ಮೃತ್ಯುಪತ್ರ (ವಿಲ್) : ಕಾನೂನಿನಲ್ಲಿ ಸಿಕ್ಕಿರುವ ವರದಾನ !

ನ್ಯಾಯವಾದಿ ನಿಲೇಶ ಸಾಂಗೋಲಕರ

ಮನುಷ್ಯನು ಏನಿಲ್ಲವೆಂದರೂ ತನ್ನ ಒಡೆತನದ ಪ್ರತಿಯೊಂದು ವಿಷಯದ ಬಗ್ಗೆ ಹೆಚ್ಚು ಜಾಗರೂಕನಾಗಿರುತ್ತಾನೆ. ‘ನನ್ನ ನಂತರ ನನ್ನ ಆಸ್ತಿಪಾಸ್ತಿ ಏನಾಗುವುದು ?’, ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಒಂದಲ್ಲ ಒಂದು ದಿನ ಬಂದೇ ಬರುತ್ತದೆ. ‘ಈ ಹಣವನ್ನು ಎಲ್ಲಿಗೆ ಕೊಂಡೊಯ್ಯಲಿಕ್ಕಿದೆ ?’, ‘ನಮ್ಮ ನಂತರ ಆಸ್ತಿಪಾಸ್ತಿ ಏನಾಗುವುದು, ಎಂಬುದನ್ನು ನೋಡಲು ನಾವು ಇರುವುದಿಲ್ಲವಲ್ಲ ?’ ಎಂದು ಅನೇಕರಿಗೆ ಅನಿಸುತ್ತದೆ. ಒಂದು ರೀತಿಯಲ್ಲಿ ಅದು ಯೋಗ್ಯವಾಗಿದ್ದರೂ, ನಾವು ಜೀವಂತ ಇರುವಾಗಲೇ ನಮ್ಮ ಸಂಪತ್ತನ್ನು ಭವಿಷ್ಯದಲ್ಲಿ ಏನು ಮಾಡುವುದು ಎಂಬುದನ್ನು ನಿರ್ಧರಿಸಬಹುದು.

ನಾವು ಕಾನೂನಿನಲ್ಲಿರುವ ಅನೇಕ ಏರ್ಪಾಡುಗಳ ಬಗ್ಗೆ ಗಂಭೀರವಾಗಿ ವಿಚಾರ ಮಾಡುವುದಿಲ್ಲ. ಅನೇಕ ಜನರು ‘ಇರುವ ಎಲ್ಲ ಏರ್ಪಾಡುಗಳು ನನಗಾಗಿ ಅಲ್ಲ’, ಎಂದು ಮನಸ್ಸಿನಲ್ಲಿ ದೃಢ ನಿಶ್ಚಯ ಮಾಡಿ ಜೀವಿಸುತ್ತಿರುತ್ತಾರೆ. ಮೃತ್ಯುಪತ್ರದ ಮಹತ್ವವನ್ನು ತಿಳಿದುಕೊಂಡರೆ, ನಮ್ಮ ಕಾನೂನಿನಲ್ಲಿರುವ ಈ ವ್ಯವಸ್ಥೆಯು ಪ್ರತಿಯೊಬ್ಬರಿಗೂ ವರದಾನವಾಗಿದೆ, ಎಂಬುದು ಸ್ಪಷ್ಟವಾಗುವುದು. ಮೃತ್ಯುಪತ್ರ ಅಥವಾ ಇಚ್ಛಾಪತ್ರ (ವಿಲ್) ಇದು ಕಾನೂನುರೀತ್ಯಾ ಕಾಗದಪತ್ರವಾಗಿರುತ್ತದೆ ಹಾಗೂ ಅದು ನಿಮ್ಮ ಆರ್ಥಿಕ ಆಯೋಜನೆಯ ಒಂದು ಅತ್ಯಂತ ಮಹತ್ವದ ಹಂತವಾಗಿದೆ. ಅನೇಕರಿಗೆ ಸಾಮಾಜಿಕ ಕಾರ್ಯದ ಆಸಕ್ತಿ ಇರುತ್ತದೆ. ಕೆಲವರಿಗೆ ಈ ವಿಷಯದಲ್ಲಿ ಕೌಟುಂಬಿಕ ಜವಾಬ್ದಾರಿಯಿಂದ ಅಥವಾ ಇನ್ನೇನಾದರೂ ಕಾರಣದಿಂದ ಈ ಇಚ್ಛೆಯು ಮನಸ್ಸಿನಲ್ಲಿಯೇ ಇರುತ್ತದೆ. ಇಂತಹ ಸಮಯದಲ್ಲಿ ಮೃತ್ಯುಪತ್ರದ ಮೂಲಕ ಸಂಪೂರ್ಣ ಸಂಪತ್ತು ಅಥವಾ ಅದರ ಸ್ವಲ್ಪ ಭಾಗವನ್ನು ದಾನ ಕೂಡ ಮಾಡಬಹುದು. ಕೆಲವರು ತಮ್ಮ ಆರ್ಥಿಕ ವ್ಯವಹಾರದ ವಿಷಯವನ್ನು ಅತ್ಯಂತ ರಹಸ್ಯವಾಗಿಡುತ್ತಾರೆ. ಸಂಬಂಧಿಕರು, ಮಿತ್ರರು ಮಾತ್ರವಲ್ಲ, ಪತ್ನಿ, ಮಕ್ಕಳು, ತಾಯಿ-ತಂದೆ ಇವರಲ್ಲಿ ಯಾರಿಗೂ ಅವರ ಆರ್ಥಿಕ ವ್ಯವಹಾರದ ಕಲ್ಪನೆ ಇರುವುದಿಲ್ಲ. ಕೆಲವರು ನಿರ್ದಿಷ್ಠ ಆಸ್ತಿಯ ಕ್ರಯ-ವಿಕ್ರಯದ ಮಾಹಿತಿಯನ್ನು ಕೆಲವು ವೈಯಕ್ತಿಕ ಕಾರಣಕ್ಕಾಗಿ ಕುಟುಂಬದವರಿಗೆ ಉದ್ದೇಶಪೂರ್ವಕ ಹೇಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೃತ್ಯುಪತ್ರ ಮಾಡಿಟ್ಟಿದ್ದಲ್ಲಿ, ಆ ವ್ಯಕ್ತಿಯ ಮರಣದ ನಂತರ ಈ ಆಸ್ತಿಯ ವಿಷಯದ ಮಾಹಿತಿಯು ವ್ಯಕ್ತಿಯ ಸಂಬಂಧಿಕರಿಗೆ ಹಾಗೂ ಕುಟುಂಬದವರಿಗೆ ಸಿಗಬಹುದು. ಆಸ್ತಿಯ ವಿಷಯದಲ್ಲಿ ಏನಾದರೂ ಅಡಚಣೆ ಬಂದರೆ ಆ ವಿಷಯದಲ್ಲಿ ಯೋಗ್ಯವಾದ ನಿರ್ಣಯ ತೆಗೆದುಕೊಳ್ಳಲು ಸಹಾಯವಾಗುತ್ತದೆ. ನಾವು ನಮ್ಮ ಆಸ್ತಿಯ ಮೃತ್ಯುಪತ್ರವನ್ನು ಮಾಡಿಟ್ಟರೆ, ನಮ್ಮ ಇಚ್ಛಾನುಸಾರ ನಮ್ಮ ಸಂಪತ್ತನ್ನು ಹಂಚಬಹುದು.

ಮೃತ್ಯುಪತ್ರದಲ್ಲಿನ ಕಾನೂನಿನ ಮಹತ್ವದ ಸಂಜ್ಞೆಗಳು ಹಾಗೂ ಅವುಗಳ ಅರ್ಥ

೧. ಟೆಸ್ಟೇಟರ್ : ಮೃತ್ಯುಪತ್ರವನ್ನು ತಯಾರಿಸುವ ವ್ಯಕ್ತಿ

೨. ಮೃತ್ಯುಪತ್ರದ ವ್ಯವಸ್ಥಾಪಕ : ಮೃತ್ಯುಪತ್ರದ ವ್ಯವಸ್ಥಾಪಕ ಅಂದರೆ ಎಕ್ಸಿಕ್ಯೂಟರ್. ಅವನು ಮೃತ್ಯುಪತ್ರವನ್ನು ತಯಾರಿಸುವ ವ್ಯಕ್ತಿಯ ಕಾನೂನುರೀತ್ಯಾ ಪ್ರತಿನಿಧಿ ಆಗಿರುತ್ತಾನೆ. ಮೃತ್ಯುಪತ್ರವನ್ನು ತಯಾರಿಸುವ ವ್ಯಕ್ತಿಯ ಮರಣದ ನಂತರ ಅವರ ಮೃತ್ಯುಪತ್ರವನ್ನು ಪ್ರಸ್ತುತಪಡಿಸುವ ಜವಾಬ್ದಾರಿಯು ಈ ವ್ಯವಸ್ಥಾಪಕನ ಮೇಲಿರುತ್ತದೆ.

೩. ವಾರಸುದಾರ ಮತ್ತು ಲಾಭಾರ್ಥಿ : ವಾರಸುದಾರ, ಅಂದರೆ ಮೃತ್ಯುಪತ್ರವನ್ನು ತಯಾರಿಸುವ ವ್ಯಕ್ತಿಯ ‘ಕಾನೂನುರೀತ್ಯಾ ಹಕ್ಕುದಾರ’ ಆಗಿರುತ್ತಾನೆ ಹಾಗೂ ಯಾರ ಲಾಭಕ್ಕಾಗಿ ಸಂಪತ್ತಿಗೆ ಸಂಬಂಧಿಸಿದ ಮೃತ್ಯುಪತ್ರವನ್ನು ಮಾಡಿ ಇಡಲಾಗಿದೆಯೋ, ಅವನಿಗೆ ‘ಲಾಭಾರ್ಥಿ’ ಎನ್ನುತ್ತಾರೆ.

೪. ಪ್ರೊಬೇಟ್ : ಪ್ರೊಬೇಟ್ ಇದು ಒಂದು ಕಾನೂನಿನ ಪ್ರಕ್ರಿಯೆಯಾಗಿದೆ. ಇದರಲ್ಲಿ ಮೃತ್ಯುಪತ್ರದ ವಿಷಯದಲ್ಲಿ ಉದ್ಭವಿಸುವ ದಾವೆಗಳ ದೂರನ್ನು ನಿವಾರಣೆ ಮಾಡಿ ಕಾನೂನುರೀತ್ಯಾ ಅಧಿಕೃತವಾಗಿರುವ ಮೃತ್ಯುಪತ್ರಕ್ಕನುಸಾರ ಆಸ್ತಿಯನ್ನು ವರ್ಗೀಕರಣ ಮಾಡಲಾಗುತ್ತದೆ.’

– ನ್ಯಾಯವಾದಿ ನೀಲೇಶ ಸಾಂಗೋಲಕರ

೧. ಮೃತ್ಯುಪತ್ರದಿಂದಾಗಿ ಯೋಗ್ಯ ವ್ಯಕ್ತಿಗೆ ಸಂಪತ್ತು ಹಸ್ತಾಂತರವಾಗುತ್ತದೆ

ಮೃತ್ಯುಪತ್ರವು ಕಾನೂನುರೀತ್ಯಾ ದಾಖಲೆ (ಕಾಗದಪತ್ರ)ಯಾಗಿದೆ. ನಮ್ಮ ನಂತರ ಆಸ್ತಿಯು ಯೋಗ್ಯ ವ್ಯಕ್ತಿಯ ಕೈಗೆ ಹೋಗಬೇಕು, ಎಂಬ ಉದ್ದೇಶದಿಂದ ಕಾನೂನುರೀತ್ಯಾ ಸಿದ್ಧಪಡಿಸಿದ ಕಾಗದಪತ್ರವೆಂದರೆ ಮೃತ್ಯುಪತ್ರ. ಸಾಮಾನ್ಯ ವ್ಯಕ್ತಿ ತನ್ನ ಕುಟುಂಬದ ಭವಿಷ್ಯದ ವ್ಯವಸ್ಥೆ ಅಥವಾ ಆರ್ಥಿಕ ಆಯೋಜನೆಯಲ್ಲಿ ಮೊಟ್ಟ ಮೊದಲು ತನ್ನ ಕುಟುಂಬದ ಸುರಕ್ಷೆಯ ವಿಚಾರ ಮಾಡುತ್ತಾನೆ. ಮೃತ್ಯುಪತ್ರದಿಂದ ತನ್ನ ಸಂಪತ್ತನ್ನು ತನ್ನ ಇಚ್ಛೆಯಂತೆ ವಿಭಜಿಸಬಹುದು. ಕುಟುಂಬದಲ್ಲಿನ ವ್ಯಕ್ತಿಗಳ ಅವಶ್ಯಕತೆಯನ್ನು ಗಮನದಲ್ಲಿಟ್ಟು ಅದಕ್ಕನುಸಾರ ಮೃತ್ಯುಪತ್ರದಲ್ಲಿ ಆಸ್ತಿಯನ್ನು ಸಹಜವಾಗಿ ವಿಭಜಿಸಬಹುದು. ಮೃತ್ಯುಪತ್ರದ ಮೂಲಕ ಕುಟುಂಬದ ಕೆಲವು ವ್ಯಕ್ತಿಗಳನ್ನು ನಿಮ್ಮ ಸಂಪತ್ತಿನಿಂದ ಬದಿಗಿಡಲೂಬಹುದು.

೨. ಮೃತ್ಯುಪತ್ರವನ್ನು ತಯಾರಿಸುವಾಗ ಗಮನಿಸಬೇಕಾದ ಮಹತ್ವದ ಅಂಶಗಳು

ಅ. ೧೮ ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ ಮೃತ್ಯುಪತ್ರವನ್ನು ಮಾಡಬಹುದು. ಅದು ಲಿಖಿತ ಸ್ವರೂಪದಲ್ಲಿರಬೇಕು. ಅದರಲ್ಲಿ ಮೃತ್ಯುಪತ್ರವನ್ನು ತಯಾರಿಸುವ ವ್ಯಕ್ತಿಯು ಸಾಕ್ಷಿದಾರರ ಮುಂದೆ ಸಹಿ ಮಾಡಬೇಕಾಗುತ್ತದೆ. ಮೃತ್ಯುಪತ್ರದಲ್ಲಿ ಸಾಕ್ಷಿದಾರರೆಂದು ಇಬ್ಬರು ವ್ಯಕ್ತಿಗಳ ಸಹಿ, ದಿನಾಂಕ, ವಾರ, ಸಮಯ ಹಾಗೂ ಸ್ಥಳ ಇತ್ಯಾದಿ ನಮೂದಿಸುವುದು ಅವಶ್ಯಕವಾಗಿದೆ. ಮೃತ್ಯುಪತ್ರವನ್ನು ಸಿದ್ಧಪಡಿಸುವಾಗ ವ್ಯಕ್ತಿ ಶಾರೀರಿಕ ಹಾಗೂ ಮಾನಸಿಕ ದೃಷ್ಟಿಯಲ್ಲಿ ಆರೋಗ್ಯಕರ ಹಾಗೂ ಸಕ್ಷಮವಾಗಿರಬೇಕು. ಈ ವಿಷಯದಲ್ಲಿ ವೈದ್ಯಕೀಯ ಅಧಿಕಾರಿಗಳ ಪ್ರಮಾಣಪತ್ರವೂ ಇರಬೇಕಾಗುತ್ತದೆ. ಇಲ್ಲದಿದ್ದರೆ, ಮೃತ್ಯುಪತ್ರವು ಸ್ವೀಕಾರಾರ್ಹವಾಗುವುದಿಲ್ಲ.

ಆ. ಮೃತ್ಯುಪತ್ರದ ಮೂಲಕ ವ್ಯಕ್ತಿಯ ಒಡೆತನದ ಸಂಪೂರ್ಣ ಸಂಪತ್ತನ್ನು ಅವನ ಇಚ್ಛೆಗನುಸಾರ ವಾರಸುದಾರರಿಗೆ ಹಂಚಬಹುದು. ಸಂಪತ್ತನ್ನು ದಾನ ಮಾಡಬಹುದು ಅಥವಾ ಯಾವುದೇ ಸಂಸ್ಥೆಯ ಹೆಸರಿಗೂ ಮಾಡಬಹುದು. ಯಾವುದೇ ಹಿಂದೂ ವ್ಯಕ್ತಿ ಮೃತ್ಯುಪತ್ರವನ್ನು ಮಾಡುವಾಗ ಆ ವ್ಯಕ್ತಿಯ ಮೃತ್ಯುವಿನ ನಂತರ ಸಂಪತ್ತನ್ನು ‘ಭಾರತೀಯ ವಾರಸುದಾರ ಹಕ್ಕು ಕಾನೂನು ೧೯೨೫’ರಲ್ಲಿನ ವ್ಯವಸ್ಥೆಗನುಸಾರ ಹಂಚಲಾಗುತ್ತದೆ; ಆದರೆ ಮೃತ್ಯುಪತ್ರ ಇಲ್ಲದಿದ್ದರೆ, ವ್ಯಕ್ತಿಯ ಸಂಪತ್ತನ್ನು ‘ಹಿಂದೂ ವಾರಸುದಾರ ಹಕ್ಕು ಕಾನೂನು ‘೧೯೫೬’ ರ ಏರ್ಪಾಡಿಗನುಸಾರ ಹಂಚಲಾಗುತ್ತದೆ.

ಇ. ಮೃತ್ಯುಪತ್ರ ಸಿದ್ಧವಾದ ನಂತರ ಅದನ್ನು ಕಾನೂನು ಸಲಹೆಗಾರ ಅಥವಾ ಯೋಗ್ಯ ನ್ಯಾಯವಾದಿಗಳ ಬಳಿ ಅಥವಾ ಸುರಕ್ಷಿತ ವ್ಯಕ್ತಿಯ ಬಳಿ ಒಪ್ಪಿಸಬೇಕು. ಆದ್ದರಿಂದ ಅವಶ್ಯಕತೆಯಿರುವಾಗ ಅದನ್ನು ಸಾದರಪಡಿಸಬಹುದು.

ಈ. ಮೃತ್ಯುಪತ್ರವನ್ನು ನೋಂದಣಿ ಮಾಡುವುದು ಕಡ್ಡಾಯವಲ್ಲದಿದ್ದರೂ, ಹಾಗೆ ಮಾಡುವುದು ಆವಶ್ಯಕವಾಗಿದೆ. ಮೃತ್ಯುಪತ್ರವನ್ನು ನೋಂದಣಿ ಮಾಡಲು ನಾವು ವಾಸಿಸುವ ಪರಿಸರದ ಉಪನೋಂದಣಾಧಿಕಾರಿಯ ಕಚೇರಿ (ಸಬ್ ರಿಜಿಸ್ಟ್ರಾರ ಕಚೇರಿ) ಕಾರ್ಯಾಲಯಕ್ಕೆ ಹೋಗಿ ಆ ಮೃತ್ಯುಪತ್ರವನ್ನು ಸಾದರಪಡಿಸಬೇಕು. ಎಲ್ಲ ಕಾಗದಪತ್ರಗಳ ತಪಾಸಣೆ ಮಾಡಿದ ನಂತರ ಹಾಗೂ ಎಲ್ಲ ಸಂದೇಹಗಳ ನಿವಾರಣೆಯಾದ ನಂತರ ಮೃತ್ಯುಪತ್ರವನ್ನು ನೋಂದಣಿ ಮಾಡಲಾಗುತ್ತದೆ.

೩. ಮೃತ್ಯುಪತ್ರದಿಂದ ಯಾವ ಸಂಪತ್ತನ್ನು ವಿಭಜಿಸಬಹುದು ?

ಮುಖ್ಯವಾಗಿ ಉತ್ಪನ್ನದಲ್ಲಿ ಎರಡು ವಿಧಗಳಿರುತ್ತವೆ. ಒಂದು ಸ್ವಯಾರ್ಜಿತ ಹಾಗೂ ಇನ್ನೊಂದು ಪಿತ್ರಾರ್ಜಿತ ಉತ್ಪನ್ನ. ವ್ಯಕ್ತಿಗೆ ಪಿತ್ರಾರ್ಜಿತ ಉತ್ಪನ್ನದಲ್ಲಿ ಕಾನೂನು ಪ್ರಕಾರ ಸಿಕ್ಕಿದ ಸಂಪತ್ತಿನ ಮೃತ್ಯುಪತ್ರವನ್ನು ಮಾಡಬಹುದು. ಉತ್ಪನ್ನದಲ್ಲಿ ಇನ್ನೂ ಎರಡು ವಿಧದ ಉಪವಿಧಗಳಿವೆ.

ಅ. ಚಲ (ಅಸ್ಥಿರ) ಆಸ್ತಿ-ಉತ್ಪನ್ನ : ಹಣ, ಫಿಕ್ಸೆಡ್ ಡಿಪಾಸಿಟ್, ಚಿನ್ನ, ಬೆಳ್ಳಿ, ವಾಹನ ಇತ್ಯಾದಿ.

ಆ. ಅಚಲ (ಸ್ಥಿರ) : ಕೃಷಿಭೂಮಿ, ಭೂಮಿ, ಮನೆ, ಬಿಲ್ಡಿಂಗ್ ಇತ್ಯಾದಿ ಇವೆರಡೂ ವಿಧದದ ಉತ್ಪನ್ನದ ಮೃತ್ಯುಪತ್ರವನ್ನು ಮಾಡಬಹುದು.

೪. ಮೃತ್ಯುಪತ್ರದ ಮೂಲಕ ಸಂಪತ್ತನ್ನು ಯಾರಿಗೆ ಕೊಡಬಹುದು ?

ಮೃತ್ಯುಪತ್ರದ ಮೂಲಕ ವಾರಸುದಾರ, ಧಾರ್ಮಿಕ ನ್ಯಾಸ, ಸಂಸ್ಥೆ, ಸೊಸೈಟಿ, ಮಿತ್ರರು ಮತ್ತು ಸಂಬಂಧಿಕರು ಮುಂತಾದವರಿಗೆ ಮೃತ್ಯುಪತ್ರದ ಮೂಲಕ ಸಂಪತ್ತನ್ನು ನೀಡಬಹುದು. ನಮ್ಮ ಕಾನೂನು ಪ್ರಕಾರ ವಾರಸುದಾರರಿರುವಾಗ ಅವರಿಗೆ ಮೃತ್ಯುಪತ್ರದ ಮೂಲಕ ಗಳಿಕೆಯನ್ನು ನೀಡದೆ ಅದನ್ನು ಬೇರೆಯವರಿಗೆ ಮೃತ್ಯುಪತ್ರದ ಮೂಲಕ ಕಾನೂನು ಪ್ರಕಾರ ದಾನ ಮಾಡಬಹುದು.

೫. ಮೃತ್ಯುಪತ್ರದಲ್ಲಿ ಸುಧಾರಣೆ ಮಾಡಲಿಕ್ಕಿದ್ದರೆ, ಹೇಗೆ ಮಾಡಬೇಕು ?

ಒಮ್ಮೆ ಮಾಡಿದ ಮೃತ್ಯುಪತ್ರವನ್ನು ಬದಲಾಯಿಸಬಹುದು ಅಥವಾ ಅದರಲ್ಲಿ ಸುಧಾರಣೆಯನ್ನೂ ಮಾಡಬಹುದು. ಆಸ್ತಿಯ ಖರೀದಿ ಅಥವಾ ಮಾರಾಟ, ವಿವಾಹ ಅಥವಾ ವಿಚ್ಛೇದನ, ಮೃತ್ಯುಪತ್ರದಲ್ಲಿ ನಮೂದಿಸಿದ ವ್ಯಕ್ತಿಯ ಮರಣ ಅಥವಾ ಮಗನ ಅಥವಾ ಮೊಮ್ಮಗನ ಜನ್ಮ ಇತ್ಯಾದಿ ಅನೇಕ ಕಾರಣಗಳಿಂದ ಮೃತ್ಯುಪತ್ರವನ್ನು ಬದಲಾಯಿಸುವ ಅವಶ್ಯಕತೆ ಉಂಟಾಗುತ್ತದೆ. ಮೃತ್ಯುಪತ್ರವನ್ನು ಬದಲಾಯಿಸುವ ಪ್ರಕ್ರಿಯೆಯು ಸಹಜ ಸಾಧ್ಯವಿದೆ. ಮೊದಲಿನ ಮೃತ್ಯುಪತ್ರವನ್ನು ರದ್ದುಪಡಿಸಿ ಬೇರೆಯೆ ಮೃತ್ಯುಪತ್ರ ವನ್ನು ಮಾಡಬಹುದು ಅಥವಾ ಮೃತ್ಯುಪತ್ರಕ್ಕೆ ಹೊಸತಾದ ಜೋಡಣೆಯನ್ನು ಮಾಡಬಹುದು. ಈ ಜೋಡಣೆಯನ್ನು ಮಾಡಲು ಮೃತ್ಯುಪತ್ರದ ಹಾಗೆಯೆ ಸಾಕ್ಷಿದಾರರ ಸಮ್ಮುಖದಲ್ಲಿ ಹೊಸ ಜೋಡಣೆಪತ್ರದಲ್ಲಿ ಸಹಿ ಮಾಡಬೇಕಾಗುತ್ತದೆ. ಸಾಕ್ಷಿದಾರರ ಸಹಿಯ ಸ್ಥಾನದಲ್ಲಿ ದಿನಾಂಕ, ವಾರ ಮತ್ತು ಸ್ಥಳವನ್ನು ಉಲ್ಲೇಖಿಸ ಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ಇಚ್ಛಾಪತ್ರ ಒಂದೇ ಸಮಯದಲ್ಲಿ ಅಸ್ತಿತ್ವದಲ್ಲಿದ್ದರೆ, ದಿನಾಂಕಕ್ಕನುಸಾರ ಅಥವಾ ಸಮಯಕ್ಕನುಸಾರ ಯಾವ ಇಚ್ಛಾಪತ್ರಕ್ಕೆ ಕೊನೆಯ ಸಹಿ ಮಾಡಲಾಗಿರುತ್ತದೆಯೋ, ಅಂದರೆ ಕೊನೆಯ ಮೃತ್ಯುಪತ್ರವನ್ನೇ ಅಂತಿಮವೆಂದು ಸ್ವೀಕರಿಸಲಾಗುತ್ತದೆ.

ಹೊಸ ಮೃತ್ಯುಪತ್ರವನ್ನು ತಯಾರಿಸುವಾಗ ಅಥವಾ ಜೋಡಿಸುವಾಗ ವ್ಯಕ್ತಿಯು ಶಾರೀರಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಬೇಕಾಗುತ್ತದೆ. ಅದಕ್ಕಾಗಿ ವೈದ್ಯಕೀಯ ಪ್ರಮಾಣಪತ್ರದ ಪುರಾವೆಯನ್ನು ಜೋಡಿಸಬೇಕಾಗುತ್ತದೆ.

೬. ಮೃತ್ಯುಪತ್ರವನ್ನು ಮಾಡದಿದ್ದರೆ ಆಗುವ ನಷ್ಟ

ಮೃತ್ಯುಪತ್ರ ಇಲ್ಲದಿದ್ದರೆ ಸಂಪಾದನೆಯನ್ನು ಹೆಸರಿಗೆ ಮಾಡಿಸುವಾಗ ಕಾನೂನಿನಲ್ಲಿರುವ ಏರ್ಪಾಡಿಗನುಸಾರ ಹೆಸರಿಗೆ ಮಾಡಬೇಕಾಗುತ್ತದೆ. ಕಾನೂನಿನ ಏರ್ಪಾಡುಗಳು ಕಠಿಣವಿರುತ್ತದೆ. ಆದ್ದರಿಂದ ಮೃತವ್ಯಕ್ತಿಯ ಸಂಬಂಧಿಕರಿಗೆ ಸಂಪತ್ತನ್ನು ತಮ್ಮ ಹೆಸರಿನಲ್ಲಿ ಮಾಡಿಸಲು ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ಆಸ್ತಿಯ ಅಧಿಕಾರವನ್ನು ಗಳಿಸಲು ತುಂಬಾ ಸಮಯ ಮತ್ತು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕೆಲವೊಮ್ಮೆ ನ್ಯಾಯಾಲಯವೂ ಇದರಲ್ಲಿ ಹಸ್ತಕ್ಷೇಪ ಮಾಡುತ್ತದೆ. ನಮ್ಮ ನಂತರ ಸಂಪತ್ತಿನಿಂದ ವಿವಾದ ಸೃಷ್ಟಿಯಾಗಬಹುದು. ಅದರಲ್ಲಿ ಅನೇಕರಿಗೆ ಸಮಯ ಮತ್ತು ಹಣ ಅನಾವಶ್ಯಕ ಖರ್ಚಾಗಿ ಅವರು ಮಾನಸಿಕ ಒತ್ತಡವನ್ನು ಸಹಿಸಬೇಕಾಗುತ್ತದೆ. ಆದ್ದರಿಂದ ತಕ್ಕ ಸಮಯಕ್ಕೆ ಜಾಗರೂಕರಾಗಿ ಕಾನೂನು ನೀಡಿದ ಮೃತ್ಯುಪತ್ರದ ವರದಾನವನ್ನು ಉಪಯೋಗಿಸಿಕೊಳ್ಳಬೇಕು. ನಾವು ನಮ್ಮ ಸಂಪತ್ತನ್ನು ನಾವಿರುವಾಗಲೆ ನಮ್ಮ ಇಚ್ಛೆಯಂತೆ ವಿಭಜಿಸಬಹುದು.

– ನ್ಯಾಯವಾದಿ ನೀಲೇಶ ಸಾಂಗೋಲಕರ, ವಕೀಲರ ಸಂಘಟಕ, ಹಿಂದೂ ವಿಧಿಜ್ಞ ಪರಿಷತ್ತು (೧೧.೧೨.೨೦೨೨)