ಬ್ರಹ್ಮಚೈತನ್ಯ ಗೋಂದವಲೆಕರ ಮಹಾರಾಜರ ಚರಿತ್ರೆಯಲ್ಲಿನ ಒಂದು ಪ್ರಸಂಗವು ಸದ್ಯದ ಪರಿಸ್ಥಿಯ ಬಗ್ಗೆ ಮತ್ತು ಮುಂಬರುವ ಭೀಕರ ಕಾಲದ ಬಗ್ಗೆ ವರ್ಣಿಸುತ್ತದೆ. ಅದನ್ನು ಇಲ್ಲಿ ಕೊಡುತ್ತಿದ್ದೇವೆ.
ಬ್ರಹ್ಮಚೈತನ್ಯ ಗೋಂದವಲೆಕರ ಮಹಾರಾಜರು ಮುಂಬರುವ ಭೀಕರ ಆಪತ್ಕಾಲದ ಸಂದರ್ಭದಲ್ಲಿ ಹೇಳುವುದು ಮತ್ತು ಭಕ್ತರಿಗೆ ಆ ವಿಷಯದ ಬಗ್ಗೆ ಕುತೂಹಲವೆನಿಸುವುದು
ಇತ್ತೀಚೆಗೆ ಬ್ರಹ್ಮಚೈತನ್ಯ ಗೋಂದವಲೆಕರ ಮಹಾರಾಜರು ಜನರಿಗೆ ಸತತವಾಗಿ ‘ಜಾಗೃತವಾಗಿರಿ ಜಾಗೃತವಾಗಿರಿ ಇನ್ನು ಮುಂದೆ ಬಹಳ ಕೆಟ್ಟ ದಿನಗಳು ಬರಲಿವೆ. ಕಲಿಯು ಬಹಳ ಮದವೇರಿದವನಾಗುವನು, ಬೆಲೆಏರಿಕೆಯು ಬಹಳ ಹೆಚ್ಚಾಗುವುದು, ಸ್ವಾರ್ಥವು ಮಿತಿಮೀರುವುದು, ಅನೀತಿಯು ಹೆಚ್ಚಾಗುವುದು, ಭಗವಂತ ವಿಸ್ಮರಣೆಯಾಗುವುದು ಮತ್ತು ರೋಗರುಜಿನಗಳು ಬಹಳಷ್ಟು ಹರಡುವುವು’ ಎಂದು ಹೇಳುತ್ತಿದ್ದರು. ಜನಸಾಮಾನ್ಯರಿಗೆ ಅವರಾಡಿದ ಮಾತು ಬಹಳ ಮಹತ್ವದೆನಿಸುತ್ತಿರಲಿಲ್ಲ. ಆದರೆ ಯಾವ ಜನರು ವಿದ್ಯಾವಂತರಾಗಿರುವರೋ ಮತ್ತು ಯಾರು ದಿನಪತ್ರಿಕೆಯನ್ನು ಓದುತ್ತಿದ್ದರೋ, ಅವರಿಗೆ ಅವರ ಮಾತಿನ ಬಗ್ಗೆ ಕುತೂಹಲವೆನಿಸುತ್ತಿತ್ತು. ಗೋಂದವಲೆಗೆ ದೈನಿಕ ‘ಕೇಸರಿ’ ನಿಯಮಿತವಾಗಿ ಬರುತ್ತಿತ್ತು. ‘ಕೇಸರಿ’ ಬಂದಿತೆಂದರೆ ಸ್ವತಃ ಶ್ರೀ ಗೋಂದವಲೆಕರ ಮಹಾರಾಜರು ಸ್ವಲ್ಪ ಹೊತ್ತು ಅದನ್ನು ಓದುತ್ತಿದ್ದರು; ಆದರೆ ಬಹಳಷ್ಟು ಸಮಯ ಯಾರಿಗಾದರೂ ಓದಲು ಹೇಳಿ “ನೋಡು, ಅದರಲ್ಲಿ ಯುದ್ಧದ ವಾರ್ತೆ ಬಂದಿದೆಯಾ ? ಅಥವಾ ಜಗತ್ತಿನಲ್ಲಿ ಎಲ್ಲಾದರೂ ಯುದ್ಧ ಆರಂಭವಾಗಿದೆಯಾ ನೋಡಿ ?” ಎಂದು ಕೇಳುತ್ತಿದ್ದರು. ಅನೇಕ ಬಾರಿ ಅವರ ಈ ಮಾತನ್ನು ಕೇಳಿ ಒಮ್ಮೆ ಭಾವುಸಾಹೇಬ ಕೇತಕರ ಇವರು, “ತಾವು ಯುದ್ಧದ ಬಗ್ಗೆ ಯಾವಾಗಲೂ ಮಾತನಾಡುತ್ತೀರಿ. ನಿಜವಾಗಿಯೂ ಯುದ್ಧ ಆರಂಭವಾಗುವುದೇ ?”, ಎಂದು ಕೇಳಿದರು. ಅದಕ್ಕೆ ಶ್ರೀ ಮಹಾರಾಜರು ಕೊಟ್ಟ ಉತ್ತರವು ಬಹಳ ಮಾರ್ಮಿಕವಾಗಿದ್ದು ವಿಶೇಷವೆಂದರೆ ಸದ್ಯದ ಪರಿಸ್ಥಿಯಲ್ಲಿ ನೆನಪಿನಲ್ಲಿಡುವುದು ಅಗತ್ಯವಾಗಿದೆ.
ಮಹಾರಾಜರು ಮುಂದಿನ ಕಾಲದಲ್ಲಿ ಆಗುವ ಯುದ್ಧಗಳಿಂದಾಗುವ ಜೀವಹಾನಿ ಮತ್ತು ವಿತ್ತ ಹಾನಿಗಳ ಬಗೆಗೆ ಭವಿಷ್ಯವಾಣಿಯನ್ನು ಹೇಳುವುದು.
ಶ್ರೀ ಮಹಾರಾಜರು ಮುಂದಿನಂತೆ ನುಡಿದರು, “ಭಾವು ಸಾಹೇಬರೇ, ಮುಂದೆ ಬರುವ ೫೦ ರಿಂದ ೫೫ ವರ್ಷಗಳು ಜಗತ್ತಿಗೆ ತುಂಬ ತೊಂದರೆ ಕೊಡುವಂತಹದ್ದಾಗಿವೆ. ಜಗತ್ತಿನಲ್ಲಿ ಸತತವಾಗಿ ಯುದ್ಧಗಳು ಆಗುತ್ತಾ ಬಂದಿವೆ. ಅದರಲ್ಲಿ ಮನುಷ್ಯನ ಮತ್ತು ಸಂಪತ್ತಿಯ ಬಹಳಷ್ಟು ಹಾನಿಯಾಯಿತು; ಆದರೆ ಈ ನಂತರದ ಕಾಲದಲ್ಲಿ ಯಾವ ಯುದ್ಧಗಳಾಗುತ್ತವೆಯೋ ಅದರಲ್ಲಿ ಮಾನವರ ಮತ್ತು ಸಂಪತ್ತಿ ಆಗುವ ಹಾನಿಯ ಕಲ್ಪನೆಯನ್ನು ಇಂದು ನಿಮಗೆ ಕೊಡುವುದು ಅಸಾಧ್ಯವಾಗಿದೆ. ‘ಕೌರವ-ಪಾಂಡವರ ಅಸ್ತ್ರಗಳು ಭಯಂಕರವಾಗಿದ್ದವು’, ಎಂದು ನಾವು ಕೇಳುತ್ತೇವೆ. ಅದಕ್ಕೆ ಸರಿಸಟಿಯಾದ ಅಸ್ತ್ರಗಳು ಬರುವವು ಮತ್ತು ಜಗತ್ತನ್ನು ಸುಟ್ಟು ಬಿಡುವವು. ‘ಎಲ್ಲ ಜನರೂ ಅತ್ಯಂತ ಸ್ವಾರ್ಥಿಗಳಾಗುವರು ಮತ್ತು ‘ದೇಹದ ಭೋಗವನ್ನು ಭೋಗಿಸಿ ಒಂದು ದಿನ ಸಾಯುವುದು, ಇದರಲ್ಲೇ ಜಾಣತನವಿದೆ’, ಎಂಬಂತಾಗುವುದು. ಎರಡು ಪೀಳಿಗೆಯಲ್ಲಿ ದೇಶಕ್ಕೆ ಸ್ವರಾಜ್ಯವು ಸಿಗುವುದು; ಆದರೆ ನಂತರ ದೇವರು ಧರ್ಮದ ಮೇಲೆ ದೊಡ್ಡ ಆಘಾತಗಳಾಗಿ ಭಗವಂತನ ಪ್ರೇಮವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿ ಬಿಡುತ್ತದೆ. ಇಂದಿನ ವರೆಗೂ ಎಂದೂ ಆಗದಿರದಷ್ಟು ಪುಸ್ತಕ ಜ್ಞಾನದ ಪ್ರಸಾರವಾಗುವುದು. ‘ನಮ್ಮ ಗುರುಗಳಿಗೆ ತಿಳಿಯಲಿಲ್ಲ’, ಹೀಗೆನ್ನುವ ಶಿಷ್ಯನಿಗೆ ಮಾನ್ಯತೆಯು ಸಿಗುವುದು. ಹಣವೇ ಜೀವನದಲ್ಲಿ ಸರ್ವಸ್ವವಾಗಿರುವುದು. ಆಚಾರಧರ್ಮವು ನಾಶವಾಗುವುದು ಮತ್ತು ತಿನ್ನುವುದಕ್ಕೆ ಕುಡಿಯುವುದಕ್ಕೆ, ಮದುವೆ ಮಾಡಿಕೊಳ್ಳುವುದಕ್ಕೆ, ವಿಷಯ ಸೇವನೆಗೆ ಬಂಧನವೇ ಇಲ್ಲದಂತಾಗುವುದು. ಇಷ್ಟೇ ಅಲ್ಲದೇ ಯಾರು ಸಂಯಮದಿಂದ ನಡೆದುಕೊಳ್ಳುತ್ತಾನೊ ಅವನ ನಿಂದನೆಯನ್ನು ಮಾಡಲಾಗುವುದು. ಎಲ್ಲೆಡೆಯಲ್ಲಿ ಅಸಮಾಧಾನವು ಹರಡುವುದು ಮತ್ತು ಸಾಮಾನ್ಯ ಮನುಷ್ಯನಿಗೆ ಸುಖವು ಸಿಗುವುದಿಲ್ಲ. ಚಿಂತೆಯ ಸಾಮ್ರಾಜ್ಯವು ಪೃಥ್ವಿಯ ಮೇಲೆ ಹರಡುವುದು ಮತ್ತು ಜೀವನದಲ್ಲಿ ಸ್ವಾರಸ್ಯ ಇಲ್ಲದಂತಾಗಿ ಬಹಳಷ್ಟು ಜನರು ಆತ್ಮಹತ್ಯೆಯನ್ನು ಮಾಡಿಕೊಳ್ಳುವರು. ಮುಖಂಡರಾಗಿ ವರ್ತಿಸುವ ಜನರು ಭ್ರಷ್ಟರಾಗಿ ಜನರನ್ನು ವಿಚಿತ್ರಮಾರ್ಗಕ್ಕೆ ಒಯ್ಯುವರು. ಪುರುಷರದಿರಲಿ; ಆದರೆ ಸ್ತ್ರೀಯರಲ್ಲಿಯೂ ಶ್ರದ್ಧೆ ಮತ್ತು ಪಾವಿತ್ರ್ಯ ಕಂಡುಬರುವುದು ಕಷ್ಟವಾಗಿ ಬಿಡುತ್ತದೆ.
‘ಮುಂಬರುವ ಕಾಲವು ಬಹಳ ಕಷ್ಟಕರವಾಗಿರುವುದರಿಂದ ಮನುಷ್ಯನು ಜಗತ್ತನ್ನು ಸುಧಾರಿಸುವುದಕ್ಕಿಂತ ಭಗವಂತನ ನಾಮವನ್ನು ಗಟ್ಟಿಯಾಗಿ ಹಿಡಿದಿರಬೇಕು’, ಹೀಗೆ ಗೋಂದವಲೆಕರ ಮಹಾರಾಜರು ಹೇಳಿದರು.
ಭಾವುಸಾಹೇಬರು ಹೇಳುತ್ತಾರೆ, ಶ್ರೀ ಮಹಾರಾಜರು ಈ ಸಂಗತಿಗಳನ್ನು ಹೇಳುತ್ತಿರುವಾಗ ಅವರು ತುಂಬಾ ಗಂಭೀರ ಮತ್ತು ಪ್ರತಿಭೆಯಿಂದ ಕೂಡಿದವರಂತೆ ಕಾಣುತ್ತಿದ್ದರು. ಆ ಸಮಯದಲ್ಲಿ ಅಲ್ಲಿ ಇದ್ದ ೮-೧೦ ಜನರಿಗೆ ಆಶ್ಚರ್ಯವೆನಿಸಿತು. ಎಲ್ಲರಿಗೂ ಪ್ರಭು ಶ್ರೀರಾಮಚಂದ್ರರ ಗುರು ಮಹರ್ಷಿ ವಸಿಷ್ಠರು ಗೋಂದವಲೆಯಲ್ಲಿನ ರಾಮರಾಯನ ಮುಂದೆ ಜಗತ್ತಿನ ಭವಿಷ್ಯವಾಣಿಯನ್ನು ಹೇಳುತ್ತಿದ್ದಾರೆ ಎಂದೆನಿಸಿತು. ಶ್ರೀ ಮಹಾರಾಜರು ಕೊನೆಗೆ ನುಡಿದರು, “ ಮುಂಬರುವ ಕಾಲವು ಬಹಳ ಕಷ್ಟಕರ ಮತ್ತು ಹಿಂದಿನ ಕಾಲಕ್ಕಿಂತಲೂ ಕಷ್ಟಕರವಾಗಿರುವುದು. ಇದರ ಕಾರಣವೇನೆಂದರೆ, ಹಿಂದಿನ ಕಾಲದಲ್ಲಿ ಮನುಷ್ಯನ ಬುದ್ಧಿಯು ಒಳ್ಳೆಯ ಸ್ಥಿತಿಯಲ್ಲಿತ್ತು. ಈಗ ಮನುಷ್ಯನ ಬುದ್ಧಿ ಭ್ರಷ್ಟವಾಗುವುದು. ದೃಶ್ಯಕ್ಕಿಂತಲೂ ಸೂಕ್ಷ್ಮದಲ್ಲಿನ ಸಂಕಟಗಳು ಬಹಳ ಭಯಂಕರವಾಗಿರುತ್ತವೆ. ಅದುದರಿಂದ ಈ ಸಮಯದಲ್ಲಿ ಎಲ್ಲ ಸಾಧನೆಗಳಿಗಿಂತಲೂ ಭಗವಂತನ ನಾಮದ ಮಹತ್ವವು ಬಹಳಷ್ಟಿದೆ. ಊರಿನಲ್ಲಿ ಬಹಳ ಚಳಿ ಬಿದ್ದರೆ, ಆ ಚಳಿಯನ್ನು ಇಲ್ಲದಂತೆ ಮಾಡುವುದಕ್ಕಿಂತ ನಾವು ಬೆಚ್ಚಗಿನ ಬಟ್ಟೆಗಳನ್ನು ಹಾಕಿಕೊಳ್ಳುತ್ತೇವೆ. ಅದರಂತೆ ಜಗತ್ತಿನ ಪ್ರವಾಹವು ವಿಚಿತ್ರಮಾರ್ಗದಿಂದ ಹೋಗುತ್ತಿರುವಾಗ ನಮ್ಮಂತಹ ಮನುಷ್ಯರು ಜಗತ್ತನ್ನು ಸುಧಾರಿಸುವ ಗೊಂದಲದಲ್ಲಿ ಸಿಲುಕದೇ ನಾವು ಭಗವಂತನ ನಾಮವನ್ನು ಗಟ್ಟಿಯಾಗಿ ಹಿಡಿದಿಟ್ಟಿರಬೇಕು. ಪ್ರವಾಹದ ರಭಸವಿರುವುದರಿಂದ ಸ್ವಲ್ಪ ಸಮಯ ನಾವು ಅದರ ಜೊತೆಗೆ ಹರಿದುಕೊಂಡು ಹೋಗಬಹುದು; ಆದರೆ ನಾಮದ ಆಧಾರವಿರುವುದರಿಂದ ನಾವು ಮುಳುಗುವುದಿಲ್ಲ, ಈ ವೈಶಿಷ್ಟ್ಯವನ್ನು ತಿಳಿಯಬೇಕು. ಎಲ್ಲರೂ ನಾಮವನ್ನು ತೆಗೆದುಕೊಳ್ಳಬೇಕು ಮತ್ತು ಆನಂದದಲ್ಲಿರಬೇಕು. ರಾಮನು ಎಲ್ಲರನ್ನೂ ಸಂರಕ್ಷಿಸುವನು. ಇಷ್ಟನ್ನು ಹೇಳಿ ಶ್ರೀ ಮಹಾರಾಜರು ತಮ್ಮ ಮಾತನ್ನು ಮುಗಿಸಿದರು.
(ಕೃಪೆ : ಸಾಮಾಜಿಕ ಜಾಲತಾಣ)