ಮಳೆಗಾಲದಲ್ಲಿನ ಜ್ವರ ಹಾಗೂ ಕೊರೊನಾ ಸೋಂಕಿನ ಸಮಯದಲ್ಲಿ ಪಾಲಿಸಬೇಕಾದ ಆಹಾರದ ಪಥ್ಯ

ವೈದ್ಯ ಮೇಘರಾಜ ಪರಾಡಕರ್

ಮಳೆಗಾಲವು ಆರಂಭವಾದರೆ ಎಲ್ಲೆಡೆ ನೆಗಡಿ, ಕೆಮ್ಮು ಮತ್ತು ಜ್ವರ ಈ ರೋಗಗಳ ಪ್ರಮಾಣ ಹೆಚ್ಚಾಗುತ್ತದೆ. ಈ  ವಾರದ ಲೇಖನದಲ್ಲಿ ಮಳೆಗಾಲದಲ್ಲಾಗುವ ಈ ರೋಗಗಳಲ್ಲಿ ಆಯುರ್ವೇದಿಕ ದೃಷ್ಟಿಕೋನವನ್ನು ತಿಳಿದುಕೊಳ್ಳೋಣ. ಈ ಮಾಹಿತಿಯು ಕೊರೊನಾ ಮಹಾಮಾರಿಗಾಗಿಯೂ ಉಪಯುಕ್ತವಿದೆ.

೧. ಮಳೆಗಾಲದಲ್ಲಿ ನೈಸರ್ಗಿಕವಾಗಿ ಶರೀರದ ‘ಅಗ್ನಿ’ ಮಂದವಾಗುವುದು

ಮಳೆಗಾಲದಲ್ಲಿ ಹೆಚ್ಚಿನ ಬಾರಿ ದಿನವಿಡೀ ಆಕಾಶದಲ್ಲಿ ಮೋಡಗಳು ಕವಿದಿರುತ್ತವೆ. ಸತತ ಮಳೆಯಿಂದ ವಾತಾವರಣವು ತಂಪಾಗಿರುತ್ತದೆ. ಇವುಗಳಿಂದ ಶರೀರದಲ್ಲಿನ ಅಗ್ನಿ, ಅಂದರೆ ಪಚನಶಕ್ತಿ ಮಂದವಾಗಿರುತ್ತದೆ. ಅದರಲ್ಲಿಯೂ ಶ್ರಮದ ಕೆಲಸವನ್ನು ಮಾಡದಿರುವ ಅಥವಾ ಕೇವಲ ಕುಳಿತಲ್ಲೇ ಕೆಲಸ ಮಾಡುವವರ ಅಗ್ನಿ ಬಹಳಷ್ಟು ವ್ಯಾಯಾಮ ಅಥವಾ ಶ್ರಮ ಪಡುವ ವ್ಯಕ್ತಿಗಳ ತುಲನೆಯಲ್ಲಿ ಮಂದವಾಗಿರುತ್ತದೆ.

೨. ಜ್ವರ ಬರುವಾಗ ಶರೀರದಲ್ಲಾಗುವ ಬದಲಾವಣೆಗಳು

ಅಗ್ನಿಯು ಮಂದವಿರುವಾಗ ಎಂದಿನಂತೆ ಆಹಾರ ಸೇವಿಸಿದರೆ ಕೆಲವೊಮ್ಮೆ ಅದು ಪಚನವಾಗುವುದಿಲ್ಲ. ಆದುದರಿಂದ ಶರೀರದಲ್ಲಿನ ವಾತ, ಪಿತ್ತ ಮತ್ತು ಕಫ ದೂಷಿತವಾಗುತ್ತದೆ, ಅಂದರೆ ಅವುಗಳ ಸಮತೋಲನ ಕೆಡುತ್ತದೆ. ಈ ದೂಷಿತಗೊಂಡ ದೋಷ (ವಾತ, ಪಿತ್ತ ಮತ್ತು ಕಫ ಇವುಗಳಿಗೆ ‘ದೋಷ’ ಎನ್ನುತ್ತಾರೆ.) ಅಗ್ನಿಯ ಮೇಲೆ ಆವರಣ ತರುತ್ತವೆ ಮತ್ತು ಅದನ್ನು ಅದರ ಸ್ಥಾನದಿಂದ ಬದಿಗೆ ಸರಿಸುತ್ತವೆ. ಇದರಿಂದ ಅಗ್ನಿಯು ತನ್ನ ಸ್ಥಾನವನ್ನು, ಅಂದರೆ ಆಹಾರದ ಮಾರ್ಗವನ್ನು (ಜಠರ, ಚಿಕ್ಕ ಮತ್ತು ದೊಡ್ಡ ಕರುಳುಗಳು ಇತ್ಯಾದಿ) ಬಿಟ್ಟು ರಕ್ತದಲ್ಲಿ ಸೇರಿಕೊಳ್ಳುತ್ತದೆ ಮತ್ತು ಅಲ್ಲಿ ಉಷ್ಣತೆಯನ್ನುಂಟು ಮಾಡುತ್ತದೆ. ಆಹಾರವು ಸರಿಯಾಗಿ ಪಚನವಾಗದಿದ್ದರೆ ಶರೀರದಲ್ಲಿನ ಬೆವರನ್ನು ಸಾಗಿಸುವ ವಾಹಿನಿಗಳು ಮುಚ್ಚಿಕೊಳ್ಳುತ್ತವೆ ಮತ್ತು ಬೆವರು ಬರುವುದಿಲ್ಲ. ಶರೀರದ ತಾಪಮಾನ ಹೆಚ್ಚಾಗುತ್ತದೆ. ಇದಕ್ಕೆ ನಾವು ಜ್ವರ ಎನ್ನುತ್ತೇವೆ.

೩. ಜ್ವರದಿಂದ ಗುಣಮುಖರಾಗಲು ‘ಲಂಘನ (ಉಪವಾಸ)’

ಜ್ವರದ ಮುಖ್ಯ ಕಾರಣ ‘ಶರೀರದಲ್ಲಿನ ಅಗ್ನಿ ಮಂದವಾಗುವುದು’, ಆಗಿರುತ್ತದೆ. ಆದುದರಿಂದ ಜ್ವರದಿಂದ ಗುಣಮುಖರಾಗಲು ಅಗ್ನಿಯ ಮೇಲೆ ಹೆಚ್ಚಿನ ಭಾರವನ್ನು ಹಾಕದೇ ಅದನ್ನು ಪುನಃ ಅದರದ್ದೇ ಆದ ಸ್ಥಾನದಲ್ಲಿ ತರಬೇಕಾಗುತ್ತದೆ. ಏನನ್ನು ತಿನ್ನದೇ ಉಪವಾಸ ಮಾಡಿದರೆ ಅಗ್ನಿಯ ಮೇಲೆ ಹೆಚ್ಚಿನ ಭಾರ ಬೀಳುವುದಿಲ್ಲ. ಉಪವಾಸಕ್ಕೆ ಆಯುರ್ವೇದದಲ್ಲಿ ‘ಲಂಘನ’ ಎಂದು ಕರೆಯುತ್ತಾರೆ. ಲಂಘನ ಮಾಡಿದರೆ ಶರೀರದಲ್ಲಿ ಯಾವಾಗಲೂ ಇರುವ ಪಚನಕ್ರಿಯೆಯಿಂದ ಸ್ವಲ್ಪ ವಿಶ್ರಾಂತಿ ದೊರಕಿ ಜ್ವರದಿಂದ ಚೇತರಿಸಿಕೊಳ್ಳಲು ಸಮಯ ಸಿಗುತ್ತದೆ. ಇತ್ತೀಚೆಗೆ ಜ್ವರ ಬಂದಿರುವ ವ್ಯಕ್ತಿಗೆ ಪ್ರೋಟಿನುಗಳು ಹೆಚ್ಚಾಗಿರುವ ಆಹಾರವೆಂದು ಹಾಲು, ಮೊಸರು, ಮೊಟ್ಟೆ ಇತ್ಯಾದಿಗಳನ್ನು ತಿನ್ನಲು ಕೊಡಲಾಗುತ್ತದೆ. ಒಂದು ವೇಳೆ ಈ ಪದಾರ್ಥಗಳಲ್ಲಿ ಪ್ರೋಟಿನುಗಳು ಹೆಚ್ಚಾಗಿದ್ದರೂ ಅವುಗಳನ್ನು ಪಚನ ಮಾಡುವ ಕ್ಷಮತೆ ರೋಗಿಯ ಶರೀರದಲ್ಲಿರುವುದಿಲ್ಲ. ಆದುದರಿಂದ ಜ್ವರದಲ್ಲಿ ಹಾಲು, ಮೊಸರು ಇವುಗಳಂತಹ ಪಚನಕ್ಕೆ ಜಡವಾಗಿರುವ ಆಹಾರವನ್ನು ತಡೆಗಟ್ಟಬೇಕು.

೩ ಅ. ನಿರಾಹಾರ ಲಂಘನ (ಏನನ್ನೂ ತಿನ್ನದೇ ಉಪವಾಸ ಮಾಡುವುದು) : ಮಳೆಗಾಲದ ದಿನಗಳಲ್ಲಿ ಜ್ವರ ಬಂದರೆ ಆ ದಿನದ ಮಟ್ಟಿಗೆ ಒಂದು ವೇಳೆಯ ಭೋಜನವನ್ನು ಸೇವಿಸದೇ ಕಟ್ಟುನಿಟ್ಟಾದ ಉಪವಾಸವನ್ನು ಮಾಡಬೇಕು. (ಮಧುಮೇಹ (ಸಕ್ಕರೆ ಕಾಯಿಲೆ) ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಕಡಿಮೆ ಮಾಡುವ ಔಷಧಿಗಳು ಇದ್ದರೆ, ಉಪವಾಸದ ದಿನ ಆ ಔಷಧಿಗಳನ್ನು ತೆಗೆದುಕೊಳ್ಳಬಾರದು ಅಥವಾ ಈ ಬಗ್ಗೆ ಆಧುನಿಕ ವೈದ್ಯರನ್ನು ಕೇಳಬೇಕು.) ನೀರಡಿಕೆಯಾದಾಗ ಕುದಿಸಿದ ಬೆಚ್ಚಗಿನ ನೀರನ್ನು ಕುಡಿಯಬೇಕು. ನೀರು ಕುದಿಯುವಾಗ ಅದರಲ್ಲಿ ಒಂದು ಲೀಟರ್‌ಗೆ ಕಾಲು ಚಮಚದಷ್ಟು ಶುಂಠಿಯ ಪುಡಿಯನ್ನು ಹಾಕಿ ಅದನ್ನು ಕುಡಿದರೆ ಜ್ವರ ಇಳಿಯಲು ಸಹಾಯವಾಗುತ್ತದೆ. ಯಾರಿಗೆ ಶರೀರದ ಮೇಲೆ ಬೊಕ್ಕೆಗಳೇಳುವುದು, ಬಾಯಿ ಹುಣ್ಣು ಆಗುವುದು, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯುವುದು ಹೀಗೆ ಉಷ್ಣತೆಯ ತೊಂದರೆಯಾಗುತ್ತದೆಯೋ, ಅವರು ಶುಂಠಿಯ ಬದಲು ನಾಗರಮೋಥಿಯ ಚೂರ್ಣವನ್ನು ಬಳಸಬೇಕು.

೩ ಆ. ‘ಲಾಜಾಮಂಡ (ಅರಳುಗಳ ಔಷಧಿಯ ಗಂಜಿ)’ : ಒಂದು ವೇಳೆಯ ಭೋಜನವನ್ನು ಸೇವಿಸದಿದ್ದರೆ ಹೊಟ್ಟೆಗೆ ವಿಶ್ರಾಂತಿ ಸಿಗುತ್ತದೆ ಮತ್ತು ಹಸಿವಾಗುತ್ತದೆ. ಇಂತಹ ಸಮಯದಲ್ಲಿ ಮುಷ್ಠಿಯಷ್ಟು ಅರಳನ್ನು (ಯಾವುದೇ ಧಾನ್ಯದ) ಅಥವಾ ಅವಲಕ್ಕಿಯನ್ನು ಒಂದು ತಂಬಿಗೆಯಷ್ಟು ನೀರಿನಲ್ಲಿ ಕುದಿಸಬೇಕು. ಅದು ಕುದಿಯುವಾಗ ಅದರಲ್ಲಿ ರುಚಿಗನುಸಾರ ಶುಂಠಿ ಮತ್ತು ಕೊತ್ತಂಬರಿ ಬೀಜಗಳನ್ನು ಹಾಕಬೇಕು. ಹಿಪ್ಪಲಿಯ ಚೂರ್ಣವಿದ್ದರೆ ಅದನ್ನೂ ಚಿಟಿಕೆಯಷ್ಟು ಹಾಕಬೇಕು. ಅರಳು ಚೆನ್ನಾಗಿ ಬೆಂದಾಗ ಕೇವಲ ನೀರನ್ನಷ್ಟೇ ಸೋಸಿ ಬಿಸಿಯಿರುವಾಗಲೇ ಸ್ವಲ್ಪ ಸ್ವಲ್ಪ ಕುಡಿಯಬೇಕು. ಆವಶ್ಯಕತೆಗನುಸಾರ ಇದರಲ್ಲಿ ಸಕ್ಕರೆ ಅಥವಾ ಉಪ್ಪನ್ನು ಹಾಕಬೇಕು. ಸದ್ಯ ಉಪ್ಪಿನ ಬದಲು ಸೈಂಧವ ಉಪ್ಪನ್ನು ಬಳಸುವುದು ಹೆಚ್ಚು ಉತ್ತಮ. ಅರಳುಗಳ ಈ ನೀರಿಗೆ ಸಂಸ್ಕೃತದಲ್ಲಿ ‘ಲಾಜಾಮಂಡ’ ಎಂಬ ಹೆಸರಿದೆ. ‘ಮಂಡ’ ಕುಡಿಯುವುದರಿಂದ ಕೂಡಲೇ ಉತ್ಸಾಹ ಬರುತ್ತದೆ, ಶಕ್ತಿ ಸಿಗುತ್ತದೆ, ಹಾಗೆಯೇ ಬೆವರು ಬಂದು ಜ್ವರ ಇಳಿಯಲು ಸಹಾಯವಾಗುತ್ತದೆ. (ಶುಂಠಿ, ನಾಗರಮೊಥಾ ಮತ್ತು ಹಿಪ್ಪಲಿ ಈ ಚೂರ್ಣಗಳು ಆಯುರ್ವೇದಿಕ ಔಷಧಿಗಳ ಅಂಗಡಿಗಳಲ್ಲಿ ಸಿಗುತ್ತವೆ. ಸನಾತನದ ‘ಶುಂಠಿ ಚೂರ್ಣ’, ‘ಮುಸ್ತಾ (ನಾಗರಮೋಥಾ) ಚೂರ್ಣ’ ಮತ್ತು ‘ಪಿಪ್ಪಲಿ(ಹಿಪ್ಪಲಿ) ಚೂರ್ಣ’ ಈ ಉತ್ಪಾದನೆಗಳೂ ಲಭ್ಯವಿವೆ.)

೩ ಇ. ಕ್ರಮಬದ್ಧವಾಗಿ ಆಹಾರವನ್ನು ಹೆಚ್ಚಿಸುವುದು : ಇದರ ನಂತರ ಪುನಃ ಹಸಿವಾದಾಗಲೆಲ್ಲ, ಹಸಿವೆಯ ಪ್ರಮಾಣಕ್ಕನುಸಾರ ಹೆಸರು, ತೊಗರಿ, ಚೆನ್ನಂಗಿ ಅಥವಾ ಹುರುಳಿ ಇವುಗಳ ಪೈಕಿ ಯಾವುದೇ ದ್ವಿದಳ ಧಾನ್ಯದ ಕಟ್ಟು (ಕುದಿಸಿ ತೆಗೆದ ಸಾರು) ಅಥವಾ ತೊವ್ವೆಯನ್ನು ೧ – ೨ ಚಮಚ ತುಪ್ಪ ಹಾಕಿ ಕುಡಿಯಬೇಕು. ಇಂತಹ ತೆಳು ಆಹಾರವನ್ನು ತೆಗೆದುಕೊಂಡಾಗ ಕೂಡಲೇ ಹಸಿವು ಇಂಗುತ್ತದೆ. ಕೆಲವೊಮ್ಮೆ ಈ ರೀತಿ ಆಗುವುದಿಲ್ಲ. ಆದುದರಿಂದ ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಬೇಕು. ಯಾವುದೇ ಸ್ಥಿತಿಯಲ್ಲಿ ಅತಿ ಹೆಚ್ಚು ತಿನ್ನದಂತೆ ಗಮನವಿಡಬೇಕು. ಇದರ ನಂತರ ಹಸಿವಾದಾಗ, ಎಂದಿನಂತೆ ಆಹಾರವನ್ನು ಆರಂಭಿಸದೇ ಗುಣಮುಖರಾಗಿದ್ದೇವೆ ಎಂದೆನಿಸುವ ತನಕ ಮೇಲಿನಂತೆ ತೊವ್ವೆ ಅಥವಾ ಕಟ್ಟು (ಕುದಿಸಿ ತೆಗೆದ ಸಾರು), ಗೋದಿ ರವೆಯನ್ನು ಹುರಿದು ಅದಕ್ಕೆ ಹಾಲು ಹಾಕದೇ ತಯಾರಿಸಿದ ಗಂಜಿ, ಶಿರಾ ಅಥವಾ ಉಪ್ಪಿಟ್ಟು, ಅಕ್ಕಿಯ ಗಂಜಿ, ಮೆತ್ತಗಿನ ಅನ್ನ, ತೊವ್ವೆ ಅನ್ನ, ತರಕಾರಿಗಳ ತೆಳುವಾದ ಸೂಪ್ ಇವುಗಳಂತಹ ಹಗುರವಾದ ಆಹಾರವನ್ನು ಸ್ವಲ್ಪ ತುಪ್ಪ ಹಾಕಿ ಬಿಸಿ ಬಿಸಿಯಾಗಿ ತೆಗೆದುಕೊಳ್ಳಬೇಕು. ಕೆಲವೊಮ್ಮೆ ಬಿಸಿ ಆಹಾರವನ್ನು ತಿನ್ನುವ ಇಚ್ಛೆಯಾಗುವುದಿಲ್ಲ. ಆಗ ಬೆಚ್ಚಗಿನ ಅಥವಾ ಸಾಮಾನ್ಯ ಬಿಸಿ ಇರುವ ಆಹಾರವನ್ನು ತೆಗೆದುಕೊಳ್ಳಬೇಕು. ಬಾಯಿಗೆ ರುಚಿ ಬರಲು ಉಪ್ಪಿನಕಾಯಿ ಅಥವಾ ಉಪ್ಪಿನಲ್ಲಿ ಹಾಕಿದ ಮಾವಿನಕಾಯಿಯನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡರೂ ನಡೆಯುತ್ತದೆ; ಆದರೆ ಪಿತ್ತದ ತೊಂದರೆಯಾಗುವಷ್ಟು ಉಪ್ಪಿನ ಕಾಯಿ ಅಥವಾ ಮಾವಿನಕಾಯಿ ತಿನ್ನಬಾರದು. ಕಫದ ತೊಂದರೆ ಇದ್ದವರು, ಅಕ್ಕಿಯ ಪದಾರ್ಥವನ್ನು ತೆಗೆದುಕೊಳ್ಳದೇ ಅದರ ಬದಲು ದ್ವಿದಳಧಾನ್ಯಗಳನ್ನು ಹೆಚ್ಚು ಸೇವಿಸಬೇಕು. ಅನಾರೋಗ್ಯವಿರುವಾಗ ಪ್ರೊಟೀನ್‌ಯುಕ್ತ ಆಹಾರವೆಂದು ಹಾಲು, ಮೊಸರು ಅಥವಾ ಮೊಟ್ಟೆ ಇಂತಹ ಪಚನಕ್ಕೆ ಜಡವಾದ ಪದಾರ್ಥಗಳನ್ನು ತಿನ್ನುವುದಕ್ಕಿಂತ ಹೆಸರು, ತೊಗರಿಗಳಂತಹ ಪಚನಕ್ಕೆ ಹಗುರವಾದ ಬೇಳೆಗಳನ್ನು ತಿನ್ನುವುದು ಹಿತವಾಗಿದೆ. ಜ್ವರ ಪೂರ್ತಿಯಾಗಿ ಹೋದಾಗ ಮತ್ತು ಎಲ್ಲವೂ ಎಂದಿನಂತೆ ನಡೆಯಲು ಆರಂಭವಾದರೆ, ನಂತರವೇ ಚಪಾತಿ, ಪಲ್ಯ, ಅವಲಕ್ಕಿ ಇವುಗಳಂತಹ ದಿನನಿತ್ಯದ ಪದಾರ್ಥಗಳನ್ನು ಪಚನಶಕ್ತಿಗನುಸಾರ ಕ್ರಮೇಣ ಆರಂಭಿಸಬೇಕು. ಸ್ವಲ್ಪ ಗುಣಮುಖ ಅಂತ ಅನಿಸಿದ ತಕ್ಷಣ ಯಾವಾಗಲೂ ತಿನ್ನುವ ಆಹಾರವನ್ನು ಆರಂಭಿಸಿದರೆ ಜ್ವರ ಪುನಃ ಬರುವ ಸಾಧ್ಯತೆ ಇರುತ್ತದೆ.

೪. ಅನಾರೋಗ್ಯವಿರುವಾಗ ವರ್ಜಿಸಬೇಕಾದ ಪದಾರ್ಥಗಳು

ಅನಾರೋಗ್ಯವಿರುವಾಗ ಯಾವುದೇ ಪರಿಸ್ಥಿತಿಯಲ್ಲಿ ಅವಲಕ್ಕಿ, ಹಾಲು, ಮೊಸರು ಮತ್ತು ಹಾಲಿನ ಇತರ ಪದಾರ್ಥಗಳು, ಚಪಾತಿ, ಬೇಕರಿ ಪದಾರ್ಥಗಳು, ಮಸಾಲೆಯುಕ್ತ, ಹಾಗೆಯೇ ಕರಿದ ಪದಾರ್ಥಗಳನ್ನು ಮತ್ತು ಹಣ್ಣುಗಳನ್ನು ತಿನ್ನಬಾರದು. ಎಳನೀರನ್ನು ಆದಷ್ಟು ವರ್ಜಿಸಬೇಕು. ಅನಾರೋಗ್ಯವಿರುವಾಗ ಪದಾರ್ಥಗಳನ್ನು ಶರೀರದಲ್ಲಿ ಪಚನದ ಕ್ಷಮತೆ ಇರುವುದಿಲ್ಲ. ಆದುದರಿಂದ ಆ ಪದಾರ್ಥಗಳನ್ನು ತಡೆಯಬೇಕು. ಜ್ವರವಿರುವಾಗ ‘ಅವಲೆಹ’ದಂತಹ ಔಷಧಿಗಳನ್ನು ತೆಗೆದುಕೊಳ್ಳಬಾರದು. (‘ಅವಲೇಹ’, ವೆಂದರೆ ‘ಗುಲಕಂದ, ಚ್ಯವನಪ್ರಾಶ ಇವುಗಳಂತಹ ಔಷಧಿಗಳು’.)

೫. ಪಥ್ಯಪಾಲನೆಯ ಮಹತ್ವ

ಯಾವುದೇ ಚಿಕಿತ್ಸಾಪದ್ಧತಿಗನುಸಾರ ಔಷಧಿಗಳನ್ನು ತೆಗೆದುಕೊಂಡರೂ ಮೇಲಿನ ಪಥ್ಯಗಳನ್ನು ಪಾಲಿಸುವುದು ಹಿತದ್ದಾಗಿದೆ. ರೋಗಿಯ ಶಕ್ತಿ (ರೋಗನಿರೋಧಕ ಕ್ಷಮತೆ) ಚೆನ್ನಾಗಿದ್ದರೆ, ಕೇವಲ ಪಥ್ಯವನ್ನು ಪಾಲಿಸಿದರೂ ಅವನ ರೋಗವು ಗುಣಮುಖವಾಗುತ್ತದೆ. ಔಷಧಿಗಳ ಆವಶ್ಯಕತೆಯೇ ಇರುವುದಿಲ್ಲ. ಪಥ್ಯದ ಮಹತ್ವ ಬಹಳವಿದೆ. ಮೇಲಿನ ಪಥ್ಯ ಕೇವಲ ಜ್ವರವಿರುವಾಗಲಷ್ಟೇ ಅಲ್ಲ, ಆದರೆ ವಿಶೇಷವಾಗಿ ಮಳೆಗಾಲದಲ್ಲಿ ಹಸಿವೆ ಆಗದಿರುವುದು, ಶರೀರ ಅಥವಾ ಹೊಟ್ಟೆ ಜಡವೆನಿಸುವುದು, ‘ಮೊದಲು ತಿಂದಿರುವುದು ಪಚನವಾಗಿಲ್ಲ’, ಎಂದೆನಿಸುವುದು, ತಿಂದದ್ದು ಗಂಟಲಿಗೆ ಬರುವುದು ಇವುಗಳ ಪೈಕಿ ಯಾವುದೇ ಲಕ್ಷಣಗಳು ಕಂಡು ಬಂದರೆ ಈ ಲಕ್ಷಣಗಳಲ್ಲಿ ತಕ್ಷಣ ಲಾಭ ಕಂಡು ಬರುತ್ತದೆ ಮತ್ತು ಮುಂದಿನ ಜ್ವರದಂತಹ ರೋಗದ ಸಂಕಟ ತಪ್ಪುತ್ತದೆ. ‘ಪಥ್ಯ ಪಾಲಿಸುವುದು ಎಂದರೆ ರೋಗದ ಕಾರಣವನ್ನು ತಡೆಗಟ್ಟುವುದು. ರೋಗದ ಕಾರಣ ತಡೆದರೆ ರೋಗವು ತಾನಾಗಿಯೇ ಗುಣಮುಖವಾಗುತ್ತದೆ.

ಈ ಲೇಖನ ಕೇವಲ ಸಾಮಾನ್ಯ ಮಾಹಿತಿಗಾಗಿ ಇದೆ. ಹೆಚ್ಚಿನ ವಿವರಣೆಗಾಗಿ ತಾವು ತಮ್ಮ ವೈದ್ಯರೊಂದಿಗೆ ಅಥವಾ ಆಧುನಿಕ ವೈದ್ಯರೊಂದಿಗೆ (ಡಾಕ್ಟರರೊಂದಿಗೆ) ಮಾತನಾಡಿ ಔಷಧೋಪಚಾರವನ್ನು ಪಡೆಯಬೇಕು. – ಸಂಕಲನಕಾರರು

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩.೭.೨೦೨೨)