ಮಥುರಾದಲ್ಲಿನ ಶ್ರೀಕೃಷ್ಣಜನ್ಮಭೂಮಿಯ ಸಮೀಕ್ಷೆಯನ್ನೂ ನಡೆಸಲಾಗುವುದು !

  • ಮಥುರಾದ ದಿವಾಣಿ ನ್ಯಾಯಾಲಯದ ಆದೇಶ

  • 20 ಜನವರಿ 2023 ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಆದೇಶ

ಮಥುರಾ (ಉತ್ತರಪ್ರದೇಶ) – ಇಲ್ಲಿನ ದಿವಾಣಿ ನ್ಯಾಯಾಲಯದ ನ್ಯಾಯಾಧೀಶೆ ಸೋನಿಕಾ ವರ್ಮಾ ಅವರು ಶ್ರೀಕೃಷ್ಣಜನ್ಮಭೂಮಿ ಸಮೀಕ್ಷೆಗೆ ಆದೇಶಿಸಿದ್ದಾರೆ. ಈ ವಿಷಯದಲ್ಲಿ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ. ವಿಷ್ಣು ಗುಪ್ತಾ ಮತ್ತು ಉಪಾಧ್ಯಕ್ಷರಾದ ಶ್ರೀ. ಸುರಜಿತ ಸಿಂಗ ಯಾದವ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ವಿಷಯದಲ್ಲಿ 2023 ರ ಜನವರಿ 2 ರಿಂದ ಸಮೀಕ್ಷೆ ನಡೆಸುವಂತೆ ಪುರಾತತ್ವ ಇಲಾಖೆಗೆ ನ್ಯಾಯಾಲಯ ಸೂಚಿಸಿದೆ. ಈ ಸಮೀಕ್ಷೆಯ ವರದಿಯನ್ನು ಜನವರಿ 20 ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಲಾಗಿದೆ. ಕಾಶಿಯ ಜ್ಞಾನವಾಪಿಗೆ ಸಂಬಂಧಿಸಿದಂತೆ ಇದೇ ರೀತಿಯ ಸಮೀಕ್ಷೆಗೆ ಆದೇಶಿಸಲಾದನಂತರ ಅಲ್ಲಿ ಶಿವಲಿಂಗ ಮತ್ತು ಹಿಂದೂಗಳ ಅನೇಕ ಧಾರ್ಮಿಕ ಚಿಹ್ನೆಗಳು ಇದ್ದವು ಎಂಬುದು ಬೆಳಕಿಗೆ ಬಂದಿತ್ತು.

೧. ಶ್ರೀಕೃಷ್ಣಜನ್ಮಭೂಮಿಯ ಮೇಲೆ ಈದ್ಗಾ ಮಸೀದಿ ಇದೆ. ಈ ಮಸೀದಿಯ ಸ್ಥಳದಲ್ಲಿಯೇ ಮೂಲ ಶ್ರೀಕೃಷ್ಣಜನ್ಮಭೂಮಿ ಅಂದರೆ ಕಂಸನ ಸೆರೆಮನೆಯಿತ್ತು ಮತ್ತು ಅಲ್ಲಿ ಶ್ರೀಕೃಷ್ಣನ ಜನನವಾಯಿತು. ಔರಂಗಜೇಬನು ಅಲ್ಲಿದ್ದ ಶ್ರೀಕೃಷ್ಣ ದೇವಾಲಯವನ್ನು ಕೆಡವಿ ಅಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಿದನು. ಈ ಒಟ್ಟು 13.37 ಎಕರೆ ಭೂಮಿಯು ಹಿಂದೂಗಳಿಗೆ ಸಿಗಬೇಕು, ಎಂದು ಮನವಿಯಲ್ಲಿ ಬೇಡಲಾಗಿದೆ. ಈ ಅರ್ಜಿಯನ್ನು ನ್ಯಾಯಾಲಯವು ಹಿಂದೊಮ್ಮೆ ತಿರಸ್ಕರಿಸಿತ್ತು; ಈ ಕುರಿತು ಮತ್ತೊಮ್ಮೆ ಅರ್ಜಿ ಸಲ್ಲಿಕೆಯಾದ ಬಳಿಕ ನ್ಯಾಯಾಲಯ ಈ ಮಸೀದಿಯ ಸಮೀಕ್ಷೆಗೆ ಆದೇಶ ನೀಡಿದೆ. ಈ ಭೂಮಿಗೆ ಸಂಬಂಧಿಸಿದಂತೆ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು ಶಾಹಿ ಈದ್ಗಾ ಮಸೀದಿ ನಡುವೆ 1968 ರ ಒಪ್ಪಂದ ಅಮಾನ್ಯವಾಗಿದೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.

೨. ಈ ಸ್ಥಳದಲ್ಲಿರುವ ಮಸೀದಿಯನ್ನು ತೆಗೆದು ಹಾಕಿ ಶ್ರೀಕೃಷ್ಣನ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮೊದಲ ಅರ್ಜಿಯಲ್ಲಿ ಆಗ್ರಹಿಸಲಾಗಿತ್ತು. ‘ಪ್ರಾರ್ಥನಾ ಸ್ಥಳ ಕಾಯಿದೆ 1991’ ಪ್ರಕಾರ, ಆಗಸ್ಟ್ 15, 1947 ರಂದು ಇದ್ದ ಧಾರ್ಮಿಕ ಸ್ಥಳಗಳ ಸ್ಥಿತಿ ಮತ್ತು ಸ್ಥಾನಮಾನವನ್ನು ಕಾಯ್ದುಕೊಳ್ಳಲಾಗಿದೆ. ಈ ಕಾನೂನನ್ನು ಉಲ್ಲೇಖಿಸಿ, ನ್ಯಾಯಾಲಯವು ಆ ಸಮಯದಲ್ಲಿ ಅರ್ಜಿಯನ್ನು ತಿರಸ್ಕರಿಸಿತ್ತು. ‘ಅರ್ಜಿ ಸ್ವೀಕಾರವಾದರೆ, ಈ ರೀತಿ ಹಲವು ಭಕ್ತರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವರು’ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.