ಋತುವಿಗನುಸಾರ ಬಹುತೇಕ ಜನರು ಬಿಸಿ ಅಥವಾ ತಣ್ಣನೆಯ ನೀರಿನಿಂದ ಸ್ನಾನ ಮಾಡುತ್ತಾರೆ. ನೀರಿನಲ್ಲಿ ಉಪ್ಪು ಹಾಕಿ ಸ್ನಾನ ಮಾಡುವುದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ ಎನ್ನುವುದು ನಿಮಗೆ ಗೊತ್ತಿದೆಯೇ ? ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಸಂದುನೋವಿನಿಂದ ಆರಾಮ ಸಿಗುತ್ತದೆ. ಹಾಗೆಯೇ ಒತ್ತಡವೂ ಕಡಿಮೆಯಾಗುತ್ತದೆ. ಇದಲ್ಲದೇ ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಇನ್ನೂ ಯಾವೆಲ್ಲ ಲಾಭಗಳಾಗುತ್ತವೆ ಎನ್ನುವುದನ್ನು ಮುಂದೆ ನೀಡಲಾಗಿದೆ.
೧. ಸಂದಿನೋವು ಕಡಿಮೆಯಾಗುವುದು
ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಸಂದುನೋವು ಕಡಿಮೆಯಾಗುತ್ತದೆ. ಸ್ನಾನದ ನೀರಿನಲ್ಲಿ ಚಿಟಿಕೆಯಷ್ಟು ಉಪ್ಪು ಹಾಕಿದರೆ, ಎಲುಬಿನ ಸಣ್ಣ ಪುಟ್ಟ ನೋವು ದೂರವಾಗುತ್ತದೆ. ಒಂದು ವೇಳೆ ನಿಮ್ಮ ಕಾಲು ಬಹಳ ನೋಯುತ್ತಿದ್ದರೆ, ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಿ ಕಾಲು ತೊಳೆದರೆ ಲಾಭವಾಗುತ್ತದೆ.
೨. ಸಾಂಕ್ರಾಮಿಕ ರೋಗ ಕಡಿಮೆಯಾಗುವುದು
ಯಾವುದೇ ವಿಧದ ಸಾಂಕ್ರಾಮಿಕ ರೋಗವನ್ನು ದೂರಗೊಳಿಸಲು ಉಪ್ಪು ನೀರು ಬಹಳ ಉಪಯುಕ್ತವಾಗಿದೆ. ವಾಸ್ತವದಲ್ಲಿ ಉಪ್ಪಿನಲ್ಲಿರುವ ಖನಿಜಗಳು ಅನೇಕ ವಿಧದ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತವೆ ಉಪ್ಪು ನೀರಿನ ಸ್ನಾನದಿಂದ ಶರೀರದಲ್ಲಿರುವ ಎಲ್ಲ ರಂಧ್ರಗಳು ತೆರೆದುಕೊಳ್ಳುತ್ತವೆ. ಇದರಿಂದ ಶರೀರದಲ್ಲಿರುವ ಸಾಂಕ್ರಾಮಿಕ ರೋಗಗಳ ಅಪಾಯ ಕಡಿಮೆಯಾಗುತ್ತದೆ.
೩. ಮೊಡವೆಗಳಾಗದಿರುವುದು
ಶರೀರದ ಎಲ್ಲ ರಂಧ್ರಗಳು ತೆರೆಯುವುದರಿಂದ ‘ಬಾಡಿ ಡಿಟಾಕ್ಸ್’ (ಶರೀರದಲ್ಲಿರುವ ಹೊಲಸು ಹೊರಹಾಕುವ ಪ್ರಕ್ರಿಯೆ) ಆಗುವುದರಿಂದ ಮುಖದ ಮೇಲಿನ ಕಲೆ ಮತ್ತು ಮೊಡವೆಗಳು ಕಡಿಮೆಯಾಗುತ್ತವೆ. ಹಾಗೆಯೇ ಈ ನೀರು ತ್ವಚೆ ಹೈಡ್ರೇಟ್ (ಸಜಲೀಕರಣ) ಗೊಳಿಸುವಲ್ಲಿ ಬಹಳ ಲಾಭದಾಯಕವಾಗಿದೆ.
೪. ಒತ್ತಡ ಕಡಿಮೆಯಾಗಿ ಮೆದುಳಿಗೆ ಒಳ್ಳೆಯದೆನಿಸುವುದು
ಒಂದು ವೇಳೆ ಯಾವುದಾದರೂ ವಿಷಯದ ಬಗ್ಗೆ ಬಹಳ ಒತ್ತಡವೆನಿಸುತ್ತಿದ್ದರೆ, ಉಪ್ಪಿನ ನೀರಿನಿಂದ ಸ್ನಾನ ತಪ್ಪದೇ ಮಾಡಬೇಕು. ಉಪ್ಪಿನ ನೀರಿನಲ್ಲಿರುವ ಖನಿಜಗಳು ಶರೀರದೊಳಗೆ ಹೀರಿಕೊಳ್ಳುತ್ತದೆ. ‘ಸೋಡಿಯಂ ಮೆದುಳಿನ ಮೇಲೆಯೂ ಪರಿಣಾಮ ಬೀರುತ್ತದೆ’, ಎಂದು ನಂಬಲಾಗುತ್ತದೆ. ‘ಬಾಡಿ ಡಿಟಾಕ್ಸ್’ ಆಗುವುದರಿಂದ ಅದರ ನೇರ ಪರಿಣಾಮ ಮೆದುಳಿನ ಮೇಲೆ ಆಗುತ್ತದೆ ಮತ್ತು ತಮಗೆ ಒಳ್ಳೆಯದೆನಿಸುತ್ತದೆ.
(ನೀರಿನಲ್ಲಿ ಉಪ್ಪು ಹಾಕಿ ಸ್ನಾನ ಮಾಡುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿಯೂ ಉಪಾಯವಾಗುತ್ತದೆ. ಇದರಿಂದ ಸ್ವತಃ ಸುತ್ತಲೂ ಇರುವ ತೊಂದರೆದಾಯಕ ಆವರಣವೂ ಕಡಿಮೆಯಾಗುತ್ತದೆ. ಹಾಗೆಯೇ ಶರೀರದಲ್ಲಿರುವ ತೊಂದರೆದಾಯಕ (ಕಪ್ಪು) ಶಕ್ತಿಯೂ ಕಡಿಮೆಯಾಗಲು ಸಹಾಯವಾಗುತ್ತದೆ. – ಸಂಕಲನಕಾರರು)
(ಆಧಾರ: ದೈನಿಕ ‘ಲೋಕಸತ್ತಾ’)