ಶ್ರೀಲಂಕಾ ಅಧ್ಯಕ್ಷ ಗೋಟಾಬಾಯಾ ರಾಜಪಕ್ಷೆ ಅವರ ನಿವಾಸದಿಂದ ಪರಾರಿ!

  • ರಾಷ್ಟ್ರಪತಿ ನಿವಾಸದತ್ತ ಸಾವಿರಾರು ಜನ ಮೆರವಣಿಗೆ

  • ನಾಗರಿಕರಿಂದ ನಿವಾಸದಲ್ಲಿ ನುಸುಳುವಿಕೆ

ಕೊಲಂಬೊ(ಶ್ರೀಲಂಕಾ) – ಶ್ರೀಲಂಕಾದ ನಾಗರಿಕರು ಅಪಾರ ಸಂಖ್ಯೆಯಲ್ಲಿ ರಾಷ್ಟ್ರಾಧ್ಯಕ್ಷರ ನಿವಾಸದತ್ತ ಮೆರವಣಿಗೆ ನಡೆಸಿದ ನಂತರ ಅಧ್ಯಕ್ಷ ಗೋಟಾಬಾಯಾ ರಾಜಪಕ್ಷೆ ಅವರು ತಮ್ಮ ನಿವಾಸದಿಂದ ಪಲಾಯನಗೈದರು. ರಾಜಪಕ್ಷೆ ರಾಜೀನಾಮೆಗೆ ನಾಗರಿಕರು ಒತ್ತಾಯಿಸಿದ್ದಾರೆ. ಮೂಲಗಳ ಪ್ರಕಾರ ರಾಜಪಕ್ಷೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನಾಗರಿಕರು ಅಧ್ಯಕ್ಷರ ನಿವಾಸವನ್ನು ಧ್ವಂಸಗೊಳಿಸುವುದನ್ನು ತಡೆಯಲು ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು, ಜೊತೆಗೆ ಅಶ್ರುವಾಯು ಪ್ರಯೋಗಿಸಿದರು. ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಇದಾದ ನಂತರವೂ ನೂರಾರು ನಾಗರಿಕರು ರಾಜಪಕ್ಷೆ ಅವರ ನಿವಾಸಕ್ಕೆ ನುಗ್ಗಿದರು. ಅಲ್ಲಿ ವಿಧ್ವಂಸಕ ಕೃತ್ಯ ನಡೆಸಿದರು ಎನ್ನಲಾಗಿದೆ.

ಶ್ರೀಲಂಕಾದ ವಕೀಲರ ಸಂಘಗಳು, ಮಾನವ ಹಕ್ಕುಗಳ ಗುಂಪುಗಳು ಮತ್ತು ರಾಜಕೀಯ ಪಕ್ಷಗಳ ಒತ್ತಡದ ಮೇರೆಗೆ ಸರಕಾರ ವಿರೋಧಿ ಪ್ರತಿಭಟನೆಗಳನ್ನು ತಡೆಯಲು ಪೊಲೀಸರು ಕರ್ಫ್ಯೂವನ್ನು ತೆಗೆದು ಹಾಕಿದ್ದರು. ಆನಂತರ ಈ ಆಂದೋಲನ ಆರಂಭವಾಯಿತು.