ವಿಜಯದಶಮಿಯ ರಹಸ್ಯ !

‘ಇಡೀ ಭಾರತದಲ್ಲಿ ಆಶ್ವಯುಜ ಶುಕ್ಲ ದಶಮಿ ಈ ದಿನವನ್ನು ‘ವಿಜಯದಶಮಿ’ ಎಂದು ಆಚರಿಸಲಾಗುತ್ತದೆ. ಭಾರತೀಯರ ಮೂರ್ತಿಮಂತ ಪರಾಕ್ರಮಗಳ ಇತಿಹಾಸವೇ ‘ವಿಜಯದಶಮಿ’ಯಲ್ಲಿ ಕಂಡುಬರುತ್ತದೆ. ಹಿಂದೂ ಸಮಾಜದಲ್ಲಿನ ನಾಲ್ಕೂ ವರ್ಣಗಳ ದೃಷ್ಟಿಯಿಂದಲೂ ಈ ದಿನಕ್ಕೆ ವಿಶೇಷ ಮಹತ್ವವಿದೆ.

ವಿದ್ಯೆಯ ಆರಾಧನೆ ಮತ್ತು ವಿದ್ಯೆಯನ್ನು ಜೋಪಾನ ಮಾಡುವ ಬ್ರಾಹ್ಮಣವರ್ಗವು ಈ ದಿನದಂದೇ ಸರಸ್ವತಿಯ ಪೂಜೆಯನ್ನು ಮಾಡಿ ಜ್ಞಾನದ ಪಾಠವನ್ನು ಪಡೆಯುತ್ತಾರೆ. ತಮ್ಮ ಅದ್ವಿತೀಯ ಬಾಹುಬಲದಿಂದ ಪರಾಕ್ರಮವನ್ನು ಮಾಡುವ ಕ್ಷತ್ರೀಯ ವೀರರು ವಿಜಯದಶಮಿಯಂದೇ ದೇಶವನ್ನು ರಕ್ಷಿಸಲು ಮತ್ತು ಶತ್ರುಗಳನ್ನು ನಾಶ ಮಾಡಲು ತಮ್ಮ ಆಯುಧಗಳನ್ನು ಪೂಜಿಸುತ್ತಾರೆ ಮತ್ತು ಸೀಮೋಲ್ಲಂಘನ ಮಾಡುತ್ತಾರೆ. ಹೊಸ ಹಣವನ್ನು ಉತ್ಪತ್ತಿ ಮಾಡುವುದು, ಇದು ವೈಶ್ಯರ ಕಾರ್ಯವಾಗಿದ್ದು ಮತ್ತು ಇದೇ ಸಮಯದಲ್ಲಿ ಹೊಲದಲ್ಲಿ ಹೊಸ ಹೊಸ ಧಾನ್ಯಗಳು ನಿರ್ಮಾಣ ಆಗಿರುವುದರಿಂದ ಸೃಷ್ಟಿಗೆ ‘ಸುಜಲಾಮ್‌ ಸುಫಲಾಮ್’ ಹೀಗೆ ಸ್ವರೂಪ ಪ್ರಾಪ್ತವಾಗಿರುತ್ತದೆ.

ಶತ್ರುಪಕ್ಷಗಳನ್ನು ಸೋಲಿಸಿ ತಂದಿರುವ ಸಂಪತ್ತನ್ನು ಈ ದಿನ ಸ್ವಕೀಯರಲ್ಲಿ ಹಂಚಿಕೊಳ್ಳುವುದು ವಾಡಿಕೆಯಾಗಿದೆ. ಇದರ ಉಗಮವು ರಾಮಾಯಣದ ಐದನೇ ಸರ್ಗದಲ್ಲಿ ಸಿಗುತ್ತದೆ. ಕೌತ್ಸ ಎಂಬ ಬ್ರಾಹ್ಮಣ ಪುತ್ರನು ತನ್ನ ಗುರುಗಳಿಗೆ ೧೪ ಕೋಟಿ ಚಿನ್ನದ ನಾಣ್ಯಗಳ ದಕ್ಷಿಣೆಯನ್ನು ಕೊಡಬೇಕೆಂದು ರಘುರಾಜನ ಬಳಿಗೆ ಬಂದನು. ಅದೇ ಸಮಯದಲ್ಲಿ ರಘುರಾಜನು ವಿಶ್ವಜಿತ್‌ ಯಜ್ಞವನ್ನು ಮಾಡಿ ಎಲ್ಲವನ್ನು ದಾನ ಮಾಡಿದ್ದರಿಂದ ಅವನು ದರಿದ್ರನಾಗಿದ್ದನು; ಆದರೆ ಬಂದ ಯಾಚಕನಿಗೆ ಹಾಗೆಯೇ ತಿರುಗಿ ಕಳುಹಿಸಬಾರದೆಂದು ರಘುರಾಜನು ಕುಬೇರನ ಮೇಲೆ ದಾಳಿ ಮಾಡಲು ಸಿದ್ಧನಾಗಿ ಅವನಲ್ಲಿ ಚಿನ್ನದ ನಾಣ್ಯಗಳನ್ನು ಬೇಡಿದನು. ಕುಬೇರನು ಭಯಭೀತನಾಗಿ ಅಯೋಧ್ಯೆಯ ನಗರದ ಹೊರಗಿರುವ ಒಂದು ಬನ್ನಿಗಿಡದ ಮೇಲೆ ಚಿನ್ನದ ನಾಣ್ಯಗಳನ್ನು ಸುರಿದನು. ಅವುಗಳಲ್ಲಿ ೧೪ ಕೋಟಿ ಚಿನ್ನದ ನಾಣ್ಯಗಳನ್ನು ಕೌತ್ಸಕನು ತೆಗೆದುಕೊಂಡು ಹೋದನು. ಉಳಿದ ಚಿನ್ನದ ನಾಣ್ಯಗಳನ್ನು ರಘುರಾಜನು ತನ್ನ ನಗರದÀ ನಾಗರಿಕರಿಗೆ ಹಂಚಿದನು. ಈ ದಿನವೂ ಆಶ್ವಯುಜ ಶುಕ್ಲ ದಶಮಿಯ ದಿನವಾಗಿತ್ತು. ಆ ಸಮಯದಿಂದ ಚಿನ್ನವನ್ನು ಲೂಟಿ ಮಾಡುವ ಪದ್ಧತಿ ಬಂದಿರಬಹುದು. ಈ ದಿನವೇ ಶ್ರೀರಾಮನು ರಾವಣನನ್ನು ವಧಿಸಿದನು. ಈ ರೀತಿ ಈ ದಿನವು ಪರಾಕ್ರಮದ ಮತ್ತು ವಿದ್ಯಾರ್ಜನೆಯ ದಿನವಾಗಿದೆ ಎಂದು ಭಾರತೀಯರಿಗೆ ಅತ್ಯಂತ ಉತ್ಸಾಹದಾಯಕವೆನಿಸುತ್ತದೆ. (ಆಧಾರ : ‘ದಿನವಿಶೇಷ’)