ದೇವತೆಯ ಯಂತ್ರದಲ್ಲಿ ತೊಂದರೆದಾಯಕ ಸ್ಪಂದನಗಳು ಬಂದಿದ್ದರೆ ಅದರ ಮೇಲೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು !

(ಸದ್ಗುರು) ಡಾ. ಮುಕುಲ ಗಾಡಗೀಳ

‘ನಾವು ದೇವತೆಗಳ ಮೂರ್ತಿ ಅಥವಾ ಚಿತ್ರಗಳಂತೆ ದೇವತೆಗಳ ಯಂತ್ರಗಳ ಪೂಜೆಯನ್ನೂ ಮಾಡುತ್ತೇವೆ. ಕೆಲವೊಮ್ಮೆ ಯಾವುದಾದರೊಂದು ಚಿಕ್ಕ ಆಕಾರದ ದೇವತೆಯ ಯಂತ್ರವನ್ನು, ಉದಾ. ಶ್ರೀಯಂತ್ರವನ್ನು ನಾವು ‘ಲಾಕೇಟ್‌’ನಂತೆ ಕೊರಳಲ್ಲಿ ಹಾಕಿಕೊಳ್ಳುತ್ತೇವೆ. ದೇವತೆಗಳ ಮೂರ್ತಿ ಮತ್ತು ಚಿತ್ರಗಳು ಸಗುಣ-ನಿರ್ಗುಣ ಸ್ತರದಲ್ಲಿ ಮತ್ತು ದೇವತೆಗಳ ಯಂತ್ರಗಳು ನಿರ್ಗುಣ-ಸಗುಣ ಸ್ತರದಲ್ಲಿ ಕಾರ್ಯವನ್ನು ಮಾಡುತ್ತವೆ. ದೇವತೆಗಳ ಯಂತ್ರಗಳು ಹೆಚ್ಚು ನಿರ್ಗುಣ ಸ್ತರದಲ್ಲಿ ಕಾರ್ಯನಿರತವಾಗಿರುವುದರಿಂದ ಅವು ಆಧ್ಯಾತ್ಮಿಕ ಸ್ತರದ ಉಪಾಯಗಳಿಗಾಗಿ ಅಥವಾ ಸಂಕಟ ನಿವಾರಣೆಗಾಗಿ ದೇವತೆಗಳ ಮೂರ್ತಿ ಅಥವಾ ಚಿತ್ರಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಆದ್ದರಿಂದ ಅನಿಷ್ಟ ಶಕ್ತಿಗಳು ದೇವತೆಗಳ ಮೂರ್ತಿ ಅಥವಾ ಚಿತ್ರಗಳಿಗಿಂತಲೂ ದೇವತೆಗಳ ಯಂತ್ರಗಳ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಅನಿಷ್ಟ ಶಕ್ತಿಗಳು ದೇವತೆಯ ಯಂತ್ರದ ಮೇಲೆ ಆಕ್ರಮಣ ಮಾಡಿದರೆ ಅದರಲ್ಲಿ ನಕಾರಾತ್ಮಕ (ತೊಂದರೆದಾಯಕ) ಸ್ಪಂದನಗಳು ಬರುತ್ತವೆ. ಆದ್ದರಿಂದ ಆ ಯಂತ್ರದ ಕಡೆಗೆ ನೋಡಿ ತಲೆ ಭಾರವಾಗುವುದು, ಎದೆಯ ಮೇಲೆ ಒತ್ತಡ ಬರುವುದು, ‘ಆ ಯಂತ್ರದ ಕಡೆಗೆ ನೋಡಬಾರದು’, ಎಂದು ಅನಿಸುವುದು, ಈ ರೀತಿಯ ತೊಂದರೆಗಳಾಗುತ್ತವೆ. ಈ ರೀತಿಯ ತೊಂದರೆಗಳಾಗುತ್ತಿದ್ದರೆ ಆ ಯಂತ್ರದ ಮೇಲೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡಿ ಅದರಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರಗೊಳಿಸುವುದು ಆವಶ್ಯಕವಾಗಿರುತ್ತದೆ.

೧. ಖಾಲಿ ಪೆಟ್ಟಿಗೆಗಳ ಉಪಾಯ ಮಾಡುವುದು

ನಕಾರಾತ್ಮಕ ಸ್ಪಂದನಗಳಿರುವ ದೇವತೆಯ ಯಂತ್ರದ ಮೇಲೆ ಖಾಲಿ ಪೆಟ್ಟಿಗೆಗಳಿಂದ ಆಧ್ಯಾತ್ಮಿಕ  ಉಪಾಯವನ್ನು ಮಾಡಬೇಕು. ಖಾಲಿ ಪೆಟ್ಟಿಗೆಗಳ ಟೊಳ್ಳಿನಲ್ಲಿ ತೊಂದರೆದಾಯಕ ಶಕ್ತಿ ಆಕರ್ಷಿಸುವುದರಿಂದ ಆಧ್ಯಾತ್ಮಿಕ ಲಾಭವಾಗುತ್ತದೆ. (ಹೆಚ್ಚಿನ ಮಾಹಿತಿಗಾಗಿ ಸನಾತನದ ‘ರೋಗ ನಿರ್ಮೂಲನೆಗಾಗಿ ಖಾಲಿ ಪೆಟ್ಟಿಗೆಗಳ ಉಪಾಯವನ್ನು ಹೇಗೆ ಮಾಡಬೇಕು ?’ ಎಂಬ ಗ್ರಂಥವನ್ನು ಓದಿರಿ.) ಅದಕ್ಕಾಗಿ ದೇವತೆಯ ಯಂತ್ರಕ್ಕಿಂತ ಸ್ವಲ್ಪ ದೊಡ್ಡ ಆಕಾರದ ಮತ್ತು ಒಂದು ಬದಿಗೆ ತೆರೆದಿರುವ ೪ ಖಾಲಿ ಪೆಟ್ಟಿಗೆಗಳನ್ನು ತೆಗೆದುಕೊಳ್ಳಬೇಕು. ಮೇಜಿನ ಮೇಲೆ ಯಂತ್ರವನ್ನಿಟ್ಟು ಅದರ ನಾಲ್ಕೂ ಬದಿಗಳಲ್ಲಿ ಆ ಖಾಲಿ ಪೆಟ್ಟಿಗೆಗಳನ್ನು ಯಂತ್ರದಿಂದ ಸಾಧಾರಣ ೩೦ ಸೆಂ.ಮೀ. ದೂರದಲ್ಲಿಡಬೇಕು. ಪೆಟ್ಟಿಗೆಗಳನ್ನು ಇಡುವಾಗ ಅವುಗಳ ತೆರೆದ ಭಾಗ ಯಂತ್ರದ ಕಡೆಗೆ ಬರುವಂತೆ ಇಡಬೇಕು. ಈ ರೀತಿಯ ಖಾಲಿ ಪೆಟ್ಟಿಗೆಗಳ ಉಪಾಯವನ್ನು ಆ ಯಂತ್ರದ ಮೇಲೆ ಇಡೀ ರಾತ್ರಿ ಮಾಡಬಹುದು. ಉಪಾಯವಾದ ನಂತರ ಬೆಳಗ್ಗೆ ಆ ‘ದೇವತೆಯ ಯಂತ್ರದಲ್ಲಿ ತೊಂದರೆದಾಯಕ ಶಕ್ತಿ ಪ್ರಕ್ಷೇಪಿತವಾಗುತ್ತದೆಯೇ ?’, ಎಂಬುದನ್ನು ನೋಡಬೇಕು. ಯಂತ್ರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ತೊಂದರೆದಾಯಕ ಶಕ್ತಿ ಪ್ರಕ್ಷೇಪಿತವಾಗುತ್ತಿದ್ದರೆ ಅದರ ಮೇಲೆ ಮುಂದಿನಂತೆ ಸೂರ್ಯನ ಉಪಾಯವನ್ನು ಮಾಡಬೇಕು.

೨. ಶ್ರೀ ಸೂರ್ಯನಾರಾಯಣನ ಉಪಾಯ

ಶ್ರೀ ಸೂರ್ಯನಾರಾಯಣನಲ್ಲಿ ರಜ-ತಮವನ್ನು ನಾಶಗೊಳಿಸುವ ಅಲೌಕಿಕ ಶಕ್ತಿಯಿದೆ. ನಾವು ಅದರ ಲಾಭವನ್ನು ನಮ್ಮ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ದೂರಗೊಳಿಸಲು ಬೆಳಗಿನ ಅಥವಾ ಸಾಯಂಕಾಲದ ಸಮಯದಲ್ಲಿ ಶ್ರೀ ಸೂರ್ಯನಾರಾಯಣನ ಎಳೆಬಿಸಿಲಿನಲ್ಲಿ ೨೦ ನಿಮಿಷ ಕುಳಿತು ಉಪಾಯವನ್ನು ಮಾಡಬಹುದು, ಹಾಗೆಯೇ ಯಾವುದಾದರೊಂದು ವಸ್ತುವಿನಲ್ಲಿನ ತೊಂದರೆದಾಯಕ ಶಕ್ತಿಯನ್ನು ನಾಶಗೊಳಿಸಲು ಆ ವಸ್ತುವನ್ನು ಯಾವುದೇ ಸಮಯದಲ್ಲಿ ಅರ್ಧ ಗಂಟೆಯಿಂದ ೧ ಗಂಟೆಯವರೆಗೆ ಬಿಸಿಲಿನಲ್ಲಿಟ್ಟು ಉಪಾಯವನ್ನು ಮಾಡಬಹುದು. ದೇವತೆಯ ಯಂತ್ರದಲ್ಲಿನ ತೊಂದರೆದಾಯಕ ಶಕ್ತಿಯನ್ನು ನಾಶಗೊಳಿಸಲು ಆ ಯಂತ್ರವನ್ನು ಬಿಸಿಲಿನಲ್ಲಿ ೧ ಗಂಟೆ ಇಡಬೇಕು. ಯಂತ್ರವನ್ನು ಬಿಸಿಲಿನಲ್ಲಿಡುವಾಗ ಶ್ರೀ ಸೂರ್ಯನಾರಾಯಣನಿಗೆ – ‘ನಿನ್ನ ಕೃಪೆಯಿಂದ ಈ ಯಂತ್ರದಲ್ಲಿನ ತೊಂದರೆದಾಯಕ ಶಕ್ತಿ ನಾಶವಾಗಲಿ’ ಎಂದು ಪ್ರಾರ್ಥನೆಯನ್ನು ಮಾಡಬೇಕು.

ಈ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದರಿಂದ ದೇವತೆಯ ಯಂತ್ರದಲ್ಲಿನ ನಕಾರಾತ್ಮಕ ಸ್ಪಂದನಗಳು ನಾಶವಾಗುತ್ತವೆ. ಅನಿಷ್ಟ ಶಕ್ತಿಗಳ ಆಕ್ರಮಣವು ತುಂಬಾ ತೀವ್ರವಾಗಿದ್ದರೆ ಕೆಲವು ದಿನಗಳವರೆಗೆ ಈ ಉಪಾಯಗಳನ್ನು ಮಾಡಬೇಕಾಗುತ್ತದೆ. ಉಪಾಯ ಪೂರ್ಣವಾದ ನಂತರ ಆ ದೇವತೆಯ ಯಂತ್ರವನ್ನು ಪೂಜೆಗಾಗಿ ಅಥವಾ ಧರಿಸಲು ತೆಗೆದುಕೊಳ್ಳಬಹುದು. ಮೈಮೇಲೆಧರಿಸುವ ಯಂತ್ರವನ್ನು ಪ್ರತಿದಿನ ಬೆಳಗ್ಗೆ ಸೂರ್ಯನ ಉಪಾಯವನ್ನು ಮಾಡಿಯೇ ಧರಿಸುವುದು ಉತ್ತಮ. ಕೆಲವು ದಿನಗಳ ನಂತರ ಪೂಜೆಯಲ್ಲಿನ ಯಂತ್ರದಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು ಪುನಃ ಅರಿವಾದರೆ ಅದರ ಮೇಲೆ ಪುನಃ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು.’

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್‌.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩.೧.೨೦೨೩)

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು