ಶೃಂಗೇರಿಯಲ್ಲಿನ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾರಾಜರ ಉತ್ತರಾಧಿಕಾರಿಯಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾರಾಜರು ನೀಡಿರುವ ಶಂಕರಾಚಾರ್ಯರ ಆಶೀರ್ವಾದರೂಪಿ ಶುಭಸಂದೇಶ !
`ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇಂದಿನಿಂದ ೭ ದಿನಗಳ ವರೆಗೆ ಗೋಮಂತಕದಲ್ಲಿ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವವನ್ನು ಆಯೋಜಿಸಲಾಗಿದೆ. ಇಲ್ಲಿ `ಸನಾತನ ಹಿಂದೂ ಧರ್ಮದ ಆಚರಣೆ ಮತ್ತು ಅದರ ಮಹತ್ವ’ದ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದು ಅತ್ಯಂತ ಆನಂದದ ಸಂಗತಿಯಾಗಿದೆ. ನಮ್ಮ ಸನಾತನ ಧರ್ಮವು ಸರ್ವ ಶ್ರೇಷ್ಠ ಧರ್ಮವಾಗಿದೆ. ಇದರಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಈ ಲೋಕದಲ್ಲಿ (ಭೂಲೋಕದಲ್ಲಿ), ಪರಲೋಕದಲ್ಲಿ ಹಾಗೂ ಮುಂದಿನ ಜೀವನದ ಕಲ್ಯಾಣ ಮಾಡಿಕೊಳ್ಳಬೇಕಾದರೆ ಏನು ಮಾಡಬೇಕು ಎಂಬುದರ ಮಾರ್ಗದಶನ ಸಿಗುತ್ತದೆ. ಈ ಜನ್ಮದಲ್ಲಿ ನಾವು ಅನೇಕ ರೀತಿಯ ದುಃಖಗಳನ್ನು ಸಹಿಸುತ್ತಿರುತ್ತೇವೆ. ಇಂತಹ ದುಃಖಮಯ ಸಂಸಾರದಿಂದ ಹೇಗೆ ಮುಕ್ತರಾಗುವುದು, ಎಂಬುದರ ಬಗ್ಗೆ ಕೇವಲ ಸನಾತನ ಧರ್ಮದಲ್ಲಿಯೇ ಯೋಗ್ಯವಾದ ಮಾರ್ಗದರ್ಶನ ದೊರೆಯುತ್ತದೆ. ನಮ್ಮ ಸನಾತನ ಧರ್ಮದ ಮೂಲವಾಗಿರುವ ವೇದ, ಶಾಸ್ತ್ರ, ಪುರಾಣಗಳು, ಇತಿಹಾಸವು ಅಮೂಲ್ಯವಾಗಿವೆ. ಈ ಗ್ರಂಥಗಳಲ್ಲಿ ನಮ್ಮ ಎಲ್ಲ ರೀತಿಯ ಪ್ರಶೆಗಳಿಗೆ ಯೋಗ್ಯವಾದ ಉತ್ತರ ದೊರೆಯುತ್ತದೆ.
ಪರಕೀಯ ಆಕ್ರಮಣಗಳಿಂದ ಹಿಂದೂಗಳ ಮನಸ್ಸಿನಲ್ಲಿರುವ ಶ್ರದ್ಧೆಗೆ ಹೊಡೆತ !
ಭಾರತದಲ್ಲಿ ಅನಾದಿ ಕಾಲದಿಂದಲೂ ಈ ಧರ್ಮದ ಆಚರಣೆ ನಡೆಯುತ್ತ ಬಂದಿದೆ. ಇದರಲ್ಲಿ ಪ್ರತಿಯೊಂದು ಕೃತಿಯ ಹಿಂದೆ ವಿಶೇಷ ಕಾರಣವಿರುತ್ತದೆ. ಇವುಗಳಲ್ಲಿನ ಕೆಲವು ಕಾರಣಗಳನ್ನು ನಾವು ತಿಳಿದುಕೊಳ್ಳಬಹುದು ಆದರೆ ನಮ್ಮಲ್ಲಿ ಕೆಲವನ್ನು ಅರಿಯುವ ಕ್ಷಮತೆಯಿರುವುದಿಲ್ಲ. ಮಹರ್ಷಿಗಳು ದಿವ್ಯದೃಷ್ಟಿಯನ್ನು ಸಾಧಿಸಿ ನಮಗೆ ಈ ಆಚರಣೆಗಳ ಬಗ್ಗೆ ಉಪದೇಶಿಸಿದ್ದಾರೆ. ನಮ್ಮಲ್ಲಿ ಕೆಲವು ಕಾರಣಗಳನ್ನು ತಿಳಿದುಕೊಳ್ಳುವ ಕ್ಷಮತೆಯಿದೆ ಮತ್ತು ಕೆಲವು ಕಾರಣಗಳನ್ನು ತಿಳಿಯುವ ಕ್ಷಮತೆಯಿಲ್ಲ. ನಮ್ಮ ಪೂರ್ವಜರಿಗೆ ಧರ್ಮ ಮತ್ತು ಅದರ ಆಚರಣೆಯ ಮೇಲೆ ಅಪಾರ ಶ್ರದ್ಧೆಯಿತ್ತು. ಅಂದಾಜು ೧೫೦ ರಿಂದ ೨೦೦ ವರ್ಷಗಳ ಹಿಂದೆ ಈ ವಿಷಯದ ಬಗ್ಗೆ ಜನರ ಮನಸ್ಸಿನಲ್ಲಿ ಅಪಾರ ಶ್ರದ್ಧೆಯಿತ್ತು. ಏಕೆಂದರೆ ಅವರಿಗೆ ಧರ್ಮಾಚರಣೆಯ ಹಿಂದಿನ ಕಾರಣಗಳು ತಿಳಿದಿದ್ದವು. ಆದುದರಿಂದ ಅವರು ಅವುಗಳನ್ನು ಶ್ರದ್ಧೆಯಿಂದ ಅನುಷ್ಠಾನಕ್ಕೆ ತರುತ್ತಿದ್ದರು. ಕೆಲವು ವರ್ಷಗಳಿಂದ ಜನರ ಮನಸ್ಸಿನಲ್ಲಿದ್ದ ಈ ಕ್ಷಮತೆಯು ಕ್ಷೀಣಿಸುತ್ತಿದೆ. ಇದರಿಂದಾಗಿ ಕೆಲವರು ಹೊರಗಿನಿಂದ ಬಂದು ನಮ್ಮ ಧರ್ಮದ ಮೇಲೆ ಆಕ್ರಮಣ ಮಾಡುತ್ತಿದ್ದಾರೆ ಹಾಗೂ ಅವರು ಇಲ್ಲಿನ ಜನರನ್ನು ತಪ್ಪು ದಾರಿಗೆ ಒಯ್ಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಭಾರತೀಯರಲ್ಲಿ ಧರ್ಮದ ಬಗೆಗಿನ ಶ್ರದ್ಧೆಯು ಕ್ಷೀಣಿಸತೊಡಗಿದೆ. ಈಗ ನಾವು ಈ ಶ್ರದ್ಧೆಯನ್ನು ಜಾಗೃತಗೊಳಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ಇಂತಹ ಅಧಿವೇಶನಗಳ ಅಪಾರ ಅವಶ್ಯಕತೆಯಿದೆ. ಇಂತಹ ಕೆಲಸಗಳು ಪ್ರತಿಯೊಂದು ಕಡೆಗಳಲ್ಲಿ ನಡೆಯಬೇಕಿದೆ.
ಇಂತಹ ಕಾರ್ಯಕ್ರಮಗಳ ಆಯೋಜನೆ ನಡೆಯುತ್ತಿರಬೇಕು !
ಎಲ್ಲ ಸನಾತನ ಧರ್ಮೀಯರಲ್ಲಿ ಏಕವಾಕ್ಯತೆ (ಐಕ್ಯಮತ) ಬರಬೇಕಿದೆ. ಧರ್ಮದ ಮೇಲಿನ ಹಿಂದೂಗಳ ಶ್ರದ್ಧೆಯನ್ನು ಹೆಚ್ಚಿಸಲು ಹಾಗೂ ಹಿಂದೂಗಳಿಂದ ಧರ್ಮಾಚರಣೆಯಾಗಿ ಧರ್ಮದ ರಕ್ಷಣೆಯಾಗಲು ಇಂತಹ ಅಧಿವೇಶನಗಳು ಅತ್ಯಂತ ಆವಶ್ಯಕವಾಗಿವೆ. `ವಿಶ್ವದ ಕಲ್ಯಾಣಕ್ಕಾಗಿ ಸನಾತನ ಧರ್ಮದಲ್ಲಿನ ಅತ್ಯಾವಶ್ಯಕ ತತ್ತ್ವಗಳ ಬಗ್ಗೆ ಈ ಅಧಿವೇಶನದಲ್ಲಿ ಚರ್ಚೆಯಾಗಬೇಕು, ಈ ಬಗ್ಗೆ ಜನರ ಮನಸ್ಸಿನಲ್ಲಿ ಜಾಗೃತಿ ಮೂಡಬೇಕು ಹಾಗೂ ಇಂತಹ ಕಾರ್ಯಕ್ರಮಗಳ ಆಯೋಜನೆಯು ಯಾವಾಗಲೂ ನಡೆಯುತ್ತಿರಬೇಕು, ಎಂದು ನಾವು ಆಶೀರ್ವದಿಸುತ್ತೇವೆ. ಹಿಂದೂ ಧರ್ಮೀಯರಲ್ಲಿ ಜಾಗೃತಿ ಮೂಡಿಸಲು ಈ ಪವಿತ್ರ ಕಾರ್ಯಕ್ರಮದ ಆಯೋಜನೆಯಲ್ಲಿ ಸಹಭಾಗಿಯಾದ ಎಲ್ಲರಿಗೂ ನಾರಾಯಣಸ್ಮರಣಪೂರ್ವಕ ಆಶೀರ್ವದಿಸುತ್ತೇವೆ. ದಕ್ಷಿಣ ದಿಶೆಗೆ ದಕ್ಷಿಣಾಮ್ನಾಯ ಶೃಂಗೇರಿಯ ಶಾರದಾಪೀಠದ ೩೬ನೇ ಆಚಾರ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಕೃಪೆಯಿಂದ ಈ ಎಲ್ಲ ಕಾರ್ಯಕ್ರಮಗಳು ನಿರ್ವಿಘ್ನವಾಗಿ ಸಂಪನ್ನವಾಗಬೇಕು. ಹಾಗೆಯೇ ಈ ಕಾರ್ಯಕ್ರಮದಲ್ಲಿ ಸಹಭಾಗಿಯಾದ ಎಲ್ಲರ ಕಲ್ಯಾಣವಾಗಬೇಕು.
ಶುಭಮಸ್ತು !