ನವದೆಹಲಿ- ಭಾರತ ಮತ್ತು ಚೀನಾ ಇವುಗಳ ನಡುವಿನ ಸಂಬಂಧವನ್ನು ಸುಧಾರಿಸಲು ಗಡಿಯಲ್ಲಿ ಶಾಂತಿಯನ್ನು ಕಾಪಾಡುವುದು ಆವಶ್ಯಕವಾಗಿದೆ. ನಾವು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಅಖಂಡತ್ವವನ್ನು ಗೌರವಿಸುತ್ತೇವೆ. ಕಾನೂನಾತ್ಮಕವಾಗಿ ಮತ್ತು ಶಾಂತಿಪೂರ್ಣ ಮಾರ್ಗದಿಂದ ವಿವಾದಗಳನ್ನು ಮತ್ತು ಭಿನ್ನಾಭಿಪ್ರಾಯಗಳನ್ನು ಪರಿಹರಿಸುವುದರಲ್ಲಿ ನಮಗೆ ವಿಶ್ವಾಸವಿದೆ. ಈ ಎಲ್ಲದರ ಬಗ್ಗೆ ನಾವು ನಮ್ಮ ಗೌರವ ಮತ್ತು ಅಖಂಡತ್ವವನ್ನು ಕಾಪಾಡಲು ಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೇರಿಕೆಯ ಸುದ್ದಿ ಪತ್ರಿಕೆ `ವಾಲ್ ಸ್ಟ್ರೀಟ್ ಜರ್ನಲ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಪ್ರಧಾನಮಂತ್ರಿಯವರು ಅಮೇರಿಕಾಕ್ಕೆ ತೆರಳುವ ಹಿನ್ನೆಲೆಯಲ್ಲಿ ಈ ಸಂದರ್ಶನವನ್ನು ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತವು ಮಹತ್ವದ ಪಾತ್ರವನ್ನು ನಿಭಾಯಿಸುವಂತಹ ಸಮಯ ಬಂದಿದೆ’ ಎಂದೂ ಅವರು ಹೇಳಿದರು.
1.ರಶಿಯಾ-ಉಕ್ರೇನ ಯುದ್ಧದ ಕುರಿತು ಭಾರತದ ಪಾತ್ರದ ಬಗ್ಗೆ ಪ್ರಧಾನಮಂತ್ರಿ ಮೋದಿಯವರು ಹೇಳಿರುವುದೇನೆಂದರೆ, ಭಾರತವು ಶಾಂತಿಯನ್ನು ಬೆಂಬಲಿಸುತ್ತದೆ. ಎಲ್ಲ ದೇಶಗಳು ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸಬೇಕು ಮತ್ತು ಇತರ ದೇಶಗಳ ಸಾರ್ವಭೌಮತ್ವವನ್ನು ಗೌರವಿಸಬೇಕು. ವಿವಾದಗಳು ಯುದ್ಧದಿಂದ ಅಲ್ಲ, ಚರ್ಚೆಗಳಿಂದ ಪರಿಹರಿಸಲ್ಪಡಬೇಕು. ಈ ಯುದ್ಧವನ್ನು ಸ್ಥಗಿತಗೊಳಿಸಲು ಭಾರತವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ.
2.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡುತ್ತಾ, ಭಾರತವು ಕೇವಲ ದಕ್ಷಿಣ ದೇಶಗಳ ನಾಯಕನಲ್ಲ. ಬದಲಾಗಿ ಅನೇಕ ವರ್ಷಗಳಿಂದ ನಿರ್ಲಕ್ಷಿಸಿರುವ ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಮಸ್ಯೆಗಳನ್ನೂ ಮಂಡಿಸುತ್ತಿದೆ, ಎಂದರು.
3.ಭಾರತದಲ್ಲಿ ಸಾವಿರಾರು ವರ್ಷಗಳಿಂದ ಸರ್ವ ಧರ್ಮ ಮತ್ತು ಶ್ರದ್ಧೆಗಳಿಗೆ ಸಹಬಾಳ್ವೆಯ ಮತ್ತು ಅಭಿವೃದ್ಧಿಯನ್ನು ಸಾಧಿಸುವ ಸ್ವಾತಂತ್ರ್ಯ ದೊರಕಿದೆ. ನಿಮಗೆ ಭಾರತದಲ್ಲಿ ಪ್ರತಿಯೊಂದು ಶ್ರದ್ಧೆ ಮತ್ತು ಧರ್ಮದ ಜನರು ಶಾಂತಿಯಿಂದ ವಾಸಿಸುತ್ತಿರುವುದು ಕಂಡು ಬರುತ್ತದೆ ಎಂದೂ ಅವರು ಹೇಳಿದರು.