ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ‘ರಾಮನ ಅವತಾರ’ ಚಲನಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು, ಸಿನಿಮಾಗೆ ಸೆನ್ಸಾರ್ ಪ್ರಮಾಣ ಪತ್ರ ರದ್ದುಗೊಳಿಸಿ !

ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿಗಳಿಗೆ ಮನವಿ !

ಸೆನ್ಸಾರ್ ಮಂಡಳಿ ಅಧಿಕಾರಿಗಳಿಗೆ ಮನವಿ ನೀಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಮತ್ತು ಹಿಂದೂ ಕಾರ್ಯಕರ್ತರು

ಬೆಂಗಳೂರು : ವಿನಯ ಪಂಪಾಪತಿ ಮತ್ತು ವಿಕಾಸ ಪಂಪಾಪತಿ ನಿರ್ದೇಶನದ ಹಾಗೂ ಅಮ್ರೆಜ್ ಸೂರ್ಯವಂಶಿ ನಿರ್ಮಾಣದ ‘ರಾಮನ ಅವತಾರ’ ಎಂಬ ಕನ್ನಡ ಚಲನಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ಕೋಟ್ಯಾಂತರ ಹಿಂದೂಗಳು ಅತ್ಯಂತ ಭಕ್ತಿಯಿಂದ ಪೂಜಿಸುವ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರನ ಚಾರಿತ್ರ್ಯಕ್ಕೆ ಕಳಂಕ ಬರುವಂತೆ ಚಿತ್ರಿಸಲಾಗಿದೆ. ರಾವಣನ ವಾಹನ ಪುಷ್ಪಕ ವಿಮಾನವನ್ನು ಐ ೨೦ ಕಾರು ಎಂದು ಲೇವಡಿ ಮಾಡಲಾಗಿದೆ. ಸೀತಾಮಾತೆ, ಭಗವಾನ್ ಶ್ರೀಕೃಷ್ಣ ಪರಮಾತ್ಮ ಹೀಗೆ ಅನೇಕ ರಾಮಾಯಣ, ಮಹಾಭಾರತದ ಪಾತ್ರಗಳನ್ನು, ಸನ್ನಿವೇಶಗಳನ್ನು ಅಪಹಾಸ್ಯ ಮಾಡಲಾಗಿದೆ. ಈ ರೀತಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ದೃಶ್ಯಗಳನ್ನು ತೆಗೆದು ಹಾಕಬೇಕು ಮತ್ತು ಈ ಸಿನಿಮಾದ ಸೆನ್ಸಾರ್ ಪ್ರಮಾಣಪತ್ರವನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ, ಸಾಮಾಜಿಕ ಹೋರಾಟಗಾರ ಶ್ರೀ. ರಂಗನಾಥ್, ವಿಶ್ವ ಹಿಂದೂ ಪರಿಷತ್‌ನ ಶ್ರೀ. ತಿರುಪತಿ ಬಾಬು, ಶ್ರೀ. ಸಂತೋಷ್ ಕಡ್ತಳ, ರಮ್ಯಾ ಕಡ್ತಳ, ಶ್ರೀ. ಪ್ರಶಾಂತ್ ಶಾನಭಾಗ್, ಶ್ರೀ. ರಂಜಿತ್ ಬಿ.ಆರ್, ಶ್ರೀ. ಪಾಲಾಕ್ಷ ಬಿ, ಶ್ರೀ. ಹರ್ಷ ಮತ್ತಿತರ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಶ್ರೀ. ಮೋಹನ್ ಗೌಡ ಮಾತನಾಡಿ, ಇಂದು ಕೇವಲ ಭಾರತದಲ್ಲಷ್ಟೇ ಅಲ್ಲದೆ ನಾನಾ ದೇಶಗಳಲ್ಲಿ ಪ್ರಭು ಶ್ರೀರಾಮನನ್ನು ಅವರ ಗುಣಗಳಿಗೆ ಪೂಜಿಸಲಾಗುತ್ತದೆ. ಹೀಗಿರುವಾಗ ಈ ಚಿತ್ರದಲ್ಲಿ ರಾಮನ ಅವತಾರ ರಘುಕುಲ ಸೋಮನ ಅವತಾರ ಎಂದು ಉಲ್ಲೇಖಿಸಿ ಚಿತ್ರದ ನಾಯಕ ಮದ್ಯ ಸೇವಿಸುವುದು, ದುಷ್ಚಟಗಳಿಗೆ ದಾಸನಾಗಿರುವುದನ್ನು ತೋರಿಸಲಾಗಿದೆ. ಅಷ್ಟೇ ಅಲ್ಲದೇ ಪ್ರಭು ಶ್ರೀರಾಮನ ವೇಷವನ್ನು ನಾಯಕನಿಗೆ ತೊಡಿಸಿ ಪೊಲೀಸರು ಶ್ರೀರಾಮನನ್ನು ಅಟ್ಟಾಡಿಸುವಂತೆ ಮತ್ತು ಹೊಡಿಯುವಂತೆ ತೋರಿಸಲಾಗಿದೆ. ಕೀಳುಮಟ್ಟದ ಸಿನಿಮಾ ಪ್ರಚಾರಕ್ಕಾಗಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಲಾಗಿದೆ. ಇದು ಭಾರತೀಯ ದಂಡ ಸಂಹಿತೆ ೨೯೫, ೨೯೮ ಮತ್ತು ೨೯೫ ಎ ಪ್ರಕಾರ ಗಂಭೀರ ಅಪರಾಧವಾಗಿದೆ. ಅದಲ್ಲದೇ ಸಿನಿಮಾಟೋಗ್ರಾಫ್ ಆಕ್ಟ್ ೧೯೫೨ ನ ಕಲಂ ೫ ಬಿ ಪ್ರಕಾರ ಇದು ಸೆನ್ಸಾರ್ ಮಂಡಳಿ ನಿಯಮದ ಉಲ್ಲಂಘನೆಯಾಗಿದೆ. ಹಾಗಾಗಿ ಈ ಸಿನಿಮಾದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ದೃಶ್ಯಗಳನ್ನು ತೆಗೆದು ಹಾಕಬೇಕು ಮತ್ತು ಈ ಸಿನಿಮಾದ ಸೆನ್ಸಾರ್ ಪ್ರಮಾಣಪತ್ರವನ್ನು ಕೂಡಲೇ ರದ್ದು ಮಾಡಬೇಕೆಂದು ಆಗ್ರಹಿಸಲಾಯಿತು.