ಹಿಂದೂ ಜಾಗೃತಿ ಉತ್ಸವ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ಇವರ ಗುರುವಂದನಾ ಕಾರ್ಯಕ್ರಮ

ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ

ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು

ಬೆಂಗಳೂರು – ಮೇ ೨ ರಂದು ‘ಹಿಂದೂ ಜಾಗೃತಿ ಉತ್ಸವ ಸಮಿತಿ’ ವತಿಯಿಂದ ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ಅಬ್ಬಿಗೆರೆ ಪ್ರೌಢ ಶಾಲೆಯ ಆವರಣದಲ್ಲಿ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಈ ಶೋಭಾಯಾತ್ರೆಯು ಉಡುಪಿಯ ಪೇಜಾವರ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ಇವರ ಗುರು ವಂದನಾ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಕಮ್ಮಗೊಂಡನ ಹಳ್ಳಿಯ ಪ್ರಮುಖ ರಸ್ತೆಯಲ್ಲಿ ಶ್ರೀಗಳನ್ನು ೧೦೮ ಪೂರ್ಣ ಕುಂಭಮೇಳ ಮತ್ತು ಪುಷ್ಪಾರ್ಚನೆ, ಬೆಳ್ಳಿ ರಥದ ಮೆರವಣಿಗೆಯೊಂದಿಗೆ ಶಾಲಾ ಆವರಣಕ್ಕೆ ಕರೆ ತರಲಾಯಿತು. ೨೦೦೦ ಕ್ಕೂ ಹೆಚ್ಚಿನ ಯುವಕರು ‘ಬೈಕ್ ರ‍್ಯಾಲಿ’ ಮೂಲಕ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪೂಜ್ಯ ಸ್ವಾಮೀಜಿಯವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು, ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಶ್ರೀ. ಡಿ.ವಿ ಸದಾನಂದ ಗೌಡ, ದಾಸರಹಳ್ಳಿ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ. ಮುನಿರಾಜು, ರಾಷ್ಟ್ರೀಯ ಚಿಂತಕರಾದ ಡಾ. ಗಿರಿಧರ ಉಪಾಧ್ಯಾಯ, ರಾಷ್ಟ್ರೀಯವಾದಿಗಳು ಹಾಗೂ ಆಧ್ಯಾತ್ಮಿಕ ಚಿಂತಕರಾದ ಶ್ರೀ. ರವೀಂದ್ರ ವರ್ಣ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಮಹಿಳಾ ಶಾಖೆಯ ಸೌ. ಭವ್ಯ ಗೌಡ ಇವರು ಉಪಸ್ಥಿತರಿದ್ದರು.

ಈ ಸಮಯದಲ್ಲಿ ಸ್ವಾಮೀಜಿಯವರು ಆಶೀರ್ವಚನ ಮಾಡುತ್ತಾ, ‘ಇವತ್ತು ರಾಮ-ರಾವಣ ಇಬ್ಬರು ನಮ್ಮ ಮುಂದೆ ಇದ್ದಾರೆ. ನಮಗೆ ಯಾರ ಆದರ್ಶ ಬೇಕು ? ಎಂದು ಆಯ್ಕೆ ಮಾಡಬೇಕಿದೆ. ರಾಮನ ಆಯ್ಕೆ ಮಾಡಿದರೆ ಆದರ್ಶ ರಾಮರಾಜ್ಯ ಸಿಗುವುದು, ರಾವಣನ ಆಯ್ಕೆ ಮಾಡಿದರೆ ಕಿತ್ತು ತಿನ್ನುವ ಆದರ್ಶ ನಾವು ನೋಡಬೇಕಾಗುತ್ತದೆ. ನಮ್ಮ ರಾಷ್ಟ್ರದ ಬಗ್ಗೆ ಪ್ರೇಮ ಹಾಗೂ ಗೌರವ ಇರುವವರು ಈ ನೆಲದ ನಿಜವಾದ ರಾಷ್ಟ್ರಪ್ರೇಮಿಗಳು. ರಾಷ್ಟ್ರ-ಧರ್ಮವನ್ನು ಗೌರವಿಸುವವರನ್ನು ರಾಜನನ್ನಾಗಿ ಮಾಡಬೇಕು. ಅಂತಹವರು ಮಾತ್ರ ನಮ್ಮ ರಾಷ್ಟ್ರವನ್ನು ಮುಂದೆ ನಡೆಸಲು ಸಾಧ್ಯ’ ಎಂದು ಹೇಳಿದರು.