ಭಾರತೀಯ ವೈದ್ಯಕೀಯ ಪ್ರತಿನಿಧಿಗಳ (‘ಮೆಡಿಕಲ್ ರಿಪ್ರೆಸೆಂಟೆಟಿವಸ್ ಅಂದರೆ ‘ಎಂ.ಆರ್.’) ಮಹಾಸಂಘ (‘ಫೆಡರೇಶನ ಆಫ್ ಮೆಡಿಕಲ್ ಅಂಡ್ ಸೇಲ್ಸ್ ರಿಪ್ರೆಸೆಂಟೆಟಿವ್ ಅಸೋಸಿಯೇಶನ ಆಫ್ ಇಂಡಿಯಾ’ ಅಂದರೆ ‘ಎಫ್.ಎಂ.ಆರ್.ಎ.ಐ.’) ಸರ್ವೋಚ್ಚ ನ್ಯಾಯಾಲಯದಲ್ಲಿ ಔಷಧ ನಿರ್ಮಾಣ ಸಂಸ್ಥೆಗಳ (ಫಾರ್ಮಾ ಕಂಪನಿಗಳು) ಅವ್ಯವಹಾರಗಳನ್ನು ನಿಯಂತ್ರಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದೆ. ಭಾರತೀಯ ಆಯುರ್ ವಿಜ್ಞಾನ ಪರಿಷತ್ತು (‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಅಂದರೆ ಎಂ.ಸಿ.ಐ.’) ೨೦೦೨ ರಲ್ಲಿ ‘ವ್ಯವಹಾರಬದ್ಧತೆ, ಶಿಷ್ಟಾಚಾರ ಮತ್ತು ನೈತಿಕ ಬಂಧನಗಳು, ಇವುಗಳ ಅಡಿಯಲ್ಲಿ ವೈಯಕ್ತಿಕವಾಗಿ ಡಾಕ್ಟರರ ಮೇಲೆ ಯಾವುದೇ ಔಷಧಿ ಸಂಸ್ಥೆಗಳಿಂದ ಯಾವುದೇ ರೀತಿಯ ‘ಫ್ರೀ'(ಉಚಿತ) ಉಡುಗೊರೆ ತೆಗೆದುಕೊಳ್ಳುವ ಅಥವಾ ‘ಲಂಚ ತೆಗೆದುಕೊಳ್ಳುವುದನ್ನು ಕಾನೂನಿನನ್ವಯ ಅಪರಾಧವೆಂದು ನಿರ್ಣಯಿಸಿ ನಿರ್ಬಂಧಿಸಿತು. ಇದರ ಸ್ವಲ್ಪ ಭಾಗವನ್ನು ನಾವು ಕಳೆದ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೆವು. ಈ ವಾರ ಅದರ ಮುಂದಿನ ಭಾಗವನ್ನು ನೋಡೋಣ (ಭಾಗ ೨)
೪. ಭಾರತೀಯ ಔಷಧಿ ಸಂಸ್ಥೆಗಳು ಸ್ವಂತ ಔಷಧಿಗಳನ್ನು ತಯಾರಿಸುವ ಸ್ಥಿತಿ
ಇಂದು ಭಾರತದಲ್ಲಿ ಸುಮಾರು ೩ ಸಾವಿರ ಔಷಧಿ ಸಂಸ್ಥೆ ಮತ್ತು ಅವರ ೧೦ ಸಾವಿರ ೫೦೦ ಉತ್ಪಾದನಾ ಸಂಸ್ಥೆಗಳಿವೆ. ಈ ಸಂಸ್ಥೆಗಳು ೩೭೬ ಮಾಲಿಕ್ಯೂಲ್ಸ್ (ಉದಾ. ‘ಡೊಲೊ’ನಲ್ಲಿ ‘ಪ್ಯಾರಾಸಿಟಮಾಲ್’ ಘಟಕ) ಮಾರುತ್ತಾರೆ; ಆದರೆ ‘ಬ್ರಾಂಡ’ ಎಷ್ಟೆಂದರೆ ೬೦ ಸಾವಿರ; ಒಂದು ಪ್ಯಾರಾಸಿಟಮಾಲ್ ಔಷಧಿಗಾಗಿ ೭೯೩ ಬ್ರಾಂಡಗಳು. ಇರಲಿ, ಯಾವುದಾದರೂ ಒಂದೇ ಒಂದು ಭಾರತೀಯ ಔಷಧಿ ಸಂಸ್ಥೆ ಹೊಸ ‘ಮಾಲಿಕ್ಯೂಲ್ಸ’ಗಳನ್ನು ಶೋಧಿಸಿ ಜಗತ್ತಿನಾದ್ಯಂತ ‘ಪೇಟೆಂಟ್’ (ಮಾಲೀಕತ್ವದ ಹಕ್ಕು) ಎಂದು ಮಾರಾಟದ ಹಕ್ಕು ಪಡೆದುಕೊಂಡಿದೆಯೇ ? ಒಂದೂ ಇಲ್ಲ. ಯಾರಾದರೂ ‘ಪ್ಯಾರಾಸಿಟಾಮಲ’ ಸ್ವತಃ ಉತ್ಪಾದನೆ ಮಾಡುತ್ತಿದ್ದಾರೆಯೇ ? ಅಲ್ಪ ಸ್ವಲ್ಪ ಮಾಡುತ್ತಿದ್ದಾರೆ; ಆದರೆ ಭಾರತೀಯ ಸಂಸ್ಥೆಗಳು ತಮ್ಮ ಸ್ವಂತ ಕ್ಷಮತೆಯಿದ್ದರೂ ಶೇ. ೭೦ ರಷ್ಟು ‘ಆಕ್ಟೀವ್ ಫಾರ್ಮಾಸ್ಯುಟಿಕಲ ಇಂಗ್ರೇಡಿಯಂಟ್ಸ’ (ಎಪಿಐ- ಸಕ್ರಿಯ ಔಷಧಿ ಘಟಕ ದ್ರವ್ಯಗಳು) ಚೀನಾದಿಂದ ಆಮದು ಮಾಡಿಕೊಳ್ಳುತ್ತವೆ. ಸಣ್ಣ ಉತ್ಪಾದಕರಿಂದ ಈ ಆಮದು ಕಚ್ಚಾ ಮಾಲಿನ ಮಾತ್ರೆ, ಕ್ಯಾಪ್ಸೂಲ, ಬಾಟಲಿಯ ದ್ರವ ಔಷಧಿಗಳು ಮುಂತಾದವನ್ನು ತಯಾರಿಸಿಕೊಂಡು ಸ್ವಂತ (ಬ್ರ್ಯಾಂಡ) ಹೆಸರಿನಡಿಯಲ್ಲಿ ಮಾರಾಟ ಮಾಡುತ್ತವೆ. ಔಷಧಿ ಸಂಸ್ಥೆಗಳು ಕೇವಲ ‘ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ಯುನಿಟ್’ (‘ಪ್ಯಾಕೇಜಿಂಗ್’ ಮತ್ತು ವಿತರಣೆ ಮಾಡುವ) ಕಂಪನಿಗಳಾಗಿವೆ. ಹೀಗಿರುವಾಗ ‘ಫ್ರೀ’ ಕೊಡದೇ ಇದ್ದರೆ ಡಾಕ್ಟರರು ಈ ೭೯೩ ರಲ್ಲಿ ನಿರ್ದಿಷ್ಟ ಬ್ರ್ಯಾಂಡನ್ನು ಅವರು ಏಕೆ ಬರೆಯಬೇಕು ? ‘ಡಾಕ್ಟರರು ತಮ್ಮ ಬ್ರ್ಯಾಂಡ ಬರೆಯದಿದ್ದರೆ, ರೋಗಿ (ಪೇಶಂಟ್) ಹೇಗೆ ಖರೀದಿಸುತ್ತಾರೆ ?’, ಎನ್ನುವುದನ್ನು ಔಷಧಿ ಸಂಸ್ಥೆಗಳು ಅರಿತಿವೆ. ಈಗ ನಿಜ ಹೇಳುವುದೇನೆಂದರೆ, ಕೆಲವು ಒಳ್ಳೆಯ ಸಂಸ್ಥೆಗಳು ಸ್ವಂತ ಹೆಸರುವಾಸಿಯಾಗಿರುವ ಕಂಪನಿಗಳು ತಮ್ಮ ಹೆಸರನ್ನು ಉಳಿಸಿಕೊಳ್ಳುತ್ತವೆ ಮತ್ತು ಉತ್ತಮ ಗುಣಮಟ್ಟವನ್ನು ಕಾಪಾಡುತ್ತವೆ ಮತ್ತು ಹೀಗಿರುವಾಗ ಕೆಲವು ಡಾಕ್ಟರರು ‘ಉಚಿತ’ (ಉಡುಗೊರೆ) ತೆಗೆದುಕೊಳ್ಳದೇ ಆ ಬ್ರ್ಯಾಂಡ ಬರೆಯುತ್ತಾರೆ.
೫. ಔಷಧಿಗಳ ದರ್ಜೆಯನ್ನು ಪರೀಕ್ಷಿಸಲು ಇಲ್ಲಿಯವರೆಗೂ ಯಾವುದೇ ಸಂಸ್ಥೆ ಭಾರತದಲ್ಲಿ ಇಲ್ಲದಿರುವುದು ಮತ್ತು ಹೆಚ್ಚುತ್ತಿರುವ ಡಾಕ್ಟರರಿಗೆ ಉಡುಗೊರೆ ನೀಡುವ ಪ್ರವೃತ್ತಿ
ಈಗ ಗುಣಮಟ್ಟ ಎಂದರೆ ಅರ್ಥವೇನು ? ೨೦೧೯ ರಲ್ಲಿ ಯಾವ ಔಷಧಿ ಕಂಪನಿಗಳು ಅಮೇರಿಕಾದ ಆಹಾರ-ಔಷಧಿ ಸಂಸ್ಥೆಗಳು (ಎಫ್.ಡಿ.ಎ.) ಗುಣಮಟ್ಟದ ವಿಷಯದಲ್ಲಿ ಎಚ್ಚರಿಕೆಯನ್ನು ನೀಡಿರುವ ೩೮ ರಲ್ಲಿ ೧೩ ಸಂಸ್ಥೆಗಳು ಭಾರತೀಯ (ಹೆಸರಾಂತ ?) ಆಗಿವೆ. ಭಾರತದಲ್ಲಿಯಂತೂ ಗುಣಮಟ್ಟದ ವಿಷಯದಲ್ಲಿ ಆನಂದವೇ ಆನಂದವಿದೆ. ಕೆಲಸಗಳ್ಳತನ, ಭ್ರಷ್ಟಾಚಾರವನ್ನು ಹೊರತುಪಡಿಸಿದರೆ, ಭಾರತದ ‘ಎಫ್.ಡಿ.ಎ.’ ಮಧ್ಯದಲ್ಲಿ ಶೇ. ೪೩ ರಷ್ಟು ಹುದ್ದೆಗಳು ಖಾಲಿಯಾಗಿವೆ. ಒಂದು ವೇಳೆ, ಪ್ರಾಮಾಣಿಕವಾಗಿ ವ್ಯವಹಾರ ಮಾಡುವ ಯಾವುದೇ ಡಾಕ್ಟರರು ಎಷ್ಟೇ ಶೋಧಿಸಿದರೂ, ಅವನಿಗೆ ಸಂಸ್ಥೆ ಮತ್ತು ಬ್ರ್ಯಾಂಡ ಇವುಗಳನುಸಾರ ಗುಣಮಟ್ಟವನ್ನು ತಿಳಿದುಕೊಳ್ಳುವ ಯಾವುದೇ ವ್ಯವಸ್ಥೆ ಇಂದಿನವರೆಗೂ ಇಲ್ಲ. ಹೀಗಿರುವಾಗ ಒಂದೋ ‘ಫ್ರೀ’ (ಉಚಿತ) ಪಡೆದುಕೊಂಡು ಬರೆಯಿರಿ, ಇಲ್ಲವಾದರೆ ಅದನ್ನು ತೆಗೆದುಕೊಳ್ಳದೇ ಸ್ವಂತ ಅನುಭವದ ಮೇಲೆ ಬ್ರ್ಯಾಂಡ ಬರೆದು ಕೊಡಬೇಕು.‘ ನಾನು ರೋಗಿಗೆ ಕಡಿಮೆ ವೆಚ್ಚದ ಮತ್ತು ಪುಸ್ತಕದಲ್ಲಿರುವಂತೆ ಬ್ರ್ಯಾಂಡ ಬರೆದು ಕೊಡುತ್ತೇನೆ’, ಎಂದು ಪ್ರತಿಜ್ಞೆಯನ್ನು ಪಾಲಿಸುವ ಕೆಲವು ಡಾಕ್ಟರರು‘ಫ್ರೀ’ ತೆಗೆದುಕೊಳ್ಳದೇ ಕಡಿಮೆ ಬೆಲೆಯ ಮತ್ತು ಉತ್ತಮ ಗುಣಮಟ್ಟದ ಬ್ರ್ಯಾಂಡ ಬರೆದು ಕೊಡುತ್ತಿರುತ್ತಾರೆ; ಆದರೆ ಇದು ಪ್ರತಿಯೊಬ್ಬರ ಸದ್ವಿವೇಕ ಬುದ್ಧಿಯನ್ನು ಅವಲಂಬಿಸಿರುತ್ತದೆ. ಹಾಗೆಯೇ ನಡೆಯುತ್ತದೆಯೆಂದು ಪರಿಶೀಲಿಸಲು ಯಾವುದೇ ವ್ಯವಸ್ಥೆ ಇಲ್ಲ. ಡಾಕ್ಟರರು ಸಂಸ್ಥೆಗಳಿಗೆ ಎಷ್ಟು ವ್ಯಾಪಾರವನ್ನು ಕೊಡುತ್ತಾರೆಯೋ, ಅಷ್ಟೇ ಪ್ರಮಾಣದಲ್ಲಿ ಮೊಬೈಲ್ (ಸಂಚಾರವಾಣಿ), ಗೋಲ್ಡಕಾಯಿನ್ (ಬಂಗಾರದ ನಾಣ್ಯ), ಟ್ಯಾಬ್, ಲ್ಯಾಪಟಾಪ್ (ಸಂಚಾರಿ ಗಣಕಯಂತ್ರ), ಕಾರು, ಫಾರಿನ್ ಟೂರ್ (ವಿದೇಶ ಯಾತ್ರೆ) ಹೀಗೆ ಈ ‘ಫ್ರೀ’ ಆಮಿಷಗಳಿರುತ್ತವೆ.
೬. ಔಷಧಿಗಳ ಶೇ. ೮೨ ರಷ್ಟು ಬ್ರ್ಯಾಂಡ್‌ಗಳ ಮೇಲೆ ಬೆಲೆಯ ನಿಯಂತ್ರಣವಿಲ್ಲದೇ ಇರುವುದು ಮತ್ತು ಇದರಿಂದ ಉಡುಗೊರೆ ವಸ್ತುಗಳ ವ್ಯವಹಾರ ಅವ್ಯಾಹತವಾಗಿರುವುದು
ಇವುಗಳ ತುಲನೆಯಲ್ಲಿ ‘ಡೊಲೊ’ ಇದು ಕೇವಲ ಇಂದಿನ ಹೊಸ ಸುದ್ದಿಯಾಗಿದೆ ! ಸರಕಾರ ಏನನ್ನೂ ಮಾಡುವುದಿಲ್ಲ ಎಂದೇನಿಲ್ಲ. ಆವಶ್ಯಕ ಔಷಧಿಗಳ ಒಂದು ಪಟ್ಟಿಯಿದೆ. ಅದರಲ್ಲಿ ೩೪೮ ಔಷಧಿಗಳಿವೆ ಮತ್ತು ಸುಮಾರು ಎಲ್ಲ ಔಷಧಿಗಳ ಬೆಲೆಗಳ ಮೇಲೆ ನಿರ್ಬಂಧ ಕೂಡ ಇದೆ. ಆದರೆ ಕೇವಲ ಶೇ. ೧೮ ರಷ್ಟು ಬ್ರ್ಯಾಂಡ (ಒಟ್ಟಾರೆ ೧.೬ ಲಕ್ಷ ಕೋಟಿ ರೂಪಾಯಿ ವ್ಯವಹಾರ ಮಾಡುವ ೬೦ ಸಾವಿರ ಬ್ರ್ಯಾಂಡಗಳ ಪೈಕಿ) ಈ ನಿರ್ಬಂಧದ ಅಡಿಯಲ್ಲಿ ಬರುತ್ತವೆ. ಇನ್ನುಳಿದ ಶೇ. ೮೨ ರಷ್ಟು ಬ್ರ್ಯಾಂಡಗಳು ಮನಸ್ಸಿಗೆ ತೋಚಿದ ಬೆಲೆಗೆ ಈ ಸಂಸ್ಥೆಗಳು ಮಾರಾಟ ಮಾಡುತ್ತಿವೆ.
ಇದರಲ್ಲಿ ಜಾಣತನವೇನೆಂದರೆ, ‘ಪ್ಯಾರಾಸಿಟಾಮಲ್’ ೫೦೦ ಮಿ.ಗ್ರಾಂ. ಮೇಲೆ ಬೆಲೆಯ ನಿರ್ಬಂಧ ವಿಧಿಸಿದ ಕೂಡಲೇ ಚಾಣಾಕ್ಷತನ ತೋರಿ ೬೫೦ ಮಿ.ಗ್ರಾಂ. (ಡೊಲೊದಂತೆ) ಮಾರಾಟ ಪ್ರಾರಂಭಿಸುತ್ತಾರೆ. ಅದರ ಮೇಲೆಯೂ ಬೆಲೆ ನಿರ್ಬಂಧಿಸಿದರೆ ಕೆಲವು ಸಂಸ್ಥೆಗಳು ‘ಪ್ಯಾರಾಸಿಟಾಮಲ್’ನೊಂದಿಗೆ ‘ಕೆಫೇನ’ ಅಂಶವಿರುವ ಮಾತ್ರೆಯನ್ನು ತಯಾರಿಸಿದವು. ಈ ಬ್ರ್ಯಾಂಡ ಯಾವ ಡಾಕ್ಟರ್ ಬರೆದುಕೊಡುತ್ತಾನೆಯೋ, ಅವರ ರೋಗಿಯ ಶರೀರದಲ್ಲಿ ಪ್ರತಿಯೊಂದು ಮಾತ್ರೆಯೊಂದಿಗೆ ಕಾಫೀ ಕೂಡ ಸೇರುತ್ತದೆ. ೨ ರೂಪಾಯಿಯ ಮಾತ್ರೆಗೆ ೪ ರೂಪಾಯಿ ಕೊಡಬೇಕಾಗುತ್ತದೆ. ಇದು ಕೇವಲ ಒಂದು ಉದಾಹರಣೆಯಾಗಿದೆ. ಹೀಗೆ ಆವಶ್ಯಕತೆಯಿಲ್ಲದೇ ಇರುವ ‘ಕಾಂಬಿನೇಶನ’ (ಔಷಧಿ ಘಟಕಗಳ ಒಂದುಗೂಡಿಸಿರುವಿಕೆ) ಸಾವಿರಾರು ಬ್ರ್ಯಾಂಡಗಳಿವೆ. ಅವುಗಳನ್ನು ಮಾರಾಟ ಮಾಡಲಾಗುತ್ತವೆ. ಬರೆಯಬೇಕೆಂದು ‘ಉಚಿತ’ ಉಡುಗೊರೆಯಂತೂ ಇದ್ದೇ ಇದೆ. ಕಾನೂನು ರಚಿಸುವವರು ಅಥವಾ ಅಧಿಕಾರಿಗಳು ಕೇವಲ ಮೂಕ ಪ್ರೇಕ್ಷಕರಾಗಿರುತ್ತಾರೆ. ಮತ್ತೊಂದು ವಿಷಯವೆಂದರೆ ‘ರಾಷ್ಟ್ರೀಯ ಆಯುರ್ವಿಜ್ಞಾನ ಆಯೋಗ’ ಕೂಡ (ಎನ್.ಎಮ್.ಸಿ.) ಉದಾರ ಮನಸ್ಸಿನಿಂದ ಡಾಕ್ಟರರ ಸಂಘಟನೆಗಳಿಗೆ ಮಾತ್ರ ‘ಫ್ರೀ’ ನೀಡಬೇಕೆಂದು ಮುಕ್ತ ಮನಸ್ಸಿನಿಂದ ಅನುಮತಿ ನೀಡಿದೆ. ಅಂದರೆ ಒಬ್ಬ ಡಾಕ್ಟರರ ತೆಗೆದುಕೊಂಡರೆ ಅಪರಾಧ; ೫ ಜನರು ಒಂದುಗೂಡಿ ತೆಗೆದುಕೊಂಡರೆ ಅವರಿಗೆ ‘ಉಚಿತ’. ಈ ಸಂಘಟನೆಗಳ ‘ಕಾನ್ಫರೆನ್ಸ’ಗಾಗಿ ೫೦ ಲಕ್ಷ, ೮೦ ಲಕ್ಷ ಹೀಗೆ ಲಕ್ಷಾಂತರ ರೂಪಾಯಿಗಳ ಪ್ರಸಾದವನ್ನು ವಿತರಿಸಲಾಗುತ್ತದೆ. ಇದು ತೆರಿಗೆಗೆ ಒಳಪಡುವುದೇ ? ಒಳಪಡಬೇಕು; ಆದರೆ ಜನಪ್ರತಿನಿಧಿಗಳು ನಿದ್ರಿಸುತ್ತಿದ್ದಾರೆ.
೭. ಅರ್ಬುದರೋಗದ ಔಷಧಿಗಳ ಹಗಲು ದರೋಡೆ
ಈ ಉಚಿತ ಉಡುಗೊರೆಗಾಗಿ ಮತ್ತೊಂದು ಸುದೃಢವಾದ ರಾಜಮಾರ್ಗವಿದೆ. ಉದಾ.ಅರ್ಬುದರೋಗದ ಸಲುವಾಗಿ ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ರೋಗಿಯು ಚಿಕಿತ್ಸೆಗಾಗಿ ಮನೆ, ಮಠ ಮಾರಿ ಮೊದಲೇ ಕೆಲವು ಲಕ್ಷಗಳನ್ನು ವ್ಯಯಿಸಿರುತ್ತಾನೆ ಮತ್ತು ಅವನಿಗೆ ಈ ಮಾತ್ರೆಗಳನ್ನು ದೀರ್ಘಕಾಲದ ವರೆಗೆ ತೆಗೆದುಕೊಳ್ಳಬೇಕಾಗಿರುತ್ತದೆ. ಔಷಧಿ ಮಾರಾಟಗಾರನಿಗೆ ಆ ಮಾತ್ರೆಗಳ ಒಂದು ಸ್ಟ್ರಿಪ್ (೧೦ ಮಾತ್ರೆಗಳ ೧ ಪಟ್ಟಿ) ಬೆಲೆ ಸುಮಾರು ೧ ಸಾವಿರ ೫೦ ರೂಪಾಯಿಗಳಿವೆ. ಆ ಮಾತ್ರೆಗಳ ಪಟ್ಟಿಯ ಮೇಲೆ ಔಷಧಿ ಕಂಪನಿಗಳ ‘ಎಮ್.ಆರ್.ಪಿ.’ ದರ ಆಶ್ಚರ್ಯಕರ. ಸಗಟು ಮಾರಾಟದ ಬೆಲೆ ೩ ಸಾವಿರ ೬೫೦ ಎಂದು ಮುದ್ರಿಸಲಾಗಿರುತ್ತದೆ. ಸಗಟು ಮಾರಾಟಗಾರರಿಗೆ ೨ ಸಾವಿರ ೬೦೦ ರೂಪಾಯಿ ಲಾಭ ?
ಈ ಲಾಭ ಆಸ್ಪತ್ರೆಯಲ್ಲಿಯೇ ‘ಫಾರ್ಮಸಿ’ ಎಂದು ಇರುವ ಔಷಧಿ ಮಾರಾಟಗಾರರಿಗೆ (ಮೆಡಿಕಲ್ ಶಾಪ್‌ಗೆ) ಅಥವಾ ವ್ಯವಹಾರ (ಡೀಲ) ಮಾಡಿಕೊಂಡಿರುವ ಡಾಕ್ಟರರಿಗೆ ಸಿಗುತ್ತದೆ. ಈ ರೀತಿ ಅಸಂಖ್ಯಾತ ಉದಾಹರಣೆಗಳಿವೆ. ಬಡರೋಗಿಯ ಜೇಬಿಗೆ ರಾಜಾರೋಶವಾಗಿ ದರೋಡೆ ನಡೆದಿದೆ. ‘ಆಸ್ಪತ್ರೆಗೆ ಕೊಡುವ ಬೆಲೆ’ ಮತ್ತು ಸ್ಟ್ರಿಪ್ ಮೇಲಿನ ‘ಎಮ್.ಆರ್.ಪಿ.’ ಇವುಗಳಲ್ಲಿ ಹೆಚ್ಚೆಂದರೆ ಕೇವಲ ಶೇ. ೩೦ ರಷ್ಟು ವ್ಯತ್ಯಾಸ (?) ಇರಬೇಕು, ಎಂದು ‘ಅಲಾಯನ್ಸ್ ಆಫ್ ಡಾಕ್ಟರ್ಸ ಫಾರ ಎಥಿಕಲ ಹೆಲ್ತ ಕೇರ್’ ಈ ಸಂಘಟನೆಯಿಂದ ಕಳೆದ ಅನೇಕ ವರ್ಷಗಳಿಂದ ಬೇಡಿಕೆಯಿದೆ; ಆದರೆ ಬೋರ್ಗಲ್ಲ ಮೇಲೆ ನೀರೆರೆದಂತೆ ಆಗಿದೆ.
೮. ಡಾಕ್ಟರರು ಮತ್ತು ಔಷಧಿ ಕಂಪನಿಗಳಿಂದ ಉಡುಗೊರೆ ಪಡೆಯುವ ರೂಢಿ ತಡೆಯುವ ಉಪಾಯಯೋಜನೆ
ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಇದೇ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಒಂದು ಸಾರ್ವಜನಿಕ ಹಿತಾಸಕ್ತಿ ದೂರಿನ ಕಡೆಗೆ ಗಮನಹರಿಸಿದೆ, ಇದು ಅತ್ಯಂತ ಆಶಾದಾಯಕವಾಗಿದೆ; ಆದರೆ ಇದು ಒಂದು ರೀತಿ ತೇಪೆ ಹಚ್ಚುವಂತಹದ್ದಾಗಿದೆ. ‘ಸ್ಟಂಟ್’ (ಹೃದಯದ ರಕ್ತವಾಹಿನಿಗಳಲ್ಲಿ ಉಂಟಾಗಿರುವ ತೊಂದರೆಯನ್ನು ದೂರಗೊಳಿಸಿ ಸರಾಗಗೊಳಿಸಲು ಕೂಡಿಸುವ ಒಂದು ಸೂಕ್ಷ್ಮ ತಂತಿಗಳ ಬಲೆಯಂತಹ ನಳಿಕೆ) ಬೆಲೆಯ ಮೇಲೆ ನಿಯಂತ್ರಣ ತಂದರು; ಆದರೆ ‘ಆಂಜಿಯೋಪ್ಲಾಸ್ಟಿ’ಗಾಗಿ (ಹೃದಯಕ್ಕೆ ಮಾಡುವ ಒಂದು ವಿಶಿಷ್ಟ ರೀತಿಯ ಶಸ್ತ್ರಚಿಕಿತ್ಸೆ) ಬೇಕಾಗಿರುವ ಇತರೆ ವಸ್ತು ಮತ್ತು ಆಸ್ಪತ್ರೆಗಳ ಬೆಲೆ ಅನಿಯಂತ್ರಿತಗೊಂಡಿರುವುದು). ಈ ಕಡೆ ತೇಪೆ ಹಚ್ಚಿರಿ (೫೦೦ ಮಿ.ಗ್ರಾಮ್ ‘ಪ್ಯಾರಾಸಿಟಾಮಲ್’ ಬೆಲೆಯ ಮೇಲೆ ನಿರ್ಬಂಧ ಹೇರಿದರೆ; ‘ಕೆಫೇನ’ನಂತಹ ಬೇರೊಂದು ಕಳ್ಳ ಮಾರ್ಗವನ್ನು ಸುಮ್ಮನೆ ಬಿಡುವುದು) ಈ ರೀತಿ ಇಂತಹ ಹಳೆಯ ರೋಗಗಳು ಗುಣಮುಖವಾಗುವುದಿಲ್ಲ.
ಈ ‘ಫ್ರೀ’ ರೂಢಿಯನ್ನು ನಿರ್ಬಂಧಿಸುವ ಇಚ್ಛೆಯಿದ್ದರೆ, ಅತ್ಯಂತ ಸರಳ ಉಪಾಯಗಳಿವೆ.
ಅ. ಮೊದಲನೇಯದೆಂದರೆ ‘ಎನ್.ಎಮ್.ಸಿ’ ಡಾಕ್ಟರರ ಸಂಘಟನೆ ಗಳಿಗೆ ‘ಫ್ರೀ’ ತೆಗೆದುಕೊಳ್ಳುವ ಸೌಲಭ್ಯವನ್ನು ನಿರ್ಬಂಧಿಸಲು ಸಹಜ ಸಾಧ್ಯವಿದೆ. ಅದಕ್ಕಾಗಿ ‘ಎನ್.ಎಮ್.ಸಿ.’ಗೆ ಅಧಿಕಾರವಿದೆ. ಕೇವಲ ಒಂದು ಆದೇಶ ಹೊರಡಿಸಬೇಕು, ‘ಫ್ರೀ’ ತೆಗೆದುಕೊಳ್ಳುವ ಡಾಕ್ಟರರ ಪಟ್ಟಿಯನ್ನು ತರಿಸಿಕೊಳ್ಳಿರಿ ಮತ್ತು ಅವರ ಪರವಾನಿಗೆಯನ್ನು ‘ಎನ್.ಎಮ್.ಸಿ.’ ಕಾನೂನಿನಂತೆ ಕೆಲವು ತಿಂಗಳುಗಳ ಮಟ್ಟಿಗಾದರೂ ರದ್ದುಗೊಳಿಸಿರಿ.
ಆ. ಔಷಧಿ ಸಂಸ್ಥೆಗಳಿಗೆ ‘ಯೂನಿಫಾರ್ಮ ಕೋಡ ಆಫ್ ಫಾರ್ಮಾಸ್ಯೂಟಿಕಲ್ಸ ಮಾರ್ಕೆಟಿಂಗ್ ಪ್ರಾಕ್ಟೀಸಸ್’ (ಯು.ಸಿ.ಪಿ. ಎಮ್.ಪಿ) ಯ (ಔಷಧಿ ಸಂಸ್ಥೆಗಳು, ತಮ್ಮ ವಿತರಣೆ ಪದ್ಧತಿ, ವೈದ್ಯಕೀಯ ಪ್ರತಿನಿಧಿ, ಉಡುಗೊರೆ ಮತ್ತು ಜಾಹೀರಾತುಗಳನ್ನು ನಿಯಂತ್ರಿಸುವ ಕಾನೂನು) ಕಾನೂನು ಸಂಸತ್ತಿನಲ್ಲಿ ಅನುಮೋದನೆಗೊಳ್ಳಬೇಕು. ಇದೇ ಬೇಡಿಕೆಯನ್ನು ‘ಮೆಡಿಕಲ್ ರಿಪ್ರೆಸೆಂಟೇಟೀವ್ಸ’ ಮಹಾಸಂಘವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಿದೆ.
ಇ. ಒಂದು ವೇಳೆ ಸರ್ವೋಚ್ಚ ನ್ಯಾಯಾಲಯದ ಒತ್ತಡಕ್ಕೆ ಮಣಿದು ಈ ವಿಷಯಗಳು ಜಾರಿಗೊಳ್ಳಲೂಬಹುದು; ಆದರೆ ಪೂರ್ವಾನುಭವದಿಂದ ಹೇಳುವುದೇನೆಂದರೆ, ಅಷ್ಟು ಸಾಕಾಗುವುದಿಲ್ಲ. ಉದಾ. ಡಾಕ್ಟರರಿಗೆ ಕಾನೂನಿನಿಂದ ನಿರ್ಬಂಧ ವಿಧಿಸಲಾಗಿದ್ದರೂ; ಪ್ರತ್ಯಕ್ಷದಲ್ಲಿ ಎಳ್ಳಷ್ಟೂ ಬದಲಾವಣೆಯಾಗಿರುವುದಿಲ್ಲ; ಏಕೆಂದರೆ ಈ ಕಾನೂನನ್ನು ಜಾರಿಗೊಳಿಸುವ ಸಂಸ್ಥೆ ಅಸ್ತಿತ್ವದಲ್ಲಿಯೇ ಇಲ್ಲ. ‘ಅಲಾಯನ್ಸ್ ಆಫ್ ಡಾಕ್ಟರ್ಸ ಫಾರ ಎಥಿಕಲ್ ಹೆಲ್ತಕೇರ್’ ಸಂಘವು ರಾಜ್ಯಸಭೆ ಸಮಿತಿಗೆ ಒತ್ತಾಯದಿಂದ ಮನವಿಯನ್ನು ಸಲ್ಲಿಸಿ, ಡಾಕ್ಟರರು ನೈತಿಕತೆಯ ಬಂಧನದ ಅಡಿಯಲ್ಲಿಯೇ ತಮ್ಮ ವ್ಯವಸಾಯವನ್ನು ಮಾಡುತ್ತಿದ್ದಾರೆಂದು ನೋಡಲು ಇಂಗ್ಲೆಂಡಿನ ‘ಜನರಲ್ ಮೆಡಿಕಲ್ ಕೌನ್ಸಿಲ್’ನಂತಹ ಒಂದು ಪ್ರತ್ಯೇಕ ವಿಭಾಗವನ್ನು ‘ಎನ್.ಎಂ.ಸಿ.’ ಅಡಿಯಲ್ಲಿ ರಚಿಸಿರಿ ಎಂದು ಕೋರಿಕೊಂಡಿತ್ತು. ಆದರೆ ಅದು ಅನುಮೋದನೆಗೊಳ್ಳಲಿಲ್ಲ.
ಈ. ಈ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯದ ಎದುರಿಗೆ ‘ಕಾನೂನಿನ ಪಾಲನೆ ಪ್ರತ್ಯಕ್ಷದಲ್ಲಿ ಆಗುತ್ತಿದೆಯೇ ?’ ಎಂದು ನಿರ್ದಾಕ್ಷಿಣ್ಯವಾಗಿ ಪರಿಶೀಲಿಸುವ ‘ಸ್ವತಂತ್ರ ಸಂಸ್ಥೆ’ಗಾಗಿ ಕೂಡ ಆಗ್ರಹಿಸುವ ಆವಶ್ಯಕವಿದೆ.
ಈ ‘ಡೊಲೊ’ ಮಾತ್ರೆಗಳ ಪ್ರಕರಣದಿಂದ ಈ ಆಸೆ ಚಿಗುರೊಡೆದಿದೆ, ಸರ್ವೋಚ್ಚ ನ್ಯಾಯಾಲಯದೊಂದಿಗೆ ಎಲ್ಲ ಪಕ್ಷಗಳ ಪ್ರಜಾಪ್ರತಿನಿಧಿಗಳು, ಆಡಳಿತಾರೂಢರು ಮತ್ತು ಅಧಿಕಾರಿಗಳು ಒಗ್ಗಟ್ಟಿನಿಂದ ಬಡ ರೋಗಿಗಳಿಗೆ ಆವಶ್ಯಕವಿರುವ ‘ಫ್ರೀ’ಯ, ದರೋಡೆ ಮಾಡುವ ಬೆಲೆಯ ಮತ್ತು ಅನಾವಶ್ಯಕ ಕಾಂಬಿನೇಶನಗಳನ್ನು ಬುಡದಿಂದಲೇ ಕಿತ್ತು ಹಾಕಬಹುದು ಮತ್ತು ಕೋಟ್ಯಾವಧಿ ಭಾರತೀಯರ ಆಶೀರ್ವಾದವನ್ನು ಪಡೆದುಕೊಳ್ಳಬಹುದು.
ಲೇಖಕರು : ಡಾ. ಅರುಣ ಗದ್ರೆ, ಜನಾರೋಗ್ಯ ವಿಷಯದ ಅನೇಕ ಸಂಸ್ಥೆಗಳೊಂದಿಗೆ ಸಂಬಂಧಿಸಿದವರು. (ಆಧಾರ : ‘ಲೋಕಸತ್ತಾ ದಿನಪತ್ರಿಕೆ ೭.೯.೨೦೨೨)