ಶ್ರೀ ಕೃಷ್ಣ ಜನ್ಮಭೂಮಿಯ ವಿವಾದಿತ ಮಸೀದಿಯೊಳಗೆ ಪ್ರವೇಶಿಸಲು ಯತ್ನಿಸಿದ ಹಿಂದೂ ಮಹಾಸಭಾದ ಮುಖಂಡನ ಬಂಧನ

ಮಥುರಾ: ಶ್ರೀ ಕೃಷ್ಣ ಜನ್ಮಭೂಮಿ ಪ್ರದೇಶದಲ್ಲಿರುವ ವಿವಾದಾತ್ಮಕ ಶಾಹಿ ಈದ್ಗಾ ಮಸೀದಿಯೊಳಗೆ ಪ್ರವೇಶಿಸಲು ಯತ್ನಿಸಿದ ಹಿಂದೂ ಮಹಾಸಭಾದ ನಾಯಕ ಸೌರಭ್ ಶರ್ಮಾ ಅವರನ್ನು ಬಂಧಿಸಲಾಗಿದೆ. ಶರ್ಮಾ ಮಸೀದಿಗೆ ಹೋಗಿ ಲಡ್ಡು ಗೋಪಾಲನ ವಿಗ್ರಹಕ್ಕೆ ಜಲಾಭಿಷೇಕ ಮಾಡಿ ಅಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲಿದ್ದರು. ಸಹಾಯಕ ಪೊಲೀಸ್ ಅಧೀಕ್ಷಕ ಮಾರ್ತಾಂಡ್ ಪ್ರಕಾಶ್ ಸಿಂಗ್ ಮಾತನಾಡಿ, ಹಿಂದೂ ಮಹಾಸಭಾವು ಡಿಸೆಂಬರ್ ೬ ರಂದು ಮಸೀದಿಗೆ ಹೋಗಿ ಲಡ್ಡು ಗೋಪಾಲನ ವಿಗ್ರಹಕ್ಕೆ ಜಲಾಭಿಷೇಕ ಮತ್ತು ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿತ್ತು ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ, ಹಿಂದೂ ಮಹಾಸಭಾದ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವ ಎಂಟು ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ. ಈ ಪ್ರಕರಣದಲ್ಲಿ, ಶ್ರೀ ಕೃಷ್ಣಜನ್ಮಭೂಮಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತನ್ನು ಹೆಚ್ಚಿಸಲಾಗಿದೆ. ಶ್ರೀ ಕೃಷ್ಣಜನ್ಮಭೂಮಿಯ ಸುತ್ತಮುತ್ತಲಿನ ಸಂಚಾರವನ್ನು ಸಹ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟರ್‌ಗಳನ್ನು ಪ್ರಸಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.