‘ಸನಾತನದ ಸಂತರೆಂದರೆ ಗುರುಗಳೇ ಆಗಿದ್ದಾರೆ, ಎಂಬ ಅನುಭೂತಿ ನೀಡುವ ಮತ್ತು ಅನೇಕ ದೈವಿ ಗುಣಗಳ ಭಂಡಾರವಾಗಿರುವ ಸನಾತನದ ೭೫ ನೇ ಸಂತರಾದ ಪೂ. ರಮಾನಂದ (ಅಣ್ಣ) ಗೌಡ (೪೭ ವರ್ಷ) ಇವರಲ್ಲಿ ಸಾಧಕಿಯು ಮಾಡಿದ ಆತ್ಮನಿವೇದನೆ !

ಜ್ಯೇಷ್ಠ ಶುಕ್ಲ ನವಮಿ (೨೯.೫.೨೦೨೩) ಈ ದಿನ ಸನಾತನದ ೭೫ ನೇ ಸಂತರಾದ ಪೂ. ರಮಾನಂದ (ಅಣ್ಣ) ಗೌಡ ಅವರ ೪೭ ನೇ ಹುಟ್ಟುಹಬ್ಬವಿದೆ. ಆ ಸಂದರ್ಭದಲ್ಲಿ ಸಾಧಕಿಯು ಮಾಡಿದ ಆತ್ಮನಿವೇದನೆಯನ್ನು ಇಲ್ಲಿ ಕೊಡಲಾಗಿದೆ. ಗುರು ಮಾತಾ, ಗುರು ಪಿತಾ, ಗುರು ಬಂಧು, ಗುರು ಸಖಾ ಎಂಬ ಎಲ್ಲಾ ಸಂಬಂಧಗಳು ಪರಮಪೂಜ್ಯ ಗುರುದೇವರ ಕೃಪೆಯಿಂದ ಪೂ.ರಮಾನಂದ (ಅಣ್ಣ) ಗೌಡ ಅವರ ಸತ್ಸಂಗದಲ್ಲಿ ಹೆಜ್ಜೆ ಹೆಜ್ಜೆಗೆ ಅನುಭವಿಸಲು ಸಿಕ್ಕಿದೆ ಮತ್ತು ನಿರಂತರವಾಗಿ ಸಿಗುತ್ತಿದೆ. ಅದನ್ನು ಇಲ್ಲಿ ಶಬ್ದರೂಪದಲ್ಲಿ ಮಂಡಿಸಲು ಪ್ರಯತ್ನಿಸುತ್ತಿದ್ದೇನೆ – ಸೌ. ವಿದುಲಾ ಹಳದಿಪುರ, ಧಾರವಾಡ.

ಪೂ. ರಮಾನಂದ (ಅಣ್ಣಾ) ಗೌಡ

 

ಪೂ. ರಮಾನಂದ (ಅಣ್ಣಾ) ಗೌಡ ಇವರ ೪೭ ನೇ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದಿಂದ ಅವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು !

೧. ಸಾಧಕರಿಗೆ ಧ್ಯೇಯಪ್ರಾಪ್ತಿ ಮಾಡಿಕೊಳ್ಳಲು ಶಕ್ತಿಯನ್ನು ನೀಡುವ ಪೂ. ರಮಾನಂದ ಅಣ್ಣಾ

ಪೂ ಅಣ್ಣಾ, ನೀವು ಮಾತನಾಡುವಾಗ ನಿಮ್ಮ ಧ್ವನಿ ಮತ್ತು ವಿಚಾರಗಳು ಕೆಲವೊಮ್ಮೆ ಜುಳುಜುಳು ಹರಿಯುವ ನೀರಿನ ಅಲೆಯಂತೆ ನಮ್ಮೆದುರು ಬರುತ್ತವೆ, ಕೆಲವೊಮ್ಮೆ ಯಾವ ತಡೆ ಬಂದರೂ ಸಹ ಲೆಕ್ಕಿಸದೇ ಕೇವಲ ಸಮುದ್ರವನ್ನು ಸೇರುವ ಧ್ಯಾಸವನ್ನಿಟ್ಟು ಹರಿಯುವ ನದಿಯಂತೆ ಏಕಾಗ್ರಚಿತ್ತದಿಂದ ಎಲ್ಲವನ್ನೂ ಮೀರಿ ಹೋಗುವ ಭಾವ ನಮ್ಮಲ್ಲಿ ಉತ್ಪನ್ನ ಮಾಡುತ್ತೀರಿ. ಪೂ. ಅಣ್ಣಾ ನೀವು ಸಾಧಕರ ತಾಯಿಯಾಗಿ ಮಮತೆಯ ಮಳೆಯನ್ನು ಸುರಿಸುತ್ತೀರಿ ಮತ್ತು ಸಾಧಕರ ಹಿರಿಯ ಅಣ್ಣನಂತೆ ಸ್ನೇಹವನ್ನು ನೀಡುತ್ತೀರಿ.

ಸೌ. ವಿದುಲಾ ಹಳದಿಪುರ

೨. ಸಾಧಕರನ್ನು ಗುರುತತ್ತ್ವದೊಂದಿಗೆ ಜೋಡಿಸಿ ಆಧಾರ ನೀಡುವುದು

ಒಂದೇ ಸತ್ಸಂಗದಲ್ಲಿ ನನಗೆ ನಿಮ್ಮ ಅನೇಕ ರೂಪಗಳು ಕಾಣಿಸುತ್ತವೆ. ಪ್ರತಿಬಾರಿ ನಮ್ಮನ್ನು ಅಂತರ್ಮುಖರನ್ನಾಗಿಸುತ್ತೀರಿ. ನಮ್ಮನ್ನು ನಿರಂತರವಾಗಿ ಗುರುತತ್ತ್ವದೊಂದಿಗೆ ಜೋಡಿಸುತ್ತೀರಿ. ನೀವು ನಮ್ಮನ್ನು ಸತತ ಸೇವೆಯಲ್ಲಿಟ್ಟು ಭವಸಾಗರದಲ್ಲಿ ಮುಳುಗದಂತೆ ಕೈ ನೀಡಿ ಮೇಲೆತ್ತುವಿರಿ, ಪ್ರತಿಬಾರಿ ನೀವು ಮಾತನಾಡುವಾಗ ಗುರುಚರಣಗಳ ತೀರ್ಥವನ್ನು ನನ್ನ ಮೇಲೆ ಸಿಂಪಡಿಸಿದಂತಾಗುತ್ತದೆ.

೩. ‘ಸೇವೆಯಲ್ಲಿ ಬುದ್ಧಿಯು ಹೆಚ್ಚು ಬಳಕೆಯಾಗುತ್ತಿದೆ, ಎಂದು ಸಾಧಕಿಗೆ ಹೇಳಿ ಅವಳಲ್ಲಿ ಶರಣಾಗತಭಾವವನ್ನು ಮೂಡಿಸುವುದು

ಪೂಜ್ಯ ಅಣ್ಣಾ ನೀವು ಅನೇಕ ಬಾರಿ ನನಗೆ “ಸೇವೆಯಲ್ಲಿ ಬುದ್ಧಿಯ ಉಪಯೋಗವೇ ಹೆಚ್ಚಾಗುತ್ತದೆ ಎಂದು ಹೇಳುವಾಗ, ನಾನು ಸೂಕ್ಷ್ಮದಿಂದ ಗುರುಚರಣಗಳಲ್ಲಿ ಹೋಗಿ ಅಳುತ್ತಿದ್ದೆ, ‘ಗುರುದೇವಾ, ನಾನು ಹೇಗೆ ಈ ಬುದ್ಧಿಯ ಸಂಕೋಲೆಯಿಂದ ಪಾರಾಗಲಿ ? ಎಂದು ನಾನು ಗುರುದೇವರಲ್ಲಿ ಸೂಕ್ಷ್ಮದಿಂದಲೇ ಹೇಳುತ್ತಿದ್ದೆ. ‘ನನಗೇ ತಿಳಿಯದಂತೆ ನಿಮ್ಮ ವಾಣಿಯಿಂದಲೇ ಆ ಸಂಕೋಲೆ ತುಂಡಾಗಲು ಸಾಧ್ಯವಾಯಿತು ‘ಇನ್ನೂ ನಾನು ಬಹಳ ಪ್ರಯತ್ನಿಸಬೇಕಾಗಿದೆ ಎಂಬುದು ಅರಿವಾಯಿತು. ಬುದ್ಧಿಯ ಅಹಂನಲ್ಲಿ ಮೆರೆಯುತ್ತಿರುವ ನನ್ನನ್ನು ಇಲ್ಲಿಯ ತನಕ ಕರೆತಂದಿರುವ ಸಚ್ಚಿದಾನಂದ ಪರಬ್ರಹ್ಮ ಇವರ ದಿವ್ಯಚರಣಗಳಲ್ಲಿ ಅನಂತ ಅನಂತ ಕೋಟಿ ಕೃತಜ್ಞತೆಗಳು…

೪. ತಾಯಿಯ ವಾತ್ಸಲ್ಯದಿಂದ ಸಾಧಕರನ್ನು ಸಂಭಾಳಿಸುವ ಪೂ. ರಮಾನಂದ ಅಣ್ಣ

ತಾಯಿಗೆ ಮಗುವಿನ ಮೇಲೆ ನಿಷ್ಕಲ್ಮಶ ಪ್ರೀತಿ ಇರುತ್ತದೆ. ತಾಯಿಯ ಪ್ರೀತಿಯು ಅವಳ ಮಗುವಿನ ಮೇಲೆ ಬೇರೆ ಬೇರೆ ರೀತಿ ಯಲ್ಲಿ ವ್ಯಕ್ತವಾಗುತ್ತಿರುತ್ತದೆ. ಮಗು ತಪ್ಪು ಮಾಡಿದಾಗ ಆರಂಭದಲ್ಲಿ ಪ್ರೀತಿಯಿಂದ ಮೃದುವಾಗಿ ಹೇಳುತ್ತಾಳೆ. ನಂತರ ಧ್ವನಿ ಸ್ವಲ್ಪ ದೊಡ್ಡದಾಗುತ್ತದೆ. ಮುಂದಿನ ಹಂತದಲ್ಲಿ ಕಠೋರವಾಗಿ ಹೇಳುತ್ತಾಳೆ ಮತ್ತೆ ನಂತರ ಪ್ರೀತಿಯಿಂದ ತಿಳಿಸಿ ಹೇಳುತ್ತಾಳೆ. ನೀವು ಅದೇ ರೀತಿ ಇದ್ದಿರಾ ಪೂಜನೀಯ ಅಣ್ಣಾ. ಇದೇ ಪ್ರೀತಿಯನ್ನು ನಾನು ನಿಮ್ಮಿಂದ ಅನುಭವಿಸಿದೆ. ಮತ್ತು ಈಗಲೂ ಅನುಭವಿಸುತ್ತಿದ್ದೇನೆ. ಬಹುತೇಕ ಎಲ್ಲಾ ಸಾಧಕರು ಇದನ್ನು ಅನುಭವಿಸುತ್ತಿದ್ದಾರೆ..

೫. ‘ಸಾಧಕರ ಆಧ್ಯಾತ್ಮಿಕ ಉನ್ನತಿಯಾಗಬೇಕು, ಎಂದು ತಳಮಳ ಇರುವ ಪೂ. ರಮಾನಂದ ಅಣ್ಣ

ಒಂದು ಜೀವದಲ್ಲಿ ಭಾವದ ಬೀಜವನ್ನು ಬಿತ್ತಿ, ಅದು ಚಿಗುರು ವಂತೆ ಮಾಡಿ, ಹೆಮ್ಮರವಾಗಲು ನಿರಂತರವಾಗಿ ಶ್ರಮಿಸುವ ನಿಮ್ಮ ದೈವೀ ಗುಣಕ್ಕೆ ನತಮಸ್ತಕ. ಶಿಲ್ಪಿಯೊಬ್ಬ ಬಂಡೆಗೆ ನಿರಂತರ ಸುತ್ತಿಗೆಯಿಂದ ಪೆಟ್ಟನ್ನು ಕೊಟ್ಟು ಸುಂದರ ಮೂರ್ತಿಯನ್ನು ಕೆತ್ತಿದಂತೆ, ಸಾಧಕರನ್ನು ರೂಪಿಸುವ ನಿಮ್ಮ ದೈವೀಗುಣಕ್ಕೆ ನತಮಸ್ತಕ. ಅಭಾವದಿಂದ ಭಾವಕ್ಕೆ ತಂದು, ಭಾವವೃದ್ಧಿಗೊಳಿಸಿ, ಸಾಧಕರು ಭಾವಮಯವಾಗಬೇಕೆಂದು ಅವರ ಕೈಹಿಡಿದು ನಡೆಸುವ ನಿಮ್ಮ ದೈವೀಗುಣಕ್ಕೆ ನತಮಸ್ತಕ. ಸಾಧಕರಲ್ಲಿ ಆತ್ಮೋದ್ಧಾರದ ಸೆಳೆತದ ಸೆಲೆಯನ್ನು ಹರಿಸುವ ನಿಮ್ಮ ದೈವೀಗುಣಕ್ಕೆ ನತಮಸ್ತಕ.

೬. ಪ್ರಾರ್ಥನೆ ಮತ್ತು ಕೃತಜ್ಞತೆ

ನಿಮ್ಮಲ್ಲಿನ ದೈವೀಗುಣಗಳು ಕಿಂಚಿತ್ತಾದರೂ ನಮ್ಮಲ್ಲಿ ಬರಲಿ ಎಂದು ಸಚ್ಚಿದಾನಂದ ಪರಬ್ರಹ್ಮ ಪರಮಪೂಜ್ಯ ಗುರುದೇವರ ಚರಣಗಳಲ್ಲಿ ಪ್ರಾರ್ಥಿಸುತ್ತ ಅವರ ದಿವ್ಯಚರಣಗಳಲ್ಲಿ ಅನನ್ಯಭಾವ ದಿಂದ ನತಮಸ್ತಕಳಾಗಿ ಬೇಡುತ್ತೇನೆ. ಪೂಜ್ಯ ಅಣ್ಣ, ಈ ಜೀವದ ಮನಸ್ಸು, ಬುದ್ಧಿಯೊಂದಿಗೆ ಶರೀರವನ್ನು ಸಹ ‘ಗುರುವಿಗಾಗಿ ಪ್ರತ್ಯಕ್ಷ ಸವೆಸುವುದು ಹೇಗೆ ಎನ್ನುವುದನ್ನು ಕಲಿಸಿಕೊಟ್ಟಿರಿ. ಅನೇಕ ಬಾರಿ ಬಿದ್ದೆ ಎದ್ದೆ. ಎಲ್ಲದಕ್ಕೂ ಸಾಕ್ಷಿಯಾಗಿ ನಿಂತು ಮಾರ್ಗದರ್ಶಕರಾದಿರಿ. ನನ್ನ ಈ ಪ್ರವಾಸದಲ್ಲಿ ಆಧ್ಯಾತ್ಮಿಕ ಚೇತನವನ್ನು ತುಂಬಿ, ಆ ಚೇತನವನ್ನು ಚೈತನ್ಯವನ್ನಾಗಿ ಪರಿವರ್ತಿಸಿ ಈ ಜೀವವು ಆ ಸಚ್ಚಿದಾನಂದ ಪರಬ್ರಹ್ಮನಲ್ಲಿ ಶರಣಾಗುವಂತೆ ಮಾಡಿ ಉದ್ಧರಿಸಿದಿರಿ ! ಪೂಜ್ಯ ಅಣ್ಣಾ ನನಗೆ ನಿಜವಾಗಲೂ ಶಬ್ದಗಳೇ ತೋಚುತ್ತಿಲ್ಲ.

ಸತತ ‘ಆನಂದದಲ್ಲಿ ‘ರಮಿಸುವ ಪೂಜ್ಯ ರಮಾನಂದ ಅಣ್ಣನವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ಕೋಟಿ ಕೋಟಿ ವಂದನೆಗಳು…

ಪರಮಪೂಜ್ಯ ಗುರುದೇವರು ನಿರ್ಮಾಣ ಮಾಡಿದ ಸಂತರು ಗುರುಗಳೇ ಇದ್ದಾರೆ ಎನ್ನುವುದು ಪದೇ ಪದೇ ಅನುಭವಕ್ಕೆ ಬರುತ್ತದೆ. ಪರಮಪೂಜ್ಯ ಗುರುದೇವಾ, ಕೊನೆಗೂ ನೀವು ನಮಗೆಲ್ಲರಿಗೆ ಅಪಾರ, ಅಪಾರ ಪ್ರೀತಿಯನ್ನು ನೀಡಿ ಗೆದ್ದಿರಿ ಮತ್ತು ನಾವು ನಿಮ್ಮ ನಿಷ್ಕಲ್ಮಶ ಪ್ರೀತಿಗೆ ಸೋತೆವು. – ಸೌ. ವಿದುಲಾ ಹಳದಿಪುರ, ಧಾರವಾಡ, ಕರ್ನಾಟಕ (೧೬.೧೦.೨೦೨೧)