ರಾಷ್ಟ್ರಘಾತಕ ಜಾತಿವಾರು ಜನಗಣತಿ ಏತಕ್ಕಾಗಿ ?

ಶ್ರೀ. ದುರ್ಗೇಶ ಜಯವಂತ ಪರೂಳಕರ

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿಯವರು ‘ಕಾಂಗ್ರೆಸ್‌ ಜಾತಿವಾರು ಜನಗಣತಿಗೆ ಆದ್ಯತೆ ನೀಡಲಿದೆ’ ಎಂದು ಹೇಳಿದ್ದಾರೆ. ಆಧುನಿಕ ಜಗತ್ತಿನಲ್ಲಿ ಬದುಕುತ್ತಿರು ವಾಗ ದೇಶದ ಜನತೆಯನ್ನು ಜಾತಿಜಾತಿಗಳಲ್ಲಿ ವಿಭಜಿಸುವುದು ರಾಷ್ಟ್ರಘಾತಕವಾಗಿದೆ. ಆದುದರಿಂದ, ಇಂತಹ ವಿಷಯಗಳನ್ನು ವಿರೋಧಿಸುವುದು ಅತ್ಯಂತ ಆವಶ್ಯಕವಾಗಿದೆ. ಹಾಗೆಯೇ ಜಾತಿಜಾತಿಗಳಲ್ಲಿ ಮತ್ತು ಪಂಥಗಳಲ್ಲಿ ಒಡಕುಂಟು ಮಾಡುವ ಯಾವುದೇ ಕೃತಿ ಸಂವಿಧಾನಕ್ಕೆ ಅನುಗುಣವಾಗಿಲ್ಲ.

೧. ದೇಶದ ವೈವಿಧ್ಯವನ್ನು ಅಸಮಾನತೆಯ ದೃಷ್ಟಿಯಿಂದ ನೋಡುವ ವಿಕೃತಿಯನ್ನು ಸೃಷ್ಟಿಸುತ್ತಿರುವುದು ನಿಂದನೀಯ !

‘ಸಂಪೂರ್ಣ ದೇಶದ ಜನರು ಭಾರತಮಾತೆಯ ಮಕ್ಕಳಾಗಿದ್ದಾರೆ’ ಎಂಬ ಭಾವನೆಯನ್ನು ಮನಸ್ಸಿನಲ್ಲಿಟ್ಟು ಕೊಂಡು ಆಡಳಿತಗಾರರು ದೇಶದಲ್ಲಿನ ವಿವಿಧ ಜಾತಿ, ಪಂಗಡಗಳನ್ನು ಪರಸ್ಪರರಿಂದ ಪ್ರತ್ಯೇಕ ಎಂದು ನಿರ್ಧರಿಸಿ ಅವರಿಗೆ ವಿಶೇಷ ಅಧಿಕಾರಗಳನ್ನು ನೀಡಲು ನಿರ್ಧರಿಸಿದರೆ, ದೇಶದ ಎಲ್ಲ ಜನರು ಒಗ್ಗಟ್ಟಿನಿಂದ ಇರಲಾರರು. ಜನರ ಮನಸ್ಸಿನಲ್ಲಿ ಜಾತಿಯ ಅಭಿಮಾನದ ಬದಲು ರಾಷ್ಟ್ರದ ಅಭಿಮಾನ ಮೂಡುವಂತಹ ಕಾರ್ಯವನ್ನು ರಾಜಕೀಯ ಪಕ್ಷಗಳು ಮತ್ತು ಅವರ ನಾಯಕರು ಮಾಡಬೇಕು. ಅಂತಹ ಪ್ರಯತ್ನಗಳನ್ನು ಮಾಡದೆ ಸಮಾಜದಲ್ಲಿ ದ್ವೇಷ ನಿರ್ಮಾಣವಾಗಲು ಸಾಧ್ಯತೆಯಿರುವ ನೀತಿಯನ್ನು ಒಪ್ಪಿಕೊಂಡರೆ ಖಂಡಿತವಾಗಿಯೂ ರಾಷ್ಟ್ರದ ಹಾನಿಯಾಗುತ್ತದೆ. ನಮ್ಮ ದೇಶದಲ್ಲಿರುವ ವೈವಿಧ್ಯತೆಯನ್ನು ಅಸಮಾನತೆಯ ದೃಷ್ಟಿಯಿಂದ ನೋಡುವ ವಿಕೃತಿಯನ್ನು ನಿರ್ಮಾಣ ಮಾಡುವುದು ಯಾವುದೇ ರಾಜಕೀಯ ನಾಯಕರಿಗೆ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಶೋಭಿಸುವುದಿಲ್ಲ.

೨. ಜಾತಿಗಿಂತ ರಾಷ್ಟ್ರಹಿತಕ್ಕೆ ಆದ್ಯತೆ ನೀಡುವುದು ಮುಖ್ಯ !

ನಮ್ಮ ಸಂವಿಧಾನವು, ‘ದೇಶದ ಪ್ರತಿಯೊಬ್ಬ ನಾಗರಿಕನು ಕಾನೂನಿನ ದೃಷ್ಟಿಯಲ್ಲಿ ಸಮಾನನಾಗಿದ್ದಾನೆ, ಅದೇ ರೀತಿ ನ್ಯಾಯದ ದೃಷ್ಟಿಯಿಂದಲೂ ದೇಶದ ಪ್ರತಿಯೊಬ್ಬ ನಾಗರಿಕನು ಸಮಾನನಾಗಿದ್ದಾನೆ’ ಎಂದು ಹೇಳಿದೆ. ನಾಗರಿಕರನ್ನು ಜಾತಿವಾರು ವಿಭಜಿಸಿದರೆ, ಪ್ರತಿಯೊಂದು ಜಾತಿಯ ವ್ಯಕ್ತಿಗೆ ತನ್ನ ಜಾತಿಯ ವಿಷಯದಲ್ಲಿ ಅಭಿಮಾನವೆನಿಸುವುದು, ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಯ ಗಮನ ಕೇವಲ ತನ್ನ ಜಾತಿಯ ಹಿತದ ಕಡೆಗೆ ಕೇಂದ್ರೀಕೃತಗೊಳ್ಳುವುದು. ಆ ಮೂಲಕ, ರಾಷ್ಟ್ರೀಯ ಹಿತದ ಕಡೆಗೆ ತಿಳಿದೋ ತಿಳಿಯದೆ ನಿರ್ಲಕ್ಷ್ಯವಾಗುವುದು. ಪ್ರತಿಯೊಂದು ಜಾತಿಯು ತನ್ನನ್ನು ಇತರ ಜಾತಿಗಳಿಂದ ಬೇರೆ ಎಂದು ತಿಳಿಯಬಹುದು. ಇದರಿಂದ ಸಂಪೂರ್ಣ ದೇಶದ ನಾಗರಿಕರು ‘ಈ ದೇಶದ ನಾಗರಿಕರು’ ಎಂದು ಸಂಘಟಿತರಾಗುವುದಿಲ್ಲ.

ಜಾತಿಯ ಹಿತಕ್ಕಿಂತ ರಾಷ್ಟ್ರಹಿತಕ್ಕೆ ಪ್ರಾಮುಖ್ಯ ನೀಡುವ ದೃಷ್ಟಿಯನ್ನು ಸಮಾಜಕ್ಕೆ ನೀಡುವುದು ಬಹಳ ಆವಶ್ಯಕವಾಗಿದೆ. ದೇಶಕ್ಕೆ ಬಂದಿರುವ ದೊಡ್ಡ ವಿಪತ್ತು ಎಂದರೆ ಪರದಾಸ್ಯ !

ಈ ವಿಪತ್ತನ್ನು ಎದುರಿಸುವ ಪ್ರಮೇಯ ದೇಶದ ನಾಗರಿಕರಿಗೆ ಬರಬಾರದು; ಹಾಗಾಗಿ ದೇಶದ ನಾಗರಿಕರ ಸಂಘಟನೆ ಬಹಳ ಮುಖ್ಯವಾಗಿದೆ. ದೇಶದಲ್ಲಿ ವಾಸಿಸುವ ಯಾವುದೇ ನಾಗರಿಕನ ಯಾವುದೇ ಅಡಚಣೆ ಅಥವಾ ಸಮಸ್ಯೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅದು ತನ್ನ ಅಡಚಣೆ ಅಥವಾ ಸಮಸ್ಯೆ ಅನಿಸಬೇಕು. ಇಂತಹ ಒಗ್ಗಟ್ಟಿನ ಸಮಾಜವನ್ನು ನಿರ್ಮಿಸುವುದನ್ನು ಬಿಟ್ಟು ಜಾತಿ ಜಾತಿಗಳಲ್ಲಿ ಭೇದ ನಿರ್ಮಿಸುವ ಬುದ್ಧಿ ರಾಜಕೀಯ ನೇತಾರರಿಗೆ ಹೇಗೆ ಬರುತ್ತದೆ ? ಎನ್ನುವುದೊಂದು ಯಕ್ಷ ಪ್ರಶ್ನೆಯಾಗಿದೆ.

೩. ಜಾತಿ ಮತ್ತು ಪಂಥ ಇವುಗಳಿಗಿಂತ ಸಂಪೂರ್ಣ ಸಮಾಜವನ್ನು ಸಕ್ಷಮಗೊಳಿಸುವುದು ಆಡಳಿತಗಾರರ ಜವಾಬ್ದಾರಿಯಾಗಿದೆ !

ದೇಶದ ಪ್ರತಿಯೊಬ್ಬ ನಾಗರಿಕನನ್ನು ಅವನ ಜಾತಿಯಿಂದ ಗುರುತಿಸುವ ಬದಲು ದೇಶದ ನಾಗರಿಕನೆಂದು ಅವನನ್ನು ಗುರುತಿಸುವುದು ಬಹಳ ಆವಶ್ಯಕವಾಗಿದೆ. ದೇಶದ ಯಾವುದೇ ನಾಗರಿಕ, ಅವನು ಯಾವುದೇ ಜಾತಿ ಪಂಥದವನಾಗಿರಲಿ, ಒಂದು ವೇಳೆ ಅವನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ದೈಹಿಕವಾಗಿ ದುರ್ಬಲನಾಗಿದ್ದರೆ ಅವನನ್ನು ಸಕ್ಷಮಗೊಳಿಸಲು ಎಲ್ಲ ರೀತಿಯ ನೆರವನ್ನು ಸರಕಾರ ಹಾಗೂ ಸಮಾಜ ನೀಡಬೇಕು. ಅದನ್ನು ಮಾಡುವಾಗ ಅವನ ಜಾತಿಯನ್ನು ನೋಡಬಾರದು. ಹಾಗೆಯೇ, ಯಾವುದೇ ದುರ್ಬಲ ಕುಟುಂಬಕ್ಕೆ ಸಹಾಯ ಮಾಡಿದ ನಂತರ, ಆ ಕುಟುಂಬ ಸಕ್ಷಮವಾದ ಬಳಿಕ ಅವನಿಗೆ ಸಿಗುವ ಎಲ್ಲಾ ರೀತಿಯ ಸಹಾಯವನ್ನು ಸಂಪೂರ್ಣ ನಿಲ್ಲಿಸಬೇಕು. ಆ ಕುಟುಂಬ ತಮ್ಮ ಮುಂದಿನ ಜೀವನವನ್ನು ಸ್ವಂತ ಕ್ಷಮತೆಗನುಸಾರ ಜೀವಿಸಬೇಕು. ಈ ರೀತಿ ಸಹಾಯ ಮಾಡುವ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು. ಪರಾವಲಂಬನೆಯ ಅಭ್ಯಾಸ ಅಥವಾ ರೂಢಿಯು ಮನುμಯ್Àನನ್ನು ಸಮರ್ಥನನ್ನಾಗಿ ಮಾಡಲಾರದು. ದೇಶದ ಪ್ರತಿಯೊಬ್ಬ ನಾಗರಿಕ ಸಕ್ಷಮ ಮತ್ತು ಸಬಲನಾಗಿರಬೇಕು. ಆ ದೃಷ್ಟಿಯಿಂದ ಪ್ರತಿಯೊಬ್ಬ ನಾಗರಿಕನನ್ನು ಅವನ ಜಾತಿ, ಪಂಥವನ್ನು ಗಮನಿಸದೇ ಸಕ್ಷಮ ಮತ್ತು ಸಮರ್ಥಗೊಳಿಸುವ ಜವಾಬ್ದಾರಿ ಸಂಪೂರ್ಣ ಸಮಾಜ ಮತ್ತು ಆಡಳಿತಗಾರರದ್ದಾಗಿದೆ.

೪. ನಾಗರಿಕರ ನಡುವೆ ಒಡಕುಂಟು ಮಾಡುವುದು ರಾಷ್ಟ್ರಘಾತಕ !

ದೇಶದ ಪ್ರತಿಯೊಬ್ಬ ನಾಗರಿಕ ತನ್ನ ದೇಶರೂಪಿ ಪರಿವಾರದ ಸದಸ್ಯನಾಗಿದ್ದಾನೆ. ಅವನ ವಿಷಯದಲ್ಲಿ ನಮ್ಮ ಮನಸ್ಸಿನಲ್ಲಿ ಸದ್ಭಾವನೆ, ಶ್ರದ್ಧೆ ಮತ್ತು ಆತ್ಮೀಯತೆ ಮೂಡಿಸಲು ಪ್ರಯತ್ನಿಸುವುದು, ಪ್ರತಿಯೊಂದು ರಾಜಕೀಯ ಪಕ್ಷದ ಪ್ರಮುಖ ರಾಷ್ಟ್ರೀಯ ಕರ್ತವ್ಯವಾಗಿದೆ. ವಿವಿಧ ಜಾತಿಗಳಲ್ಲಿ ವೈಮನಸ್ಸು ಮತ್ತು ದೇಶದ ನಾಗರಿಕರಲ್ಲಿ ಒಡಕುಂಟು ಮಾಡಿ ರಾಜಕೀಯ ಅಧಿಕಾರವನ್ನು ಪಡೆಯಲು ಪ್ರಯತ್ನಿಸುವ ರಾಜಕೀಯ ಪಕ್ಷಗಳು ಈ ರಾಷ್ಟ್ರಘಾತಕ ಕಾರ್ಯವನ್ನು ಮಾಡುತ್ತವೆ. ಇದರ ಅರಿವು ದೇಶದ ಎಲ್ಲ ರಾಜಕೀಯ ನೇತಾರರಿಗೆ ಇದೆ ಎಂದು ಹೇಳಲು ಸಾಧ್ಯವಿಲ್ಲ.

೫. ಜಾತಿಗಳಲ್ಲಿ ಜನರನ್ನು ವಿಭಜಿಸಿ ದ್ವೇಷವನ್ನು ಸೃಷ್ಟಿಸುವುದು ಆತ್ಮಘಾತಕವಾಗಿದೆ !

ದೇಶದ ಪ್ರತಿಯೊಬ್ಬ ನಾಗರಿಕನಿಗೆ ಶಿಕ್ಷಣ ಸಿಗಲೇ ಬೇಕು. ಯಾವುದೇ ಬಾಲಕ ಯಾವುದರಿಂದಲೂ ವಂಚಿತ ನಾಗಬಾರದು ಮತ್ತು ಇದಕ್ಕಾಗಿ ಪ್ರಯತ್ನಿಸುವುದು, ಸಂಪೂರ್ಣ ಸಮಾಜದ ಕೆಲಸವಾಗಿದೆ. ನಾಗರಿಕರು ಜಾತಿ ಜಾತಿಗಳಲ್ಲಿ ವಿಭಜಿಸಲ್ಪಟ್ಟರೆ ಈ ಅರಿವನ್ನು ಮೂಡಿಸಲು ಸಾಧ್ಯವಾಗುವುದಿಲ್ಲ. ಕೆಲವು ರಾಜಕೀಯ ಪಕ್ಷಗಳು ಬಹಿರಂಗವಾಗಿ ಜಾತಿಜಾತಿಗಳ ನಡುವೆ ವೈಮನಸ್ಸನ್ನು ಉಂಟುಮಾಡಲು ಪ್ರಯತ್ನಿಸುತ್ತವೆ. ಇಂತಹ ವಿಭಜಿತ ಸಮಾಜವು ರಾಷ್ಟ್ರದಲ್ಲಿದ್ದರೆ, ರಾಷ್ಟ್ರವು ಒಳಗಿನಿಂದಲೇ ಸಂಪೂರ್ಣ ಟೊಳ್ಳಾಗುತ್ತದೆ. ರಾಷ್ಟ್ರವು ಪರಿಪಕ್ವ, ಸಧೃಢ, ಬಲಿಷ್ಠ ಮತ್ತು ಕಾರ್ಯಕ್ಷಮ ಆಗಿರುವುದು ಅತ್ಯಂತ ಆವಶ್ಯಕವಾಗಿದೆ, ಹೀಗಾದರೆ ಮಾತ್ರ ನಮ್ಮ ರಾಷ್ಟ್ರದ ವಿಕಾಸ ಆಗುವುದು, ರಾಷ್ಟ್ರದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವು ಸುರಕ್ಷಿತ ಉಳಿಯುತ್ತದೆ. ದೇಶದಲ್ಲಿನ ವಿಶಿಷ್ಟ ಜಾತಿಗಳಿಗೆ ಪ್ರಾಮುಖ್ಯತೆಯನ್ನು ನೀಡುವುದು ಮತ್ತು ಇತರ ಜಾತಿಗಳನ್ನು ಕೀಳಾಗಿ ನೋಡುವುದು ಅಥವಾ ಅವರನ್ನು ಕಡೆಗಣಿಸುವುದು, ಅವರಿಗೆ ಅನ್ಯಾಯ ಮಾಡುವುದು, ಅವರನ್ನು ದೋಷಿಗಳೆಂದು ನೋಡುವುದು, ಇತರ ಜಾತಿಗಳ ಜನರ ಮನಸ್ಸಿನಲ್ಲಿ ಅವರ ಬಗ್ಗೆ ದ್ವೇಷಭಾವನೆಯನ್ನು ಮೂಡಿಸುವುದು ಈ ಎಲ್ಲ ವಿಷಯಗಳು ರಾಷ್ಟ್ರಕ್ಕೆ ಅತ್ಯಂತ ಹಾನಿಕರವಾಗಿದೆ. ರಾಷ್ಟ್ರಕ್ಕೆ ಹಾನಿಕರವಾದ ಯಾವುದೇ ವಿಷಯವನ್ನು ಸ್ವೀಕರಿಸುವುದು ಆತ್ಮಘಾತಕವಾಗಿದೆ. ರಾಷ್ಟ್ರಕ್ಕೆ ಘಾತಕವಾಗಿರುವ ಯಾವುದೇ ವಿಷಯವನ್ನು ಸ್ವೀಕರಿಸುವುದು ಆತ್ಮಹತ್ಯೆಯಾಗುತ್ತದೆ. ಆದ್ದರಿಂದ ಜನಗಣತಿ ಮಾಡುವಾಗ ಜಾತಿವಾರು ಗಣನೆಯನ್ನು ಮಾಡುವುದು ಲಾಭದಾಯಕವಾಗಲಾರದು .

ದೇಶದ ವಿಚಾರ ಮಾಡಿದರೆ ‘ಜಾತಿಯ ಅಭಿಮಾನದ ಬದಲು ದೇಶ ಮತ್ತು ಪರಂಪರೆಯ ಅಭಿಮಾನಕ್ಕೆ ಅಧಿಕ ಮಹತ್ವವಿದೆ. ಈ ತತ್ತ್ವದ ಮೇಲೆಯೇ ಸರಕಾರ ಆಡಳಿತ ನಡೆಸಬೇಕು. ಎಂದು ಆಗ್ರಹಿಸುವುದು ಸಂವಿಧಾನಬಾಹಿರ’ ಎಂದು ಹೇಳಲು ಸಾಧ್ಯವಾಗಲಾರದು. ಆದ್ದರಿಂದ ರಾಹುಲ ಗಾಂಧಿಯವರ ಜಾತಿವಾರು ಜನಗಣತಿಯ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ.

– ಶ್ರೀ. ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಟ ವ್ಯಾಖ್ಯಾನಕಾರ ಮತ್ತು ಲೇಖಕರು, ಡೊಂಬಿವಿಲಿ, ಮಹಾರಾಷ್ಟ್ರ (೨೬.೭.೨೦೨೩)