ಗೃಹಸ್ಥ ಜೀವನವೆಂದರೆ ಕುಟುಂಬ, ಇದನ್ನು ಈಶ್ವರನು ನೀಡಿದ ಜವಾಬ್ದಾರಿ ಎಂದು ತಿಳಿಯಬೇಕು !

‘ಒಂದು ವೇಳೆ ನೀವು ಗೃಹಸ್ಥ ಜೀವನವನ್ನು ಅಂದರೆ ಕುಟುಂಬವನ್ನು ಸ್ವೀಕರಿಸಿದ್ದರೆ, ವಿವಾಹ ಮಾಡಿಕೊಂಡು ಒಂದು ಪರಿವಾರದಲ್ಲಿ ವಾಸಿಸುತ್ತಿದ್ದರೆ, ನೀವು ಕೇವಲ ಒಂದು ಸಾಮಾಜಿಕ ಪರಂಪರೆಯ ಪಾಲನೆ ಮಾಡುತ್ತಿರುವಿರಿ ಅಥವಾ ನಿಮ್ಮ ಕುಟುಂಬವು, ಕುಟುಂಬದವರ ನಿರ್ಣಯದ ಪರಿಣಾಮವಾಗಿದೆ ಎಂದು ತಿಳಿಯಬೇಡಿರಿ. ಒಂದು ವೇಳೆ ನಿಮ್ಮ ಕುಟುಂಬದ ಕಡೆಗೆ ಈ ದೃಷ್ಟಿಕೋನದಿಂದ ನೋಡಿದರೆ, ಅದರಲ್ಲಿ ಬರುವ ಸಮಸ್ಯೆಗಳನ್ನು ನೀವು ಎಂದಿಗೂ ಪರಿಹರಿಸಲಾರಿರಿ. ಇಂದು ಶೇ. ೯೦ ಕ್ಕಿಂತ ಹೆಚ್ಚು ಕುಟುಂಬಗಳಲ್ಲಿ ಒಂದಿಲ್ಲೊಂದು ರೀತಿಯ ಒತ್ತಡ ಇದ್ದೇ ಇದೆ. ಹಿಂದಿನ ಕಾಲದಲ್ಲಿ ಕುಟುಂಬಗಳಲ್ಲಿ ಸಮಸ್ಯೆಗಳು ಇರುತ್ತಿದ್ದವು; ಆದರೆ ಇಂದು ಈ ಸಮಸ್ಯೆಗಳು ಬೇರೆಯೇ ರೀತಿಯಲ್ಲಿ ಹೆಚ್ಚಾಗುತ್ತಾ ನಡೆದಿವೆ. ತಂತ್ರ ಜ್ಞಾನ (ಟೆಕ್ನಾಲಾಜಿ) ಮತ್ತು ಶಿಕ್ಷಣ ಈ ಎರಡರಿಂದಾಗಿ ಕುಟುಂಬಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ; ಅದಕ್ಕಾಗಿ ತಂತ್ರಜ್ಞಾನ ಮತ್ತು ಶಿಕ್ಷಣ ಇರಬಾರದೆಂಬ ವಿಚಾರ ಸಹ ಬೇಡ. ಈ ಎರಡೂ ವಿಷಯಗಳಿರಲೇಬೇಕು; ಆದರೆ ಈ ಎರಡೂ ಕಾರಣಗಳಿಂದ ನಿಮ್ಮ ಮನೆಯಲ್ಲಿ ಏನಾದರೂ ಸಮಸ್ಯೆ, ಒತ್ತಡ ಉಂಟಾದರೆ, ನಿಮ್ಮ ಕುಟುಂಬ ಜೀವನದ ಜವಾಬ್ದಾರಿಯನ್ನು ನಿಭಾಯಿಸಲು ಪರಮಾತ್ಮನೇ ನಿಮ್ಮನ್ನು ಆರಿಸಿದ್ದಾನೆಂದು ತಿಳಿಯಬೇಕು.

ನೀವು ಎದುರಿಸುತ್ತಿರುವ ‘ಯಾವುದೇ ಕೌಟುಂಬಿಕ ಸಮಸ್ಯೆಯು ಪರಮಾತ್ಮನು ನೀಡಿದ ಒಂದು ಜವಾಬ್ದಾರಿಯಾಗಿದೆ, ಎಂದು ತಿಳಿಯಬೇಕು. ಒಂದು ವೇಳೆ ಇದನ್ನು ತಿಳಿದುಕೊಳ್ಳದಿದ್ದರೆ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತವೆ. ನಮ್ಮ ಮನೆಯ ಪ್ರತಿಯೊಬ್ಬ ಸದಸ್ಯರ ದುರಹಂಕಾರವು ಇಡೀ ಕುಟುಂಬವನ್ನು ಕೋಲಾಹಲದ ನರಕವನ್ನಾಗಿ ಮಾಡುತ್ತದೆ. ‘ನೀವು ನಿಮ್ಮ ಕುಟುಂಬದ ಒಡೆಯರಾಗಿರುವಿರಿ, ಕುಟುಂಬವನ್ನು ಮುನ್ನಡೆಸುತ್ತಿರುವಿರಿ, ಎಂದು ತಿಳಿದು ಕುಟುಂಬವನ್ನು ನಡೆಸಿ. ಕುಟುಂಬದ ಒಡೆಯನಿಗೆ ದುಃಖಿಯಾಗುವ ಅಧಿಕಾರವಿಲ್ಲ. ಅವನು ಮನೆಯ ಒಡೆಯನಂತೆ ಕುಟುಂಬವನ್ನು ನಡೆಸಬೇಕು. ಒಂದು ಆಶ್ರಯದಡಿ ಅನೇಕ ವಿಚಾರಗಳಿರುವ ಜನರು ಒಂದೆಡೆ ಇದ್ದರೆ, ವಿವಿಧ ಅಭಿಪ್ರಾಯಗಳ ಸಮಸ್ಯೆಗಳಿಂದ ತೊಂದರೆ ಗೀಡಾಗಬೇಡಿ. ‘ಈಶ್ವರನ ಪ್ರೀತಿಯ ಆದರ್ಶವನ್ನು ಎದುರಿಗಿಟ್ಟುಕೊಂಡು ಎಲ್ಲರನ್ನೂ ಪ್ರೀತಿಯಿಂದ ಗೆಲ್ಲಿರಿ ಮತ್ತು ಅವರನ್ನು ಅರ್ಥ ಮಾಡಿಕೊಳ್ಳಿರಿ ಮತ್ತು ಅವನು ನಿಮಗೆ ನೀಡಿದ ಇದು ದೈವೀ ಜವಾಬ್ದಾರಿಯಾಗಿದೆ, ಎಂದು ತಿಳಿದು ಅದನ್ನು ಪ್ರೀತಿಯಿಂದಲೇ ನಿಭಾಯಿಸಿ. ನಂತರ ನೋಡಿ, ಗ್ರಹಸ್ಥಿ ಅಂದರೆ ಕುಟುಂಬವು ಎಂದಿಗೂ ನಿಮ್ಮ ಮೇಲೆ ಹೊರೆಸಿದ ಭಾರವಲ್ಲ, ಎಂದು ನಿಮಗೆ ತಿಳಿಯುತ್ತದೆ.

(ಆಧಾರ : ಮಾಸಿಕ, ‘ಅಕ್ಷರ ಪ್ರಭಾತ, ಅಕ್ಟೋಬರ್ ೨೦೧೯)