ಹಿಂದೂ ಸಂಘಟನೆಗಳನ್ನು ಸ್ಥಾಪಿಸುವುದರ ಉದ್ದೇಶ ಮತ್ತು ಮಹತ್ವ !

‘ನನಗೆ ಹಿಂದೂಸಂಘಟನೆಯ ದೃಷ್ಟಿ ಯಿಂದ ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡುವಾಗ ಆಯಾ ರಾಜ್ಯಗಳ ವಿವಿಧ ಹಿಂದೂ ಸಂಘಟನೆಗಳ ಕಾರ್ಯರ್ತರ ಮತ್ತು ಪದಾಧಿಕಾರಿ ಗಳ ಭೇಟಿಯಾಗುತ್ತದೆ. ಆಗ ಗಮನಕ್ಕೆ ಬಂದ ಮಹತ್ವದ ವಿಷಯವೆಂದರೆ, ಹಿಂದೂ ಸಂಘಟನೆಗಳ ಕಾರ್ಯಕರ್ತ ರಿಗಷ್ಟೇ ಅಲ್ಲ, ಸಂಘಟನೆಗಳ ಪದಾಧಿಕಾರಿಗಳಿಗೂ ಹಿಂದೂಗಳ ರಕ್ಷಣೆ ಅಥವಾ ಹಿಂದೂ ಧರ್ಮದ ರಕ್ಷಣೆ ಎಂದರೇನು ? ಈ ವಿಷಯ ದಲ್ಲಿ ಸುಸ್ಪಷ್ಟತೆ ಇರುವುದಿಲ್ಲ. ನಮ್ಮ ಹಿಂದೂ ಬಾಂಧವರು ಕಷ್ಟಪಟ್ಟು ಸಂಘಟನೆಗಳನ್ನು ಸ್ಥಾಪಿಸಿ ಹಿಂದೂ ಧರ್ಮ, ಹಿಂದೂ ಜನರು ಮತ್ತು ರಾಷ್ಟ್ರ ರಕ್ಷಣೆಗಾಗಿ ಪ್ರಯತ್ನಿಸುವ ವಿಷಯದ ಕೆಲವು ಅಂಶಗಳನ್ನು ನಾವು ಕಳೆದ ಸಂಚಿಕೆಯಲ್ಲಿ ನೋಡಿದೆವು. ಇಂದು ಅದರ ಮುಂದಿನ ಭಾಗವನ್ನು ತಿಳಿದುಕೊಳ್ಳೋಣ.

ಸದ್ಗುರು (ಡಾ.) ಚಾರುದತ್ತ ಪಿಂಗಳೆ

೫. ಹಿಂದೂಗಳ ಶರೀರದೊಂದಿಗೆ ಅವರ ಮನಸ್ಸು ಮತ್ತು ಆತ್ಮವನ್ನೂ ರಕ್ಷಣೆ ಮಾಡುವುದು ಆವಶ್ಯಕ !

ನಾನು ಅನೇಕ ಜನರಿಗೆ ‘ನಾವು ಹಿಂದೂ ಸಂಘಟನೆಗಳನ್ನು ಏಕೆ ಮಾಡುತ್ತೇವೆ ?’, ಎಂದು ಕೇಳಿದೆ. ಆಗ ಹೆಚ್ಚಿನ ಸಂಘಟನೆಗಳ ಪದಾಧಿಕಾರಿಗಳು, ನಾವು ಹಿಂದೂಗಳ ರಕ್ಷಣೆಗಾಗಿ ಮತ್ತು ಹಿಂದೂಗಳ ಸಮಸ್ಯೆಗಳನ್ನು ನಿವಾರಿಸಲು ಹಿಂದೂ ಸಂಘಟನೆಗಳನ್ನು ಮಾಡುತ್ತೇವೆ ಎಂದು ಹೇಳಿದರು. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ದಂಗೆಗಳಾದರೆ ಹಿಂದೂಗಳ ರಕ್ಷಣೆಯನ್ನು ಮಾಡಬೇಕೆಂದು ಹೆಚ್ಚಿನ ಹಿಂದೂ ಸಂಘಟನೆಗಳ ಸ್ಥಾಪನೆಯಾಗಿದೆ ಎಂಬುದು ಇದರಿಂದ ತಿಳಿದು ಬರುತ್ತದೆ. ಆದ್ದರಿಂದ ಹೆಚ್ಚಿನ ಹಿಂದುತ್ವನಿಷ್ಠ ಸಂಘಟನೆಗಳಲ್ಲಿ ಹಿಂದೂ ಮನಸ್ಸು, ಹಿಂದೂ ಆತ್ಮ, ಹಿಂದೂ ಸಂಸ್ಕೃತಿ, ಹಿಂದೂ ಪರಂಪರೆಗಳು, ಧರ್ಮಶಾಸ್ತ್ರ ಅಥವಾ ಧರ್ಮಗ್ರಂಥಗಳ ರಕ್ಷಣೆಯ ಯಾವುದೇ ಉದ್ದೇಶ ಮತ್ತು ಯೋಜನೆಯೇ ಇಲ್ಲ. ಹಾಗಾದರೆ ಯಾವುದರ ರಕ್ಷಣೆ ಮಾಡುವುದು ? ಇದುವೇ ತಿಳಿಯದಿದ್ದರೆ, ಹಿಂದೂ ಧರ್ಮದ ರಕ್ಷಣೆಯನ್ನು ಹೇಗೆ ಮಾಡುವುದು ? ಸದ್ಯ ಉಡುಗೆ-ತೊಡುಗೆ, ಆಹಾರ-ವಿಹಾರ, ಭಾಷೆ, ಇತಿಹಾಸ ಮತ್ತು ವಿಚಾರಪ್ರಕ್ರಿಯೆ ಇವೆಲ್ಲವೂ ಪಾಶ್ಚಾತ್ಯ ವಿಚಾರಶೈಲಿಯಾಗಿವೆ. ನಿರ್ದಿಷ್ಟವಾಗಿ ಹೇಳಬೇಕಾದರೆ ಅವರ ಮೇಲೆ ಕ್ರೈಸ್ತರ ಮತ್ತು ಸಾಮ್ಯವಾದಿಗಳ ಪ್ರಭಾವವಿದೆ. ಎಲ್ಲಿಯವರೆಗೆ ಮನುಷ್ಯಜನ್ಮದ ಧ್ಯೇಯಪ್ರಾಪ್ತಿಯ ವಿಷಯದಲ್ಲಿ ಹಿಂದೂ ಸಂಘಟನೆಗಳ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಮತ್ತು ಸಾಮಾನ್ಯ ಹಿಂದೂಗಳಿಗೆ ತಿಳಿಯುವುದಿಲ್ಲವೋ, ಅಲ್ಲಿಯವರೆಗೆ ನಿಜವಾದ ಅರ್ಥದಲ್ಲಿ ಹಿಂದೂ ಧರ್ಮರಕ್ಷಣೆ ಆಗಲಾರದು, ಎಂಬುದನ್ನು ಗಮನದಲ್ಲಿಡಬೇಕು. ದಂಗೆಗಳ ಘಟನೆಗಳಲ್ಲಿ ಹಿಂದೂಗಳ ಶರೀರದ ರಕ್ಷಣೆಯು ಆವಶ್ಯಕ ವಾಗಿದೆ. ಅದೇ ರೀತಿ ಪ್ರತಿಯೊಬ್ಬ ಹಿಂದೂವು ಪ್ರತಿದಿನ ಧರ್ಮಾಚರಣೆಯೊಂದಿಗೆ ಸಾಮಾಜಿಕ ಸ್ತರದಲ್ಲಿ ವಿವಿಧ ಧಾರ್ಮಿಕ ಉತ್ಸವಗಳನ್ನು ಆಯೋಜಿಸಿ ಹಿಂದೂ ಸಂಘಟನೆ ಮತ್ತು ಧರ್ಮರಕ್ಷಣೆ ಮಾಡುವುದೂ ಆವಶ್ಯಕವಾಗಿದೆ.

೬. ಮೂರು ಪೀಳಿಗೆಗಳ ಸಂಘಟನೆಗಳು ಮತ್ತು ಪರಂಪರೆಗಳ ರಕ್ಷಣೆ !

ಹಿಂದೂ ಧರ್ಮದಲ್ಲಿ ನಮ್ಮ ಪಂಚಾಂಗಕ್ಕನುಸಾರ ೩೬೫ ದಿನಗಳಲ್ಲಿ ಸುಮಾರು ೧೫೦ ದಿನ ಒಂದಲ್ಲ ಒಂದು ಧಾರ್ಮಿಕ ಕಾರ್ಯಕ್ರಮವನ್ನು ಹೇಳಲಾಗಿದೆ. ಅದರಲ್ಲಿ ಹಬ್ಬ, ಉತ್ಸವಗಳು, ವ್ರತಗಳು ಮತ್ತು ಸಾರ್ವಜನಿಕ ಗಣೇಶೋತ್ಸವ ಮತ್ತು ನವರಾತ್ರ್ಯುತ್ಸವ ಇತ್ಯಾದಿಗಳು ಒಳಗೊಂಡಿವೆ. ಇವುಗಳ ಮಾಧ್ಯಮದಿಂದ ವೈಯಕ್ತಿಕ, ಕೌಟುಂಬಿಕ ಮತ್ತು ಸಾಧ್ಯವಿದ್ದರೆ ಸಾಮಾಜಿಕ ಸ್ತರದಲ್ಲಿ ಧರ್ಮಶಾಸ್ತ್ರಕ್ಕನುಸಾರ ಕಾರ್ಯಕ್ರಮಗಳ ಆಯೋಜಿಸಿ ಧರ್ಮರಕ್ಷಣೆಯಾಗುವುದು ತುಂಬಾ ಮಹತ್ವ ದ್ದಾಗಿದೆ. ಇವುಗಳನ್ನು ಆಚರಿಸುವಾಗ ಹಿಂದೂಗಳು ಆ ದಿನ ಕುಟುಂಬ ಅಥವಾ ಸಮಾಜದಲ್ಲಿ ಒಟ್ಟಾಗಿ ಹಬ್ಬ ಅಥವಾ ಧಾರ್ಮಿಕ ಕಾರ್ಯಕ್ರಮ ಆಚರಣೆ ಮಾಡುವುದರ ಹಿಂದಿನ ಆಧ್ಯಾತ್ಮಿಕ, ಐತಿಹಾಸಿಕ, ಸಾಮಾಜಿಕ, ಧಾರ್ಮಿಕ ಇತ್ಯಾದಿ ಉದ್ದೇಶಗಳ ವಿಷಯದಲ್ಲಿ ಅಭ್ಯಾಸಪೂರ್ಣ ಚರ್ಚೆಯನ್ನು ಮಾಡಬೇಕು. ಈ ಉತ್ಸವಗಳನ್ನು ಸತತವಾಗಿ ಧರ್ಮಶಾಸ್ತ್ರ ಕ್ಕನುಸಾರ ಆಚರಿಸುವುದರಿಂದ ಭಾವೀ ಪೀಳಿಗೆಯ ಮಕ್ಕಳಿಗೆ ಧರ್ಮಸಂಸ್ಕಾರ ಸಿಗುತ್ತದೆ. ಇದರಿಂದ ಹಿಂದೂಗಳ ಮನಸ್ಸು ಧರ್ಮಪಾರಾಯಣವಾಗುತ್ತದೆ ಮತ್ತು ಇದನ್ನೇ ಹಿಂದೂ ಮನಸ್ಸು ಮತ್ತು ಆತ್ಮಗಳ ರಕ್ಷಣೆ ಎನ್ನಬಹುದು.

೭. ಧರ್ಮಾಚರಣಿ ಸಮಾಜವೇ ಹಿಂದೂ ರಾಷ್ಟ್ರದ (ರಾಮ ರಾಜ್ಯದ) ಅಡಿಪಾಯ !

ನಿತ್ಯ, ನೈಮಿತ್ತಿಕ ಮತ್ತು ಪ್ರಾಸಂಗಿಕ ಧಾರ್ಮಿಕ ಆಚರಣೆ ಗಳಿಂದ ಕೇವಲ ವ್ಯಕ್ತಿಯಲ್ಲ, ಕುಟುಂಬ ಮತ್ತು ಸಮಾಜವೂ ಧರ್ಮಪಾರಾಯಣವಾಗುತ್ತದೆ. ಧರ್ಮಾಚರಣೆಯಿಂದ ಪ್ರತಿ ದಿನ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಸ್ತರಗಳಲ್ಲಿ ತನ್ನಿಂತಾನೇ ಧರ್ಮರಕ್ಷಣೆಯ ಕಾರ್ಯ ನಡೆಯುತ್ತಿರುತ್ತದೆ. ಇದರಿಂದ ನಿಜವಾದ ಅರ್ಥದಲ್ಲಿ ಹಿಂದೂ ಮನಸ್ಸು, ಸಂಸ್ಕಾರ, ಧರ್ಮಶಾಸ್ತ್ರ ಮತ್ತು ಸಂಸ್ಕೃತಿಯ ರಕ್ಷಣೆಯಾಗುತ್ತದೆ. ಈ ಧರ್ಮರಕ್ಷಣೆಯ ಕಾರ್ಯದಲ್ಲಿ ಹಿಂದೂಗಳ ಸ್ತ್ರೀಶಕ್ತಿ ಸತತವಾಗಿ ಕೃತಿಶೀಲವಾಗಿರುತ್ತದೆ. ಒಬ್ಬ ಸ್ತ್ರೀ ಸಂಪೂರ್ಣ ಕುಟುಂಬಕ್ಕೆ ಧರ್ಮಶಿಕ್ಷಣ ನೀಡಿ ಧರ್ಮರಕ್ಷಣೆಯ ಕಾರ್ಯ ವನ್ನು ಮಾಡಬಹುದು. ಯಾವಾಗ ಮನೆಯಲ್ಲಿ ಇಂತಹ ಧರ್ಮಮಯ ವಾತಾವರಣವಿರುತ್ತದೆಯೋ, ಆಗ ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ಧರ್ಮದ ಸಂಸ್ಕಾರಗಳು ಸಿಗುತ್ತವೆ. ಇಂತಹ ಧರ್ಮಸಂಸ್ಕಾರಯುಕ್ತ ಯುವ ಹಿಂದೂ ಪೀಳಿಗೆ ಯಾವುದೇ ಹಿಂದೂವಿರೋಧಿಗಳ ಪ್ರಶ್ನೆಗಳಿಗೆ ಖಂಡತುಂಡ ಉತ್ತರಗಳನ್ನು ನೀಡಲು ಸಕ್ಷಮವಾಗುತ್ತದೆ. ಹಿಂದೂ ಕುಟುಂಬದ ಹುಡುಗಿಯರು ಧರ್ಮಶಿಕ್ಷಿತರಾದರೆÀ ಸಂಭಾವ್ಯ ‘ಲವ್‌ ಜಿಹಾದ್’ ತನ್ನಿಂತಾನೆ ದೂರವಾಗುತ್ತದೆ. ಇದರ ಜೊತೆಗೆ ಹಿಂದೂ ಧರ್ಮದ ಮೇಲಾಗುವ ಆಘಾತಗಳ ವಿಷಯದಲ್ಲಿ ಹೊಸ ಪೀಳಿಗೆಯೊಂದಿಗೆ ಆಗಾಗ ಚರ್ಚೆಯಾಗಬೇಕು. ಮಕ್ಕಳಿಗೆ ಯೋಗ್ಯ ಉಪಾಯಾತ್ಮಕ ದೃಷ್ಟಿಕೋನ ನೀಡಿ ಸತತ ವಾಗಿ ಧರ್ಮಶಿಕ್ಷಣವನ್ನು ನೀಡಿದರೆ ಭವಿಷ್ಯದಲ್ಲಿ ಧರ್ಮ ರಕ್ಷಣೆ ಮಾಡುವ ಧರ್ಮವೀರರೇ ತಯಾರಾಗುವರು, ಇದರಲ್ಲಿ ಯಾವುದೇ ಸಂಶಯವಿಲ್ಲ.

ಹಿಂದೂಗಳ ಸಂಘಟನೆಗಳು ಬಲಶಾಲಿಯಾಗುವುದರಿಂದ ದಂಗೆಯಂತಹ ಪ್ರಸಂಗಗಳಲ್ಲಿಯೂ ಅವರು ಸಂಘಟಿತ ರಾಗಿದ್ದು ಆಡಳಿತದ ಜೊತೆಗೆ ತಮ್ಮೊಂದಿಗೆ ಇತರರ ರಕ್ಷಣೆ ಯನ್ನು ಮಾಡಲು ಸಕ್ಷಮರಾಗುವರು. ಅದಕ್ಕಾಗಿ ನಾವು ಯುವಪೀಳಿಗೆಗೆ ಕಡ್ಡಾಯವಾಗಿ ಸ್ವರಕ್ಷಣಾ ತರಬೇತಿ ನೀಡ ಬೇಕು. ಅದರಿಂದ ಹಿಂದೂ ಮನಸ್ಸು, ಹಿಂದೂ ಆತ್ಮ, ಹಿಂದೂ ಸಂಸ್ಕೃತಿ ಮತ್ತು ಪರಂಪರೆ ಇತ್ಯಾದಿಗಳ ರಕ್ಷಣೆಗಾಗಿ ಹಿಂದೂ ಸಂಘಟನೆಗಳನ್ನು ನಿರ್ಮಿಸಬೇಕು.

೮. ಜನ್ಮಹಿಂದೂ ಅಲ್ಲ, ಧರ್ಮಾಚರಣೀ ಕರ್ಮಹಿಂದೂವೇ ನಿಜವಾದ ಬಲಶಾಲಿ !

ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ ಪ್ರತಿಯೊಬ್ಬ ಹಿಂದೂ, ಹಿಂದೂ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಪದಾಧಿಕಾರಿಗಳು ವೈಯಕ್ತಿಕ ಜೀವನದಲ್ಲಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ. ಬಹಳಷ್ಟು ಸಲ ಸಾಧನೆ ಅಥವಾ ಅಧ್ಯಾತ್ಮದ ಬಗ್ಗೆ ಮಾತನಾಡಿದಾಗ ‘ಇದು ಸಾಧು ಸನ್ಯಾಸಿಗಳ ಕೆಲಸವಾಗಿದೆ’, ಅದೇ ರೀತಿ ‘ಇದು ವಯಸ್ಸಾದ ನಂತರದ ಕಾರ್ಯವಾಗಿದೆ, ಅದನ್ನು ಕೇವಲ ಬ್ರಾಹ್ಮಣರು ಮಾಡುವುದಿರುತ್ತದೆ, ಇತರರಿಗೆ ಇದರ ಅವಶ್ಯಕತೆಯಿಲ್ಲ’, ಎಂದು ಭ್ರಮೆ ಪಸರಿಸಲಾಗಿದೆ. ನಮ್ಮ ಒಳಗಿನ ದಿವ್ಯತೆಯನ್ನು ಜಾಗೃತಗೊಳಿಸುವುದಕ್ಕೆ ಸಾಧನೆ ಎನ್ನುತ್ತಾರೆ ಮತ್ತು ಅದನ್ನು ಎಲ್ಲರೂ ಮಾಡಬೇಕು. ಸಾಧನೆಯಿಂದ ಸಾಧಕನ ಮನೋಬಲ ಹೆಚ್ಚಾಗುತ್ತದೆ ಮತ್ತು ಅವನ ಆತ್ಮಶಕ್ತಿ ಜಾಗೃತವಾಗುತ್ತದೆ. ಈ ದಿವ್ಯ ಶಕ್ತಿಯ ಆಧಾರದಲ್ಲಿ ಹಿಂದೂ ಧರ್ಮ ಅಥವಾ ದೇವಭೂಮಿ ಭಾರತ ಇವುಗಳನ್ನು ಸಹಜವಾಗಿ ರಕ್ಷಣೆಯನ್ನು ಮಾಡಬಹುದು. ಜನ್ಮಹಿಂದೂ ಬಲಶಾಲಿಯಾಗಿರುವುದಿಲ್ಲ, ಸಾಧನೆಯನ್ನು ಮಾಡುತ್ತಾ ಧರ್ಮಾಚರಣೆ ಮಾಡುವ ಕರ್ಮ ಹಿಂದೂವೇ ನಿಜವಾಗಿ ಬಲಶಾಲಿಯಾಗಿರುತ್ತಾನೆ.

ಸದ್ಯ ‘ಹಿಂದೂ ಸಮಾಜ ಜಗತ್ತಿನ ಹೋರಾಟ ಪ್ರವೃತ್ತಿಯ ಮತ್ತು ಸಹಿಷ್ಣು ಸಮಾಜವಾಗಿದೆ’, ಎಂಬ ಒಂದು ನಿರರ್ಥಕ ಅಭಿಮಾನವಿದೆ; ‘ಸಾಧನೆ ಮಾಡುವ ಮತ್ತು ಧರ್ಮಾಚರಣಿ ಹಿಂದೂವೇ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಹೋರಾಡುವ ಮತ್ತು ಸಹಿಷ್ಣು ಸಮಾಜವಾಗಿದೆ’ ಎಂದು ಹೇಳಬೇಕು. ಮಹಾಭಾರತದ ಯುದ್ಧದಲ್ಲಿ ಕೌರವರು ಮತ್ತು ಪಾಂಡವರು ಹೀಗೆ ಎರಡೂ ಪಕ್ಷಗಳಲ್ಲಿ ಹಿಂದೂಗಳೇ ಇದ್ದರು. ಸಾಧಕವೃತ್ತಿಯ ಧರ್ಮಾಚರಣಿ ಪಾಂಡವರ ತುಲನೆಯಲ್ಲಿ ಕೌರವರಲ್ಲಿ ಸೈನ್ಯ ಸಂಖ್ಯಾಬಲ, ಸೈನ್ಯ ಬಾಹುಬಲ, ಶಸ್ತ್ರಬಲ, ಧನಬಲ ಇತ್ಯಾದಿ ಅನೇಕ ಪಟ್ಟು ಅಧಿಕವಿತ್ತು. ಆ ಕಾಲದಲ್ಲಿ ಬಲಾಢ್ಯ ಹಿಂದೂಗಳೆಂದು ಜನ್ಮಹಿಂದೂ ಕೌರವರ ವಿಜಯ ಆಗಬೇಕಿತ್ತು; ಆದರೆ ಸಾಧನೆ ಮಾಡುವ, ಧರ್ಮನಿಷ್ಠ, ಭಗವಾನ ಶ್ರೀಕೃಷ್ಣನನ್ನು ತಮ್ಮ ಪಕ್ಷದಲ್ಲಿಟ್ಟುಕೊಳ್ಳುವ ಮುಷ್ಟಿಯಷ್ಟು ಪಾಂಡವರು ವಿಜಯಿಯಾದರು. ಇದರಿಂದ ಜನ್ಮ ಹಿಂದೂ ಗಳಿಗಿಂತ ಕರ್ಮಹಿಂದೂ-ಸಾಧಕ ಹಿಂದೂಗಳೇ ಅಧಿಕ ಬಲ ಶಾಲಿಗಳಾಗಿರುತ್ತಾರೆ, ಎಂಬುದು ಗಮನಕ್ಕೆ ಬರುತ್ತದೆ.

೯. ಪ್ರಾರ್ಥನೆ !

ನಾನು ಭಗವಾನ ಶ್ರೀಕೃಷ್ಣ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಎಲ್ಲ ಹಿಂದೂ ವ್ಯಕ್ತಿಗಳು, ಎಲ್ಲ ಸಂಘಟನೆಗಳ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಧರ್ಮಶಿಕ್ಷಣವನ್ನು ಪಡೆದು ಧರ್ಮಕ್ಕನುಸಾರ ಪ್ರತ್ಯಕ್ಷ ಆಚರಣೆ ಮಾಡಲು ಮತ್ತು ಹಿಂದೂಗಳ ಸಂಘಟಿತ ಶಕ್ತಿಯಿಂದ ಸನಾತನ ಹಿಂದೂ ಧರ್ಮ ಮತ್ತು ದೇವಭೂಮಿ ಭಾರತವನ್ನು ರಕ್ಷಿಸುವ ಸದ್ಬುದ್ಧಿ ಮತ್ತು ಬಲವನ್ನು ನೀಡಬೇಕು. ತಾವು ಮಾಡುತ್ತಿರುವ ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಿರಿ, ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥನೆ !

– ಸದ್ಗುರು ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ (ಮುಕ್ತಾಯ)