ಹಿಂದೂ ಬಾಂಧವರೆ, ತಮ್ಮ ಸಂಸ್ಕೃತಿಯನ್ನು ಗೌರವಿಸಿದರೆ, ಇಡೀ ಜಗತ್ತು ನಿಮ್ಮನ್ನು ಗೌರವಿಸುವುದು, ಎಂಬುದನ್ನು ಗಮನದಲ್ಲಿಡಿ ! – ಫ್ರಾನ್ಸುಆ ಗೋತಿಯೆ

ಓರ್ವ ಫ್ರೆಂಚ್ ಲೇಖಕರಿಗೆ ಹಿಂದೂ ಧರ್ಮದ ವಿಷಯದಲ್ಲಿ ಎಷ್ಟು ಅಭ್ಯಾಸವಿದೆಯೋ, ಅಷ್ಟು ಯಾರಿಗೂ ಇಲ್ಲ ಎಂಬುದು ಇದರಿಂದ ಕಂಡುಬರುತ್ತದೆ. ಓರ್ವ ಫ್ರೆಂಚ್ ಲೇಖಕರ ಗಮನಕ್ಕೆ ಬರುವ ವಿಷಯವು ಹಿಂದೂಗಳಿಗೆ ಏಕೆ ಅರಿವಾಗುವುದಿಲ್ಲವೆಂಬುದು ಲಜ್ಜಾಸ್ಪದವಾಗಿದೆ ! – ಸಂಪಾದಕರು

ಫ್ರಾನ್ಸುಆ ಗೋತಿಯೆ

ಫ್ರೆಂಚ್ ಲೇಖಕರಾದ ಫ್ರಾನ್ಸುಆ ಗೋತಿಯೆ ಇವರು ‘ಹಿಂದೂಗಳು ತಮ್ಮ ಧರ್ಮದ ವ್ಯಾಖ್ಯೆಯನ್ನು ವಿವರಿಸುವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತಾರೆ ?’ ಎನ್ನುವ ವಿಷಯದಲ್ಲಿ ಅವರ ‘ಫೇಸ್‌ಬುಕ್ ಪೇಜ್’ನಲ್ಲಿ ೧ ಜೂನ್ ೨೦೧೭ ರಂದು ಈ ಮುಂದಿನ ವಿಷಯಗಳನ್ನು ಮಂಡಿಸಿದ್ದಾರೆ. ‘ಹಿಂದೂಗಳು ಆಂಗ್ಲ ಭಾಷೆಯನ್ನು ಉಪಯೋಗಿಸುವಾಗ ಈ ಮುಂದಿನ ಕೆಲವು ವಿಶಿಷ್ಟ ಶಬ್ದಗಳಿಗೆ ಅಯೋಗ್ಯ ಆಂಗ್ಲ ಶಬ್ದಗಳನ್ನು ಉಪಯೋಗಿಸಬಾರದು’, ಎಂದು ಕರೆ ನೀಡಿದ್ದಾರೆ.

೧. ‘ಗಾಡ್ ಫಿಯರಿಂಗ್’ ಈ ಪದವನ್ನು ದಯವಿಟ್ಟು ಬಳಸಬೇಡಿ. ಹಿಂದೂಗಳಿಗೆ ಯಾವತ್ತೂ ದೇವರ ಭಯವೆನಿಸುವುದಿಲ್ಲ. ನಮಗೆ ದೇವರು ಸರ್ವವ್ಯಾಪಿ ಆಗಿದ್ದಾನೆ ಹಾಗೂ ನಾವು ದೇವರ ಅಂಶವಾಗಿದ್ದೇವೆ. ನಮಗೆ ದೇವರ ಬಗ್ಗೆ ಭಯವಿಲ್ಲ, ಏಕೆಂದರೆ ಅವನು ನಮ್ಮಿಂದ ಬೇರೆಯಲ್ಲ. ನಾವು ಒಂದೇ ಆಗಿದ್ದೇವೆ.

೨. ಯಾರಾದರೂ ನಿಧನರಾದರೆ ದಯವಿಟ್ಟು ‘ಆರ್.ಐ.ಪಿ. (ರೆಸ್ಟ್ ಇನ್ ಪೀಸ್)’ ಈ ಪದ ಬಳಸಬೇಡಿ. ‘ಶಾಂತಿ’, ‘ಸದ್ಗತಿ’ ಅಥವಾ ‘ಈ ಆತ್ಮಕ್ಕೆ ಮೋಕ್ಷ ಅಥವಾ ಸದ್ಗತಿ ಅಥವಾ ಉತ್ತಮವಾದ ಲೋಕ ಪ್ರಾಪ್ತಿಯಾಗಲಿ’, ಎಂಬ ಪದಗಳನ್ನು ಪ್ರಯೋಗಿಸಿರಿ. ಹಿಂದೂ ಧರ್ಮದಲ್ಲಿ ‘ಸೋಲ್’ (Soul) ಎಂಬ ಸಂಕಲ್ಪನೆ ಇಲ್ಲ ಅಥವಾ ‘ರೆಸ್ಟಿಂಗ್’ ಎಂಬ ಸಂಕಲ್ಪನೆಯೂ ಇಲ್ಲ. ‘ಸೋಲ್’ ಈ ಶಬ್ದಕ್ಕೆ ‘ಆತ್ಮ’ ಮತ್ತು ‘ಜೀವ’ ಈ ಪ್ರತಿಶಬ್ದಗಳಿವೆ.

೩. ‘ರಾಮಾಯಣ’ ಮತ್ತು ‘ಮಹಾಭಾರತ’ ಈ ಐತಿಹಾಸಿಕ ಮಹಾಕಾವ್ಯಗಳಿಗೆ ‘ಮೈಥಾಲಾಜಿ’ ಈ ಪದ ಬಳಸಬೇಡಿ. ಶ್ರೀರಾಮ ಮತ್ತು ಶ್ರೀಕೃಷ್ಣ ಇವರು ಐತಿಹಾಸಿಕ ನಾಯಕರಾಗಿದ್ದಾರೆ, ಪೌರಾಣಿಕ ಕಥೆಗಳಲ್ಲಿನ ಪಾತ್ರಗಳಲ್ಲ.

೪. ಮೂರ್ತಿಪೂಜೆಯ ವಿಷಯದಲ್ಲಿ ದಯವಿಟ್ಟು ಅಪರಾಧಿತನದ ಭಾವವನ್ನಿಡಬೇಡಿ ಹಾಗೂ ‘ಅದು ಕೇವಲ ‘ಪ್ರತೀಕಸ್ವರೂಪಿ ಆಗಿದೆ’ ಎಂದು ಕೂಡ ಹೇಳಬೇಡಿ. ಎಲ್ಲ ಧರ್ಮಗಳಲ್ಲಿ ವಿವಿಧ ಪ್ರಕಾರದ ಮೂರ್ತಿಪೂಜೆಯೆ ಇರುತ್ತವೆ. ಉದಾ. ಕ್ರಾಸ್, ಶಬ್ದ, ಅಕ್ಷರಗಳು ಅಥವಾ ಮಾರ್ಗದರ್ಶನ ಇತ್ಯಾದಿ ಹಾಗೂ ನಮ್ಮ ದೇವತೆಗಳ ಶಿಲ್ಪಾಕೃತಿಗಳನ್ನು ಉಲ್ಲೇಖಿಸುವಾಗ ‘ಐಡಾಲ್ಸ್’, ‘ಸ್ಟ್ಯಾಚ್ಯೂಸ್’ ಅಥವಾ ‘ಇಮೇಜಸ್’ ಇತ್ಯಾದಿ ಶಬ್ದಗಳನ್ನು ಉಪಯೋಗಿಸದಿರಿ. ಅದಕ್ಕಾಗಿ ‘ಮೂರ್ತಿ’ ಅಥವಾ ‘ವಿಗ್ರಹ’ ಈ ಪದಗಳನ್ನು ಬಳಸಿ. ಕರ್ಮ, ಯೋಗ, ಗುರು ಹಾಗೂ ಮಂತ್ರ ಈ ಶಬ್ದಗಳನ್ನು ಮುಖ್ಯ ಪ್ರವಾಹದಲ್ಲಿ ಸರಾಗವಾಗಿ ಬಳಸಬಹುದಾದರೆ ‘ಮೂರ್ತಿ’ ಅಥವಾ ‘ವಿಗ್ರಹ’ ಈ ಪದಗಳನ್ನು ಏಕೆ ಬಳಸಬಾರದು ?

೫. ಶ್ರೀಗಣೇಶ ಮತ್ತು ಹನುಮಂತ ಇವರಿಗೆ ಅನುಕ್ರಮವಾಗಿ ‘ಎಲಿಫಂಟ್ ಗಾಡ್’ ಮತ್ತು ‘ಮಂಕಿ ಗಾಡ್’ ಈ ಪದಗಳನ್ನು ಬಳಸಬೇಡಿ. ‘ಶ್ರೀಗಣೇಶ’ ಮತ್ತು ‘ಶ್ರೀಹನುಮಂತ’ ಎಂದು ಬರೆಯಿರಿ.

೬. ನಮ್ಮ ದೇವಸ್ಥಾನಗಳನ್ನು ‘ಪ್ರೇಯರ್ ಹಾಲ್’ ಎಂದು ಉಲ್ಲೇಖಿಸಬೇಡಿ. ದೇವಸ್ಥಾನವು ‘ದೇವಾಲಯ (ದೇವರ ನಿವಾಸಸ್ಥಾನ)’ ಆಗಿದೆ. ‘ಪ್ರಾರ್ಥನಾಲಯ (ಪ್ರೇಯರ್ ಹಾಲ್)’ ಅಲ್ಲ !

೭. ನಮ್ಮ ಮಕ್ಕಳಿಗೆ ಹುಟ್ಟುಹಬ್ಬದ ನಿಮಿತ್ತದಲ್ಲಿ ಕೇಕ್‌ನ ಮೇಲೆ ಹಚ್ಚಿರುವ ಮೇಣದ ಬತ್ತಿಗಳನ್ನು ಆರಿಸಲು ಹೇಳಿ ‘ಕತ್ತಲೆಯಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಬೇಡಿ’. ಅಗ್ನಿದೇವತೆಯ ಮೇಲೆ ಉಗುಳಬೇಡಿ. ಅದರ ಬದಲು ಅವರಿಗೆ ದೀಪವನ್ನು ಬೆಳಗಿಸಿ ಮುಂದಿನ ಪ್ರಾರ್ಥನೆಯನ್ನು ಮಾಡಲು ಹೇಳಿರಿ. ‘ತಮಸೋ ಮಾ ಜ್ಯೋತಿರ್ಗಮಯ |’ ಅಂದರೆ ಹೇ ಅಗ್ನಿದೇವತೆ, ನನ್ನನ್ನು ಕತ್ತಲೆಯಿಂದ ಪ್ರಕಾಶದ ಕಡೆಗೆ ಕರೆದುಕೊಂಡು ಹೋಗು. ಇದರಿಂದ ನಮ್ಮ ಮನಸ್ಸಿನಲ್ಲಿ ಆಳದ ವರೆಗೆ ಪರಿಣಾಮವಾಗುತ್ತದೆ.

೮. ಹಿಂದೂಗಳಿಗೆ ಎಲ್ಲವೂ ದೈವಿಕವಾಗಿದೆ.

‘ಚರ್ಚ್’ ವಿರುದ್ಧ ‘ಸ್ಟೆಟ್’ ಅಥವಾ ‘ಸೈನ್ಸ್’ ವಿರುದ್ಧ ‘ರಿಲಿಜನ್’ ಈ ಸಂಕಲ್ಪನೆಯನ್ನು ಮಂಡಿಸುವ ಕ್ರೈಸ್ತ ಮಿಶನರಿಗಳು ಮತ್ತು ಯುರೋಪ್ ನವರು ‘ಸ್ಪಿರಿಚ್ಯುವಾಲಿಟಿ’ ಮತ್ತು ‘ಮೆಟೆರಿಯಲಿಸಮ್’ ಈ ಶಬ್ದಗಳನ್ನು ಭಾರತಕ್ಕೆ ತಂದರು. ತದ್ವಿರುದ್ಧ ಭಾರತದ ‘ಋಷಿಗಳು ಶಾಸ್ತ್ರಜ್ಞರು ಮತ್ತು ಸನಾತನ ಧರ್ಮದ ಅಡಿಪಾಯವು ವಿಜ್ಞಾನವನ್ನು ಆಧರಿಸಿರುತ್ತದೆ’.

೯. ‘ಸಿನ್’ ಈ ಶಬ್ದವನ್ನು ‘ಪಾಪ’ ಈ ವ್ಯಾಖ್ಯೆಗೆ ಉಪಯೋಗಿಸಬೇಡಿ. ನಮ್ಮಲ್ಲಿ ಕೇವಲ ‘ಧರ್ಮ’ ಮತ್ತು ‘ಅಧರ್ಮ’ ಈ ಶಬ್ದಗಳಿವೆ. ಅಧರ್ಮದಿಂದ ಪಾಪ ನಿರ್ಮಾಣವಾಗಿದೆ.

೧೦. ‘ಧ್ಯಾನಕ್ಕೆ ‘ಮೆಡಿಟೇಶನ್’ ಮತ್ತು ‘ಪ್ರಾಣಾಯಾಮಕ್ಕೆ ‘ಬ್ರೀದಿಂಗ್ ಎಕ್ಸಾಸೈಸ್’ ಈ ಶಬ್ದಗಳನ್ನು ಉಪಯೋಗಿಸಬೇಡಿ. ಇದರಿಂದ ತಪ್ಪು ಅರ್ಥ ಬರುತ್ತದೆ. ಅದಕ್ಕಾಗಿ ಮೂಲ ಶಬ್ದಗಳನ್ನೆ ಉಪಯೋಗಿಸಬೇಕು. ‘ಯಾರು ತಮ್ಮ ಸಂಸ್ಕೃತಿಯನ್ನು ಗೌರವಿಸುವರೋ, ಅವರನ್ನು ಇಡೀ ಜಗತ್ತು ಗೌರವಿಸುತ್ತದೆ’.

ಫ್ರಾನ್ಸುಆ ಗೋತಿಯೆ ಇವರ ಈ ಮೇಲಿನ ಲೇಖನದ ಬಗ್ಗೆ ಓರ್ವ ವಾಚಕರು ನೀಡಿದ ಅಭಿಪ್ರಾಯ : ಫ್ರಾನ್ಸುಆ ಗೋತಿಯೆ ಇವರು ಬರೆದಿರುವ ವಿಷಯಗಳನ್ನು ಓದಿ ನಮ್ಮಲ್ಲಿನ ಬಹಳಷ್ಟು ಜನರಿಗಿಂತ ಅವರಿಗೆ ಹಿಂದೂ ಧರ್ಮ ಹೆಚ್ಚು ತಿಳಿಯುತ್ತದೆ, ಎಂಬುದು ಅರಿವಾಗುತ್ತದೆ. – ಓರ್ವ ವಾಚಕರು