‘ಪ್ರಸ್ತುತ ಅನೇಕ ಪಾಲಕರು ತಮ್ಮ ಮಕ್ಕಳ ಅಧ್ಯಯನ, ಅವರ ಶಿಕ್ಷಣ ಮತ್ತು ಅವರ ಒಟ್ಟು ಆಯುಷ್ಯ ಇವುಗಳಲ್ಲಿ ಎಷ್ಟೊಂದು ಸಿಲುಕುತ್ತಾರೆಂದರೆ, ಇದರಲ್ಲಿಯೇ ಅವರ ಬಹಳಷ್ಟು ಸಮಯ ಕಳೆದು ಹೋಗುತ್ತದೆ. ತಮ್ಮ ಮಕ್ಕಳ ಪರೀಕ್ಷೆಯ ಒತ್ತಡವನ್ನು ಮಕ್ಕಳಿಗಿಂತ ಪಾಲಕರೇ ಹೆಚ್ಚು ತೆಗೆದುಕೊಳ್ಳುತ್ತಾರೆ. ಅವರಿಗೆ ತಮಗಾಗಿ ಸಮಯವನ್ನೇ ಕೊಡಲು ಸಾಧ್ಯವಾಗುವುದಿಲ್ಲ, ಆರೋಗ್ಯಕ್ಕಾಗಿ ಸಮಯ ಕೊಡುವುದು, ಅವರಿಗೆ ತುಂಬಾ ಕಠಿಣವಾಗುತ್ತದೆ.
ನಿಜ ಹೇಳಬೇಕೆಂದರೆ ಪರೀಕ್ಷೆ ಮತ್ತು ಅಧ್ಯಯನದ ಗಾಂಭೀರ್ಯತೆ ಮಕ್ಕಳಿಗಿರಬೇಕು. ಪಾಲಕರು ಅವರಿಗೆ ಕೇವಲ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸುವ ಕರ್ತವ್ಯವನ್ನು ಮಾಡಬೇಕು; ಆದರೆ ಈ ರೀತಿಯ ಚಿತ್ರಣ ದುರ್ಲಭವಾಗಿದೆ. ಮಕ್ಕಳು ಅಧ್ಯಯನ ಮಾಡಿ ಕಲಿಯುತ್ತಾರೆ, ಅವರು ತಮ್ಮ ಮಹತ್ವದ ಪರೀಕ್ಷೆಗಳನ್ನು ಕೊಡುತ್ತಾರೆ; ಆದರೆ ಈ ಎಲ್ಲದರಲ್ಲಿ ಪಾಲಕರಿಗೆ ಮಾತ್ರ ತಮ್ಮ ಬಹಳಷ್ಟು ಇಚ್ಛೆಗಳನ್ನು ದೂರ ಇಡಬೇಕಾಗುತ್ತದೆ. ಅನೇಕಬಾರಿ ಅವರಿಗೆ ತಮ್ಮ ಹವ್ಯಾಸಗಳನ್ನು ಪೂರ್ಣಗೊಳಿಸಲು ಅಥವಾ ಬೇರೆ ಏನಾದರು ಮಾಡಲು ಸಮಯವೇ ಸಿಗುವುದಿಲ್ಲ. ಚಿಕ್ಕ ಮಗುವಿರುವಾಗ ಪಾಲಕರು ಆ ಮಗುವಿಗಾಗಿ ಎಲ್ಲವನ್ನು ಮಾಡಿರುತ್ತಾರೆ ! ಮಗು ದೊಡ್ಡದಾದ ನಂತರ ಅವನಿಗೆ ಅಭ್ಯಾಸ ಆಗಬೇಕೆಂದು ‘ಅವನ ಕೆಲಸಗಳನ್ನು ಅವನಿಗೇ ಮಾಡಲು ಹೇಳಬೇಕು’, ಇದನ್ನು ಪಾಲಕರು ಆವಶ್ಯ ಮಾಡಬೇಕು. ಕನಿಷ್ಟಪಕ್ಷ ಅವರಿಗೆ ಸಂಬಂಧಿಸಿದ ಕೆಲಸಗಳನ್ನಾದರೂ ಸ್ವತಃ ಮಾಡದೇ ಅವರಿಗೆ ಮಾಡಲು ಹೇಳಬೇಕು.
ಎಷ್ಟೋ ಸಲ ಮಗನು ಅಧ್ಯಯನ ಮಾಡುತ್ತಿದ್ದಾನೆಂದು ಅವನಿಗೆ ಕುಳಿತಲ್ಲಿಯೇ ಎಲ್ಲವನ್ನು ಕೊಡಲಾಗುತ್ತದೆ. ಯಾವಾಗ ಲಾದರೊಮ್ಮೆ ಪರೀಕ್ಷೆಯ ಸಮಯದಲ್ಲಿ ಹೀಗೆ ಮಾಡುವುದು ಸರಿ; ಆದರೆ ಯಾವಗಲೂ ಈ ರೀತಿ ಮಾಡಿದರೆ ಪಾಲಕರಿಗೆ ತಮ್ಮ ಆಯುಷ್ಯವೆಂದು ಏನೂ ಉಳಿಯುವುದಿಲ್ಲ. ಪಾಲಕರು ಮಕ್ಕಳ ಶಾರೀರಿಕ ಕೆಲಸಗಳನ್ನು ಮಾಡಿ ತಮ್ಮ ಶರೀರಕ್ಕೆ ಮತ್ತು ಅವರ ಪರೀಕ್ಷೆಯ ಒತ್ತಡವನ್ನು ತೆಗೆದುಕೊಂಡು ತಮ್ಮ ಮನಸ್ಸಿಗೆ ತೊಂದರೆಯನ್ನು ಕೊಡಬಾರದು.
ಮಕ್ಕಳು ತಮ್ಮ ವೈಯಕ್ತಿತ ಶಾರೀರಿಕ ಕೆಲಸಗಳನ್ನು ಮಾಡಲು ಸಮಯವಿಲ್ಲದಷ್ಟು ಒಂದೇ ಸಮನೇ ಅಭ್ಯಾಸ ಮಾಡುತ್ತಾರೆಯೇ ? ಈ ಪ್ರಶ್ನೆಗೆ ಉತ್ತರ ಇಲ್ಲ ಎಂದಾಗಿದೆ. ಮಕ್ಕಳು ಬಹಳಷ್ಟು ಸಮಯ ಸಂಚಾರವಾಣಿಯನ್ನು ನೋಡುತ್ತಾ ಕಾಲಕಳೆಯುತ್ತಾರೆ. ಮಕ್ಕಳು ಅವರ ಈ ‘ಸ್ಕ್ರೀನ್ ಟೈಮ್’ ಅಂದರೆ ಸಂಚಾರವಾಣಿ, ಕಂಪ್ಯೂಟರ್, ದೂರಚಿತ್ರವಾಹಿನಿ ಮುಂತಾದವುಗಳನ್ನು ನೋಡುವ ಸಮಯವನ್ನು ಸ್ವಲ್ಪ ಕಡಿಮೆ ಮಾಡಬೇಕು ಮತ್ತು ತಾಯಿಗೆ ಮನೆಯ ಕೆಲಸಗಳಲ್ಲಿ ಸ್ವಲ್ಪ ಸಹಾಯ ಮಾಡಬೇಕು. ಸಣ್ಣ ಸಣ್ಣ ಕೆಲಸಗಳೆಂದರೆ, ಕಸ ಗುಡಿಸುವುದು, ಇಸ್ತ್ರೀ ಮಾಡುವುದು, ಊಟದ ನಂತರ ಕಟ್ಟೆಯನ್ನು ಸ್ವಚ್ಛಗೊಳಿಸುವುದು, ಪಾತ್ರೆಗಳನ್ನು ತೊಳೆಯುವುದು ಇತ್ಯಾದಿಗಳನ್ನು ಮಕ್ಕಳು ಮಾಡಿದರೂ ಪಾಲಕರಿಗೆ ಕೆಲವು ಪ್ರಮಾಣದಲ್ಲಿ ಸಮಯ ಸಿಗುವುದು. ಸರಿಯಾಗಿ ಆಯೋಜನೆ ಮಾಡಿ ಕೆಲಸಗಳ ವರ್ಗೀಕರಣ ಮಾಡಿದರೆ ಎಲ್ಲರಿಗೂ ವ್ಯಾಯಾಮ, ಪ್ರಾಣಾಯಾಮ, ವಾಚನ, ನಾಮಜಪ ಇವುಗಳಿಗಾಗಿ ಅಷ್ಟೇ ಅಲ್ಲ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಪ್ರಯತ್ನಿಸಬಹುದು !’
– ವೈದ್ಯ ಸಮೀರ ಮುಕುಂದ ಪರಾಂಜಪೆ, ಖೆರ್ಡಿ, ದಾಪೋಲಿ, ರತ್ನಾಗಿರಿ. (೧೭.೩.೨೦೨೩)
ಸಂಪರ್ಕ ವಿ-ಅಂಚೆ : [email protected])