ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ! – ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ ಕ್ಷೇತ್ರ ಬಗಂಬಿಲ ಶ್ರೀ ಸತ್ಯನಾರಾಯಣ ಮಂದಿರದ ವತಿಯಿಂದ ಧಾರ್ಮಿಕ ಕಾರ್ಯಕ್ರಮ !

ಉಪಸ್ಥಿತರಿಗೆ ಮಾರ್ಗದರ್ಶನ ಮಾಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ. ಗುರುಪ್ರಸಾದ ಗೌಡ

ಮಂಗಳೂರು – ‘ಮನುಷ್ಯಜನ್ಮ ಇರುವುದೇ ಈಶ್ವರಪ್ರಾಪ್ತಿಗಾಗಿ’ ಅದಕ್ಕಾಗಿ ಎಲ್ಲರೂ ಸಾಧನೆ ಮಾಡುವುದು ಈಗಿನ ಕಾಲದ ಅವಶ್ಯಕತೆ ಆಗಿದೆ. ಹಿಂದೂ ರಾಷ್ಟ್ರದಲ್ಲಿ ಸುನಿಯೋಜಿತ ಆದರ್ಶ ವ್ಯವಸ್ಥೆ ಇರುತ್ತದೆ. ಅದಕ್ಕೆ ಎಲ್ಲ ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವ ಕಾರ್ಯದಲ್ಲಿ ಸಹಭಾಗಿ ಆಗಬೇಕು. ‘ಸರ್ವೇ ಜನಃ ಸುಖಿನೋ ಭವಂತು’ ಹಾಗೂ ‘ವಸುಧೈವ ಕುಟುಂಬಕಂ’ ಎಂದು ಹೇಳುವ ಹಿಂದೂ ಧರ್ಮದ ಆಧಾರದಲ್ಲಿ ನಡೆಯುವ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು ಅತೀ ಅವಶ್ಯಕವಾಗಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ. ಗುರುಪ್ರಸಾದ ಗೌಡ ಇವರು ಹೇಳಿದ್ದಾರೆ. ಅವರು ಜುಲೈ ೧೦ ಶ್ರೀ ಕ್ಷೇತ್ರ ಬಗಂಬಿಲ ನಿತ್ಯಾನಂದನಗರದ  ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀ ಸತ್ಯನಾರಾಯಣ ಮಂದಿರದ ಪ್ರಧಾನ ಅರ್ಚಕರಾದ ಶ್ರೀ. ನಾರಾಯಣ ಗಟ್ಟಿ, ಅಧ್ಯಕ್ಷರಾದ ಶ್ರೀ. ಪ್ರವೀಣ ಬಿ.ಎನ್. ಲೆಕ್ಕ ಪರಿಶೋಧಕರಾದ ಶ್ರೀ. ವೇಣುಗೋಪಾಲ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುನಿತಾ ನಾರಾಯಣ ಹಾಗೂ ‘ಶ್ರೀ ಗೌರಿ ಗಣೇಶ ಉತ್ಸವ ಸಮಿತಿ’ಯ ಅಧ್ಯಕ್ಷರಾದ ವಿನೋದ ಕುಲಾಲ್ ಉಪಸ್ಥಿತರಿದ್ದರು.

ಶಿಡ್ಲು ಪತ್ರಿಕೆಯ ೫೨ ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ !

(ಬಲಗಡೆ) ಸೌ. ಭವ್ಯ ಗೌಡ ಇವರನ್ನು ಸತ್ಕರಿಸುತ್ತಿರುವ ಶಿಡ್ಲು ಪತ್ರಿಕೆಯ ವರದಿಗಾರರಾದ ಸೌ. ವರ್ಷಾ

ಬೆಂಗಳೂರು : ‘ಸ್ವಾತಂತ್ರ್ಯಯೋಧರಾದ ಲಿಂ. ಶ್ರೀ. ಜಿ.ಪಿ. ಮಹಾನುಭಾವಿಮಠ ಅವರಿಂದ ಸ್ಥಾಪಿತಗೊಂಡ ‘ಶಿಡ್ಲು’ ಪತ್ರಿಕೆಯ ೫೨ ನೇ ವಾರ್ಷಿಕೋತ್ಸವವನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿರುವ ಮಾರುತಿ ವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಸಾಹಿತಿಗಳಾದ ಹರಿದಾಸ ಬಿ.ಎನ್. ಇವರು ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ೨ ಹಾಗೂ ೩ ಜುಲೈ ೨೦೨೨ ರ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ‘ಏಕರೂಪ ನಾಗರಿಕ ಸಂಹಿತೆ’ (Common civil code) ವಿಷಯಗಳ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯಾ ಗೌಡ ಇವರು ಮಾತನಾಡುತ್ತಾ, ದೇಶದ ಹಿತದೃಷ್ಟಿಯಿಂದ ಸಮಾನ ನಾಗರಿಕ ಕಾಯ್ದೆಯು ಅತ್ಯಾವಶ್ಯಕವಾಗಿದೆ. ಇಂದು ಗೋವಾ ರಾಜ್ಯದಲ್ಲಿ ಸಮಾನ ನಾಗರಿಕ ಕಾಯ್ದೆಯು ಅನ್ವಯವಾದಂತೆ ದೇಶವ್ಯಾಪಿ ಅನ್ವಯ ಮಾಡಬೇಕು, ಇದರಿಂದ ಎಲ್ಲರಿಗೂ ಸಮಾನತೆ ಸಿಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಿಡ್ಲು ಪತ್ರಿಕೆ ಮುಖ್ಯ ಸಂಪಾದಕರಾದ ಶ್ರೀ. ಮಹಾನುಭಾವಿಮಠ, ಎಂ.ಎಸ್.ರಾಮಯ್ಯ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೆಜಮೆಂಟ್‌ನ ನಿರ್ದೇಶಕ ಡಾ. ಮಾನಸಾ, ಮಾರುತಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಾರತಿ, ವರದಿಗಾರರಾದ ಸೌ. ವರ್ಷಾ ಹಾಗೂ ಹಲವಾರು ಪತ್ರಿಕಾ ಪ್ರತಿನಿಧಿಗಳು ಉಪಸ್ಥಿತರಿದ್ದರು.