ಭಾರತೀಯ ಕೃಷಿ ಪರಂಪರೆಯ ಮಹತ್ವ ಹಾಗೂ ಅದನ್ನು ಉಳಿಸಿಕೊಳ್ಳುವ ಅವಶ್ಯಕತೆ

ಸನಾತನದ `ಮನೆಮನೆಗಳಲ್ಲಿ ಕೈದೋಟ’ ಅಭಿಯಾನ

ಸೌ. ರಾಘವಿ ಕೊನೆಕರ

೧. ಅಭಿವೃದ್ಧಿಶೀಲ ಭಾರತೀಯ ಕೃಷಿ ಪರಂಪರೆ

ಪುರಾತನ ಭಾರತೀಯ ಕೃಷಿ ಪರಂಪರೆಯು ನಿಸರ್ಗಕ್ಕೆ ಪೂರಕವಿತ್ತು. ಸ್ಥಳೀಯ ಪರಿಸ್ಥಿತಿಗಳಿಗೆ ಸೂಕ್ತವಾದ ದೇಶೀಯ ಬೀಜಗಳನ್ನು ಉಪಯೋಗಿಸುವುದು, ಮಣ್ಣಿನ ಆರೋಗ್ಯವನ್ನು ಕಾಪಾಡುವುದು ಹಾಗೂ ಹೊಲದಲ್ಲಿನ ಜಿವಾಣು, ಕೀಟಾಣು ಹಾಗೂ ಬೆಳೆಗಳ ಜೀವವೈವಿಧ್ಯ (ಬಯೋಡೈವರ್ಸಿಟಿ) ಕಾಪಾಡು ವಂತಹ ಗಟ್ಟಿಮುಟ್ಟಾದ ಅಡಿಪಾಯದಲ್ಲಿ ಈ ವ್ಯವಸ್ಥೆ ನಿಂತಿತ್ತು. ಹವಾಮಾನ, ಋತುಚಕ್ರ ಇವುಗಳ ಅಭ್ಯಾಸದ ಜೊತೆಗೇ ಆಕಾಶದಲ್ಲಿನ ವಿವಿಧ ಗ್ರಹ-ನಕ್ಷತ್ರಗಳು, ವಿಶಿಷ್ಟ ತಿಥಿ ಹಾಗೂ ದಿನಗಳ ನಿರ್ದಿಷ್ಟ ಪ್ರಹರಗಳಲ್ಲಿ ಮಾಡಿದ ಕೃತಿಗಳು ಬೆಳೆ ಹೆಚ್ಚಾಗುವುದಕ್ಕೆ ಹೇಗೆ ಕಾರಣವಾಗುತ್ತವೆ, ಎಂಬುದರ ಜ್ಞಾನವೂ ಭಾರತೀಯ ರೈತರಿಗಿತ್ತು. ಉದಾ. ಹುಣ್ಣಿಮೆ ಮತ್ತು ಅಮವಾಸ್ಯೆಯ ತಿಥಿಗಳಿಗೆ ವಿವಿಧ ಕೀಟಾಣುಗಳ ಮೊಟ್ಟೆ ಇಡುವ ಅವಧಿಯಿರುತ್ತದೆ. ಆದ್ದರಿಂದ ಈ ದಿನ ಬೆಳೆಗಳ ಮೇಲೆ ನೈಸರ್ಗಿಕ ಘಟಕಗಳಿಂದ ತಯಾರಿಸಿದ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಕೀಟಾಣುಗಳ ನಿಯಂತ್ರಣವಾಗುತ್ತದೆ.

೨. ನಾಣ್ಣುಡಿಗಳು ಮತ್ತು ಚಲನವಲನದ ಮೂಲಕ ಸಂರಕ್ಷಿಸಲ್ಪಟ್ಟ ಸಂಪ್ರದಾಯ

ಇಂತಹ ಪರಂಪರೆಯನ್ನು ಆಧರಿಸಿರುವ ಅನೇಕ ನಾಣ್ಣುಡಿಗಳು ಕೂಡ ರೂಢಿಯಲ್ಲಿವೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ `ಪರಿಸರ ಶಿಕ್ಷಣ’ ವಿಷಯದ ಅಭ್ಯಾಸಕರಾಗಿರುವ ಶ್ರೀ. ಬಸವಂತ ವಿಠಾಬಾಯಿ ಬಾಬಾರಾವ್ ಇವರ ಲೇಖನ ಓದಲು ಸಿಕ್ಕಿತು. ಅದರಲ್ಲಿ ಅವರು ಈ ಮುಂದಿನ ಮಾಹಿತಿಯನ್ನು ನೀಡಿದ್ದಾರೆ. `ಅಕ್ಷಯ ತದಿಗೆ’ಯಂದು ಬೇಸಿಗೆಯ ಬೆಳೆಗಳನ್ನು ಬೆಳೆಸಲು ಹೊಲದಲ್ಲಿ ಕಟ್ಟೆಕಟ್ಟಿ ಬೀಜ ಬಿತ್ತಲಾಗುತ್ತದೆ ಹಾಗೂ ಆ ಗಿಡಗಳಿಗೆ ಆಷಾಢ ಹುಣ್ಣಿಮೆಯ ಸಮಯದಲ್ಲಿ ಆಚರಿಸಲ್ಪಡುವ `ಬೆಂದೂರ’ ಹಬ್ಬದ ವರೆಗೆ ಫಲಧಾರಣೆಯಾಗುತ್ತದೆ. ಈ ದಿನವು ಹೊಲದ ಕೆಲಸಗಳನ್ನು ಆರಂಭಿಸುವ ಮುಹೂರ್ತವೆಂದು ಪರಿಗಣಿಸಲಾಗುತ್ತದೆ. ಬೇಸಿಗೆಯಲ್ಲಿ ಬೆಳೆಸುವ ಸೋರೆಕಾಯಿ, ಹೀರೇಕಾಯಿ, ಚೀನಿಕಾಯಿ, ಕುಂಬಳಕಾಯಿ, ಹಾಗಲಕಾಯಿ, ಅಲಸಂಡೆ, ಚಳ್ಳವರೆ ಇತ್ಯಾದಿ ಬೀಜಗಳನ್ನು ಈ ದಿನ ಬಿತ್ತುತ್ತಾರೆ. ಶುಂಠಿ, ಅರಿಶಿನ ಇವುಗಳನ್ನೂ ಈ ದಿನವೆ ನೆಡಲಾಗುತ್ತದೆ.

೩. ಅಕ್ಷಯ ತದಿಗೆಯಂದು ಬೀಜಗಳ ಮೊಳಕೆಯೊಡೆಯುವ ಸಾಮರ್ಥ್ಯವನ್ನು ಪರೀಕ್ಷಿಸುವುದು

ಶ್ರೀ. ಬಾಬಾರವರು ಮುಂದೆ ಬರೆಯುತ್ತಾರೆ, `ಅಕ್ಷಯ ತದಿಗೆಯಂದು ಬೀಜಗಳ ಮೊಳಕೆಯೊಡೆಯುವ ಸಾಮರ್ಥ್ಯವನ್ನು ಪರೀಕ್ಷಿಸುವ ಒಂದು ಪದ್ಧತಿಯೂ ಪ್ರಚಲಿತವಿದೆ. ಹೊಲದಲ್ಲಿ ದೊಡ್ಡ ಪ್ರಮಾಣದಲ್ಲಿ ಬಿತ್ತನೆ ಮಾಡುವ ಮೊದಲು ಬೀಜಗಳ ಮೊಳಕೆ ಯೊಡೆಯುವ ಸಾಮರ್ಥ್ಯದ ಪರೀಕ್ಷಣೆ ಮಾಡಿದರೆ ರೈತರಿಗೆ ಅದರಿಂದ ತುಂಬಾ ಲಾಭವಾಗುತ್ತದೆ. ಯಾವ ಧಾನ್ಯದ ಬಿತ್ತನೆ ಮಾಡಲಿಕ್ಕಿದೆಯೊ, ಅದರ ನೂರು ಕಾಳುಗಳನ್ನು ತೆಗೆದುಕೊಂಡು ಒಂದು ಗೋಣಿಯ ಮೇಲೆ ಸಾಲಿನಲ್ಲಿಟ್ಟು ಗೋಣಿಯನ್ನು ಸುತ್ತಬೇಕು ಮತ್ತು ಅದನ್ನು ನೀರಿನಲ್ಲಿ ನೆನೆಸಿಡಬೇಕು. ಅದು ಒದ್ದೆಯಾಗಿರಬೇಕೆಂದು ಅದರ ಮೇಲೆ ಪ್ರತಿದಿನ ಸ್ವಲ್ಪ ನೀರನ್ನು ಸಿಂಪಡಿಸಬೇಕು. ಬೀಜದ ವಿಧಕ್ಕನುಸಾರ ಈ ಗೊಣಿಯನ್ನು ೩ ರಿಂದ ೫ ದಿನಗಳಲ್ಲಿ ತೆರೆದು ನೋಡಬೇಕು ಹಾಗೂ ಅಂಕುರಿಸಿದ ಬೀಜಗಳ ಸಂಖ್ಯೆಯನ್ನು ಎಣಿಸಬೇಕು. ೯೦ ಕ್ಕಿಂತ ಹೆಚ್ಚು ಬೀಜಗಳು ಮೊಳಕೆಯೊಡೆದಿದ್ದರೆ, ಅದು ಬಿತ್ತನೆಗೆ ಉತ್ತಮವೆಂದು ತಿಳಿಯಬೇಕು. ಕೆಲವು ಕಡೆಗಳಲ್ಲಿ ಸ್ವಲ್ಪ ಬೀಜವನ್ನು ಒಂದು ಸಾಲಿನಲ್ಲಿ ಭೂಮಿಯಲ್ಲಿ ಬಿತ್ತಿ ಈ ಪರೀಕ್ಷಣೆಯನ್ನು ಮಾಡಲಾಗುತ್ತದೆ.

೪. ಅಕ್ಷಯ ತದಿಗೆಯಂದು ಟೆರೇಸ್‌ನಲ್ಲಿ ಮಾಡಿದ ಕೃಷಿಯ ವಿಷಯದಲ್ಲಿ ಬಂದಿರುವ ಅನುಭವ

ಈ ಮೇಲಿನ ವಿಷಯವನ್ನು ಓದಿದ ನಂತರ `ನಾವು ಕೂಡ ಅಕ್ಷಯ ತದಿಗೆಯಂದು ಬೇಸಿಗೆಯ ತರಕಾರಿಗಳ ಕೃಷಿ ಮಾಡಿ ನೋಡಬೇಕು’, ಎಂದೆನಿಸಿತು. ಅದಕ್ಕನುಸಾರ ಈ ದಿನ ಬೆಂಡೆ, ಸೋರೆಕಾಯಿ, ಕುಂಬಳಕಾಯಿ ಮತ್ತು ಶುಂಠಿಯನ್ನು ನೆಟ್ಟೆವು. ಆಗ ನಿಜವಾಗಿಯು ಆಷಾಢ ಹುಣ್ಣಮೆಯ ಸಮಯದಲ್ಲಿ ಬೆಂಡೆ, ಸೋರೆಕಾಯಿ ಹಾಗೂ ಕುಂಬಳಕಾಯಿ ತಯಾರಾಗಿತ್ತು. (ಚಿತ್ರವನ್ನು ನೋಡಿ)

ಅಕ್ಷಯ ತದಿಗೆಯ ದಿನ ಕೃಷಿ ಮಾಡಿದ ನಂತರ ಆಷಾಢ ಹುಣ್ಣಿಮೆಯ ಸಮಯದಲ್ಲಿ ತಯಾರಾಗಿರುವ ಬೆಂಡೆ, ಸೋರೆಕಾಯಿ ಹಾಗೂ ಕುಂಬಳಕಾಯಿ

೫. ಪರಂಪರೆಯನ್ನು ಸಂರಕ್ಷಿಸುವ ಹಾಗೂ ಅಭ್ಯಾಸ ಮಾಡುವ ಅವಶ್ಯಕತೆ

ಆಂಗ್ಲರ ಆಡಳಿತದ ಸಮಯದಲ್ಲಿ ಆರಂಭವಾದ ಮೆಕಾಲೆ ಶಿಕ್ಷಣಪದ್ಧತಿಯು ಭಾರತೀಯರನ್ನು ಮಾನಸಿಕ ಗುಲಾಮರನ್ನಾಗಿಸಿತು. ಅದರ ಪರಿಣಾಮದಿಂದ ಕೃಷಿ ವಿದ್ಯಾಪೀಠಗಳೆಲ್ಲವೂ ಇಷ್ಟು ವರ್ಷಗಳಿಂದ ಇವೆಲ್ಲ ಕೃಷಿಪರಂಪರೆಗಳು ಹೇಗೆ ನಾಮಾ ವಶೇಷವಾಗಬಹುದು, ಎನ್ನುವ ವಿಷಯದಲ್ಲಿಯೆ ಪ್ರಯತ್ನಿಸಿ ರಬಹುದೇ ?’, ಎಂಬ ಸಂಶಯ ಬರುತ್ತದೆ. ಇಂದು ಸುಜಲಾಮ್ -ಸುಫಲಾಮ್ ಭಾರತಭೂಮಿಯ ದುರ್ದೆಶೆಯಾಗಿದೆ. ಮೇಲ್ನೋಟಕ್ಕೆ ರಾಸಾಯನಿಕ ಕೃಷಿಯಿಂದ ಕಾಣುವ ಉತ್ಪಾದನೆ ಹೆಚ್ಚಳಕ್ಕೆ ರೈತ ಮರುಳಾದ; ಆದರೆ ಕ್ರಮೇಣ `ಭೂಮಿ ಬರಡಾಗುತ್ತಿದೆ’, ಎಂಬುದು ತಿಳಿದಾಗ ಅದನ್ನು ಉಳಿಸುವ ಉಪಾಯ ಮಾತ್ರ ರಾಸಾಯನಿಕ ತಂತ್ರಜ್ಞಾನದಲ್ಲಿರಲಿಲ್ಲ ! ಈ ದುಷ್ಟಚಕ್ರದಿಂದ ಹೊರಬರಲು ನಿಸರ್ಗಕ್ಕೆ ಪೂರಕವಾಗಿರುವ ಹಾಗೂ ಶಾಶ್ವತ ಕೃಷಿ ತಂತ್ರವನ್ನು ಪ್ರಸಾರ ಮಾಡಲು ರೈತರಲ್ಲಿ ಮತ್ತು ಜನಸಾಮಾನ್ಯರಲ್ಲಿಯೂ ಜಾಗೃತಿ ಮೂಡಿಸುವುದು ಆವಶ್ಯಕವಾಗಿದೆ.’

– ಸೌ. ರಾಘವಿ ಮಯೂರೇಶ ಕೊನೆಕರ, ಢವಳೀ, ಫೋಂಡಾ, ಗೋವಾ. (೩೦.೮.೨೦೨೨)