತೊಂದರೆಯಾಗಲು ಪ್ರಾರಂಭವಾಯಿತು. ಇಲ್ಲಿ ರೋಗಿಯು ತನ್ನ ಪ್ರಕೃತಿ ಪಿತ್ತ ಪ್ರಕೃತಿಯಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳದ ಕಾರಣ ಮಧುಮೇಹದ ಮೇಲೆ ಅದರ ಒಳ್ಳೆಯ ಪರಿಣಾಮವಾಗದೇ ಆರೋಗ್ಯದ ಇತರ ಸಮಸ್ಯೆಗಳು ಪ್ರಾರಂಭವಾದವು.

೩. ಕಫ ಮತ್ತು ಮೇದ ಇವುಗಳನ್ನು ಕೆಡಿಸುವ ಆಹಾರವಿಹಾರಗಳನ್ನು ತಡೆಗಟ್ಟುವುದು ಮಹತ್ವದ್ದಾಗಿದೆ !

ಅ. ಮಧುಮೇಹದ ಸಂಬಂಧವು ಮುಖ್ಯವಾಗಿ ಕಫ ಮತ್ತು ಮೇದ (ದೇಹದ ಸಪ್ತ ಧಾತುಗಳಲ್ಲಿನ ಒಂದು ಧಾತು) ಈ ಧಾತುವಿಗೆ ಸಂಬಂಧಿಸಿದೆ. ಅವುಗಳನ್ನು ಕೆಡಿಸುವ ಆಹಾರವೆಂದರೆ ರುಚಿಕರ ಎಣ್ಣೆ, ತುಪ್ಪ ಇವುಗಳಂತಹ ಸ್ನಿಗ್ಧ ಪದಾರ್ಥಗಳಿಂದ ಕೂಡಿದ ಪದಾರ್ಥಗಳು, ಮೈದಾ ಅಥವಾ ಬೇಕರಿಯಲ್ಲಿನ ಇತರ ಜೀರ್ಣವಾಗಲು ಜಡ ಪದಾರ್ಥಗಳು. ಹಳಸಿದ ಅಥವಾ ಅತೀ ತಣ್ಣಗಿನ ಪದಾರ್ಥಗಳು, ಮೊಸರು, ಸಕ್ಕರೆ, ಬೆಲ್ಲ, ಒಣ ಹಣ್ಣುಗಳು (ಗೋಡಂಬಿ, ಬದಾಮಿ ಇತ್ಯಾದಿ), ಮಿಠಾಯಿ ಇತ್ಯಾದಿಗಳನ್ನು ಪೂರ್ಣ ತ್ಯಜಿಸಬೇಕು.

ಆ. ಯಾವಾಗಲೂ ಆರಾಮದಿಂದ ಕುಳಿತುಕೊಂಡಿರುವುದು, ಹೆಚ್ಚು ಮಲಗುವುದು, ವ್ಯಾಯಾಮ ಮಾಡದಿರುವುದು, ಯಾವಾಗಲೂ ಕುಳಿತುಕೊಂಡು ಕೆಲಸ ಮಾಡುವುದು, ಬೊಜ್ಜು ಇಂತಹ ಜೀವನ ಶೈಲಿಯೇ ಮಧುಮೇಹಕ್ಕೆ ಕಾರಣವಾಗುತ್ತದೆ. ಇದರ ಅರ್ಥವೆಂದರೆ, ನಿಯಮಿತವಾಗಿ ವ್ಯಾಯಾಮ ಮಾಡುವುದು, ದಿನವಿಡೀ ಕೆಲಸದಲ್ಲಿ ತೊಡಗಿರುವುದು ಮಧುಮೇಹಕ್ಕೆ ಆವಶ್ಯಕವಾಗಿದೆ. ಮಧುಮೇಹವಿಲ್ಲದಿದ್ದರೂ ಮುಂದೆ ಮಧುಮೇಹ ಆಗಬಾರದೆಂದು ಎಚ್ಚರಿಕೆಯಿಂದಿದ್ದು ತಮ್ಮ ಜೀವನಶೈಲಿಯಲ್ಲಿ ಬದಲಾವಣೆಯನ್ನು ಮಾಡಬೇಕು.

ಇ. ಇತರ ಯಾವುದೇ ವ್ಯಾಯಾಮ ಮಾಡಲು ಸಾಧ್ಯವಿಲ್ಲದಿದ್ದರೆ, ಪ್ರತಿದಿನ ಕಡಿಮೆಪಕ್ಷ ೪೦-೪೫ ನಿಮಿಷಗಳ ವರೆಗೆ ನಡೆಯಬೇಕು.

೪. ಪಿಷ್ಟಮಯ (ಕಾರ್ಬೋಹೈಡ್ರೇಟ್) ಪದಾರ್ಥಗಳ ಪ್ರಮಾಣವನ್ನು ನಿಯಂತ್ರಿಸುವುದು ಆವಶ್ಯಕ !

ಮಧುಮೇಹವಾಗಿರುವ ಅನೇಕ ರೋಗಿಗಳು ಮರುದಿನ ರಕ್ತವನ್ನು ತಪಾಸಣೆ ಮಾಡುವುದಿದ್ದರೆ, ನಾಳೆ ನನ್ನ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಸಾಮಾನ್ಯ (ನಾರಮಲ್) ಬರಬೇಕೆಂದು ಅವರು ಹಿಂದಿನ ದಿನ ಸಿಹಿ ತಿನ್ನುವುದಿಲ್ಲ; ಆದರೆ ಇಲ್ಲಿ ಗಮನದಲ್ಲಿಡಬೇಕಾದ ಅಂಶವೆಂದರೆ, ಕೇವಲ ಸಕ್ಕರೆ ಅಥವಾ ಸಿಹಿ ಪದಾರ್ಥಗಳನ್ನು ತಿನ್ನುವುದರಿಂದಲೇ ರಕ್ತದಲ್ಲಿ ಸಕ್ಕರೆ ಹೆಚ್ಚಾಗುತ್ತದೆ, ಎಂದೇನಿಲ್ಲ. ನಾವು ಸೇವಿಸುವ ಆಹಾರದಲ್ಲಿ ಪಿಷ್ಟಮಯ (ಕಾರ್ಬೋ ಹೈಡ್ರೇಟ್) ಪದಾರ್ಥಗಳಿದ್ದರೆ, ಅವುಗಳಿಂದಲೂ ಶರೀರಕ್ಕೆ ಸಕ್ಕರೆ ಸಿಗುತ್ತದೆ. ಆದುದರಿಂದ ಸಿಹಿ ತಿನ್ನುವುದನ್ನು ನಿಲ್ಲಿಸಲೇ ಬೇಕು; ಆದರೆ ನಮಗೆ ಪಿಷ್ಟಮಯ ಪದಾರ್ಥಗಳ ಪ್ರಮಾಣ ವನ್ನೂ ನಿಯಂತ್ರಣದಲ್ಲಿಡಬೇಕಾಗುತ್ತದೆ, ಇದನ್ನು ಇಲ್ಲಿ ಗಮನದಲ್ಲಿಡುವುದು ಮಹತ್ವದ್ದಾಗಿದೆ.

೫. ಈಗ ಮಧುಮೇಹದ ರೋಗಿಗಳು ಏನು ಸೇವಿಸಬೇಕು ? ನೋಡೋಣ

ಅ. ಊಟದಲ್ಲಿ ಗೋದಿಹಿಟ್ಟಿನ ಚಪಾತಿಗಳನ್ನು ಕಡಿಮೆ ಮಾಡಬೇಕು. ಚಪಾತಿಗೆ ಎಣ್ಣೆ, ತುಪ್ಪವನ್ನು ಹಚ್ಚಬಾರದು. ಊಟದಲ್ಲಿ ಜೋಳದ ರೊಟ್ಟಿ ಇದ್ದರೆ ಒಳ್ಳೆಯದು; ಆದರೆ ರೊಟ್ಟಿಯೊಂದಿಗೆ ಬೆಣ್ಣೆ, ತುಪ್ಪವನ್ನು ತಿನ್ನಬಾರದು.
ಆ. ಅನ್ನವನ್ನು ಸೇವಿಸುವುದಿದ್ದರೆ ಹಳೆಯ ಅಕ್ಕಿಯ ಅನ್ನವನ್ನು ಸೇವಿಸಬೇಕು. ಅನ್ನವನ್ನು ಮಾಡುವಾಗ ಅಕ್ಕಿಯನ್ನು ಹುರಿದುಕೊಳ್ಳಬೇಕು ಮತ್ತು ಅನ್ನವನ್ನು ಪಾತ್ರೆಯಲ್ಲಿ ಮಾಡ ಬೇಕು. ಇದರಿಂದ ಅನ್ನ ಜೀರ್ಣವಾಗಲು ಹಗುರವಾಗುತ್ತದೆ.
ಇ. ಪಲ್ಯಗಳನ್ನು ಮಾಡುವಾಗ ಎಣ್ಣೆಯನ್ನು ಕಡಿಮೆ
ಪ್ರಮಾಣದಲ್ಲಿ ಬಳಸಬೇಕು, ತರಕಾರಿಗಳಲ್ಲಿ ಪಡವಲ ಕಾಯಿ, ನುಗ್ಗೆಕಾಯಿ, ಬದನೆಕಾಯಿ, ಹೀರೆಕಾಯಿ, ಎಲೆಕೋಸು, ಪಾಲಕ್, ಸಬ್ಬಸಗಿಸೊಪ್ಪು, ಚವಳಿಕಾಯಿ, ಸೌತೆ ಕಾಯಿ, ಟೊಮೆಟೊ, ಹಾಲುಗುಂಬಳಕಾಯಿ, ಕೆಂಪು ಕುಂಬಳಕಾಯಿ ಈ ತರಕಾರಿ ತಿನ್ನಬೇಕು.
ಈ. ಮಧುಮೇಹ ರೋಗಿಗಳ ಆಹಾರದಲ್ಲಿ ಜೀರಿಗೆ, ಹಸಿಶುಂಠಿ, ಮೆಂತೆಕಾಳು, ಅರಿಶಿಣ, ಬೆಳ್ಳುಳ್ಳಿ, ಧನಿಯಾ, ಕೊತ್ತಂಬರಿ ಬಳಸಬಹುದು.
ಉ. ಹಾಲು ಕುಡಿಯುವುದಾದರೆ ಎರಡು ಬಾರಿ ಕೆನೆಯನ್ನು ತೆಗೆದ ಹಾಲನ್ನು ಕುಡಿಯಬೇಕು. ಬೆಣ್ಣೆ ತೆಗೆದ ಮಜ್ಜಿಗೆಯನ್ನು ಕುಡಿಯಬಹುದು. ಮಜ್ಜಿಗೆಯಲ್ಲಿ ಜೀರಿಗೆ, ಹಿಂಗು, ಅರಿಶಿಣವನ್ನು
ಹಾಕಿದರೆ ಅದು ಹೆಚ್ಚು ಜೀರ್ಣದಾಯಕವಾಗುತ್ತದೆ.
ಊ. ಹಸಿ ಅರಿಶಿಣದ ಉಪ್ಪಿನಕಾಯಿಯನ್ನು ಎಣ್ಣೆ ಹಾಕದೇ ಮಾಡಿದ್ದರೆ ತಿನ್ನಬಹುದು.
ಎ. ಹಣ್ಣುಗಳಲ್ಲಿ ಕಿತ್ತಳೆ, ಮೋಸಂಬಿ, ನೆಲ್ಲಿಕಾಯಿ, ಬೆಳವಲ ಕಾಯಿ, ನೇರಳೆ, ಪಪ್ಪಾಯಿ, ದಾಳಿಂಬೆ, ಬಾರಿಕಾಯಿ, ಕಲ್ಲಂಗಡಿ ಇಂತಹ ಹಣ್ಣುಗಳನ್ನು ಕಚ್ಚಿ ತಿನ್ನಬೇಕು. ಕಿತ್ತಳೆ-ಮೋಸಂಬಿ ರಸವನ್ನು ಸಕ್ಕರೆಯನ್ನು ಹಾಕದೇ ಕುಡಿಯಬೇಕು.

೬. ಮಧುಮೇಹ ರೋಗಿಗಳು ಏನನ್ನು ತಿನ್ನಬಾರದು ಅಥವಾ ಯಾವ ಪದಾರ್ಥಗಳನ್ನು ಕಡಿಮೆ ತಿನ್ನಬೇಕು ?

ಅ. ಅವಲಕ್ಕಿ, ಆಲೂಗಡ್ಡೆ, ಗೆಣಸು, ಸುವರ್ಣಗಡ್ಡೆ, ಸಾಬುಅಕ್ಕಿ ಇವುಗಳ ಪ್ರಮಾಣವನ್ನು ತುಂಬಾ ಕಡಿಮೆ ಇಡಬೇಕು. ೮-೧೦ ದಿನಗಳಿಗೊಮ್ಮೆ ತಿಂದರೂ ಅವುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ತಿನ್ನಬೇಕು.
ಆ. ಹಾಲಿನಿಂದ ತಯಾರಿಸಿದ ಚೀಜ್‌ ಮತ್ತು ಪನೀರ್‌ ಇಂತಹ
ಜೀರ್ಣವಾಗಲು ಜಡವಾದ ಪದಾರ್ಥಗಳನ್ನು ತಿನ್ನಬಾರದು.
ಇ. ಸೀತಾಫಲ, ದ್ರಾಕ್ಷಿ, ಮಾವು, ಬಾಳೆಹಣ್ಣು ಇವುಗಳನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು.
ಈ. ಬೆಲ್ಲ, ಸಕ್ಕರೆ, ಪಕ್ವಾನ್ನ, ಮಿಠಾಯಿ, ಜೇನುತುಪ್ಪ, ಪನೀರ್‌ ಈ ಪದಾರ್ಥಗಳನ್ನು ತಿನ್ನಲೇಬಾರದು.
ಉ. ಒಣಹಣ್ಣುಗಳನ್ನು ಉದಾ. ಬದಾಮ, ಗೋಡಂಬಿ, ಪಿಸ್ತಾ ಇತ್ಯಾದಿಗಳನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು.
ಊ. ಸಿಹಿಯ ವಿರುದ್ಧ ಕಹಿ ಪದಾರ್ಥಗÀಳನ್ನು ಅತೀ ಹೆಚ್ಚು ಪ್ರಮಾಣದಲ್ಲಿ ತಿನ್ನದೇ ಸಮತೋಲನದಿಂದ ತಿನ್ನಬೇಕು.

೭. ಊಟದ ಸಮಯಗಳನ್ನು ಖಚಿತಪಡಿಸಿ ಆ ಸಮಯದಲ್ಲಿ ಸ್ವಲ್ಪ ಸ್ವಲ್ಪ ತಿನ್ನಬೇಕು. ಹೊಟ್ಟೆ ತುಂಬುವವರೆಗೆ ಊಟ ಮಾಡಬಾರದು. ಊಟ ಮಾಡಿದ ತಕ್ಷಣ ಮಲಗಬಾರದು. ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು, ಅವುಗಳನ್ನು ಮಧ್ಯದಲ್ಲಿಯೇ ನಿಲ್ಲಿಸಬಾರದು. ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು.

೮. ರಕ್ತದಲ್ಲಿನ ಸಕ್ಕರೆ ದೀರ್ಘಕಾಲದವರೆಗೆ ಹೆಚ್ಚಾಗಿಯೇ ಇದ್ದರೆ, ಕಣ್ಣು, ಮೂತ್ರಪಿಂಡ, ದೊಡ್ಡ ರಕ್ತನಾಳ, ಹೃದಯ, ನರಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದಿಂದ ಅವಯವಗಳ ಮೇಲಾಗುವ ದುಷ್ಟರಿಣಾಮವನ್ನು ತಡೆಯಲು ಆಹಾರ, ಔಷಧ, ವ್ಯಾಯಾಮ ಇವುಗಳನ್ನು ನಿಯಮಿತ ಮಾಡಿ ಮತ್ತು ಸಂಯಮಿ ಜೀವನ ನಡೆಸುವುದು ಆವಶ್ಯಕವಾಗಿದೆ. ಇದರಿಂದ ಮಧುಮೇಹ ಸ್ವೀಕರಿಸಿ ಆನಂದದಿಂದಿರಬಹುದು.

– ವೈದ್ಯೆ (ಸೌ.) ಮುಕ್ತಾ ಲೊಟಲೀಕರ, ಪುಣೆ (೨೮.೮.೨೦೨೩)