ಆಯುರ್ವೇದ : ಮಾನವ ಜೀವನದ ಪ್ರಾಚೀನ ಅಮೂಲ್ಯ ಶಾಸ್ತ್ರ

‘ಆಯುರ್ವೇದ’ ಎಂದರೆ ಜೀವನದ ವೇದ ಅಥವಾ ಮಾನವ ಜೀವನದ ಶಾಸ್ತ್ರ. ಅದರಲ್ಲಿ ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಹೇಗೆ ಕಾಪಾಡಬೇಕು ? ಎಂಬುದರ ಮಾರ್ಗದರ್ಶನವನ್ನು ಮಾಡಲಾಗಿದೆ. ಈ ಗ್ರಂಥದಲ್ಲಿ ಜೀವನಕ್ಕೆ ಅವಶ್ಯಕವಾದ ಅಂದರೆ ಹಿತಕರ ಹಾಗೂ ಅಹಿತಕರ ಆಹಾರ, ವಿಹಾರ ಮತ್ತು ಆಚರಣೆ ಇವುಗಳ ವಿವೇಚನೆಯನ್ನು ಮಾಡಲಾಗಿದೆ. ಮನುಷ್ಯ ಜೀವನದ ಧ್ಯೇಯ ಮತ್ತು ನಿಜವಾದ ಸುಖ ಯಾವುದರಲ್ಲಿದೆ ? ಎಂಬುದರ ವಿಚಾರ ಸಹ ಮಾಡಲಾಗಿದೆ, ಹಾಗೆಯೇ ರೋಗಗಳಿಗೆ ಕಾರಣಗಳು, ಲಕ್ಷಣಗಳು, ಚಿಕಿತ್ಸೆ ಮತ್ತು ರೋಗಗಳನ್ನು ತಡೆಗಟ್ಟಲು ಪರಿಹಾರವನ್ನೂ ನೀಡಲಾಗಿದೆ. ಈಗಿನ ಜೀವನದಲ್ಲಿ ಮಾತ್ರವಲ್ಲ; ಮುಂದಿನ ಜನ್ಮಗಳಲ್ಲಿಯೂ ಸರ್ವಾಂಗೀಣ ಉನ್ನತಿಯನ್ನು ಮಾಡಿಕೊಂಡು ಮನುಷ್ಯ ಜೀವನದ ಅಂತಿಮ ಧ್ಯೇಯವಾದ ”ದುಃಖದಿಂದ ಶಾಶ್ವತ ಮುಕ್ತಿ ಮತ್ತು ಸಚ್ಚಿದಾನಂದ ಸ್ವರೂಪದ ಸತತ ಅನುಭೂತಿ”, ಹೇಗೆ ಪ್ರಾಪ್ತಮಾಡಿಕೊಳ್ಳಬೇಕು ? ಎಂಬ ಬಗ್ಗೆಯೂ ಆಯುರ್ವೇದವು ಮಾರ್ಗದರ್ಶನ ಮಾಡಿದೆ. ಸಂಕ್ಷಿಪ್ತದಲ್ಲಿ ಮನುಷ್ಯ ಜೀವನದ ಸರ್ವಾಂಗೀಣ ವಿಚಾರ ಮಾಡುವ ಮತ್ತು ಯಶಸ್ವಿ, ಪುಣ್ಯಮಯ, ದೀರ್ಘ, ಆರೋಗ್ಯಸಂಪನ್ನ ಜೀವನವನ್ನು ಹೇಗೆ ಜೀವಿಸಬೇಕು ? ಎಂಬ ಮಾರ್ಗದರ್ಶನವನ್ನು ಮಾಡುವ ಶಾಸ್ತ್ರವೆಂದರೆ ಆಯುರ್ವೇದ ! ನಮ್ಮ ಆರೋಗ್ಯವನ್ನು ಉಳಿಸಿಕೊಳ್ಳಲು ಎಲ್ಲರೂ ಆಯರ್ವೇದದಲ್ಲಿನ ಆರೋಗ್ಯದ ನಿಯಮಗಳನ್ನು, ದಿನಚರ್ಯ ಮತ್ತು ಋತುಚರ್ಯವನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ.

ಮೋಕ್ಷಪ್ರಾಪ್ತಿ – ಆಯುರ್ವೇದದ ಅಂತಿಮ ಧ್ಯೇಯ !

ಮನುಷ್ಯನನ್ನು ರೋಗಗಳಿಂದ ಮಾತ್ರವಲ್ಲ; ಭವರೋಗಗಳಿಂದ ಅಂದರೆ ಜನ್ಮಮೃತ್ಯುವಿನ ಚಕ್ರದಿಂದಲೂ ಮುಕ್ತ ಗೊಳಿಸಿ ಮಾನವನನ್ನು ದುಃಖದಿಂದ ಶಾಶ್ವತವಾಗಿ ಮುಕ್ತ ಮಾಡುವುದು ಮತ್ತು ಸಚ್ಚಿದಾನಂದ ಸ್ವರೂಪದ ಅಂದರೆ ಮೋಕ್ಷಪ್ರಾಪ್ತಿ ಮಾಡಿಕೊಡುವುದೇ ಆಯುರ್ವೇದದ ಅಂತಿಮ ಧ್ಯೇಯವಾಗಿದೆ. ಚರಕಾಚಾರ್ಯರು ಯೋಗಸಾಧನೆಯನ್ನು ಮಾಡಿ ಪ್ರತಿಯೊಬ್ಬರೂ ಮೋಕ್ಷವನ್ನು ಪ್ರಾಪ್ತಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಯೋಗೆ ಮೋಕ್ಷೆ ಚ ಸರ್ವಾಸಾಂ

ವೇದನಾನಾಮವರ್ತನಮ್‌ ಯೋಗೋ ಮೋಕ್ಷಪ್ರವರ್ತಕಃ |’

‘ಜಾಗತಿಕ ಆರೋಗ್ಯ ಸಂಸ್ಥೆಯ ಆರೋಗ್ಯದ ವ್ಯಾಖ್ಯೆಯು ‘ಕೇವಲ ರೋಗ ಇಲ್ಲ ಎಂದ ಮಾತ್ರಕ್ಕೆ ಆರೋಗ್ಯವಾಗಿದ್ದೇವೆ ಎಂದಲ್ಲದೇ ಸರ್ವತೋಮುಖ ಅಂದರೆ ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಅಂದರೆ ಸುಖದ ಸಂವೇದನೆಯನ್ನು ಅನುಭವಿಸುವ ಸ್ಥಿತಿ ಅಂದರೆ ಆರೋಗ್ಯ !

೧. ಶಾರೀರಿಕ ಆರೋಗ್ಯ

ಸುದೃಢ, ಶಕ್ತಿಶಾಲಿ, ದಷ್ಟಪುಷ್ಟ ಶರೀರ, ತೇಜಸ್ವಿ ಕಣ್ಣುಗಳು, ಕಾಂತಿಯುಕ್ತ ಚರ್ಮ, ನುಣುಪಾದ ಕೂದಲುಗಳು, ಉತ್ತಮ ಹಸಿವು, ಶಾಂತ ನಿದ್ದೆ, ಉಸಿರಾಟ, ಮೂತ್ರ, ಶೌಚ, ಸಂದುಗಳ ಚಲನವಲನ, ಇತರ ಅವಯವಗಳ ಮತ್ತು ಎಲ್ಲ ಇಂದ್ರಿಯಗಳ ಕಾರ್ಯವು ವ್ಯವಸ್ಥಿತ ಮತ್ತು ಸುಲಭ ರೀತಿಯಲ್ಲಾಗುವುದು ಇದು ಶಾರೀರಿಕ ಆರೋಗ್ಯದ ಲಕ್ಷಣಗಳಾಗಿವೆ.

೨. ಮಾನಸಿಕ ಆರೋಗ್ಯ

ಅ. ಮನಸ್ಸಿನಲ್ಲಿ ಯಾವುದೇ ದುಃಖ ಅಥವಾ ಒತ್ತಡ ಇಲ್ಲದಿರುವುದು.

ಆ. ಕಾಮ, ಕ್ರೋಧಾದಿ ಷಡ್ರಿಪುಗಳ ಮೇಲೆ ನಿಯಂತ್ರಣ ಇರುವುದು.

ಇ. ನಮ್ಮ ಜ್ಞಾನವನ್ನು ಬೆಳೆಸಿ ಪ್ರತಿಯೊಂದು ಕೃತಿಯನ್ನು ಕೌಶಲ್ಯ ಮತ್ತು ಉತ್ಸಾಹದಿಂದ ಮಾಡುವುದು. ತಾಯಿತಂದೆ, ಹಿರಿಯರು ಮತ್ತು ಸಂತರೊಂದಿಗೆ ಗೌರವದಿಂದ ವರ್ತಿಸುವುದು.

೩. ಸಾಮಾಜಿಕ ಆರೋಗ್ಯ

ನಾವು ಸಮಾಜದ ಒಂದು ಘಟಕವಾಗಿದ್ದು ಇಡೀ ಸಮಾಜ ಸುಖಿಯಾದರೆ ಮಾತ್ರ ನಾವು ಸುಖಿಯಾಗಬಲ್ಲೆವು, ಎಂದು ತಿಳಿದುಕೊಂಡು ಸಮಾಜದ ಉನ್ನತಿಗಾಗಿ ಮತ್ತು ಕಲ್ಯಾಣಕ್ಕಾಗಿ ಶ್ರಮಿಸುವ ಮನೋಭಾವ ಇರುವುದು.

ಅ. ಯಾರ ಬಗ್ಗೆಯೂ ದ್ವೇಷ ಮತ್ತು ಮತ್ಸರವನ್ನು ಇಟ್ಟುಕೊಳ್ಳದೇ ಎಲ್ಲರೊಂದಿಗೆ ಪ್ರೀತಿ ಮತ್ತು ಸ್ನೇಹವನ್ನು ಅನುಭವಿಸುವುದು.

ಆ. ಇತರರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವುದು.

ಇ. ಇತರರ ತಪ್ಪುಗಳನ್ನು ಕ್ಷಮಿಸುವುದು.

ಈ. ಸಮಾಜಕಾರ್ಯಕ್ಕಾಗಿ ಪ್ರತಿದಿನ ಸ್ವಲ್ಪ ಸಮಯ ಮತ್ತು ಹಣ ನೀಡುವುದು

೪. ಆಧ್ಯಾತ್ಮಿಕ ಆರೋಗ್ಯ

ಸದಾ ಸಚ್ಚಿದಾನಂದ ಸ್ವರೂಪದಲ್ಲಿರುವುದು, ಅದಕ್ಕಾಗಿ ಸ್ವಾರ್ಥವನ್ನು ತ್ಯಜಿಸಿ ಮತ್ತು ಎಲ್ಲ ವಿಷಯಗಳ ಆಸಕ್ತಿಯನ್ನು ತ್ಯಜಿಸಿ ನಿಷ್ಕಾಮ ಬುದ್ಧಿಯಿಂದ ಸಮಾಜಕಾರ್ಯ ಅಥವಾ ಭಗವದ್ಭಕ್ತಿ ಯನ್ನು ಮಾಡಬೇಕು. ಇದ್ದ ಪರಿಸ್ಥಿತಿಯಲ್ಲಿ ಯಾವಾಗಲೂ ಸಂತುಷ್ಟ ಮತ್ತು ಸಮಾಧಾನಿಯಾಗಿರಬೇಕು.’

ಆಧಾರ : ಸನಾತನದ ಗ್ರಂಥ (ಮರಾಠಿ) ‘ಆಯುರ್ವೇದದ ಮೂಲತತ್ತ್ವಗಳು’

ಆಯುರ್ವೇದದ ಕೇಂದ್ರಬಿಂದು

ಮನುಷ್ಯನು ಆಯುರ್ವೇದದ ಕೇಂದ್ರಬಿಂದುವಾಗಿದ್ದಾನೆ. ಆಯುರ್ವೇದವನ್ನು ಮನುಷ್ಯರಿಗಾಗಿಯೇ ರಚಿಸಲಾಗಿದೆ. ಆಯುರ್ವೇದವು ಉತ್ಸಾಹಿ ಮತ್ತು ಆರೋಗ್ಯಸಂಪನ್ನ ಜೀವನ ನಡೆಸಲು ಅತ್ಯುತ್ತಮ ಮಾರ್ಗದರ್ಶನವನ್ನು ನೀಡಿದೆ.

ಅದಕ್ಕಾಗಿ ಪ್ರತಿ ದಿನವನ್ನು ಯೋಜನಾಬದ್ಧವಾಗಿ ಕಳೆಯಬೇಕು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೆ ನಮ್ಮ ದೈನಂದಿನ ಚಟುವಟಿಕೆಗಳು ಶುದ್ಧ ಮತ್ತು ಸಂಸ್ಕಾರಗಳಿಂದಲೇ ಕೂಡಿರಬೇಕು ಎಂಬುದಕ್ಕೆ ಆಯುರ್ವೇದವು ಒತ್ತು ನೀಡಿದೆ ಮತ್ತು ದೇಹದ ಪ್ರತಿಯೊಂದು ಅಂಗವು ಆರೋಗ್ಯವಾಗಿಡಲು, ಯಾವ ಕ್ರಮಕೈಗೊಳ್ಳಬೇಕು, ಎಂಬ ಶಾಸ್ತ್ರಶುದ್ಧ ವಿವೇಚನೆಯನ್ನೂ ಮಾಡಿದೆ.