‘ಬ್ರಿಟನ್ ಭಾರತಕ್ಕೆ ನೀಡಿದ ಆರ್ಥಿಕ ನೆರವನ್ನು ಹಿಂದಿರುಗಿಸಬೇಕಂತೆ !’-ಬ್ರಿಟನ್ ಜಿ.ಬಿ.ಎನ್. ಸುದ್ದಿ ವಾಹಿನಿಯ ನಿರೂಪಕ

‘ಚಂದ್ರಯಾನ-3’ ಯಶಸ್ಸಿನಿಂದ ಬ್ರಿಟನ್ ಸುದ್ದಿ ವಾಹಿನಿಯ ನಿರೂಪಕನಿಗೆ ಹೊಟ್ಟೆಕಿಚ್ಚು !

ಲಂಡನ್ (ಇಂಗ್ಲೆಂಡ್) – ಭಾರತದ ‘ಚಂದ್ರಯಾನ-3’ ಅಭಿಯಾನದ ಯಶಸ್ಸಿಗೆ ವಿಶ್ವದಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ, ಆದರೆ ಕೆಲವು ಜನರಿಗೆ ಅಸೂಯೆಯಾಗಿದೆ. ‘ಚಂದ್ರಯಾನ-3’ರ ಸುದ್ದಿ ಕುರಿತು ವಿವರಿಸುವಾಗ ಇಂಗ್ಲೆಂಡ್ ನ ಜಿ.ಬಿ.ಎನ್. ಈ ಸುದ್ದಿ ವಾಹಿನಿಯ ನಿರೂಪಕ ಪ್ಯಾಟ್ರಿಕ್ ಕ್ರಿಸ್ಟಿಸನ್ ಮಾತನಾಡುತ್ತಾ, ‘ಭಾರತ ಬ್ರಿಟನ್ ನ ಹಣವನ್ನು ಹಿಂತಿರುಗಿಸಬೇಕು. ತನ್ನದೇ ಆದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಹೊಂದಿರುವ ದೇಶಗಳಿಗೆ ಬ್ರಿಟನ್ ಹಣವನ್ನು ನೀಡಬಾರದು’, ಎಂದು ಹೇಳಿದ್ದಾರೆ. ಇದರಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತೀಯರಿಂದ ಅವರಿಗೆ ಬಲವಾಗಿ ವಿರೋಧ ವ್ಯಕ್ತವಾಗುತ್ತಿದೆ.

ಕ್ರಿಸ್ಟಿಸನ್ ಮಾತನಾಡುತ್ತಾ, ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದೆ. ನಾನು ಅವರನ್ನು ಅಭಿನಂದಿಸಲು ಬಯಸುತ್ತೇನೆ. ಇದರೊಂದಿಗೆ ನಮ್ಮ 2.3 ಬಿಲಿಯನ್ ಪೌಂಡ್ ಗಳನ್ನು (24 ಸಾವಿರ ಕೋಟಿ ರೂಪಾಯಿಗೂ ಹೆಚ್ಚು) ಹಿಂದಿರುಗಿಸುವಂತೆ ನಾನು ಭಾರತಕ್ಕೆ ಒತ್ತಾಯಿಸುತ್ತೇನೆ. ಈ ಮೊತ್ತವನ್ನು ನಾವು 2016 ರಿಂದ 2021 ರ ಅವಧಿಯಲ್ಲಿ ಸಹಾಯವಾಗಿ ನೀಡಿದ್ದೆವು. ಮುಂದಿನ ವರ್ಷ ಭಾರತಕ್ಕೆ 57 ಮಿಲಿಯನ್ ಪೌಂಡ್ (595 ಕೋಟಿ ರೂಪಾಯಿ) ನೀಡಲಿದ್ದೇವೆ. ನಮ್ಮ ದೇಶದ ಜನರು ಹೀಗೆ ಮಾಡಬಾರದು. ತನ್ನದೇ ಆದ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಹೊಂದಿರುವ ಯಾವುದೇ ದೇಶವನ್ನು ಆರ್ಥಿಕವಾಗಿ ಬೆಂಬಲಿಸಬಾರದು ಎಂಬ ನಿಯಮವನ್ನು ನಾವು ಮಾಡಬೇಕು ಎಂದು ಹೇಳಿದರು.

ಕ್ರಿಸ್ಟಿಸನ್ ತಮ್ಮ ಮಾತನ್ನು ಮುಂದುವರಿಸಿ, ಒಂದು ವೇಳೆ ನಿವು (ಭಾರತ) ಚಂದ್ರನ ದಕ್ಷಿಣ ಧ್ರುವಕ್ಕೆ ರಾಕೆಟ್ ಕಳುಹಿಸಬಹುದಾದರೆ, ನೀವು ನಮ್ಮ ಬಳಿ ಹಣವನ್ನು ಕೇಳಬಾರದು. ಭಾರತದಲ್ಲಿ 22.9 ಕೋಟಿ ಬಡವರಿದ್ದಾರೆ; ಆದರೆ ಭಾರತವು ವಿಶ್ವದ ಐದನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿದೆ. (ಭಾರತವು ಅರ್ಥವ್ಯವಸ್ಥೆಯ ಓಟದಲ್ಲಿ ಬ್ರಿಟನ್ನನ್ನು ಹಿಂದಿಕ್ಕಿರುವುದರಿಂದಲೇ ಅವರ ಸುದ್ದಿ ನಿರೂಪಕನಿಗೆ ಭಾರತ ದ್ವೇಷದ ಕಾಮಾಲೆಯಾಗಿದೆ ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ! – ಸಂಪಾದಕರು) ಭಾರತದ ಅರ್ಥವ್ಯವಸ್ಥೆ 3.75 ಟ್ರಿಲಿಯನ್ ಡಾಲರ್ (ಸುಮಾರು 250 ಲಕ್ಷ ಕೋಟಿ ರೂಪಾಯಿ) ಮೌಲ್ಯದ್ದಾಗಿದೆ. ನಾವು ಭಾರತದಲ್ಲಿರುವ ಬಡವರಿಗೆ ಏಕೆ ಸಹಾಯ ಮಾಡುತ್ತಿದ್ದೇವೆ? ಅವರದೇ ಸರಕಾರಕ್ಕೆ ಅದರ ಬಗ್ಗೆ ಕಾಳಜಿ ಇಲ್ಲವೇ ? ಎಂದಿದ್ದಾರೆ.

ಬ್ರಿಟನ್ ಭಾರತಕ್ಕೆ 3 ಸಾವಿರದ 719 ಲಕ್ಷ ಕೋಟಿ ರೂಪಾಯಿ ಮರಳಿಸಬೇಕು !

ಪ್ಯಾಟ್ರಿಕ್ ಕ್ರಿಸ್ಟಿಸನ್ ಅವರ ಈ ಹೇಳಿಕೆಗಳನ್ನು ಭಾರತೀಯರು ಸ್ಪಷ್ಟವಾಗಿ ಖಂಡಿಸಿದ್ದಾರೆ. ಶಶಾಂಕ್ ಶೇಖರ್ ಝಾ ಎಂಬ ವ್ಯಕ್ತಿ ಅಭ್ಯಾಸಪೂರ್ಣ ಟ್ವೀಟ್ ಮಾಡಿ, ‘ಬ್ರಿಟನ್ ಭಾರತದಿಂದ ಲೂಟಿ ಮಾಡಿದ 44.997 ಟ್ರಿಲಿಯನ್ ಡಾಲರ್ (3 ಸಾವಿರದ 719 ಲಕ್ಷ ಕೋಟಿ ರೂಪಾಯಿಗಳು) ಅನ್ನು ಹಿಂದಿರುಗಿಸಬೇಕು. ಅನುದಾನದ ಬಗ್ಗೆ ನಮಗೆ ನೆನಪಿಸಿದ್ದಕ್ಕಾಗಿ ಧನ್ಯವಾದಗಳು ! ಲೂಟಿ ಮಾಡಿದ 45 ಟ್ರಿಲಿಯನ್ ಡಾಲರ್ ಗಳಿಂದ 2.5 ಶತಕೋಟಿ ಡಾಲರ್ ಕಡಿತಗೊಳಿಸಿ ಉಳಿದ ಹಣವನ್ನು ನಮಗೆ ಹಿಂತಿರುಗಿಸಿ.’ ಎಂದು ಬರೆದಿದ್ದಾರೆ.

ಸಂಪಾದಕರ ನಿಲುವು

* ಬ್ರಿಟಿಷ್ ಗೂಂಡಾಗಳ ಗುಂಪು ಜಗತ್ತನ್ನು ಲೂಟಿ ಮಾಡಿ ತಮ್ಮ ದೇಶವನ್ನು ಕಟ್ಟಿದೆ ಎಂದು ಅವರ ವಂಶಸ್ಥರಿಗೆ ದಿಟ್ಟವಾಗಿ ಹೇಳುವ ಸಮಯ ಈಗ ಬಂದಿದೆ!