BBMP ಯ ಸಿಂಗಸಂದ್ರದ ಬಳಿ ನಿರ್ಮಾಣವಾಗುತ್ತಿರುವ ಅಕ್ರಮ ಮಸೀದಿಯನ್ನು ತೆರವುಗೊಳಿಸಿ ! – ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ BBMP ಆಯುಕ್ತರಿಗೆ ಆಗ್ರಹ

ಬೆಂಗಳೂರು : ಬಿಬಿಎಂಪಿ ವಾರ್ಡ್ ನಂ. 191 ಸಿಂಗಸಂದ್ರದ AECS ನ A ಬ್ಲಾಕ್‌ನ ಲೇಔಟ್ ಬಳಿ KPTCLನ ಹೈಟೆನ್ಶನ್ ವಿದ್ಯುತ್ ಲೈನ್ ಕೆಳಗಡೆ ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ಬೃಹದಾಕಾರದ ಮಸೀದಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಬಿಬಿಎಂಪಿ ಆಯುಕ್ತರಿಗೆ ಮನವಿ ನೀಡಲಾಯಿತು. ಮನವಿಗೆ ಸ್ಪಂದಿಸಿದ ಮಾನ್ಯ ಆಯುಕ್ತ ತುಷಾರ್ ಗಿರಿನಾಥ್ ಇವರು ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ಅಲ್ಲಿನ ಸಹಾಯಕ ಕಾರ್ಯನಿರ್ವಹಣಾ ಅಭ್ಯಂತರರಿಗೆ ಆದೇಶಿಸಿದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಇವರು ಮಾತನಾಡಿ, ಇದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿಯಮಾವಳಿ ೨೦೦೫ ರ ಸ್ಪಷ್ಟ ಉಲ್ಲಂಘನೆಯಾಗಿದ್ದು ಇದು ಸುರಕ್ಷತೆ, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದಲೂ ಅತ್ಯಂತ ಅಪಾಯಕಾರಿಯಾಗಿದೆ. ಇದರ ಬಗ್ಗೆ ಸ್ಥಳೀಯರು ದೂರನ್ನು ದಾಖಲಿಸಿದರೂ ಸಹ ಇದುವರೆಗೆ ಕಾಮಗಾರಿಯನ್ನು ನಿಲ್ಲಿಸಲು ಯಾವುದೇ ಪ್ರಯತ್ನ ಮಾಡದಿರುವುದು ಆಶ್ಚರ್ಯಕರವಾಗಿದೆ. ಇಂತಹ ಅಕ್ರಮ ಕಾಮಗಾರಿಯ ಪ್ರಕರಣ ಹಿಂದೂ ಸಮುದಾಯಕ್ಕೆ ಸಂಬಂಧಿಸಿದ್ದರೆ ಇದೇ ರೀತಿಯಲ್ಲಿ ಪಾಲಿಕೆಯು ವರ್ತನೆ ಮಾಡುವುದೇ ? ಅನ್ಯ ಸಮುದಾಯದ ಅಕ್ರಮ ಕಾಮಗಾರಿಯ ಬಗ್ಗೆ ಪಾಲಿಕೆಯು ಮೌನವೇಕೆ ? ತಕ್ಷಣ ಮಹಾನಗರ ಪಾಲಿಕೆಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮ ಮಸೀದಿ ನಿರ್ಮಾಣವನ್ನು ತೆರವು ಮಾಡಬೇಕು, ಒಂದೊಮ್ಮೆ ಈ ಅಕ್ರಮ ಕಟ್ಟಡವನ್ನು ತೆರವು ಮಾಡದಿದ್ದರೆ ಬಿಬಿಎಂಪಿಯ ಅಕ್ರಮಗಳ ಬಗ್ಗೆ ನಿರ್ಲಕ್ಷ್ಯ ಮತ್ತು ಅಕ್ರಮಗಳಿಗೆ ಬೆಂಬಲಿಸುವ ವಿಷಯದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ಮೂಲಕ ಹೋರಾಟ ಮಾಡದೇ ಪರ್ಯಾಯವಿಲ್ಲ’ ಎಂದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ, ವಿಜಯ ವಿವೇಕ ಪ್ರತಿಷ್ಠಾನದ ಶ್ರೀಮತಿ ಶಕಿಲಾ ಶೆಟ್ಟಿ, ಬೊಮ್ಮನಹಳ್ಳಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ. ಪ್ರೇಮಾನಂದ, ನ್ಯಾಯವಾದಿ ಶುಭಾ ಬಿ. ನಾಯ್ಕ್, ನ್ಯಾಯವಾದಿ ಗುರುಪ್ರಸಾದ್, ನ್ಯಾಯವಾದಿ ಗಂಗಾಧರ್ ಸೇರಿದಂತೆ ಸಮಸ್ತ ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.