ಹಿಟ್ಟು, ಧಾನ್ಯ ಮತ್ತು ಮಸಾಲೆಗಳು ಹಾಳಾಗದಂತೆ ವಹಿಸಬೇಕಾದ ಮುನ್ನೆಚ್ಚರಿಕೆ

ಅಡುಗೆಮನೆಯಲ್ಲಿಟ್ಟ ಹಿಟ್ಟುಗಳು, ಧಾನ್ಯಗಳು ಮತ್ತು ಮಸಾಲೆಗಳು ಕೆಡುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಹಿಟ್ಟಿನಲ್ಲಿ ಆಗುವ ಹುಳಗಳಿಂದ ನಮಗೆ ತೊಂದರೆಯಾಗಬಹುದು. ಆದುದರಿಂದ ಮಳೆಗಾಲದಲ್ಲಿ ಹಿಟ್ಟುಗಳನ್ನು ಮತ್ತು ಕಾಳುಗಳನ್ನು ಹುಳಗಳಿಂದ ರಕ್ಷಿಸುವುದಕ್ಕಾಗಿ ಕೆಲವು ಸುಲಭ ಉಪಾಯಗಳನ್ನು ಇಲ್ಲಿ ಕೊಡುತ್ತಿದ್ದೇವೆ.

೧. ಸಾಸಿವೆ ಎಣ್ಣೆಯ ಉಪಯೋಗ

ಅಕ್ಕಿ, ಹಿಟ್ಟು ಮತ್ತು ಕಾಳುಗಳನ್ನು ಹುಳ ಹಿಡಿಯುವುದರಿಂದ ಮತ್ತು ಹಸಿಯಾಗುವುದರಿಂದ ರಕ್ಷಿಸಬೇಕಾದರೆ ಸಾಸವೆ ಎಣ್ಣೆಯನ್ನು ಬಳಸುವುದು ಬಹಳ ಉಪಯುಕ್ತವಾಗಿದೆ. ಇದಕ್ಕಾಗಿ ಒಂದು ಚಮಚ ಸಾಸವೆ ಎಣ್ಣೆಯನ್ನು ಕಾಳುಗಳಿಗೆ ಬೆರೆಸಿ ಅದನ್ನು ಸೂರ್ಯಪ್ರಕಾಶದಲ್ಲಿ ಇಡುವುದರಿಂದ ಹುಳಗಳು ತಾವಾಗಿಯೇ ಇಲ್ಲವಾಗುತ್ತವೆ ಮತ್ತು ಧಾನ್ಯಗಳು ಹಸಿಯಾಗುವುದಿಲ್ಲ.

೨. ಬೆಳ್ಳುಳ್ಳಿಯನ್ನು ಬಳಸುವುದು

ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಒಣಗಿಸಿ ಅದನ್ನು ಬೇಳೆ, ಅಕ್ಕಿ ಮತ್ತು ಹಿಟ್ಟಿನ ಡಬ್ಬಿಗಳಲ್ಲಿ ಇಡಬೇಕು. ಇದರಿಂದ ಮಳೆಗಾಲದಲ್ಲೂ ಧಾನ್ಯಗಳು ಸುರಕ್ಷಿತವಾಗಿದ್ದು ಹುಳಗಳ ಸಮಸ್ಯೆಯಾಗುವುದಿಲ್ಲ.

೩. ಧಾನ್ಯಗಳನ್ನು ಸೂರ್ಯಪ್ರಕಾಶದಲ್ಲಿಡಿ ! (ಬಿಸಿಲಿನಲ್ಲಿಡುವುದು)

ಧಾನ್ಯದಲ್ಲಿನ ಹುಳಗಳನ್ನು ತೆಗೆಯುವುದಕ್ಕಾಗಿ ಅವುಗಳಿಗೆ ಸೂರ್ಯಪ್ರಕಾಶವನ್ನು ಕೊಡುವುದು ಸರ್ವೋತ್ತಮ ಉಪಾಯವಾಗಿದೆ. ಧಾನ್ಯಗಳಿಗೆ ಸೂರ್ಯಪ್ರಕಾಶ ಸಿಕ್ಕಿದ ತಕ್ಷಣ ಎಲ್ಲ ಹುಳಗಳು ಹೊರಗೆ ಬರುತ್ತವೆ. ಆದುದರಿಂದ ಅಡಿಗೆಮನೆಯಲ್ಲಿಟ್ಟ ಹಿಟ್ಟು, ಬೇಳೆಕಾಳು ಅಥವಾ ಅಕ್ಕಿಯಲ್ಲಿ ಹುಳಗಳಿದ್ದರೆ, ಅದನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿಡಬೇಕು.

೪. ಕಾಳುಗಳಲ್ಲಿ ಬೇವಿನ ಎಲೆಗಳನ್ನಿಡಿರಿ !

ಬೇಳೆಕಾಳುಗಳಲ್ಲಿನ ಹುಳಗಳನ್ನು ಹೋಗಲಾಡಿಸಲು ಬೇವಿನ ಎಲೆಗಳನ್ನು ಬಳಸುವುದು ಒಂದು ಬಹಳ ಪ್ರಭಾವಿಮಾರ್ಗವಾಗಿದೆ. ಅದಕ್ಕಾಗಿ ಕಹಿಬೇವಿನ ಎಲೆಗಳನ್ನು ಒಣಗಿಸಿ ಅದನ್ನು ರವೆ, ಮಸಾಲೆ ಅಥವಾ ಧಾನ್ಯಗಳಲ್ಲಿಡಬೇಕು. ಅದೇ ರೀತಿ ಈ ಎಲ್ಲ ಆಹಾರಪದಾರ್ಥಗಳನ್ನು ಗಾಳಿಯಾಡದ ಡಬ್ಬಿಯಲ್ಲಿಡಬೇಕು.

(ಆಧಾರ : ದೈನಿಕ ‘ಲೋಕಸತ್ತಾ’)